ಅಸನೀರಲ್ಲಿ ನಡೆಯುತ್ತಿದ್ದ ಶಿಕಾರಿಗೆ ಅದರದ್ದೇ ಆದ ಫೋರ್ಸು ಇರುತ್ತಿತ್ತು. ಫೋರ್ಸು ಎಂದರೆ ಉಮೇದು ಅಂತ. ಹಾಗೆಯೇ ಶಿಕಾರಿಗೆ ಅಂತಲೇ ಯಾವಾಗಲೂ ಒಂದು ತಂಡ ಮುಂದಿರುತ್ತಿದ್ದುದೂ ಹೌದು. ಕಾಳ, ರಂಕ, ಗೋಟು, ಬಿಲ್ಲ, ಮಾರು, ದಾನು, ಬೀರ ಎಂದು ಮೊದಲಾಗಿ ಅವರ ಹೆಸರುಗಳು. ಹೇಳುವಾಗ ಇಲ್ಲಿ ಕಡೆಯದಾಗಿ ಬಂದರೂ, ಬೇಟೆ ಎಂದರೆ ಎಲ್ಲರಿಗಿಂತ ಮುಂದಿರುತ್ತಿದ್ದವ ಬೀರನೇ. ಹಾಗೆಂದೇ ಅವನನ್ನು ಬ್ಯಾಟೆಬೀರ ಎಂದೇ ಇಡೀ ಅಸನೀರು ಮಾತ್ರವಲ್ಲ, ಸುತ್ತಲ ನೀರ್ಕುಳಿ, ಚನಗಾರ, ಮಾಬಗಿ, ಕುಂಟಕಣಿ ಇತ್ಯಾದಿ ಊರುಗಳೂ ಗುರುತಿಸುತ್ತಿದ್ದವು. ಇಷ್ಟೆಲ್ಲ ಚರಿತ್ರೆ ಇರುವ ಮಾತ್ರಕ್ಕೆ ಬೀರನಾಗಲೀ ಅವನೊಂದಿಗೆ ಬೊಬ್ಬೆ ಹೊಡೆಯುತ್ತ ಬಂದೂಕು, ಕತ್ತಿ, ಕೋಲು ಹಿಡಿದುಕೊಂಡು ದಂಡಿನಂತೆ ನುಗ್ಗುತ್ತಿದ್ದವರಾಗಲೀ ಹುಲಿಯನ್ನೋ ಚಿರತೆಯನ್ನೋ ಹೊಡೆದ ಪರಮ ವೀರಪುರುಷರೇನೂ ಆಗಿರಲಿಲ್ಲ. ಆದರೂ ಶಿಕಾರಿ ಎಂದೊಡನೆ ಕಾವೇರಿಸಿಕೊಳ್ಳಲು ಈ ಟೀಮು ಬಿಟ್ಟರೆ ಇನ್ನಾರಿಗೂ ಅಂಥ ಆಸಕ್ತಿ ಇರುತ್ತಿರಲಿಲ್ಲವಾದ್ದರಿಂದ ಅಸನೀರಿಗೂ ಬೇರೆ ಗತಿಯಿರಲಿಲ್ಲ.
ಬೀರನೂ ಅವನ ಟೀಮಿನ ಇತರರೂ ಬಗೆ ಬಗೆಯ ಕಥೆಯನ್ನು ಪ್ರಭಾವಳಿಯಂತೆ ಧರಿಸಿದವರೇ ಆಗಿದ್ದರು. ನಿಜ ಹೇಳಬೇಕೆಂದರೆ, ಅವರಲ್ಲಿ ಹುಲಿಯನ್ನು ನೋಡಿದವರಿರಲಿ, ಹುಲಿಯ ಆಕಾರದ ಕಲ್ಪನೆ ಇದ್ದವರೂ ಇರಲಿಲ್ಲ. ನರಿಯನ್ನೇ ಮರಗಿಡಗಳ ಮರೆಯಲ್ಲಿ ಅದರ ಹಿಂಬದಿಯಿಂದ ನೋಡಿ ಹುಲಿಯೇ ಎಂದು ಹೆದರಿ, ನಿಂತರೆ ಕೆಟ್ಟೆನೆಂದು ಮನೆಯವರೆಗೂ ಓಡಿಬಂದವರೂ ಇದ್ದರು. ಮತ್ತೆ ಕೆಲವರು, ನರಿಯ ಅಸಾಧ್ಯ ದುರ್ನಾತದ ಹೂಸು ಸರಿಯಾಗಿಯೇ ಮೂಗಿಗೆ ಬಡಿದ ಮೇಲೆ, ಮೂಗೇ ಬಿದ್ದುಹೋದಂತೆ ಆಡುತ್ತ, ಇಲ್ಲ ಇಲ್ಲ ಅದು ನರಿ ಎಂದು ತಮ್ಮ ಗ್ರಹಿಕೆಯ ಪ್ರತಿಭೆ ಮೆರೆಯುತ್ತಿದ್ದುದೂ ಇತ್ತು.
