ಕ.ಸಾ.ಪ. ಒಂದು ಸಕಾಲಿಕ ಅಭಿಪ್ರಾಯ…

ಸಾಹಿತ್ಯ ಪರಿಷತ್ತಿಗೆ ಬೇಕು ಧೀಮಂತ ಸೇನಾನಿ -ಲಕ್ಮಣ ಕೊಡಸೆ

ಕನ್ನಡ ಸಾಹಿತ್ಯ ಪರಿಷತ್ತಿನ ಭವ್ಯ ಇತಿಹಾಸಕ್ಕೆ ತಕ್ಕುದಲ್ಲದ ಕೆಲಸಗಳನ್ನು ಈಚಿನ ದಶಕಗಳಲ್ಲಿ ಮಾಡುತ್ತಿರುವ ಅದರ ಆಡಳಿತ ಮಂಡಲಿಗಳು ಅದರ ಮೂಲ ಉದ್ದೇಶಗಳನ್ನು ನೇಪಥ್ಯಕ್ಕೆ ಸರಿಸಿರುವ ವಿಷಾದಕರ ಬೆಳವಣಿಗೆಯನ್ನು ಕನ್ನಡಿಗರು ಅಸಹಾಯಕತೆಯಿಂದ ನೋಡಬೇಕಾಗಿದೆ. ಅದನ್ನು ಸ್ವಂತ ಹಿತಾಸಕ್ತಿಯ ವೇದಿಕೆಯಾಗಿ ಬಳಸಿಕೊಳ್ಳುವ ಕೆಲಸಗಳು ಈಚಿನ ದಶಕಳಿಂದ ಅವ್ಯಾಹತವಾಗಿ ಮುಂದುವರಿದಿವೆ. ಚುನಾಯಿತ ಆಡಳಿತ ಮಂಡಲಿಯ ಅವಧಿ ಮುಗಿದಾಗ ಉಸ್ತುವಾರಿಗಾಗಿ ಬಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಅಧಿಕಾರ ಲಾಲಸೆಯ ಸೋಂಕು ತಗುಲಿ ಅಲ್ಲಿ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸುವ ಚಾಪಲ್ಯ ಮೂಡುವಂತಾಗಿದೆ. ಸರ್ಕಾರಿ ಲೆಕ್ಕಾಚಾರದಲ್ಲಿ ಕಾಮಗಾರಿ ನಡೆಸುವುದೆಂದರೆ ಜೇನು ಕೀಳಲು ಮುಂದಾಗುವುದು ಎಂದೇ ಅರ್ಥ. ಜೇನು ಕೀಳುವವನು ಕೈ ನೆಕ್ಕಬಾರದು ಎಂದರೆ ಹೇಗೆ ಎಂಬುದು ಕಾಮಗಾರಿ ಆರಂಭಿಸುವವರ ಸಮರ್ಥನೆ. ಪರಿಷತ್ತನ್ನು ಅದರ ಮೂಲ ಉದ್ದೇಶಕ್ಕೆ ಭಂಗ ಬಾರದಂತೆ ಉಳಿಸಿಕೊಳ್ಳಬೇಕು ಎಂಬ ಅರಿವು ಅದರ ಆಡಳಿತಕ್ಕೆ ಮುಂದಾಗುವವರಲ್ಲಿ ಇಲ್ಲವೇ ಸರ್ಕಾರದಲ್ಲಿ ಇರುವವರಲ್ಲಿ ಇಲ್ಲ ಎಂಬುದು ಈಗಿನ ವಿಪರ್ಯಾಸ, ಇದು ವಿಷಾದಕರ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂಥ ರಾಜರ್ಷಿ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರಂಥ ದೂರದೃಷ್ಟಿಯ ಮುತ್ಸದ್ಧಿಯ ಕನಸಿನಂತೆ 1915ರ ಮೇ 5 ರಂದು ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಆರಂಭದ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಮೊದಲ ಐವತ್ತು ವರ್ಷಗಳ ಕಾಲ ಪರಿಷತ್ತಿನ ಚಟುವಟಿಕೆಗಳು ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಬಲಪಡಿಸುವುದರತ್ತ ಕೇಂದ್ರೀಕರಣವಾಗಿದ್ದುದು ನಿಜ. ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಸೃಜನಶೀಲ ಪ್ರತಿಭೆ ಮತ್ತು ವಿದ್ವತ್ತಿನಿಂದ ಶ್ರೀಮಂತಗೊಳಿಸಿದ ಪ್ರಾತಃಸ್ಮರಣೀಯ ಸಾಹಿತಿಗಳು ಪರಿಷತ್ತನ್ನು ನಾಡಿನ ಸಾಂಸ್ಕೃತಿಕ ವೇದಿಕೆಯಾಗಿ ರೂಪಿಸಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪ್ರಶ್ನೆ ಬಂದಾಗ ಆಗಿದ್ದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಯ್ಕೆಯಲ್ಲಿ ಏರುಪೇರಾಗಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ವಿವೇಕವನ್ನೂ ತೋರುತ್ತಿದ್ದರು. ಜಿ.ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಬಂದ ನಂತರ ಪರಿಷತ್ತಿನ ಹಣಕಾಸು ವ್ಯವಸ್ಥೆಯನ್ನು ದೃಢಪಡಿಸಲು ಶ್ರಮಿಸಿದರು. ಜೊತೆಗೆ ಪರಿಷತ್ತನ್ನು ಜನಸಾಮಾನ್ಯರಿಗೆ ಪರಿಚಯಿಸಲು ಪ್ರಯತ್ನ ನಡೆಸಿದರು. ಪರಿಷತ್ತು ನಾಡಿನ ಜನರ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಾಂಸ್ಕೃತಿಕ ವೇದಿಕೆ ಎಂಬುದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದರು. ಅದಕ್ಕಾಗಿಯೇ ಸರ್ಕಾರ ಪರಿಷತ್ತಿನ ಚಟುವಟಿಕೆಗಳಿಗೆ ಉದಾರವಾಗಿ ಅನುದಾನ ನೀಡುವಂತೆ ಮನವೊಲಿಸಿದ್ದರು. ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ಸಾವಿರ, ಎರಡು ಸಾವಿರದಷ್ಟಿತ್ತು. ಸದಸ್ಯ ಬಲವನ್ನು ಹತ್ತಿಪ್ಪತ್ತು ಸಾವಿರಕ್ಕೆ ಹೆಚ್ಚಿಸುವ ಮೂಲಕವೇ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಬಂದ ಹಂ.ಪ.ನಾಗರಾಜಯ್ಯ ಅವರು ಪರಿಷತ್ತು ಎಲ್ಲ ವರ್ಗದ ಸಾಂಸ್ಕೃತಿಕ ವ್ಯಕ್ತಿಗಳಿಗೂ ಸೇರಿದ್ದು ಎಂಬುದನ್ನು ಕಾರ್ಯಕ್ರಮಗಳ ಮೂಲಕ ಪರಿಚಯಿಸಿದರು. ಪ್ರಕಟಣೆಗಳನ್ನು ವ್ಯವಸ್ಥಿತ ರೂಪಕ್ಕೆ ತಂದರು. ನಾಡಿನಾದ್ಯಂತ ಪರಿಷತ್ತಿನ ಘಟಕಗಳನ್ನು ತೆರೆದು ಕನ್ನಡ ಸಾಹಿತ್ಯ ಪರಿಷತ್ತು ಜನತೆಯ ಪ್ರಾತಿನಿಧಿಕ ಸಂಸ್ಥೆ ಎಂಬುದನ್ನು ಶ್ರೀಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿದರು. ಹಂಪನಾ ಅವರು ಕೈಗೊಂಡಿದ್ದ ಕೆಲಸಗಳು ಅದುವರೆಗೆ ಪರಿಷತ್ತನ್ನು ತಮ್ಮದೇ ಜಹಗೀರಿನಂತೆ ಪರಿಭಾವಿಸಿದ್ದ ವ್ಯಕ್ತಿಗಳಿಗೆ ಅಪಥ್ಯವಾಯಿತು. ಅದಕ್ಕೆ ಪೂರಕವಾಗಿ ಸದಸ್ಯತ್ವವನ್ನು ಹೆಚ್ಚಿಸಿಕೊಳ್ಳುವ ಭರಾಟೆಯಲ್ಲಿ ಎಡವಿದ ಕಾರಣ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಯಿತು. ಅದೇ ಮೊದಲ ಸಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತು. ಹಂಪನಾ ಅವರ ಅವಧಿಯಲ್ಲಿ ನಡೆದ ವ್ಯವಹಾರಗಳ ತನಿಖೆಗೆ ನ್ಯಾಯಮೂರ್ತಿ ಪಿ.ಕೆ.ಶ್ಯಾಮಸುಂದರ್ ನೇತೃತ್ವದಲ್ಲಿ ಆಯೋಗವನ್ನು ನೇಮಿಸಿತು. ಅದರ ಪರಿಣಾಮವಾಗಿ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಕೆಲವು ಸುಧಾರಣೆಗಳು ಆದವು. ಸಿಬ್ಬಂದಿಯ ಕೆಲಸಗಳನ್ನು ನಿರ್ಧರಿಸಲಾಯಿತು. ಎಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ (1996) ಪರಿಷತ್ತಿನ ಸಿಬ್ಬಂದಿಯ ವೇತನವನ್ನು ಅನುದಾನ ಸಂಹಿತೆಗೆ ಒಳಪಡಿಸಿದರು. ಅದರಿಂದ ಪರಿಷತ್ತಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇವಾ ಭದ್ರತೆಯೊಂದಿಗೆ ನಿರಾಳವಾಗಿ ಕೆಲಸ ಮಾಡುವಂಥ ವ್ಯವಸ್ಥೆ ಜಾರಿಯಾಯಿತು. ಆದರೆ ಆಗಿದ್ದ ಸಿಬ್ಬಂದಿ ವಯೋನಿವೃತ್ತಿಗೆ ಒಳಗಾದಂತೆ ಹೊಸ ಸಿಬ್ಬಂದಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಅಂದಂದಿನ ಅಧ್ಯಕ್ಷರು ನೇಮಿಸಿಕೊಳ್ಳದೆ, ತಮಗೆ ಬೇಕಾದವರನ್ನು ನೇಮಿಸಿಕೊಂಡ ಕಾರಣ ಅವರು ಯಾರಿಗೂ ಸರ್ಕಾರದ ಅನುದಾನ ಸಂಹಿತೆಯ ಅನ್ವಯ ನಿಗದಿತ ಶ್ರೇಣಿಯ ವೇತನವಿಲ್ಲ. ಉದ್ಯೋಗದ ಭದ್ರತೆಯೂ ಇಲ್ಲ. ಈಗಿರುವ ಸಿಬ್ಬಂದಿಯಲ್ಲಿ ಹೆಚ್ಚಿನವರು ಅಧ್ಯಕ್ಷರ ಮರ್ಜಿಗೆ ಒಳಪಟ್ಟ ಗೌರವ ಸಂಭಾವನೆಗೆ ತೃಪ್ತಿಪಡಬೇಕಾಗಿದೆ. ಅವರಿಗೆ ಉದ್ಯೋಗ ಖಾತರಿಯೂ ಇಲ್ಲ, ನಿವೃತ್ತಿಯ ಸೌಲಭ್ಯಗಳೂ ಇಲ್ಲ. ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮಾರ್ಗಸೂಚಿ, ಮೀಸಲಾತಿ ನಿಯಮವನ್ನು ಪಾಲಿಸದೆ ಕಡೆಗಣಿಸಿದ ಅಂದಂದಿನ ಅಧ್ಯಕ್ಷರ ಹೊಣೆಗೇಡಿತನ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಸಿಬ್ಬಂದಿಯನ್ನು ಅತಂತ್ರದ ಸ್ಥಿತಿಯಲ್ಲಿ ಇರಿಸಿದೆ. ಈಚಿನ ದಶಕಗಳಲ್ಲಿ ಸಾಹಿತ್ಯ ಪರಿಷತ್ತಿನ ಆಡಳಿತ ಮತ್ತು ನಿರ್ವಹಣೆಯಲ್ಲಿ ಅದನ್ನು ಪ್ರಾರಂಭ ಮಾಡಿದಾಗ ಇದ್ದ ಯಾವ ಸಾಂಸ್ಕೃತಿಕ ಜವಾಬ್ದಾರಿಯೂ ಉಳಿದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಪರಿಷತ್ತಿನ ಆಡಳಿತ ಮಂಡಲಿಯ ಆಯ್ಕೆ ಚುನಾವಣೆಯನ್ನು ಆಧರಿಸಿದ್ದರೂ ಅದು ಅಧ್ಯಕ್ಷರು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಗೆ ಸೀಮಿತವಾಗಿದೆ. ಅಧ್ಯಕ್ಷನಾಗಿ ಆಯ್ಕೆಯಾಗಿ ಬಂದ ವ್ಯಕ್ತಿ ಜಿಲ್ಲಾ ಸಮಿತಿಗಳಿಗೆ ಆಯ್ಕೆಯಾದ ಅಧ್ಯಕ್ಷರ ಜೊತೆಗೆ ಇತರ ನಾಮನಿರ್ದೇಶನಗಳನ್ನು ತನ್ನ ಮರ್ಜಿಗೆ ತಕ್ಕ ಹಾಗೆ ನಾಮಕರಣ ಮಾಡಿಕೊಳ್ಳುತ್ತಾರೆ. ಸರ್ಕಾರ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಉದಾರವಾಗಿ ಆರ್ಥಿಕ ನೆರವನ್ನು ನೀಡುತ್ತಿರುವುದರಿಂದ ಸಾಹಿತ್ಯಿಕ ಅಂಶಗಳಿಗಿಂತಲೂ ಹಣವನ್ನು ವಿನಿಯೋಗಿಸಿಕೊಳ್ಳುವ ಕ್ರಿಯಾಯೋಜನೆ ರೂಪಿಸಿಕೊಳ್ಳುವುದು ಪರಿಷತ್ತಿನಲ್ಲಿ ಆದ್ಯತೆ ಪಡೆಯುತ್ತದೆ. ಪರಿಷತ್ತಿನ ಅಧ್ಯಕ್ಷರಾಗಿ ಬಂದವರೆಲ್ಲರೂ ತಮ್ಮ ತಮ್ಮ ಕಾರ್ಯಸೂಚಿಯಂತೆ ಬೇಕಾದವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡುವುದಕ್ಕೆ ಮತ್ತು ವಿವಿಧ ದತ್ತಿಗಳ ಪ್ರಶಸ್ತಿ ಪುರಸ್ಕಾರಗಳನ್ನು ತಮಗೆ ಬೇಕಾದವರಿಗೆ ನೀಡುವ ಸ್ವಂತ ಲಾಭದ ಕಡೆಯೇ ದೃಷ್ಟಿಯನ್ನು ಇರಿಸಿದ ಕಾರಣ ಪರಿಷತ್ತಿನ ಮೂಲ ಆಶಯ ನೇಪಥ್ಯಕ್ಕೆ ಸರಿದು ದಶಕಗಳೇ ಆಗಿವೆ. ಪ್ರಾರಂಭದಲ್ಲಿ ಪರಿಷತ್ತು ಉಪಯುಕ್ತ ಪುಸ್ತಕಗಳ ಪ್ರಕಟಿಸುತ್ತಿತ್ತು. ಸರ್ಕಾರ ಪುಸ್ತಕೋದ್ಯಮದ ನಿರ್ವಹಣೆಗಾಗಿಯೇ ಕನ್ನಡ ಪುಸ್ತಕ ಪ್ರಾಧಿಕಾರವನ್ನು ರಚಿಸಿದೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸಿ ಉತ್ತೇಜಿಸಲು ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ. ನಾಟಕ, ಯಕ್ಷಗಾನ, ಬಯಲಾಟ, ಜಾನಪದ ಮೊದಲಾದ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಹತ್ತಾರು ಅಕಾಡೆಮಿಗಳನ್ನು ಸರ್ಕಾರ ಅಸ್ತಿತ್ವಕ್ಕೆ ತಂದಿದೆ. ಇವೆಲ್ಲವೂ ಸಾಹಿತ್ಯ ಪರಿಷತ್ತಿನ ಆದ್ಯತೆಯ ಕ್ಷೇತ್ರಗಳೇ ಆಗಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಾಡಿನ ಎಲ್ಲ ಭಾಗದ, ಎಲ್ಲ ವರ್ಗದ ಕವಿಗಳು, ಕಲಾವಿದರು ಮತ್ತು ಸಾಂಸ್ಕೃತಿಕ ಕ್ಷೇತ್ರದ ತಜ್ಞರನ್ನು ತಲುಪುತ್ತಿದೆ. ಅದಕ್ಕಾಗಿ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಹಣವನ್ನು ನೀಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕವೇ ಸರ್ಕಾರದ ಅನುದಾನ ಪಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯದ ಹೊಣೆಗಾರಿಕೆಯನ್ನು ಬದಲಾದ ಸಂದರ್ಭಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡಿಲ್ಲ. ಕನ್ನಡ ಭಾಷೆಗೆ, ಕನ್ನಡದ ಕಲಿಕೆಗೆ, ಕನ್ನಡದ ಉಳಿವಿಗೆ ಕುತ್ತು ಬರುತ್ತಿರುವ ಇಂದಿನ ಸಂಕಷ್ಟದ ಸಮಯದಲ್ಲಿಯೂ ತಾನು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲಾಗದ ಬೌದ್ಧಿಕ ದಿವಾಳಿತನಕ್ಕೆ ಬಂದಿದೆ. ಈಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳೆಂದರೆ ವರ್ಷಕ್ಕೆ ಒಮ್ಮೆ ಅಖಿಲ ಭಾರತ ವ್ಯಾಪ್ತಿಯ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು, ಜಿಲ್ಲಾ ಘಟಕಗಳು ಮತ್ತು ತಾಲ್ಲೂಕು ಘಟಕಗಳು ತಮ್ಮ ವ್ಯಾಪ್ತಿಯಲ್ಲಿ ವರ್ಷಕ್ಕೆ ಒಮ್ಮೆ ಸ್ಥಳೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಕ್ಕೆ ಸರ್ಕಾರದಿಂದ ಬರುವ ಅನುದಾನವನ್ನು ವಿತರಿಸುವುದು, ಹಿಂದಿನ ಗಣ್ಯರು ಕನ್ನಡ ಭಾಷೆ, ಸಾಹಿತ್ಯದ ಮೇಲಿನ ಪ್ರೀತಿಗೆ ಸ್ಥಾಪಿಸಿದ ನೂರಾರು ದತ್ತಿ ಪ್ರಶಸ್ತಿಗಳನ್ನು ವಿತರಿಸುವುದು. ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸರ್ಕಾರ ಹತ್ತು ಕೋಟಿಗೂ ಮೀರಿದ ಅನುದಾನವನ್ನು ನೀಡುತ್ತದೆ. ಮುಖ್ಯಮಂತ್ರಿಯೇ ಸಮ್ಮೇಳನವನ್ನು ಉದ್ಘಾಟಿಸುವ ಪರಂಪರೆಯನ್ನು ಪರಿಷತ್ತು ಒಪ್ಪಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಿಕೊಂಡು ಯಾವ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವುದಕ್ಕೆ ನಿಗದಿಯಾಗಿರುತ್ತದೆಯೋ ಆ ಜಿಲ್ಲಾಡಳಿತದ ಸಂಪೂರ್ಣ ನೆರವಿನೊಂದಿಗೆ ಸಮ್ಮೇಳನ ನಡೆಸುವ ಏಕಮಾತ್ರ ಕೆಲಸವನ್ನು ಪರಿಷತ್ತು ಈಚಿನ ವರ್ಷಗಳಲ್ಲಿ ಕೈಗೊಳ್ಳುತ್ತಿದೆ. ವರ್ಷಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿರುವ ಕಾರಣ ಪರಿಷತ್ತಿನ ಅಧ್ಯಕ್ಷರಾಗುವುದಕ್ಕೆ ತೀವ್ರ ಪೈಪೋಟಿ ಇರುತ್ತದೆ. ನಾಡು ನುಡಿಯ ಏಳಿಗೆಗೆ ಸಂಬಂಧಿಸಿ ಹಿಂದಿನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಲೇ ಸ್ವಂತ ಹಿತವನ್ನು ಸಾಧಿಸಿಕೊಳ್ಳುವ ಸಮಯಸಾಧಕ ಸಾಂಸ್ಕೃತಿಕ ಜೀವಿಗಳಿಗೆ ಹುಲುಸಾದ ಹುಲ್ಲುಗಾವಲಿನಂತೆ ಕನ್ನಡ ಸಾಹಿತ್ಯ ಪರಿಷತ್ತು ಪರಿವರ್ತನೆಯಾಗಿದೆ. ಪರಿಷತ್ತಿನ ಅಧ್ಯಕ್ಷರು ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಸಮ್ಮೇಳನಗಳನ್ನು ನಡೆಸುವ ಈವೆಂಟ್ ಮೇನೇಜರ್ ಗಳಂತೆ ಕಾರ್ಯನಿರ್ವಹಿಸುವ ಹೊಣೆಗಾರಿಕೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈಗಂತೂ ಪರಿಷತ್ತು ಯಾವುದೇ ಬೌದ್ಧಿಕ ಚಟುವಟಿಕೆಗಳಿಗೆ ಆಸರೆಯಾಗುವ ಸ್ಥಿತಿಯಲ್ಲಿಲ್ಲ. ಅಲ್ಲಿನ ಸರಸ್ವತಿ ಭಂಡಾರವೆಂಬ ಗ್ರಂಥಾಲಯ ಸಂಶೋಧಕರ ಅಗತ್ಯವನ್ನು ಪೂರೈಸುವ ಸ್ಥಿತಿಯಲ್ಲಿಲ್ಲ. ಪ್ರಾಚೀನ ಸಾಹಿತ್ಯ ಅಧ್ಯಯನಕ್ಕೆ ಆಕರ ಗ್ರಂಥಗಳಿಲ್ಲ. ಮುದ್ರಣಾಲಯಕ್ಕೆ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು ತಮ್ಮ ನಿವೃತ್ತಿಯ ಗಳಿಕೆಯನ್ನೇ ಕೊಡುಗೆಯಾಗಿ ನೀಡಿದ್ದರು. ಅದು ಈಗ ಪರಿಷತ್ತಿನ ನಿರ್ವಹಣೆಯಲ್ಲಿ ನಿಷ್ಕ್ರಿಯವಾಗಿದೆ. ಅಧ್ಯಕ್ಷರ ಮರ್ಜಿಯಂತೆ ನೇಮಕಗೊಂಡ ಗ್ರಂಥ ಪ್ರಕಟಣ ಸಮಿತಿ ಆಯ್ಕೆ ಮಾಡಿದ ಕೃತಿಗಳ ಪ್ರಕಟಣೆ, ಹಿಂದಿನ ಸಾಹಿತ್ಯ ಕೃತಿಗಳು ಮತ್ತು ನಿಘಂಟುಗಳ ಮರುಮುದ್ರಣ, ಕೆಲವು ದತ್ತಿ ಉಪನ್ಯಾಸಗಳನ್ನು (ಅವುಗಳಿಗೆ ನಿಗದಿಯಾದ ಗೌರವ ಧನದ ಹಂಚಿಕೆಗೆ ಅನ್ವಯಿಸಿ) ನಡೆಸುವ ಕೆಲಸವನ್ನು ಕೈಗೊಳ್ಳುತ್ತಿದೆ. ಪರಿಷತ್ತಿನ ಮುಖ್ಯವಾದ ಕೆಲಸ ಸಮ್ಮೇಳನ ನಡೆಸುವುದಕ್ಕೆ ಮತ್ತು ಪ್ರಶಸ್ತಿಗಳನ್ನು ನೀಡುವುದಕ್ಕೆ ಸೀಮಿತಗೊಂಡಿದೆ. ಸಾಹಿತ್ಯಿಕವಾಗಿ ಎಂದೋ ಹಾದಿ ತಪ್ಪಿರುವ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಈಗಂತೂ ಉಳಿದುಕೊಂಡಿಲ್ಲ. ಪರಿಷತ್ತು ಅಪ್ರಸ್ತುತವಾಗುವ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಅದರ ಚುಕ್ಕಾಣಿ ಹಿಡಿದವರ ಅಧಿಕಾರಸ್ಥಾನದ ವ್ಯಾಮೋಹ ಮತ್ತು ಕನ್ನಡದ ನೈಜ ಸಮಸ್ಯೆಗಳ ಬಗ್ಗೆ ಅರಿವಿನ ಕೊರತೆ ಇರುವುದು ಮುಖ್ಯ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಿಂದೆ ಇದ್ದವರಲ್ಲಿ ಹೆಚ್ಚಿನವರು ವಿದ್ವಾಂಸರಿದ್ದರು. ನುಡಿಸೇವೆಯಲ್ಲಿ ಗಣನೀಯ ಸಾಧನೆ ಮಾಡಿದವರಿದ್ದರು. ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಸಾಮಾನ್ಯ ಜನತೆಯನ್ನು ಹೇಗೆ ತಲುಪಬಹುದು ಎಂಬುದರ ಸ್ಪಷ್ಟ ಕಲ್ಪನೆ ಹೊಂದಿದ್ದರು. ಪರಿಷತ್ತಿನ ಆಡಳಿತ ಚುಕ್ಕಾಣಿ ಹಿಡಿಯುವುದು ನಾಡಸೇವೆಗೆ ಸಿಕ್ಕ ಅಪರೂಪದ ಅವಕಾಶ ಎಂದು ಭಾವಿಸಿ ಅದಕ್ಕೆ ತ್ರಿಕರಣ ಶುದ್ಧಿಯಿಂದ ಅಹರ್ನಿಶಿ ದುಡಿಯುವ ಸಾಮಾಜಿಕ ಕಾರ್ಯಕರ್ತರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರೂ, ಮೌಲ್ಯಪ್ರತಿಪಾದನೆಗಾಗಿ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ಸಜ್ಜನರೂ ಇದ್ದರು. ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ತಮ್ಮದೇ ಮತ ಬ್ಯಾಂಕ್ ರೂಪಿಸಿಕೊಂಡ ವಿದ್ಯಮಾನ ಪ್ರಾರಂಭವಾದ ಕಳೆದ ಶತಮಾನದ ಎಂಬತ್ತರ ದಶಕದ ನಂತರ ಪರಿಷತ್ತಿನ ಅಧ್ಯಕ್ಷರ ಚುನಾವಣೆ ಯಾವುದೇ ರಾಜಕೀಯ ಪಕ್ಷಗಳ ಚುನಾವಣೆಯ ಸ್ವರೂಪದಂತೆ ಬದಲಾವಣೆಯಾಯಿತು. ಸದಸ್ಯತ್ವವೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಸಾಮಾನ್ಯ ಚುನಾವಣೆಯಲ್ಲಿ ಪ್ರಭಾವ ಬೀರುವ ಜಾತಿ, ಪ್ರಾದೇಶಿಕತೆಯಂಥ ಅಂಶಗಳು ಮುನ್ನೆಲೆಗೆ ಬಂದು ನಾಡು ನುಡಿಯ ಸಾಂಸ್ಕೃತಿಕ ತೇರನ್ನು ಮುನ್ನಡೆಸುವ ವಿದ್ವತ್ ಸಾಮರ್ಥ್ಯ ನೇಪಥ್ಯಕ್ಕೆ ಸರಿಯಿತು. ಸಾಹಿತಿ, ವಿದ್ವಾಂಸರೇ ಏಕೆ? ಕನ್ನಡದ ಪರಿಚಾರಕರಾಗಿ ಸೇವೆ ಸಲ್ಲಿಸಲು ಪರಿಷತ್ತಿನ ಅಧ್ಯಕ್ಷತೆಗೆ ಸ್ಪರ್ಧಿಸಬಹುದು ಎಂಬ ಸಾಧ್ಯತೆಯೂ ಕ್ರಮೇಣ ತೆರೆದು ಹೋಟಲು ಉದ್ಯಮಿಯೊಬ್ಬರು ಪರಿಷತ್ತಿನ ಆಡಳಿತ ಚುಕ್ಕಾಣಿ ಹಿಡಿಯುವಂತಾಯಿತು.ಅಧಿಕಾರ ವ್ಯಾಮೋಹ ಚುನಾವಣೆಯಲ್ಲಿ ಗೆಲ್ಲುವ ಮೂಲಕವೇ ಅಧಿಕಾರ ಸ್ಥಾನ ಗಳಿಸುವ ಅವಕಾಶ ಮುಕ್ತವಾದಾಗ ಈ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷತೆಯ ಮೇಲೆ ಸರ್ಕಾರದ ಸೇವೆಯಲ್ಲಿದ್ದು ನಿವೃತ್ತರಾದವರೂ ಕಣ್ಣು ಹಾಕಿದರು. ನಾಡು ನುಡಿ ಸೇವೆಯ ಬಣ್ಣದ ಮಾತುಗಳನ್ನು ಆಡುತ್ತಾ ಚುನಾವಣೆಯಲ್ಲಿ ಗೆಲ್ಲುವ ಎಲ್ಲ ಬಗೆಯ ವರಸೆಗಳನ್ನೂ ಬಳಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯೂ ಆದರು. ಪರಿಷತ್ತು ಪ್ರಾರಂಭದಲ್ಲಿ ರೂಪಿಸಿದ್ದ ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಸರ್ಕಾರವೇ ಪ್ರತ್ಯೇಕ ಸಚಿವ ಖಾತೆಯ ಮೂಲಕ, ಹಲವು ಅಕಾಡೆಮಿ, ಪ್ರಾಧಿಕಾರಗಳ ಮೂಲಕ ನಿರ್ವಹಿಸುತ್ತಿರುವಾಗ ತನ್ನ ಆದ್ಯತೆಗಳನ್ನು ಪರಿಷತ್ತು ಪರಿಷ್ಕರಿಸಿಕೊಳ್ಳಬೇಕು ಎಂಬುದೇನೂ ಹೀಗೆ ಆಯ್ಕೆಯಾಗಿ ಬಂದವರ ಆದ್ಯತೆ ಆಗಲೇ ಇಲ್ಲ. ಅವರ ಆದ್ಯತೆಯಲ್ಲಿ ಪರಿಷತ್ತಿನ ಅಂಗರಚನೆಯ ತಿದ್ದುಪಡಿ ಮುಖ್ಯ ಸ್ಥಾನ ಪಡೆಯಿತು. ಆಡಳಿತ ಮಂಡಲಿಯ ಅಧಿಕಾರದ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸುವಂತೆ ನಿಯಮ ಪರಿಷ್ಕರಣೆ ಮತ್ತು ಅದನ್ನು ಪ್ರಸಕ್ತ ಆಡಳಿತ ಮಂಡಲಿಗೆ ಪೂರ್ವಾನ್ವಯವಾಗಿ ಅನುಷ್ಠಾನಕ್ಕೆ ತರುವ ಅಧಿಕಾರ ವ್ಯಾಮೋಹಕ್ಕೂ ಕಾರಣವಾಯಿತು. 2011ರಲ್ಲಿಯೇ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ನಂತರ ಏನು ಮಾಡಬಹುದು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದರಲ್ಲಿ ಪರಿಷತ್ತು ವಿಫಲವಾಯಿತು. ನಾನಾ ಮಾನದಂಡಗಳಿಗೆ ಅನುಗುಣವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವ ಅಕಾಡೆಮಿ, ಪ್ರಾಧಿಕಾರಗಳಿಗೆ ನಾಮಕರಣ ಹೊಂದುವವರಿಂದ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ನಂತರ ಏನೇನು ಕ್ರಿಯಾಯೋಜನೆಗಳನ್ನು