ಸಂಸ್ಕಾರ’ದ ನ್ಯೂನ್ಯತೆಗಳು

ಸಾಹಿತ್ಯಕ ಮತ್ತು ಸಾಂಸ್ಕೃತಿಕ ರಾಜಕಾರಣ- ೧೯ತಿರುಗಿ ನೋಡಿದಾಗ ಕಣ್ಣಿಗೆ ಬೀಳುವ’ಸಂಸ್ಕಾರ’ದ ನ್ಯೂನ್ಯ ತೆಗಳು……………………………………………………………..’ಸಂಸ್ಕಾರ’ ೧೯೬೫ ರಲ್ಲಿ ಪ್ರಕಟವಾದ ಯು.ಆರ್ .ಅನಂತಮೂರ್ತಿಯವರ ಕಾದಂಬರಿ. ಈ ಕಾದಂಬರಿ ಪ್ರಕಟವಾಗುತ್ತಿದ್ದಂತೆಯೇ ಎಲ್ಲರ ಗಮನ ಸೆಳೆಯಿತು. ನವ್ಯ ಸಾಹಿತ್ಯದ ಅಪೂರ್ವ ಸಿದ್ಧಿಗಳಲ್ಲಿ ಒಂದು ಎಂದು ‘ಸಂಸ್ಕಾರ’ವನ್ನು ವಿಮರ್ಶಕರು ಕೊಂಡಾಡಿದರು. ಕಾದಂಬರಿಯ ರೂಪಕ ಶಕ್ತಿ ಮತ್ತು ನಿರೂಪಣಾತ್ಮಕ ಕೌಶಲದಿಂದಾಗಿ ಓದುಗರೂ ಈ ಕೃತಿಯೆಡೆಗೆ ಆಕರ್ಷಿತರಾದರು.ಕೆ.ವಿ.ಸುಬ್ಬಣ್ಣ ಬರೆದಿರುವ ಹಾಗೆ ‘ಸಂಸ್ಕಾರ’ಕುರಿತು ಕನ್ನಡದಲ್ಲಿ ವಿಮರ್ಶೆಯ ರಾಶಿಯೇ ಬಂದಿದೆ. ಎಂ. ಜಿ. ಕೃಷ್ಣಮೂರ್ತಿ,ಏ.ಕೆ.ರಾಮಾನುಜನ್ ಸೇರಿದಂತೆ ಎಲ್ಲರೂ ಬಹಳ ಉತ್ಸಾಹದಿಂದಲೇ ಈ ಕಾದಂಬರಿಯ ಬಗ್ಗೆ ಬರೆದರು. ಏರಿಕ್ ಏರಿಕ್ಸನ್ , ನೈಪಾಲ್ ಮುಂತಾದವರು ಬರೆದ ವಿಮರ್ಶೆಗಳು ಇಂಗ್ಲಿಷ್ ನಲ್ಲಿ ಬಂದವು. ಪ್ರಕಟವಾದ ಅನತಿ ಕಾಲದಲ್ಲಿಯೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಗಮನ ಸೆಳೆದ ಮತ್ತೊಂದು ಕನ್ನಡ ಕಾದಂಬರಿ ಇಲ್ಲವೆನ್ನಬಹುದು.’ಸಂಸ್ಕಾರ’ ಒಂದು ಬ್ರಾಹ್ಮಣ ಅಗ್ರಹಾರದಲ್ಲಿ ನಡೆಯುವ ನಾಲ್ಕು ದಿನಗಳ ಘಟನಾವಳಿಗಳನ್ನು ಬಿಗಿಯಾದ ಬಂಧದಲ್ಲಿ ಹಿಡಿದಿಟ್ಟಿರುವ ಕಾದಂಬರಿ.ತಾನು ಪಾಲಿಸುತ್ತಿರುವ ಗೊಡ್ಡು ಆಚಾರಗಳಿಂದಾಗಿಯೇ ಹೇಗೆ ಒಂದು ಬ್ರಾಹ್ಮಣ ಸಮುದಾಯ ಅವನತಿಯ ಹಂತವನ್ನು ತಲುಪುತ್ತದೆ ಎಂಬುದನ್ನು ‘ಸಂಸ್ಕಾರ’ ತೆರೆದಿಡುತ್ತದೆ;ಈ ಕಾರಣಕ್ಕಾಗಿಯೇ ಮೊತ್ತಮೊದಲಿಗೆ ಅಂತಹ ಧೈರ್ಯ ತೋರಿದ ಅಪೂರ್ವ ಕೃತಿ ಎಂಬ ಪ್ರಶಂಸೆಗೂ ಅದೇ ವೇಳೆಗೆ ಇನ್ನು ಕೆಲವರಿಂದ ವೈಯಕ್ತಿಕ ನೆಲೆಯಲ್ಲಿ ವಿರೋಧಕ್ಕೂ ಪಾತ್ರವಾಯಿತು.