ಇವರಲ್ಲಿ ಯಾರೊಬ್ಬರೂ ಮೊಲ, ಬರ್ಕಗಳಂಥ ಸಾಧು ಪ್ರಾಣಿಗಳ ಮುಂದೆ ಕೂಡ ನಿರಾಯಾಸದ ಪ್ರದರ್ಶನ ಮೆರೆದವರಲ್ಲ. ಅವುಗಳನ್ನು ಹೊಡೆದುರುಳಿಸುವುದಕ್ಕೂ ಮೈಕೈತುಂಬಾ ನೂರಾ ಎಂಟು ಗಾಯ ಮಾಡಿಕೊಂಡು ಆಮೇಲೆ ವಾರಗಟ್ಟಲೆ ಮಲಗುತ್ತಿದ್ದರು. ಆದರೆ ಶಿಕಾರಿಗೆ ಅಂತ ಮನೆಯಿಂದ ಹೊರಡುವಾಗ ಮಾತ್ರ ಹೆಂಗಸರ ಮುಂದೆ ಪೌರುಷವೋ ಪೌರುಷ. ಹೆಂಗಸರೆಲ್ಲ ಸೇರಿ ಈ ಅಡ್ನಾಡಿ ಹಂಟರುಗಳಿಗೆ ಆರತಿ ಎತ್ತಬೇಕು. ಶಿಕಾರಿಗೆ ಹೊರಡುವಾಗ ಇವರಿಗೆಲ್ಲ ಕೋಳಿಸಾರಿನ ಊಟವೇ ಆಗಬೇಕು. ಜೊತೆಗೆ ಗೇರುಹಣ್ಣಿನ ಭಟ್ಟಿ ಸಾರಾಯಿ. ಇವರ ಹಣೆಬರಹ ಏನೆಂಬುದು ಗೊತ್ತಿದ್ದರೂ, ಮಾತಾಡಿ ತಮ್ಮ ಮೇಲೆ ತಾವೇ ಕೆಸರೆರಚಿಕೊಳ್ಳಲು ಇಷ್ಟವಿಲ್ಲದೆ ಹೆಂಗಸರು ಎಲ್ಲವನ್ನೂ ತುಂಬಾ ಭಕ್ತಿಯಿಂದೆಂಬಂತೆ, ನೇಮವೆಂಬಂತೆ ಮಾಡಿ ಮುಗಿಸಿ, ಒಮ್ಮೆ ತೊಲಗಿದರೆ ಸಾಕು, ತಿರುಗಿ ಬರುವಷ್ಟು ಹೊತ್ತಾದರೂ ನೆಮ್ಮದಿಯಿಂದ ಕಳೆಯಬಹುದು ಎಂದು ಕಾಯುತ್ತಿದ್ದರು.
ಬರೀ ಹಗಲು ವೇಳೆಯ ಶಿಕಾರಿಯಲ್ಲೇ ಏನೇನೆಲ್ಲಾ ರಂಪ ರಾಮಾಯಣ ಮಾಡಿಕೊಳ್ಳುತ್ತಿದ್ದ ಇವರು, ರಾತ್ರಿಯ ಶಿಕಾರಿಯನ್ನು ಕನಸಿನಲ್ಲೂ ಊಹಿಸಲಾರದವರಾಗಿದ್ದರು. ಇವರ ಆಟವೇನಿದ್ದರೂ ಹೊತ್ತೇರಿ ಬಂದ ಬಳಿಕ ಶುರುವಾಗಿ, ಹೊತ್ತು ಮುಳುಗಲು ಇನ್ನೂ ಎರಡು ಮೂರು ತಾಸಿದೆ ಎನ್ನುವಾಗ ಮುಗಿದುಬಿಡಲೇಬೇಕಿತ್ತು. ಸ್ವಲ್ಪವೇ ಸ್ವಲ್ಪ ಮುಸ್ಸಂಜೆ ಮಂಕು ಕವಿದರೂ, ತಮ್ಮಲ್ಲೆ ಒಬ್ಬರನ್ನೊಬ್ಬರು ಪ್ರಾಣಿಗಳೆಂದು ತಿಳಿದು ಬಡಿದಾಡಿಕೊಳ್ಳುವ ಪೈಕಿಯವರಾಗಿದ್ದರು. ಮಾಡಿಕೊಂಡ ಯಡವಟ್ಟಿಗೆ ಮಾತ್ರ ಹೆಗಲು ಕೊಡಲು ಯಾರೂ ತಯಾರಿರುತ್ತಿರಲಿಲ್ಲ. ಒಬ್ಬರು ಇನ್ನೊಬ್ಬರ ಕಡೆ ಬೆರಳು ಮಾಡಿ, ಇವನಿಂದಲೇ ಇದೆಲ್ಲಾ ಆಯ್ತು, ಇವನೊಬ್ಬ ಸರಿಯಿದ್ದರೆ ಹೀಗೆ ಆಗುತ್ತಲೇ ಇರಲಿಲ್ಲ ಎಂದು ಕೂಗಾಡಿಕೊಂಡು, ಅಂತಿಮವಾಗಿ ಶಿಕಾರಿಯೆನ್ನುವುದು ಇವರೆಲ್ಲರ ಹುಳುಕುಗಳು ಮತ್ತು ಹೇಡಿತನವನ್ನು ಬಯಲಿಗಿಡುವ ದೊಡ್ಡ ಪ್ರಹಸನವೇ ಆಗುವುದು ಊರಿನಲ್ಲಿ ಮಾಮೂಲೇ ಆಗಿತ್ತು.