ರೂಪಿಸಿಕೊಳ್ಳಬಹುದೆಂಬುದರ ಕಲ್ಪನೆಯನ್ನೂ ನಿರೀಕ್ಷೆ ಮಾಡುವಂತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ರೂಪದ ಮಾರ್ಗದರ್ಶನ ನೀಡಲು ವಿಫಲವಾಯಿತು. ಸಮ್ಮೇಳನಗಳನ್ನು ನಡೆಸುವುದೇ ಮುಖ್ಯ ಕಾರ್ಯಸೂಚಿಯಾಗಿ ನಡೆದುಕೊಳ್ಳುತ್ತಿರುವ ಪರಿಷತ್ತು ಹಳೆಗನ್ನಡಕ್ಕೆ ಸಂಬಂಧಿಸಿ ಒಂದು ಸಮ್ಮೇಳನವನ್ನು ನಡೆಸಿದ್ದು ಇದ್ದುದರಲ್ಲಿ ಒಳ್ಳೆಯ ಕ್ರಮ. ಆದರೆ, ಮಹಿಳಾ ಸಾಹಿತ್ಯ ಸಮ್ಮೇಳನ, ದಲಿತ ಸಮ್ಮೇಳನಗಳನ್ನು ಪ್ರಥಮ ಹೆಜ್ಜೆ ಎಂಬ ಬಜಾವಣೆಯಲ್ಲಿ ನಡೆಸಿದ್ದು ಸಾಹಿತ್ಯ ಕ್ಷೇತ್ರವನ್ನು ಅನಗತ್ಯವಾಗಿ ವಿಭಜಿಸಿದ ಪ್ರತಿಗಾಮಿ ಕ್ರಮ. ನಾಡು ನುಡಿಗೆ ಮಹತ್ವದ ಕೊಡುಗೆ ನೀಡಿದ ಮತ್ತು ವೈಯಕ್ತಿಕವಾಗಿ ಸಾಹಿತ್ಯ ಸಾಧನೆ ಮಾಡಿದ ಜಯದೇವಿ ತಾಯಿ ಲಿಗಾಡೆ, ಗೀತಾ ನಾಗಭೂಷಣ ಅಂಥವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿರುವಾಗ ಪ್ರತ್ಯೇಕವಾಗಿ ಮಹಿಳೆಯರಿಗೆ ಸೀಮಿತವಾಗಿ ಸಾಹಿತ್ಯ ಸಮ್ಮೇಳನ ನಡೆಸಿದ್ದು ಮಹಿಳಾ ಸಾಧಕಿಯರನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನದಿಂದ ಹೊರಗಿಡುವ ಹುನ್ನಾರವಾಯಿತು. ದಲಿತ ಸಾಹಿತ್ಯ ಸಮ್ಮೇಳನವಂತೂ ದಲಿತ ಸಾಹಿತ್ಯ ಸಾಧಕರನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವದಿಂದ ನಿರ್ದಾಕ್ಷಿಣ್ಯವಾಗಿ ಹೊರಗಿಡುವ ಸಾಹಿತ್ಯಿಕ ಅಸ್ಪೃಶ್ಯತೆಯ ಆಚರಣೆ. ಇಂದಿನ ಸಾಮಾಜಿಕ ಸಂರಚನೆಯಲ್ಲಿ ವೀರಶೈವ-ಲಿಂಗಾಯತ ಸಾಹಿತಿಗಳು, ಒಕ್ಕಲಿಗ ಸಾಹಿತಿಗಳು, ಹಿಂದುಳಿದ ವರ್ಗಗಳಿಗೆ ಸೇರಿದ ನೂರಾರು ಸಾಹಿತ್ಯ ಸಾಧಕರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬಹುದೆನ್ನುವ ಅಪಾಯಕಾರಿ ಸಾಧ್ಯತೆಯನ್ನು ಸೃಷ್ಟಿಸಿದ್ದು ದಲಿತ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆ ಮತ್ತು ಆಚರಣೆ. ಕೋಲಾರದಲ್ಲಿ ನಡೆಸಿದ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದ ಡಾ.ಎಲ್.ಹನುಮಂತಯ್ಯ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅರ್ಹರಾಗಿದ್ದ ನುಡಿ ಸಾಧಕರು. ಅವರನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹೊರಗೆ ಇಡಲೆಂದೇ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಲಾಯಿತೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವುದಕ್ಕೆ ಆಸ್ಪದ ನೀಡಿದ ನಡವಳಿಕೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಿಂದ ಇಂಥ ನಡವಳಿಕೆಯನ್ನು ನಾಡಿನ ಜನತೆ ಸಹಿಸಿಕೊಳ್ಳಬೇಕೇ? ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕನ್ನಡ ಕಲಿಕೆ ಕಡ್ಡಾಯವಲ್ಲ; ಯಾವ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬುದು ಪೋಷಕರ ನಿರ್ಧಾರಕ್ಕೆ ಬಿಡಬೇಕು, ಕೇಂದ್ರ ಸರ್ಕಾರ ಪ್ರಕಟಿಸಿದ ನೂತನ ಶಿಕ್ಷಣ ನೀತಿಯಲ್ಲಿಯೂ ಪ್ರಾದೇಶಿಕ ಭಾಷೆಯಲ್ಲಿ ಕಲಿಯುವುದು ಕಡ್ಡಾಯವಲ್ಲ- ಎಂಬಂಥ ಕನ್ನಡದ ಅಸ್ತಿತ್ವಕ್ಕೆ ಮಾರಕವಾದ ಕ್ರಮಗಳು, ಸರ್ಕಾರದ ಹಾಗೂ ನ್ಯಾಯಾಲಯದ ತೀರ್ಪುಗಳಲ್ಲಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುರಿತಾಗಿ ಯಾವ ನಿಲುವನ್ನೂ ತಾಳದೆ ಸಮ್ಮೇಳನದ ಸಿದ್ಧತೆಗಳಲ್ಲಿ ಮುಳುಗಿ ಹೋದ ಪರಿಷತ್ತಿಗೆ ನಿಜವಾದ ಅರ್ಥದಲ್ಲಿ ಕಾಯಕಲ್ಪ ನೀಡುವ ನಾಯಕತ್ವ ಮುಂದಿನ ಚುನಾವಣೆಯಲ್ಲಿ ಬರಬೇಕಾಗಿದೆ. ಆದರೆ ಈಗಿನ ನಡವಳಿಕೆಯನ್ನೇ ಮುಂದುವರಿಸುವ ಸ್ಥಿತಿ ಬಂದರೆ ಪರಿಷತ್ತು ಇನ್ನಷ್ಟು ಅಪ್ರಸ್ತುತವಾಗುತ್ತದೆ. ಜನತೆಯ ತೆರಿಗೆಯ ಹಣ ಮತ್ತಷ್ಟು ವ್ಯರ್ಥವಾಗುತ್ತದೆ.ಧೀಮಂತ ನಾಯಕತ್ವದ ಅಗತ್ಯ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತನ್ನು ರೂಪಿಸುವಂಥ ದಾರ್ಶನಿಕ ವ್ಯಕ್ತಿತ್ವದ ಸಾಧಕರು ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದರೆ ಪರಿಷತ್ತಿಗೆ ನಿಜವಾದ ಕಾಯಕಲ್ಪವಾಗುವ ಸಾಧ್ಯತೆಯನ್ನು ನಿರೀಕ್ಷೆ ಮಾಡಬಹುದು. ಸರ್ಕಾರಿ ಅಧಿಕಾರಿಯಾಗಿದ್ದವರಿಗೆ ಜನಪ್ರತಿನಿಧಿಗಳನ್ನು ಓಲೈಸುವುದೇ ಅಭ್ಯಾಸವಾಗಿರುವ ಕಾರಣ ಅವರು ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವಂಥ ಹೊಣೆಗಾರಿಕೆಯನ್ನು ನಿರ್ವಹಿಸಲಾರರೆಂಬುದು ಈಗಾಗಲೇ ಜನತೆಗೆ ಅರಿವಾಗಿದೆ. ಸರ್ಕಾರಿ ಅಧಿಕಾರಿಗಳು ಜನತೆಯ ಸೇವಕರಾದರೂ ಸ್ವತಂತ್ರ ಭಾರತದಲ್ಲಿ ಜನತೆಯ ಮೇಲೆ ದೌರ್ಜನ್ಯ ನಡೆಸುವ ನಿರಂಕುಶ ಪ್ರವೃತ್ತಿಯವರು ಎಂಬುದು ಮನವರಿಕೆ ಆಗಿರುವಾಗ ಅಂಥವರು ರಾಜಕಾರಣಿಗಳಂತೆ ಯಾವುದೇ ಬಗೆಯ ಭರವಸೆಗಳನ್ನು ನೀಡಿದರೂ ಅದು ವಿಶ್ವಾಸಕ್ಕೆ ಪಾತ್ರವಾದದ್ದಲ್ಲ. ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಬಲ್ಲಂಥ ಉನ್ನತ ವರ್ಚಸ್ಸಿನ ಸಾಹಿತ್ಯ ಸಾಧಕರು, ನಾಡು ನುಡಿಯ ಇಂದಿನ ಪರಿಸ್ಥಿತಿಯಲ್ಲಿ ಕನ್ನಡದ ಪಾರಮ್ಯಕ್ಕಾಗಿ ದಿಟ್ಟ ಹೋರಾಟ ನಡೆಸಬಲ್ಲ ಛಾತಿಯ ಧೀಮಂತರು ಪರಿಷತ್ತಿನ ಅಧ್ಯಕ್ಷತೆಗೆ ಬರುವುದು ಅವಶ್ಯಕವಾಗಿದೆ. ಈಗಾಗಲೇ ಪುಡಾರಿಗಳಂತೆ ಟವಲ್ ಹಾಕಿಕೊಂಡಿರುವ ಮುಖಗಳಿಂದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಜೀರ್ಣೋದ್ಧಾರ ಮರೀಚಿಕೆಯಾಗುವ ಲಕ್ಷಣಗಳೇ ತೋರುತ್ತದೆ. ಮತದಾರರು ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿ ವಿವೇಚನೆಯಿಂದ ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಬೇಕಾಗಿದೆ.(ಸೌಜನ್ಯ: ಕನ್ನಡ ರಕ್ಷಣಾ ವೇದಿಕೆ ಮಾಸಿಕ, ನವೆಂಬರ್ 2021)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *