

2015 ಕಾಗೋಡು ತಿಮ್ಮಪ್ಪನವರು ಸಾಗರದ ಶಾಸಕರಾಗಿ ನಿರಂತರ ಎರಡು ಸೋಲಿನ ನಂತರ ಆಯ್ಕೆ ಆಗಿದ್ದರು. ಬಹಳ ದೊಡ್ಡ ಅಂತರದಿಂದ ಗೆದ್ದು ಬಂದ ಕಾಗೋಡು ಸಾಹೇಬರ ಪರ ನಾವು ಕೆಲಸ ಮಾಡಿದ್ದೆವು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಘೋಷಣೆ ಆಗಿ ಮಂತ್ರಿಮಂಡಲ ರಚನೆ ಆಗುವ ಹೊತ್ತಿಗೆ ನಮ್ಮ ನಿರೀಕ್ಷೆ ಸಾಹೇಬರು ಮಂತ್ರಿಯಾಗುತ್ತಾರೆ ಎಂಬುದಾಗಿತ್ತು. ಆದರೆ ನಮ್ಮ ನಿರೀಕ್ಷೆ ನಿರಾಶೆಯಾಯಿತು. ಕಾಗೋಡು ಮಂತ್ರಿಯಾಗಲಿಲ್ಲ ಬದಲಿಗೆ ಸ್ಪೀಕರ್ ಆದರು.


ಇತ್ತ ಕಡೆ ನಮ್ಮ 20 ಸಾವಿರ ಜನರಿರುವ ದ್ವೀಪದ ತುಮರಿ ಮತ್ತು ಬ್ಯಾಕೊಡು ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದೆ ವರ್ಷ ಮೂರು ಕಳೆದಿತ್ತು. ಇದರ ಜತೆ ಈ ಹಿಂದಿನ ಸರ್ಕಾರ ಮಹತ್ವಾಕಾಂಕ್ಷಿ ಆರೋಗ್ಯ ಸೇವೆಯಾದ 108 ನ್ನು ನಮ್ಮ ದ್ವೀಪಕ್ಕೆ ನೀಡದೇ ದೂರದ ಕಾರ್ಗಲ್ ಗೆ ನೀಡಿತ್ತು. ಎತ್ತಣ ಕಾರ್ಗಲ್ ಎತ್ತಣ ತುಮರಿ. ನಡುವೆ 70 ಕಿ ಮೀ ಅಂತರ. ಒಂದು ಕಡೆ ಶಾಸಕ ರಾಗಿ ನನ್ನ ನೆಚ್ಚಿನ ನಾಯಕರಾದ ಕಾಗೋಡು ಇನ್ನೊಂದು ಕಡೆ ದ್ವೀಪದಲ್ಲಿ ಬಿಗಡಾಯಿಸಿದ ಆರೋಗ್ಯ ಸೇವೆ. ಆಗ ನಾನು ಕಾಲೇಜು ಉಪನ್ಯಾಸಕ ಸೇವೆಯಲ್ಲಿದ್ದೆ.
ಪಕ್ಷ ಮತ್ತು ನೆಲದ ನ್ಯಾಯ ಇವೆರಡರಲ್ಲಿ ಆದ್ಯತೆ ನಮ್ಮ ಜನ ಮತ್ತು ನೆಲಕ್ಕೆ ಎಂದು ತೀರ್ಮಾನಿಸಿ ಹೋರಾಟ ನಡೆಸಲೇಬೇಕು ಎಂಬ ತೀರ್ಮಾನಕ್ಕೆ ಬಂದೆವು. ಕರ ಪತ್ರ ಸಿದ್ಧವಾಯಿತು. ಪ್ರಚಾರವೂ ಆಯಿತು. ಕಾಂಗ್ರೆಸ್ ಬಿಜೆಪಿ ಎರಡು ಕಡೆ ಸ್ನೇಹಿತರು ಸೇರಿ ವಸ್ತುನಿಷ್ಠವಾಗಿ ಯೋಜನೆ ತಯಾರಿಸಿ ತುಮರಿ ಆಸ್ಪತ್ರೆ ಮುಂದೆ ಪೆಂಡಾಲ್ ಹಾಕಿ ದೊಡ್ಡ ಹೋರಾಟ. ಶಿವಮೊಗ್ಗ ಸಾಗರ ದಿಂದ ಮಾಧ್ಯಮ ತಂಡ ಬಂತು. ಸಾಗರ ಪತ್ರಕರ್ತ ಆ ರ ಶ್ರೀನಿವಾಸ್ ಸರ್ ಹೋರಾಟ ದಿಕ್ಸೂಚಿ ಭಾಷಣ ಮಾಡಿದರು. ಚಾರ್ವಾಕ ರಾಘು ಜತೆ ಆಗಿದ್ದರು. ದೊಡ್ಡ ಸುದ್ದಿ ಆಯ್ತು.