ಇಂಥ ಅಪ್ರತಿಮ ವೀರ ಹಂಟರುಗಳ ಪಡೆ ಅವತ್ತು ಕೂಡ ಹೊತ್ತೇರಿ ಬರುವ ಹೊತ್ತಿಗೆ ಗಡದ್ದು ಉಂಡು ಕಾಡಿನ ಕಡೆ ದೊಡ್ಡ ಗದ್ದಲ ಮಾಡಿಕೊಂಡು ನಡೆಯಿತು. ಅವರ ಕೈಯಲ್ಲಿನ ಬಂದೂಕು, ಬಲೆ, ಕತ್ತಿ, ಕೋಲುಗಳೇ ಮೊದಲಾದ ಶಸ್ತ್ರಗಳು, ಏನೋ ಒಂದು ಐತಿಹಾಸಿಕ ಎನ್ನಿಸುವಂಥದ್ದು ಜರುಗಿಬಿಡುತ್ತದೆ ಎಂಬಂತೆ ಲಕಲಕಗುಡುತ್ತಿದ್ದವು. ಬರುವಾಗ ಮೂರು ಸೊಲಗೆ ಮಾಂಸ ತರೋ ಯೋಗ್ಯತೆ ಇಲ್ದೆ ಇದ್ರೂ ಈಗ ಆರು ಕೋಳಿ ತಿಂದು ಮುಗ್ಸಿ ಹೋಗ್ತಾ ಇದೆ ಹೇಡಿ ಸಂತಾನ, ಥೂ ಇವರ ಜನ್ಮಕ್ಕೆ ಎಂದು ಅವರ ಬೆನ್ನಲ್ಲೇ ಕ್ಯಾಕರಿಸಿ ಉಗಿಯತೊಡಗಿತ್ತು ಹೆಂಗಸರ ಸೈನ್ಯ. ಶಿಕಾರಿಯ ಗುಂಗಲ್ಲಿ ಹೊರಟವರಿಗೆ ಅದಾವುದೂ ಯಾವ ರೋಮಕ್ಕೂ ತಾಕುವ ಸಾಧ್ಯತೆ ಇರಲಿಲ್ಲ. ಅವರ ರೋಮಾಂಚನವೇ ಬೇರೆ ಬಗೆಯಲ್ಲಿತ್ತು.
ಕಾಡೊಳಗೆ ಇವರ ಗದ್ದಲ ಇವರ ವೀರಾವೇಶದ ಪ್ರತಿರೂಪವೇನೂ ಆಗಿರದೆ, ಹೆದರಿಕೆಯಿಂದ ಪಾರಾಗುವ ಒಂದು ಉಪಾಯ ಮಾತ್ರವಾಗಿತ್ತು. ಸುಮಾರು ಅರ್ಧ ಫರ್ಲಾಂಗಿನಷ್ಟು ದೂರ ಕಾಡಿನಲ್ಲಿ ಹೋಗುತ್ತಿದ್ದ ಹಾಗೆ ಮೇಲಿಂದ ಏನೋ ಬಿದ್ದು, ಅದರ ಪರಿಣಾಮ ನೆಲದಲ್ಲಿ ರಾಶಿಯಾಗಿ ಬಿದ್ದಿದ್ದ ತರಗೆಲೆಗಳ ಅಡಿಯಲ್ಲಿ ಏನೇನೋ ಸರಸರ ಹರಿದಾಡಿದಂತಾಯಿತು. ಇವೆರಡರಿಂದಾಗಿ ಹಂಟರುಗಳ ಗದ್ದಲವೇ ಕುಸಿದುಬಿತ್ತು. ಎಲ್ಲರೂ ಎದೆ ಧಸಕ್ಕೆಂದ ಅನುಭವಕ್ಕೆ ಕಂಗಾಲಾಗಿ, ತಾವು ಶಿಕಾರಿಗೆ ಬಂದವರು ಎಂಬುದನ್ನೇ ಸ್ವಲ್ಪ ಹೊತ್ತು ಮರೆತವರಂತಾದರು. ಗೇರುಹಣ್ಣಿನ ಸಾರಾಯಿಯ ನಶೆ ಕೂಡ ನಿತ್ರಾಣಗೊಂಡಿತ್ತು.
