ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯಬೇಕಿದೆ. ಪ್ರಸಕ್ತ ವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..!
ಬ್ರಿಟಿಷ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸ್, ಮುಂಬೈ ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಯ, ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರೂ ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯ ಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ವ್ಯವಹರಿಸುವ ಅಸ್ವಾಭಾವಿಕ ಪರಿಸ್ಥಿತಿ ಉಂಟಾಗಿತ್ತು. ಆಗ ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡ ಭಾಷೆ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅವಶ್ಯಕತೆಗಾಗಿ ‘ಮೈಸೂರು ಸಂಪದಭ್ಯುದಯ ಸಮಾಜ’( ಮೈಸೂರು ಎಕನಾಮಿಕ್ ಕಾನ್ಫರನ್ಸ್ ) ರಚಿಸಿದರು. ವಿದ್ಯಾವಿಷಯಗಳಿಗಾಗಿ ಸಂಬಂಧಪಟ್ಟಂತೆ ವಿದ್ಯಾವಿಷಯಕ ಮಂಡಳಿ ರೂಪಿಸಿ, ಆ ಜವಾಬ್ದಾರಿಯನ್ನು ಹೆಚ್.ವಿ.ನಂಜುಂಡಯ್ಯನವರಿಗೆ ವಹಿಸಿದರು.ಮೈಸೂರು ಸಂಪದಭ್ಯುದಯ ಸಮಾಜವು 03.10.1914ರ ವಾರ್ಷಿಕ ಅಧಿವೇಶನದಲ್ಲಿ, ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸಿರುವವರನ್ನ ಪ್ರೋತ್ಸಾಹಿಸಲು ನಿರ್ಧರಿಸಿತು. ಈ ನಿಟ್ಟಿನಲ್ಲಿ ತನ್ನ ವಿದ್ಯಾವಿಷಯಕ ಮಂಡಳಿಯ ಮೂಲಕ ಒಂದು ಉಪಸಮಿತಿಯನ್ನು ರಚಿಸಿತು.
ಉಪಸಮಿತಿಯು ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿ ಮಾರ್ಗವನ್ನು ಕುರಿತು ಸಲಹೆ ಪಡೆಯಲು ತೀರ್ಮಾನಿಸಿ ಐದು ಭಾಗಗಳಾಗಿ ವಿಂಗಡಿಸಿತು. 1) ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿರುವ ಭಾಷಾ ಭಿನ್ನರಲ್ಲಿ ಐಕ್ಯಮತವನ್ನು ಪರಸ್ಪರ ಸೌಹಾರ್ದವನ್ನು ಹೆಚ್ಚಿಸುವುದಕ್ಕಾಗಿ ಉತ್ತಮೋತ್ತಮ ಉಪಾಯಗಳನ್ನು ನಿರ್ಧರಿಸುವುದು. 2) ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕ ಭಾಷೆಯನ್ನು ಒಂದೇ ರೂಪಕ್ಕೆ ತರಲು ತಕ್ಕ ಮಾರ್ಗಗಳನ್ನು ನಿಶ್ಚಯಿಸುವುದು. 3) ಕನ್ನಡವನ್ನು ಓದುವ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನುಮಾಡುವುದು.4) ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕ ವ್ಯವಹಾರ ಜ್ಞಾನವು ಹರಡುವಂತ ತಕ್ಕ ಪುಸ್ತಕಗಳನ್ನು ಬರೆಯಿಸಿ, ಪ್ರಚಾರ ಮಾಡುವುದಕ್ಕೆ ಸಾಧಕವಾದ ಉತ್ತಮೋತ್ತಮ ಉಪಾಯಗಳನ್ನು ನಿರ್ಣಯಿಸುವುದು. 5) ಕನ್ನಡದಲ್ಲಿ ಬರೆಯುವ ಭೌತಿಕವಾದ ನಾನಾ ಶಾಸ್ತ್ರಗಳನ್ನು ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋತ್ತಮ ಉಪಾಯಗಳನ್ನು ಪರಿಶೀಲಿಸುವುದು. ಮೇಲ್ಕಡ ಐದು ವಿಷಯಗಳ ಕುರಿತು ಸಲಹೆ ರೂಪದಲ್ಲಿ ಲೇಖನಗಳನ್ನು ಬರೆದು ಕಳುಹಿಸುವಂತೆ ಆಹ್ವಾನಿಸಿದರು. ಆಗ ವಿದ್ವಾಂಸರು, ಸಾಹಿತಿಗಳು ಉತ್ಸಾಹದ ಪ್ರತಿಕ್ರಿಯೆ ತೋರಿಸಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಕಳುಹಿಸಿದರು. ಆಗ ಉಪಸಮಿತಿಯು ಮೇ 3 ಬೆಂಗಳೂರಿನಲ್ಲಿ ಒಂದು ಸಮ್ಮೇಳನವನ್ನು ನಡೆಸಬೇಕೆಂದು ನಿರ್ಧರಿಸಿ ಸಮ್ಮೇಳನದ ಏರ್ಪಾಡು ಮಾಡಿತು. 03.05.1915ರಂದು ಬೆಂಗಳೂರಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಮ್ಮೇಳನ ನಡೆಯಿತು. ಸಮ್ಮೇಳನಕ್ಕೆ ಕರ್ನಾಟಕದ ನಾನಾ ಪ್ರಾಂತ್ಯಗಳಿಂದ ಪ್ರಮುಖ ವಿದ್ವಾಂಸರು ಮತ್ತು ಪತ್ರಿಕೆಗಳ ಸಂಪಾದಕರು ಆಗಮಿಸಿದ್ದರು. ನಂತರ ಸಭೆಯಲ್ಲಿ ನೆರೆದಿದ್ದ ಪತ್ರಿಕೆ ಸಂಪಾದಕರು, ವಿದ್ವಾಂಸರು ಮತ್ತು ಮಹಾಜನಗಳು ರಾಜ್ಯ ಮಂತ್ರಿ ಪ್ರವೀಣ ಹೆಚ್.ವಿ.ನಂಜುಂಡಯ್ಯನವರನ್ನು ಅಧ್ಯಕ್ಷರಾನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು. ನಂತರ ಸಮ್ಮೇಳನದಲ್ಲಿ ಈ ಕೆಳಗಿನ ಮುಖ್ಯ ಉದ್ದೇಶಗಳನ್ನು ಪ್ರಕಟಿಸಿಸಲಾಯಿತು. ಕರ್ನಾಟಕ ಭಾಷಾ ಸಂಸ್ಕರಣಕ್ಕಾಗಿ ಮತ್ತು ಕರ್ನಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್’ ಎಂಬ ಹೆಸರಿನೊಡನೆ ಪ್ರಧಾನ ಸಭೆಯಾಂದು ಸ್ಥಾಪಿತವಾಗಬೇಕು. ಮುಂಬೈ, ಮದ್ರಾಸ್, ಹೈದರಾಬಾದ್,ಕೊಡಗು ಪ್ರಾಂತ್ಯಗಳಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಯಿತು.
ಇದರ ಉದ್ದೇಶ ಕನ್ನಡ ಭಾಷೆ, ಸಾಹಿತ್ಯ,ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಮುಖ್ಯ ಉದ್ದೇಶವಾಗಿತು. ಪರಿಷತ್ತು ಸ್ಥಾಪನೆಯಾದಾಗಿನಿಂದ ಐದು ವರ್ಷ (1915-1920)ಗಳ ಕಾಲ ಹೆಚ್.ವಿ.ನಂಜುಂಡಯ್ಯನವರು ಅಧ್ಯಕ್ಷರಾಗಿ ಪರಿಷತ್ತಿನ ಮುನ್ನಡೆಗೆ ದಾರಿ ಮಾಡಿಕೊಟ್ಟರು. ಹೆಚ್.ವಿ.ನಂಜುಂಡಯ್ಯನವರು ಕಾಲವಾದ ನಂತರ 1947ರವರೆಗೆ ರಾಜ ಮನೆತನದವರಿಗೆ ಅಧ್ಯಕ್ಷ ಸ್ಥಾನ ಸೀಮಿತವಾಗಿತ್ತು. 12.04.1937ರಂದು ಪರಿಷತ್ತಿನ ಉಪಾಧ್ಯಕ್ಷರಾದ ಕರ್ಪೂರ ಶ್ರೀನಿವಾಸರಾಯರು ಪರಿಷತ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಟ್ಟಡ ನಿರ್ಮಾಣ ಪೂರ್ಣಗೊಂಡು 29.05.1938ರಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ ಉದ್ಘಾಟನೆಯಾಯಿತು.1935 ರಲ್ಲಿ ಸಾಹಿತ್ಯ ಸಮ್ಮೇಳನದ ವೇಳಾಪಟ್ಟಿಯನ್ನು ಪ್ರಕಟಿಸಿ, ಪ್ರತಿ ವರ್ಷವು ಡಿಸೆಂಬರ್ ತಿಂಗಳ ಕಡೇ ವಾರದಲ್ಲಿ ಸಮ್ಮೇಳನ ನಡೆಸಬೇಕೆಂದು, ಸ್ವಾಗತ ಮಂಡಳಿ ಯೋಜನೆ, ಆಹ್ವಾನ ಸ್ವೀಕಾರ, ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚನೆ, ಸಮ್ಮೇಳನ ದಿನಾಂಕ ಗೊತ್ತುಪಡಿಸುವುದು, ಪ್ರಬಂಧಕರು, ನಿರ್ಣಯ ಸೂಚಕರು, ಉಪನ್ಯಾಸಕರು ಗೊತ್ತುಪಡಿಸುವುದು ಪ್ರಬಂಧ ಸಂಗ್ರಹಗಳು, ಸೂಚನೆಗಳ ಮುದ್ರಣ ಕಾರ್ಯಗಳ ಬಗ್ಗೆ ವೇಳಾಪಟ್ಟಿಯನ್ನು ತಯಾರು ಮಾಡಿತು.
1938ರಲ್ಲಿ ಕನ್ನಡನಾಡಿನ ನಕ್ಷೆಯಲ್ಲಿ ಪರಿಷತ್ತಿನ ಲಾಛನವನ್ನು (‘ಸಿರಿಗನ್ನಡಂ ಗೆಲ್ಗೆ, ಕನ್ನಡ ಸಾಹಿತ್ಯಪರಿಷತ್’) ಬಿ.ಎಂ.ಶ್ರೀಕಂಠಯ್ಯನವರು ರೂಪಿಸಿದರು. 1938 ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆದ 23 ನೇ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನ ಬದಲಿಗೆ ‘ಕನ್ನಡ ಸಾಹಿತ್ಯ ಪರಿಷತ್’ ಎಂಬ ನಾಮಕರಣಗೊಂಡಿತು.ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾಗಿದ್ದಾಗ (1938-1942) ಪರಿಷತ್ತಿಗೆ ಭದ್ರ ಬುನಾದಿ ಹಾಕಿದರು. ಮಹಿಳಾ ಶಾಖೆ ಪರಿಷತ್ತಿನ ಮುದ್ರಣಾಲಯ, ಕನ್ನಡ ನುಡಿ ಪತ್ರಿಕೆ. ಸಾಹಿತ್ಯ ಪರೀಕ್ಷೆಗಳು, ಗ್ರಂಥ ಪ್ರಕಟಣೆ, ಮಾರಾಟ ಮತ್ತು ಬೆಳ್ಳಿ ಹಬ್ಬದ ಆಚರಣೆ ಹಾಗೂ ಕನ್ನಡದ ಬಾವುಟದ ಪ್ರಕಟಣೆಗಳ ಕಾರ್ಯಗಳೂ ಪರಿಷತ್ತಿನ ಮುನ್ನಡೆಗೆ ಸಹಾಯಕವಾದವು. ದಿನಾಂಕ 29.12.1948 ರಂದು ಕಾಸರಗೋಡಿನಲ್ಲಿ ನಡೆದ 31ನೇ ಪರಿಷತ್ತಿನ ಸಭೆಯಲ್ಲಿ ಮುಂದೆ ಉಪಾಧ್ಯಕ್ಷರ ಹುದ್ಧೆ ರದ್ದುಪಡಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗಬೇಕೆಂದು ಜಾರಿಗೆ ತಂದರು. ದಿನಾಂಕ 24.05.1950 ರಂದು ಸೊಲ್ಲಾಪುರದಲ್ಲಿ ನಡೆದ 33ನೇ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಅವಧಿಯನ್ನು 3ವರ್ಷವೆಂದು ತೀರ್ಮಾನ ತೆಗೆದುಕೊಂಡು ಪರಿಷತ್ತು ಆದೇಶ ಹೊರಡಿಸಿತು. ಮೈಸೂರಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ತಮ್ಮ ಸರ್ಕಾರದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ಒಂದು ಇಲಾಖೆಯನ್ನು ಪ್ರಾರಂಭಿಸಿದರು. (ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) 1956ರ ನವೆಂಬರ್ 1ರಂದು ಮೈಸೂರನ್ನು ಏಕೀಕರಣಗೊಳಿಸಿದರು.‘ಕಪ್ಪು ನಾಡಿನ ನಾಡು, ಆಡುವ ಭಾಷೆ ಕನ್ನಡ ಹಾಗಾಗಿ ’ ‘ಕರ್ನಾಟಕ’ ಎಂದು ನಾಮಕರಣ ಮಾಡಬೇಕೆಂದು ದೇವರಾಜ ಅರಸ್ 1972ರಲ್ಲಿ ಮುಖ್ಯ ಮಂತ್ರಿಯಾದಾಗ ಶಿಫಾರಸ್ಸು ಮಾಡಿದರು. ಅದರಂತೆ ಅಂದಿನಿಂದ ‘ಕರ್ನಾಟಕ ’ ರಾಜ್ಯವಾಯಿತು.
1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಸಾಹಿತ್ಯ ಸಮ್ಮೇಳನದಿಂದ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂದು ಕರೆಯಲಾಯಿತು.1977 ರ ಏಪ್ರಿಲ್ 23 ರಿಂದ 28 ರವರೆಗೆ 6 ದಿನಗಳ ಕಾಲ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಅನೇಕ ವೈಶಿಷ್ಟ್ಯಗಳಿಂದ ನಡೆಸಿತು. 1978ರಲ್ಲಿ 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾರತದ ರಾಜಧಾನಿಯಾದ ನವದೆಹಲಿಯಲ್ಲಿ ನಡೆಸಿ ಕನ್ನಡದ ಇತಿಹಾಸವನ್ನು ದೇಶಕ್ಕೆ ಪಸರಿಸಿತು. ಈ ಸಮ್ಮೇಳನದ ಉದ್ಘಾಟನೆಯನ್ನು ಭಾರತದ ಆಗಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ನಡೆಸಿಕೊಟ್ಟರು. ಪರಿಷತ್ತಿನ ಅವ್ಯವಹಾರ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದು ಆಡಳಿತಾಧಿಕಾರಿಯನ್ನು ದಿನಾಂಕ 12.11.1987 ರಂದು ಸರ್ಕಾರ ನೇಮಿಸಿತು. ಮೂರು ವರ್ಷಗಳ ನಂತರ ಆಡಳಿತಾಧಿಕಾರಿಯನ್ನು ತೆಗೆದು ಹೊಸ ನಿಯಮದ ಪ್ರಕಾರ 2.2.1989ರಂದು ಚುನಾವಣೆ ನಡೆದು ಜಿ.ಎಸ್.ಸಿದ್ದಲಿಂಗಯ್ಯನವರು 17ನೇ ಪರಿಷತ್ತು ಅಧ್ಯಕ್ಷರಾದರು. 1915 ರಂದು ಒಂದು ಸಭೆ ಮುಖಾಂತರ ಪ್ರಾರಂಭವಾದ ಸಮ್ಮೇಳನ, ನಂತರ ಒಂದು ಪರಿಷತ್ತನ್ನು ಹೊಂದಿ, ಸ್ವಂತ ಕಟ್ಟಡಗಳನ್ನು ಕಟ್ಟಿಸಿಕೊಂಡು ಸರ್ಕಾರದಲ್ಲಿ ಒಂದು ಇಲಾಖೆಯನ್ನೇ ಸ್ಥಾಪಿಸಿಕೊಂಡು ಬೆಳ್ಳಿ ಹಬ್ಬ, ವಜ್ರ ಮಹೋತ್ಸವ, ಅಮೃತಮಹೋತ್ಸವ ಹಾಗೂ ಸುಮಾರು ಸಾವಿರಾರು ಪುಸ್ತಕಗಳ ಪ್ರಕಟಣೆ, ಕವಿ, ಕಾವ್ಯ, ವಿಚಾರ ಸಂಕಿರಣ, ಸಾಹಿತ್ಯ ಕಮ್ಮಟಗಳು, ಸಂಶೋಧನಾ ಕೇಂದ್ರಗಳು, ರಂಗ ಸ್ಪರ್ಧೆಗಳು, ಸಾಹಿತ್ಯ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಾ ಇದೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಷತ್ತುಗಳನ್ನು ತೆರೆದು ಜಿಲ್ಲಾ ಮಟ್ಟದ ಪರಿಷತ್ತುಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಹಣದ ಸಹಾಯ ನೀಡುವಂತೆ ಮಾಡಿದೆ.ಜಿಲ್ಲಾ ಮಟ್ಟದಲ್ಲಿ ಸಮ್ಮೇಳನಗಳನ್ನು ನಡೆಸುತ್ತಾ ಬರುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈವಿಧ್ಯಮಯ ಸಾಹಿತ್ಯದ ವಿಷಯಗಳನ್ನು ಕುರಿತು ಗೋಷ್ಠಿಗಳು, ಪ್ರಬಂಧ ಮಂಡನೆ, ಚರ್ಚೆಗಳು, ಭಾಷೆ ಮತ್ತು ಸಂಸ್ಕೃತಿಗಳ ಚರ್ಚಾಕೂಟ, ಪುಸ್ತಕಗಳ ಪ್ರಕಟಣೆ ಮತ್ತು ಬಿಡುಗಡೆ, ವಿದ್ವಾಂಸರು ಸಾಹಿತಿಗಳು ಜನಪ್ರತಿನಿಧಿಗಳಿಂದ ಭಾಷೆ, ನಾಡಿನ ಬಗ್ಗೆ ಚಿಂತನೆ ನಡೆಸುತ್ತಾ ಬರುತ್ತಿದೆ. ಸಾಹಿತಿಗಳಿಗೆ, ಕವಿಗಳಿಗೆ, ಕನ್ನಡದ ಜನತೆಗೆ ಹಬ್ಬದ ವಾತಾವರಣವನ್ನು ನಿರ್ಮಿಸಿ ಜ್ಞಾನರ್ಜನೆಯನ್ನು ನೀಡುತ್ತಾ ಬಂದಿದೆ. ಖ್ಯಾತ ಸಾಹಿತಿಗಳು, ಕವಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಪರಿಷತ್ತು ಒಂದು ನಿಯಮವನ್ನು ಹಾಕಿಕೊಂಡು ಬರುತ್ತಿದೆ.ಪ್ರಸ್ತುತವಾಗಿ ಸದ್ಯ ಹಿರಿಯ ನಿವೃತ್ತ ಐ.ಎ.ಎಸ್ ಅಧಿಕಾರಿ ಮ.ನು.ಬಳೆಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಈವರೆಗೆ ಕನ್ನಡದ ಕೆಲಸ ಮಾಡಿದರು.ಬರುಬರುತ್ತ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಸಾಹಿತಿಗಳೇ ಅಧ್ಯಕ್ಷ್ಯರಾಗುತ್ತ ಬರುವಂತಾಯಿತು.