ಒಂದು ತಿಂಗಳ ಗಡುವು ಕೊಟ್ಟು ನಂತರ ನಾ ಡಿಸೋಜ ರವರಿಂದ 108 ವಾಹನಕ್ಕಾ ಗಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಪತ್ರ ಚಳುವಳಿ ಚಾಲನೆ ಆಯಿತು. ರಂಗಮಂದಿರದಿಂದ ತುಮರಿ ವೃತ್ತಕ್ಕೆ ಪತ್ರ ಹಿಡಿದು ವಿದ್ಯಾರ್ಥಿಗಳು ಮತ್ತು ಮಹಿಳೆಯರಿಂದ ಮೆರವಣಿಗೆ. 2 ತಿಂಗಳಲ್ಲಿ 5 ಸಾವಿರ ಪತ್ರ ಬರೆಯಲಾಯಿತು. ಈ ಹೋರಾಟದ ಮುಂಚೂಣಿಯಲ್ಲಿರುವವರಲ್ಲಿ ನಾನು ಒಬ್ಬನಾಗಿದ್ದೆ.
ಸರ್ಕಾರ ಪ್ರತಿಭಟನೆ ಬಿಸಿಗೆ ಕರಗಿತು. ಸದನದಲ್ಲಿ ಗಂಭೀರವಾಗಿ ಚರ್ಚೆ ಆಯ್ತು. ಎಂ ಬಿ ಬಿ ಎಸ್ ಮಾಡಿದವರು ಗ್ರಾಮೀಣ ಸೇವೆ ಕಡ್ಡಾಯ ಮತ್ತು ಗುತ್ತಿಗೆ ಅಧಾ ರದ ನೇಮಕಾತಿ ಚುರುಕಾಯಿತು. ತುಮರಿ ಮತ್ತು ಬ್ಯಾಕೋಡು ಆಸ್ಪತ್ರೆಗೆ ಹೊಸ ವೈದ್ಯರು ಬಂದರು. ಪತ್ರ ಚಳುವಳಿ ಯಶಸ್ವಿಯಾಗಿ ಸರ್ಕಾರ ಆ ಹೊತ್ತಿಗೆ ಮಂಜೂರಾದ ಹೊಸ 108 ವಾಹನಗಳಲ್ಲಿ ದ್ವೀಪಕ್ಕೆ ಮೊದಲ ಆದ್ಯತೆ ನೀಡಿತು. ಕಾಗೋಡು ಸಾಹೇಬರು ಮೊದಲು ಕೋಪಗೊಂಡರೂ ಕೊನೆಗೆ ವಸ್ತು ಸ್ಥಿತಿ ಅರ್ಥ ಮಾಡಿಕೊಂಡು ಜತೆ ಆದರು.
ತುಮರಿಗೆ 108 ಬಂದಿತು
ವೈದ್ಯರೂ ಬಂದರು.
ಈ ಮಾತೆಲ್ಲಾ ಈಗ್ಯಾಕೆ ಎಂದರೆ
ಈಚೆಗೆ ನಡೆದ ನೆಟ್ವರ್ಕ್ ಹೋರಾಟ ಮತ್ತು ಜಿ. ಟಿ ವಿತ್ truth 45 ಸಂಚಿಕೆಯ ನೆಲದ ಕುಂದುಕೊರತೆ ಬಗ್ಗೆ ಜನಪರ ನಿಲುವಿನ ಬಗ್ಗೆ ನಮ್ಮ ನೆಲದವರೇ ಕೆಲ ಜನರು ನಡೆದುಕೊಂಡ ರೀತಿ ಮತ್ತು ಎದುರಿಟ್ಟ ವಾದಗಳ ಕಾರಣದಿಂದ. ದ್ವೀಪದ ದುರ್ಗಮ ಹಳ್ಳಿಗಳ ಜನರಿಗೆ ದ್ವನಿಯಾಗುತ್ತಾ ಇರುವ ನೆಟ್ವರ್ಕ್ ಮಾದರಿ ಹೋರಾಟಗಳನ್ನ ಮಾತೃ ಹೃದಯದಿಂದ ಸ್ವೀಕರಿಸಬೇಕಾದ ಹೊತ್ತಿದು. ನೆಟ್ವರ್ಕ್ ಕೊಡಿ ಎನ್ನುವುದೋ ಕಾಲು ಸಂಕ ಕೊಡಿ ಎನ್ನುವುದು ಅಪರಾಧ ಅಲ್ಲ. ಅದು ನಾಗರಿಕವಾದ ಹಕ್ಕು. ಹಾಗೆ ದ್ವನಿ ಎತ್ತುವವರ ಕಾಲು ಎಳೆಯುವ ವ್ಯವಸ್ಥಿತ ಸಣ್ಣ ಗುಂಪು ಶರಾವತಿ ಎಡ ದಂಡೆಯ ಅವಳಿ ಹೋಬಳಿಯಲ್ಲಿ ಸಕ್ರಿಯವಾಗಿದೆ. ಅವರಿಗೆ ಗುರಿ ಉದ್ದೇಶ ಏನು ಎನ್ನುವುದರ ಸ್ಪಷ್ಟ ಇದ್ದಂತೆ ಇಲ್ಲ. ಆದರೆ ಒಂದಂತೂ ಸ್ಪಷ್ಟ ಇವರ ವಾದ ಕ್ರಮದಲ್ಲಿ ನೆಲದ ನ್ಯಾಯದ ಯಾವ ಒಳಿತಿನ ಅಂಶವೂ ಇದ್ದಂತೆ ಕಾಣುತ್ತಾ ಇಲ್ಲ. ವಿತಂಡವಾದದ ಜತೆ ವೈಯಕ್ತಿಕ ಮಟ್ಟಕ್ಕೆ ಇಳಿದು ಮಾತಾಡುವುದು. ಅಪಹಾಸ್ಯ ಮಾಡುವುದು, ತಗಾದೆ ತೆಗೆಯುವುದು, ವೈಯಕ್ತಿಕ ನಂಜು ಕಾರುವುದು ಇವರ ಲಕ್ಷಣವಾಗಿದೆ.
ಜಿ ಟಿ ವಿಥ್ truth 45 ರಲ್ಲಿ ಕಾಲು ಸಂಕ ಅಗತ್ಯ ಇದೆ ಎಂದು ನಾನು ಹೇಳಿದರೆ. ಈಗ್ಯಾಕೆ ಹೇಳುತ್ತಾ ಇದ್ದೀರಿ, ಆಗೇನು ಮಾಡಿದಿರಿ ಎನ್ನುವ ರೀತಿ ಇವರ ವಾದ. ಮುಳುಗಡೆಯಿಂದ ನೆಲಕ್ಕೆ ಆದ ಅನ್ಯಾಯ ಸರಿ ಪಡಿಸಲು ಇನ್ನೂ ನೂರು ಸರ್ಕಾರ ಬಂದರೂ ಮುಗಿಯದು ಎನ್ನುವ ವಾಸ್ತವ ಎದುರಿರುವುದು ಇವರ ವಿವೇಕಕ್ಕೆ ಬರುವುದೇ ಇಲ್ಲ.
ಶರಾವತಿ ಕೊಳ್ಳದ ಜನರಿಗೆ ಈಗಲೇ ಹೇಳಿರುವೆ.. ನಮ್ಮ ಮುಂದಿನ ದಿನಗಳು ಇನ್ನಷ್ಟು ಕಷ್ಟ ಆಗುತ್ತೆ. ವನ್ಯಜೀವಿ ಮತ್ತು ಅಭಯಾರಣ್ಯ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶ ಡಿ ನೋಟಿಫೈ ಆಗದೇ ಇದ್ದರೆ ನಾವು ಭವಿಷ್ಯದಲ್ಲಿ ಬಾಣಲೆಯಿಂದ ಬೆಂಕಿಗೆ ಬೀಳುತ್ತೇವೆ. ಇದರ ಜತೆ ನೆಟ್ವರ್ಕ್ ರೀತಿಯ ಮೂಲಭೂತ ಸಮಸ್ಯೆ ಇದ್ದೇ ಇವೆ. ಹೋರಾಟದಿಂದ ನಮ್ಮ ಹಕ್ಕುಗಳಿಗೆ ದ್ವನಿ ಎತ್ತಲು ಇಂದು ಹಿಂಜರಿದರೆ. ಮಾತಾಡಬೇಕಾದ ಹೊತ್ತಿನಲ್ಲಿ ಮಾತಾಡದೇ ಮೌನವಾದರೆ ನಾಳೆ ಅಳಲು ಕಣ್ಣೀರು ಸಹಾ ಇರುವುದಿಲ್ಲ.
ಈಗ ಕಾಲೆಳೆದವರು ಆಗ ಕಾಣೆ ಆಗುತ್ತಾರೆ
ಏನೂ ಮಾಡದೆ ಕಾಲೆಳೆಯುವುದು ದೊಡ್ಡತನವೆ..??
ಜಿ ಟಿ ವಿಥ್ truth 45 ಕ್ಕೆ ಪ್ರಶ್ನಿಸಿದವರು ಕಾಂಗ್ರೆಸ್ ಅಧಿಕಾರ ಇದ್ದಾಗ ನೀವು ಏನು ಮಾಡಿದ್ದೀರಿ ಎಂದು ನನ್ನ ತಿವಿದಿದ್ದರು. ಅವರಿಗೆ ಈ ಬರಹ ಮತ್ತು ಚಿತ್ರ ಅರ್ಪಣೆ. ಈಗ ನನ್ನ ಸವಾಲು ತಾವು ಈವರೆಗೆ ಮಾಡಿರುವ (ಅದರಲ್ಲೂ ತಮ್ಮ ಪಕ್ಷ ಅಂತ ಇದ್ದರೆ ಅದು ಅಧಿಕಾರ ಇದ್ದಾಗ ) ಯಾವ ಹೋರಾಟ ಮಾಡಿದ್ದೀರಿ..? ದಯಮಾಡಿ ಉತ್ತರಿಸಿದರೆ ಜನರೂ ತಿಳಿದುಕೊಂಡು ದೈರ್ಯ ತಂದುಕೊಂಡಾರು. ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುವುದು.
ನಾನು ಕಾಯುತ್ತೇನೆ.
ಜಿ ಟಿ ಸತ್ಯನಾರಾಯಣ ಕರೂರು
13-10-2021
ರಾತ್ರಿ 12:10