ಮೇಲಿಂದ ಬಿದ್ದದ್ದಾದರೂ ಏನು ಎಂಬುದು ಯಾರಿಗೂ ಸ್ಪಷ್ಡವಿರಲಿಲ್ಲ. ಹಾಗಾಗಿ ಕೆಲವರು ಅದು ದೆವ್ವವಿರಬಹುದು ಎನ್ನುವ ಮಟ್ಟಕ್ಕೂ ಕಲ್ಪಿಸಿಕೊಂಡು ಇನ್ನೂ ಕಂಗಾಲಾದರು. ಹಾಗೇ ಕೂತವರು ಅರ್ಧ ತಾಸು ಮೇಲಾದರೂ ಸಾವರಿಸಿಕೊಳ್ಳಲಾರದೆ ಸೋತರು. ಯಾವ ಗ್ರಹಚಾರಕ್ಕೊ ಏನೊ ಒಬ್ಬ ಸುಮ್ಮನಿರಲಾರದೆ ಬಂದೂಕಿನ ಕುದುರೆ ಎಳೆದಿದ್ದ. ನೆಲದ ಮೇಲೆ ಮೇಲ್ಮುಖವಾಗಿ ನಿಲ್ಲಿಸಿಕೊಂಡಿದ್ದ ಬಂದೂಕಿನಿಂದ ಗುಂಡು ಸಿಡಿದು ಢಮಾರ್ ಎಂಬ ಸೌಂಡು ಕಾಡಿನಲ್ಲಿ ಮಾರ್ದನಿಸಿತ್ತು. ಮತ್ತೊಮ್ಮೆ ಇವರೇ ತರಗೆಲೆಗಳಂತಾಗಿ ಭಯದಲ್ಲಿ ತೂರಾಡಿ ಹೋದರು. ಇನ್ನೂ ದುರಂತವೆಂದರೆ, ಈ ಸಲ ಸಾವರಿಸಿಕೊಳ್ಳುವುದಕ್ಕೂ ಅವಕಾಶ ಸಿಗದೇ ಹೋಯಿತು.
ಏನಾಗಿಬಿಟ್ಟಿತ್ತೆಂದರೆ, ಗುಂಡು ಸಿಡಿದ ಸದ್ದಿಗೆ ಅದೆಲ್ಲೊ ಯಾವ ಆರ್ಡಿನರಿ ಶಬ್ದಕ್ಕೂ ತಲೆಕೆಡಿಸಿಕೊಳ್ಳದೆ ಗಡದ್ದಾಗಿ ನಿದ್ದೆ ಹೊಡೆದುಕೊಂಡಿದ್ದ ಒಂಟಿ ಹಂದಿ – ಜುರಗ ಅಂತಾರೆ – ಭೀಕರವಾಗಿ ಚೀರಿಕೊಂಡೆದ್ದು ಓಡಿಬಂದಿತ್ತು. ನೋಡುತ್ತದೆ- ಇಲ್ಲಿ ವೀರಾಧಿವೀರರ ದಂಡು. ಇನ್ನು ಉಳಿಗಾಲವಿಲ್ಲ ತನಗೆ ಎಂದು ಭಾವಿಸಿದ ಅದು, ಇವರ ಮಧ್ಯೆಯಿಂದಲೇ ರಭಸವಾಗಿ ನುಸುಳಿ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂದುಕೊಂಡಿತು. ತಮ್ಮನ್ನೇ ತನ್ನ ಕೋರೆದಾಡೆಯಿಂದ ಸೀಳಿಹಾಕಬೇಕೆಂದೇ ನಿಕ್ಕಿ ಮಾಡಿಕೊಂಡು ರಾಕ್ಷಸ ಸ್ಪೀಡಿನಲ್ಲಿ ಜುರಗ ನುಗ್ಗಿ ಬರುತ್ತಿರುವುದನ್ನು ಕಂಡವರೇ, ಮೊದಲೇ ಕಂಗಾಲಾಗಿ ಕೂತಿದ್ದವರೆಲ್ಲ ಜಂಘಾ ಬಲವೇ ಉಡುಗಿದಂತಾಗಿ ಎದ್ದೆವೊ ಬಿದ್ದೆವೊ ಎಂಬಂತೆ ದಿಕ್ಕಾಪಾಲಾದರು. ಒಬ್ಬ ಬ್ಯಾಟೆಬೀರನ ಹೊರತಾಗಿ.