ಈಗ ಮ.ನು.ಬಳೆಗಾರರ ಅವಧಿಯೂ ಮುಗಿಯಿತು. ಸದ್ಯ ಚುನಾವಣೆ ನಡೆಯಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ..!ಈ ವರೆಗಿನ ಅಧ್ಯಕ್ಷರು–ಅವರು ಹೀಗಿದ್ದಾರೆ– ಶ್ರೀ ಎಚ್. ವಿ. ನಂಜುಂಡಯ್ಯ – 1915-1920 ಸರ್. ಎಂ. ಕಾಂತರಾಜ ಅರಸ್ – 1920-1923 ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ – 1924 – 1940 ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ – 1940-1943 ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ – 1941-1946 ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ – 8-6-1947 ರಿಂದ 29-12-1947 ಶ್ರೀ ತಿರುಮಲೆ ತಾತಾಚಾರ್ಯ ಶರ್ಮ – 29-12-1947 ರಿಂದ 6-3-1949 ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ – 6-3-1949 ರಿಂದ 17-12-1950 ಶ್ರೀ ಎಂ. ಆರ್. ಶ್ರೀನಿವಾಸ ಮೂರ್ತಿ – 16-12-1950 ರಿಂದ 16-9-1953 ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – 30-9-1953 ರಿಂದ 9-5-1954 ಪ್ರೊ. ಎ. ಎನ್. ಮೂರ್ತಿ ರಾವ್ 9-5-1954 ರಿಂದ 17-5-1956 ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ – 17-5-1956 ರಿಂದ 25-10-1964 ಪ್ರೊ. ಜಿ. ವೆಂಕಟಸುಬ್ಬಯ್ಯ – 25-10-1964 ರಿಂದ 11-6-1969 ಶ್ರೀ ಜಿ. ನಾರಾಯಣ – 11-6-1969 ರಿಂದ 26-7-1978 ಡಾ. ಹಂಪ ನಾಗರಾಜಯ್ಯ – 26-7-1978 ರಿಂದ 19-2-1986 ಹೆಚ್. ಬಿ. ಜ್ವಾಲನಯ್ಯ – 19-2-1987 ರಿಂದ 1-11-1988 ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ – 7-2-1989 ರಿಂದ 14-5-1992 ಶ್ರೀ ಗೊ. ರು. ಚನ್ನಬಸಪ್ಪ – 14-5-1992 ರಿಂದ 22-6-1995 ಡಾ. ಸಾ. ಶಿ. ಮರುಳಯ್ಯ – 22-6-1995 ರಿಂದ 10-7-1998 ಶ್ರೀ ಎನ್. ಬಸವಾರಾಧ್ಯ – 10-7-1998 ರಿಂದ 11-7-2001 ಶ್ರೀ ಹರಿಕೃಷ್ಣ ಪುನರೂರು – 11-7-2001 ರಿಂದ 2-11-2004 ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) – 2-11-2004 ರಿಂದ 30-4-2008 ಡಾ. ನಲ್ಲೂರು ಪ್ರಸಾದ್ ಆರ್. ಕೆ – 27-8-2008 ರಿಂದ 27-2-2012 ಶ್ರೀ ಪುಂಡಲೀಕ ಹಾಲಂಬಿ – 02-05-2012ಪ್ರಸ್ತುತವಾಗಿ ಮ.ನು.ಬಳೆಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈಗ ಇವರ ಸ್ಥಾನಕ್ಕೇ ಚುನಾವಣೆ ನಡೆಬೇಕಿದೆ…ಹೀಗೆಯೇ ನಡೆದುಕೊಂಡು ಬಂದ ಸಾಹಿತ್ಯ ಪರಿಷತ್ತು ಈಗ ರಾಜಕೀಯ ಕ್ಷೇತ್ರದಂತೆ ಬದಲಾಗಿದೆ. ಬಹಳ ಸಂದರ್ಭದಲ್ಲಿ ಈ ಪರಿಷತ್ತಿಗೆ ಅಸಾಹಿತಿಗಳೇ ಅಧ್ಯಕ್ಷಾರಾಗುತ್ತಾ ಬಂದು ಈ ಸಾಹಿತ್ಯಕ ಚುನಾವಣೆ ಒಂದು ಪಕ್ಕಾ ಯಾವ ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆದು ಬಂದು ಸಾಹಿತ್ಯ ಪರಿಷತ್ತೊಂದು ರಾಜಕೀಯ ಸಾಹಿತ್ಯ ಪರಿಷತ್ತು ಆಗಿದೆ.ಇದನ್ನು ಮುಂದೆ ನೋಡೋಣ. ಸದಕ್ಯಿಷ್ಟು ಸಾಕು..!
# ಕೆ.ಶಿವು.ಲಕ್ಕಣ್ಣವರ