ಲಂಚ ಕೇಳಿದ ಅಧಿಕಾರಿಗೆ ಬುದ್ಧಿ ಕಲಿಸಲು ಭಿಕ್ಷೆ ಬೇಡಿದ ವ್ಯಕ್ತಿ
ಕೆಲಸ ಮಾಡಿಕೊಡಲು ಲಂಚ ಬಯಸಿದ ಅಧಿಕಾರಿ ಮನಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಭಿಕ್ಷೆ ಬೇಡಿದ ಘಟನೆ ಬೆಳಕಿಗೆ ಬಂದಿದೆ.
ಕಾರವಾರ: ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಯ ಮನಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ, ಹಣ ನೀಡಲು ಮುಂದಾದ ಘಟನೆ ಯಲ್ಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಯಲ್ಲಾಪುರದ ತಟಗಾರ ಗ್ರಾಮದ ಸರ್ವೇ ನಂ. 12ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಹೀಗಾಗಿ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾಗಿದ್ದೇನೆ ಎಂದು ಗಜಾನನ ಭಟ್ಟ ಅವರ ಪುತ್ರ ಅಚ್ಯುತಕುಮಾರ ತಿಳಿಸಿದ್ದಾರೆ.
ಭಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆಯೇ ನ್ಯಾಯಾಲಯದ ಮೊರೆ ಹೋಗಿದ್ದು, ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎಲ್ಲಾ ಕಚೇರಿಗಳಲ್ಲಿ ಆ ಆದೇಶ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.
ಕೋರ್ಟ್ ಆದೇಶದ ಅನ್ವಯ ಯಲ್ಲಾಪುರದ ತಹಶೀಲ್ದಾರ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವಂತೆ ತಹಶೀಲ್ದಾರ್ ಶ್ರೀಕೃಷ್ಣ ಕಾಮ ಕರ್ ರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ತಹಶೀಲ್ದಾರ್ ಪೂರಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ಲಂಚ ಕೇಳಿದವರಿಗೆ ಹಣ ನೀಡಲು ಜನರಿಂದ ಸ್ವೀಕೃತವಾದ 136 ರೂ. ಅನ್ನು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೃಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ಅಚ್ಚುತಕುಮಾರ್ ತಿಳಿಸಿದ್ದಾರೆ. (etbk)
ಪೆಗಾಸಸ್ ತಂತ್ರಾಂಶ ಗೂಢಚಾರಿಕೆ: ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆ, ತನಿಖೆಗೆ ತ್ರಿಸದಸ್ಯ ಸಮಿತಿ ರಚಿಸಿದ ‘ಸುಪ್ರೀಂ’
ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ.
ನವದೆಹಲಿ: ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ.
ಪೆಗಾಸಸ್ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ನಿರಾಕರಣೆ ಇಲ್ಲ. ಹೀಗಾಗಿ ಅರ್ಜಿದಾರರ ಪ್ರಾಥಮಿಕ ಹಂತದ ಸಲ್ಲಿಕೆಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಸಮಿತಿ ರಚನೆ ಮಾಡಿದೆ. ಈ ಮೂವರು ಸದಸ್ಯರ ಪೆಗಾಸಸ್ ತನಿಖಾ ಸಮಿತಿಯ ಮುಖ್ಯಸ್ಥರಾಗಿ ಮಾಜಿ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ಸಮಿತಿಯ ಇತರೆ ಸದಸ್ಯರಾಗಿ ಅಲೋಕ್ ಜೋಶಿ ಮತ್ತು ಸಂದೀಪ್ ಒಬೆರಾಯ್ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯ ಕಾರ್ಯವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ.
ರಾಜಕೀಯ ಚರ್ಚೆಗೆ ಹೋಗದೇ ಮೌಲ್ಯ ಎತ್ತಿ ಹಿಡಿಯಲು ಶ್ರಮಪಡಬೇಕು. ಪ್ರತಿಯೊಬ್ಬ ಭಾರತೀಯನಿಗೂ ಖಾಸಗಿತನದ ರಕ್ಷಣೆ ನೀಡಬೇಕು. ನಾವು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಕೆಲ ಅರ್ಜಿಗಳು ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಸ್ತಾಪಿಸಿವೆ. ಈ ತೀರ್ಪಿನಲ್ಲಿ ನಾವು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚಿಸಿದ್ದೇವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತೆ. ಶಾಸನದ ಮಾನ್ಯತೆ ಇಲ್ಲದೇ ಖಾಸಗಿತನದ ಹಕ್ಕಿನಲ್ಲಿ ಮೂಗುತೂರಿಸುವಿಕೆಗೆ ಅವಕಾಶವಿಲ್ಲ. ಖಾಸಗಿತನದ ಹಕ್ಕು ಅನ್ನು ಅತಿಕ್ರಮಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಕಡೆಗಣಿಸಲಾಗಲ್ಲ. ಖಾಸಗಿತನದ ಹಕ್ಕಿನಲ್ಲಿ ಮೂಗು ತೂರಿಸಲು ಮಸೂದೆ ಪಾಸ್ ಆಗಬೇಕು. ಸಾಂವಿಧಾನಿಕ ಅಗತ್ಯದ ಪರೀಕ್ಷೆ ಪಾಸ್ ಆಗಬೇಕು ಎಂದು ಸುಪ್ರೀಂಕೋರ್ಟ್ ಸಿಜೆ ನೇತೃತ್ವದ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ನಮ್ಮ ಉದ್ದೇಶ ಎಂದು ಸಾರಿರುವ ಸುಪ್ರೀಂ ಕೋರ್ಟ್ ಈ ಪ್ರಕರಣ ಆಧುನಿಕ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದೆ. ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ‘ಸುಪ್ರೀಂ’ ಪರಿಶೀಲಿಸಿದೆ. ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯಲು ನಮ್ಮ ಶ್ರಮ ಎಂದು ಸಿಜೆಐ ರಮಣ ಆದೇಶಿಸಿದ್ದಾರೆ. (kpc)