ಬ್ಯಾಟೆಬೀರನ ಸ್ಥಿತಿ ತೀರಾ ಅಂದರೆ ತೀರಾ ಶೋಚನೀಯವಾಗಿತ್ತು. ಅವನೆದುರಲ್ಲೇ ಬಂದುಬಿಟ್ಟಿತ್ತು ಕೊಬ್ಬಿದ್ದ ಹಂದಿ. ಯಾವ ದಿಕ್ಕಿಗೂ ಓಡಲಾರದವನಂತೆ ಬೆಚ್ಚಿ ನಿಂತುಬಿಟ್ಟಿದ್ದ ಬೀರ. ಆಗ ಅವನಿಗೆ ತಾನು ಒಂದು ಒಣಗಿದ ಗಿಡದ ಬಾಜೂವೇ ನಿಂತಿರುವುದು ಹೌದೋ ಅಲ್ಲವೊ ಎಂಬಂತೆ ಅರಿವಿಗೆ ಬಂತು. ಕೈಗೆ ನಿಲುಕುವಂತೆ ಅದರ ರೆಂಬೆಯಿರುವುದು ಕಂಡಿತು. ಇನ್ನು ಬೇರೆ ಗತಿಯಿಲ್ಲ ಎನ್ನಿಸಿದ್ದೇ ಅದನ್ನೇ ಜಿಗಿದು ಹಿಡಿದುಕೊಳ್ಳುವ ಉಪಾಯ ಹೊಳೆಯಿತು. ಬಂದೇಬಿಟ್ಟಿತ್ತು ಹಂದಿ. ಬೀರ ಮೇಲಕ್ಕೆ ನೆಗೆದ. ದುರ್ದೆಸೆ ಹೇಗಿರುತ್ತದೆ ನೋಡಿ. ಹಂದಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮರದ ರೆಂಬೆ ಹಿಡಿಯಲು ನೆಗೆದವನು ಅಷ್ಟೇ ವೇಗದಲ್ಲಿ ಹಂದಿಯ ಗುರುತ್ವಾಕರ್ಷಣ ಶಕ್ತಿಗೆ ಒಳಗಾದವನಂತೆ ಹಂದಿಯ ಮೇಲೇ ಬಿದ್ದುಬಿಟ್ಟಿದ್ದ. ಮರದ ರೆಂಬೆಯನ್ನು ಆಶ್ರಯಿಸಬೇಕಾಗಿದ್ದ ಅವನ ನಸೀಬು ಪುನಃ ಹಂದಿಯ ಬೆನ್ನೇರಿಬಿಟ್ಟಿತ್ತು. ಓಡುತ್ತಿದ್ದ ಹಂದಿಯ ಮೇಲೆ ಬಿದ್ದವನು ಅದೆಂಥದೋ ಮಾಂತ್ರಿಕ ವೇಗದಲ್ಲಿ ಹಂದಿಯನ್ನೇ ಗಟ್ಟಿಯಾಗಿ ತಬ್ಬಿಕೊಂಡುಬಿಟ್ಟ.ಅದರ ಮೇಲಿಂದ ಕೆಳಕ್ಕೆ ಬಿದ್ದುಬಿಟ್ಟರೆ ಮಣ್ಣುಪಾಲಾಗುವುದೇ ಖಾತ್ರಿ ಎಂದುಕೊಂಡವನ ಬಿಗಿ ಹಿಡಿತವಾಗಿತ್ತು ಅದು.
ಸ್ಪೀಡಾಗಿ ಓಡುತ್ತಿರುವ ಹಂದಿ. ಅದರ ಬೆನ್ನ ಮೇಲೆ ವಿರುದ್ಧ ದಿಕ್ಕಿನಲ್ಲಿ ಮುಖವಾಗಿ ಮಲಗಿ ಗಟ್ಟಿಯಾಗಿ ಹಿಡಿದುಕೊಂಡ ಬೀರ. ಬರೀ ಬೀರನೊ ಎಂದು ಕೇಳಿದರೆ- ಇಲ್ಲ. ಬ್ಯಾಟೆಬೀರ. ಹಂದಿಯ ಹಿಂಭಾಗಕ್ಕೆ ಒತ್ತಿಕೊಂಡಿತ್ತು ಅವನ ಮುಖ. ಬದುಕಿಕೊಂಡರೆ ಆಮೇಲೆ ಮುಂದಿನದ್ದು ಯೋಚಿಸಿದರಾಯಿತು ಎಂಬ ಸ್ಥಿತಿಯಲ್ಲಿದ್ದ ಅವನು. ಹಂದಿ ಎಲ್ಲೆಂದರಲ್ಲಿ ನುಸುಳಿ ಓಡುತ್ತಿರಬೇಕಾದರೆ ಇವನ ಮೈಗೆಲ್ಲ ತರಚು ಗಾಯಗಳ ಬಳವಳಿ. ಜೊತೆಗೆ, ಸಿಕ್ಕ ಮರಗಿಡಗಳಿಗೆಲ್ಲ ಹೊಡೆಸಿಕೊಳ್ಳುತ್ತ ಆಘಾತದ ಮೇಲೆ ಆಘಾತ. ಹಂದಿ ಅದೆಷ್ಟು ದೂರ ಇವನನ್ನು ಹೊತ್ತು ಓಡಿತೊ. ಆದರೆ, ಭೂಮಿಯನ್ನು ಪಾತಾಳದಿಂದ ಎತ್ತಿ ವಾಪಸ್ಸು ತಂದಿದ್ದ ವರಾಹ ಇವನನ್ನು ಮಾತ್ರ ಯಾವುದೋ ಒಂದು ಪಾಯಿಂಟಿನಲ್ಲಿ, ಗಟ್ಟಿಯಿದ್ದರೆ ಬದುಕಿಕೊ ಮಗನೆ ಎನ್ನುವಂತೆ ಬಿಸಾಕಿ ಮುಂದೆ ಓಡಿತ್ತು.
ಯಾವ ಸ್ಪಾಟಿನಲ್ಲಿ ಗುಂಡು ಸಿಡಿದು ಇಷ್ಟೆಲ್ಲಾ ಅಧ್ವಾನಕ್ಕೆ ನಾಂದಿಯಾಯಿತೊ ಅದೇ ಸ್ಪಾಟಿಗೆ ದಿಕ್ಕಾಪಾಲಾಗಿದ್ದ ಬ್ಯಾಟೆಬೀರನ ಟೀಮಿನ ಮೆಂಬರುಗಳೆಲ್ಲ ಹಂದಿ ಓಡಿಹೋದ ಬೆನ್ನಲ್ಲೇ ಮತ್ತೆ ಬಂದು ಸೇರಿದ್ದರು. ಆದರೆ ಬೀರ ಎಲ್ಲಿ ಎಂಬುದೇ ಅವರಾರಿಗೂ ತಿಳಿಯಲಿಲ್ಲ. ಎಲ್ಲ ಪರಸ್ಪರ ಮುಖ ನೋಡಿಕೊಂಡು ನಿಂತರು. ಎಲ್ಲರ ಕಣ್ಣಲ್ಲಿ ಇದ್ದ ಪ್ರಶ್ನೆ, ಬೀರ ಎಲ್ಲಿ ಎಂಬುದು. ಉತ್ತರ ಹೊಳೆಯುವುದು ಹಾಗಿರಲಿ, ಊಹೆ ಕೂಡ ಅವರಾರ ತಲೆಯೊಳಗೂ ಸುಳಿಯಲಿಲ್ಲ. ಬೀರನನ್ನು ಹುಡುಕಿಕೊಂಡು ಕಾಡೊಳಗೆ ನಡೆಯುವುದೊಂದೇ ಇರುವ ದಾರಿ ಎಂದು ಮಾತ್ರ ಎಲ್ಲರಿಗೂ ಅನ್ನಿಸಿತು. ಬೇಟೆಗೆ ಅಂತ ಬಂದು ಇನ್ನೇನೋ ಆಗಿಹೋಯಿತು ಎಂಬ ಆತಂಕವೂ ಅವರೆಲ್ಲರೊಳಗೆ ಕದಲಿತು.
ಶುರುವಾಯಿತು ಹುಡುಕಾಟ. ಆಗಲೇ ಹೊತ್ತು ನೆತ್ತಿಯ ಮೇಲೆ ಬರುತ್ತಿತ್ತು. ಎಲ್ಲರಿಗೂ ದಾಹ ಎನ್ನಿಸತೊಡಗಿತ್ತು. ಅಂಥ ಸ್ಥಿತಿಯಲ್ಲಿ, ಜೊತೆಗೆ ಬಂದವನೊಬ್ಬನ ಕಣ್ಮರೆ ಅವರನ್ನು ಇನ್ನಷ್ಟು ಹೈರಾಣಾಗಿಸಿತು. ಬೀರಾ, ಬೀರಾ ಎಂದು ಕೂಗುತ್ತಾ ಕಾಡಿನಲ್ಲಿ ಹಂದಿ ಓಡಿರಬಹುದು ಎಂದೆನ್ನಿಸಿದ ದಿಕ್ಕಿನಲ್ಲಿ ನಡೆದರು. ಬೀರಾ ಎಂದು ಕೂಗುವುದಕ್ಕೂ ತಮ್ಮೊಳಗೆ ತಾಕತ್ತು ಉಳಿದಿಲ್ಲ ಎಂಬುದು ಗೊತ್ತಾಗುತ್ತಿತ್ತು. ಕೂಗುತ್ತಾ ಕೂಗುತ್ತಾ ಗಂಟಲ ಪಸೆ ಆರಿ, ನಡೆದೂ ನಡೆದೂ ಕಾಲುಗಳು ಸೋತುಹೋದರೂ ಬೀರನ ಪತ್ತೆ ಮಾತ್ರ ಆಗಲೇ ಇಲ್ಲ. ಇಡೀ ಕಾಡೇ ಒಂದು ಕುಹಕದಂತೆ, ಸಂಚಿನಂತೆ ತಮ್ಮನ್ನು ಆಕ್ರಮಿಸಿಕೊಳ್ಳುತ್ತಿದೆ ಎನ್ನಿಸಿ ಹತಾಶರಾದರು.
ತಮಗಿನ್ನು ಬೀರ ಸಿಕ್ಕುವುದಿಲ್ಲ ಎಂದು ಒಂದು ಹಂತದಲ್ಲಿ ಮನವರಿಕೆಯಾಗುತ್ತಿದ್ದಂತೆ, ಮುಂದೇನೂ ತಮ್ಮ ಕೈಯಲ್ಲಿಲ್ಲ ಎಂಬುದೂ ನಿಚ್ಚಳವಾಯಿತು. ಕೂಡಲೇ ವಾಪಸಾಗಿ ಊರವರನ್ನು ಕರೆತಂದು ಮತ್ತೊಮ್ಮೆ ಹುಡುಕುವ ಪ್ರಯತ್ನ ಮಾಡುವುದೇ ಸರಿ ಎಂದು ನಿಶ್ಚಯಿಸಿದರು. ಊರು ಮುಟ್ಟಿ ವಿಷಯ ಹೇಳಿದಾಗ ಜನರೆಲ್ಲ ಕಂಗಾಲು. ಅಂಥ ಆತಂಕದ ಪರಿಸ್ಥಿತಿಯಲ್ಲೂ ಹೆಂಗಸರೊಂದಿಷ್ಟು ಮಂದಿ ಸರಿಯಾಗಿ ಮಂಗಳಾರತಿ ಎತ್ತಿ ಬೇಟೆ ಟೀಮಿನವರ ಬೆವರಿಳಿಸತೊಡಗಿದರು.
ಹೀಗಾಗಿದೆ ಅನ್ನೋ ಸುದ್ದಿ ಊರ ತುಂಬಾ ಹೊತ್ತಿ ಉರಿಯತೊಡಗಿದಾಗ ಕಾಳ್ಗಿಚ್ಚೇ ಊರಿಗೆ ವರ್ಗವಾದ ಹಾಗಿತ್ತು. ಎಲ್ಲೆಲ್ಲೋ ದುಡಿಯುತ್ತ, ಕುಡಿಯುತ್ತ, ಗಂಡ ಮನೆಯಲ್ಲಿಲ್ಲದ ವೇಳೆ ನೋಡಿಕೊಂಡು ಅಂಥ ಹೆಂಗಸರ ಜೊತೆ ಮಿಡಿಯುತ್ತ ಇದ್ದವರೆಲ್ಲ ಇದಕ್ಕಿಂತ ದೊಡ್ಡ ಕರ್ತವ್ಯ ಈಗ ತಮ್ಮಿಂದ ಆಗಬೇಕಿದೆ ಎಂದು ಎದ್ದೂ ಬಿದ್ದೂ ಬಂದು ಸೇರಿದರು. ಕತ್ತಲಾದರೆ ಮತ್ತೆ ಹುಡುಕೋದು ಕಷ್ಟ ಎಂದು ಎಲ್ಲರೂ ಅವಸರ ಮಾಡಿದರು. ಮೊದಲೇ ಬಳಲಿ ಬೆಂಡಾಗಿದ್ದ ಬೇಟೆ ಟೀಮನ್ನು ಒಬ್ಬೊಬ್ಬರೂ ತಮ್ಮ ಶಕ್ತ್ಯಾನುಸಾರ ಬೈದುಕೊಳ್ಳುತ್ತಲೇ ಕಾಡಿನ ಕಡೆ ಹೊರಟರು.
ನೀರ್ಕುಳಿ ಹಳ್ಳದ ಹತ್ತಿರ ಮುಟ್ಟುವಾಗ ದೊಡ್ಡ ತಗ್ಗು ಎದುರಾಗುತ್ತದೆ. ಆ ತಗ್ಗು ಇಳಿದರೆ ಎದುರಿನ ದಾರಿ ಸುಮಾರು ಲೆವಲ್ಲಿನ ಗುಡ್ಡದ ಹಾಗೆಯೇ ಕಾಣಿಸುತ್ತದೆ. ಅದನ್ನು ಹತ್ತಿ ಆಚೆ ಇಳಿದರೆ ಅದೇ ನೀರ್ಕುಳಿ ಹಳ್ಳ. ಎಲ್ಲರೂ ತಗ್ಗಿನಿಂದ ನೀರ್ಕುಳಿ ಹಳ್ಳದ ಆ ಏರಿ ಹತ್ತತೊಡಗಿದರು. ಮುಂದೆ ಕಂಡದ್ದು ಮಾತ್ರ ಎಲ್ಲರನ್ನೂ ಕಂಗೆಡಿಸಿಬಿಟ್ಟಿತು.
ನೋಡುತ್ತಾರೆ: ಹಳ್ಳದ ಕಡೆಯ ತಗ್ಗಿನಿಂದ ಮೇಲಕ್ಕೆ ಎಂಥದೋ ತೇರಿನ ಥರದ್ದು ತೆವಳಿಕೊಂಡು ಬರುತ್ತಾ ಇದೆ. ಏನೆಂದೇ ಯಾರಿಗೂ ಅರ್ಥವಾಗಲಿಲ್ಲ. ಇಳಿಸಂಜೆ ಬೆಳಕಲ್ಲಿ ಹೊಳೆಯುತ್ತ ಬರುತ್ತಿದ್ದ ಅದರತ್ತಲೇ ಕಣ್ಣು ಕೀಲಿಸಿ ಮತ್ತೆ ಮತ್ತೆ ನೋಡಿದರು. ಅದೊಂದು ಹುಲ್ಲಿನ ಹೊರೆ ಥರ ಕಂಡಿತು. ಆದರೆ ಅದು ತೆವಳಿಕೊಂಡು ಬರುತ್ತಿರುವುದರ ರಹಸ್ಯ ಮಾತ್ರ ಗೊತ್ತಾಗಲಿಲ್ಲ. ಮತ್ತೆ ನೋಡಿದರು. ಹೊರೆಯ ಮುಂದೆ ಕೈಗಳ ಹಾಗೆ ಕಂಡದ್ದೇ ಮತ್ತೂ ಕಂಗಾಲಾದರು. ಕರಡಿ ಗಿರಡಿಯೇನಾದರೂ ಹೊರೆಯೊಳಗೆ ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಳಲಾರದೆ ಒದ್ದಾಡುತ್ತ ಹೀಗೆ ಬರುತ್ತಿದೆಯಾ ಎಂಬ ತರ್ಕಕ್ಕೆ ಬಿದ್ದರು.
ಹೀಗೆ ಎಲ್ಲರೂ ಬೆವರುತ್ತಲೇ ಏರಿಯ ಕಡೆ ಸ್ಲೋ ಆಗಿ ಹೋಗುತ್ತಿರುವಾಗಲೇ “ಅಯ್ಯೋ ಅವ್ನು ನಮ್ ಬೀರ” ಎಂದ ಗುಂಪಿನಲ್ಲೊಬ್ಬ. ಎಲ್ಲರೂ ನಿದ್ದೆಯಿಂದ ಎದ್ದವರಂತೆ ಅಲರ್ಟಾಗಿ ದೌಡಾಯಿಸಿದರು. ಹೋಗಿ ನೋಡಿದರೆ, ಹುಲ್ಲುಹೊರೆಯಡಿಯಲ್ಲಿ ನಿತ್ರಾಣ ಸ್ಥಿತಿಯಲ್ಲೂ ತೆವಳುತ್ತ ಊರು ಮುಟ್ಟಿಯೇ ಸಿದ್ಧ ಎಂಬಂತಿರುವ ಬೀರ. ಎಲ್ಲರೂ ಒಮ್ಮೆಲೆ ಆ ಹೊರೆಯನ್ನು ಆಚೆ ತಳ್ಳಿದರು. ಕೆಲವರು ಬೀರನನ್ನು ಎತ್ತಿ ತಂದು ಮಲಗಿಸಿ ತಮ್ಮ ತಮ್ಮ ಟವೆಲ್ಲುಗಳನ್ನು ಬೀಸುತ್ತ ಗಾಳಿ ಹಾಕತೊಡಗಿದರು.
ಅಂತೂ ಬೀರ ಸಿಕ್ಕಿದನಲ್ಲ ಎಂಬುದು ಎಲ್ಲರನ್ನೂ ಚುರುಕುಗೊಳಿಸಿತ್ತು. ಆದರೆ ಹುಲಿ ಹೊಡೆಯುವವನ ಗತ್ತಿನಲ್ಲಿ ಬೇಟೆಗೆ ಹೋಗಿದ್ದ ಬೀರ, ಈ ಯಕಶ್ಚಿತ್ ಹುಲ್ಲುಹೊರೆಯ ಒಳಗೆ ಹೇಗೆ ಸಿಲುಕಿದ ಎಂಬ ಘನಗಂಭೀರ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರ ಸಿಗಲು ಬೀರ ಸಾವರಿಸಿಕೊಳ್ಳುವವರೆಗೆ ಕಾಯದೆ ಬೇರೆ ದಾರಿಯಿರಲಿಲ್ಲ.
-ವೆಂಕಟ್ರಮಣ ಗೌಡ