‘ಸಂಸ್ಕಾರ ಕಾದಂಬರಿಯ ಘಟನೆಗಳ ಸರಳತೆ ಮತ್ತು ವಸ್ತುವಿನ ಸಂಕ್ಷಿಪ್ತತೆ’ ಕುರಿತು ಪಿ.ಲಂಕೇಶ್ ಗಮನ ಸೆಳೆದರೆ,’ಈ ಕೃತಿಯ ವಸ್ತುವಿನ ಹೊಸತನವೇ ನಮ್ಮನ್ನು ಬೆರಗುಗೊಳಿಸಿತು’ಎಂದು ಚಂದ್ರಶೇಖರ ಕಂಬಾರ ಹೇಳಿದರು.’ಸಂಸ್ಕಾರದ ವಿಮರ್ಶೆ ಹಿಂದೂ ಸಂಸ್ಕೃತಿಯ ವಿಮರ್ಶೆ ಕೂಡ ಆಗುವುದು ಅನಿವಾರ್ಯ’ಎಂದು ಎಂ.ಜಿ.ಕೆ ಬರೆದರು. ‘ಸಂಸ್ಕಾರದ ಒಟ್ಟಂದದ ಸಿದ್ಧಿಯನ್ನು ನೋಡಿದಾಗ ಭಾರತೀಯ ಸಾಹಿತ್ಯ ರಂಗದಲ್ಲಿ ಕನ್ನಡದ ಪ್ರತಿನಿಧಿಯಾಗಿ ಬೆಳಗಬಲ್ಲ ಕೆಲವೇ ಕೃತಿಗಳಲ್ಲಿ ಸಂಸ್ಕಾರ ಒಂದಾಗಿದೆ ಎಂದು ಖಚಿತವಾಗಿ ಹೇಳಬಹುದು’ಎಂದು ಶಾಂತಿನಾಥ ದೇಸಾಯಿ ಉತ್ಸಾಹದಿಂದ ಹೇಳಿದರು. ಕಾದಂಬರಿಯ ಒಂದು ಪಾತ್ರವಾದ ‘ನಾರಣಪ್ಪ ಕಾಮದ ಮಟ್ಟಿಗೆ ಮಾತ್ರವಲ್ಲದೆ ಪರಂಪರಾಗತ ಮೌಲ್ಯ ಪ್ರಜ್ಞೆಯನ್ನು ಎಲ್ಲ ದಿಕ್ಕಿನಿಂದಲೂ ಪ್ರಶ್ನಿಸುವವನಾಗಿರುವುದು ಸಂಸ್ಕಾರದ ಸೃಜನಾತ್ಮಕ ಸವಾಲನ್ನು ದೊಡ್ಡದಾಗಿಸುತ್ತದೆ …ಇದು ಪಕ್ವತೆಯ ಗುರುತೂ ಹೌದು’ ಎಂಬುದು ಜಿ.ಎಚ್. ನಾಯಕ್ ನುಡಿದರು. ಮೊಗಳ್ಳಿ ಗಣೇಶ್,’ತಾನು ಬಂದ ಪರಂಪರೆಯ ಬೇರುಗಳನ್ನು ತುಂಡರಿಸಿಕೊಂಡು ಆ ಮಟ್ಟಿಗೆ ಅವೈದಿಕ ಸಮಾಜದ ಕಡೆಗೆ ಸೃಜನಶೀಲ ಅನುಸಂಧಾನ ಮಾಡುವುದು ಸಾಮಾನ್ಯ ಸಂಗತಿಯಲ್ಲ’ಎನ್ನುವ ಮೂಲಕ ‘ಸಂಸ್ಕಾರ’ದ ವಿಶೇಷತೆಯನ್ನು ಗುರುತಿಸಿದ್ದರು.’ಸಂಸ್ಕಾರ ‘ಹೊರಬಂದ ಸಮಯದಲ್ಲಿ ಎಂತಹ ವಾತಾವರಣ ನಿರ್ಮಾಣವಾಗಿತ್ತು ಎಂದರೆ,ಸರಿ ಸುಮಾರು ಅದೇ ಸಮಯದಲ್ಲಿ ಬಂದಿದ್ದ ಕುವೆಂಪು ಅವರ ಬಹಳ ಮುಖ್ಯ ಕೃತಿಯಾದ ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯ ಮಹತ್ವವನ್ನು ಅನೇಕರು ಗಮನಿಸಲೇ ಇಲ್ಲ!’ಸಂಸ್ಕಾರ’ಪ್ರಕಟವಾದ ಹೊತ್ತಿನಲ್ಲಿ ಕಾಣಿಸಿಕೊಂಡ ಮಾತುಗಳಲ್ಲಿ ಉತ್ಪ್ರೇಕ್ಷೆ ಇತ್ತಾದರೂ ಅದು ಕೃತಿಯ ಹೊಸತನಕ್ಕೆ ಸಂದ ಮನ್ನಣೆಯೇ ಆಗಿತ್ತು.

ಆದರೆ ಈಗ ಹಿಂತಿರುಗಿ ನೋಡಿದರೆ ‘ಸಂಸ್ಕಾರ’ದ ಬಗ್ಗೆ ಹೇಳಲು ನಮ್ಮಲ್ಲಿ ಹೊಸ ಮಾತುಗಳೇನಾದರೂ ಇವೆಯೇ ಎಂದು ಯೋಚಿಸಿದೆ.ಯಾಕೆ ಈ ಮಾತು ಹೇಳುತ್ತಿದ್ದೇನೆಂದರೆ ಸಾಮಾನ್ಯವಾಗಿ ಒಂದು ಕೃತಿ ಬಹಳ ಮುಖ್ಯವಾದುದು ಎಂದು ಕರೆಸಿಕೊಂಡ ಮೇಲೆ ಅನೇಕರು ಮತ್ತೆ ಅದನ್ನು ಚರ್ಚೆಗೆ ಒಳಪಡಿಸಲು ಇಷ್ಟಪಡುವುದಿಲ್ಲ.ಈಗಾಗಲೇ ಬಂದಿರುವ ಮಾತುಗಳ ಹಿನ್ನೆಲೆಯಲ್ಲಿ ಎಲ್ಲರೂ ಕಣ್ಣು ಮುಚ್ಚಿ ಆ ಕೃತಿಯ ಪರವಾಗಿ ವಾದಿಸಲು ತೊಡಗಿಬಿಡುತ್ತಾರೆ.ಮಾತು ಅಲ್ಲಿಗೆ ನಿಂತುಬಿಡುತ್ತದೆ. ಅಂತಹ ಒಂದು ಪ್ರಭಾವಳಿ ಕೃತಿಯ ಸುತ್ತ ಹುಟ್ಟಿಕೊಂಡಿರುತ್ತದೆ.ಅದು ಕನ್ನಡದ ಮೇರುಕೃತಿ ಎಂಬ ಕೃತಜ್ಞತಾಭಾವ ಬಂದುಬಿಡುತ್ತದೆ.ಮತ್ತೆ ಯಾವ ಟೀಕೆ ಟಿಪ್ಪಣಿಗಳಿಗೂ ಅವಕಾಶ ಇಲ್ಲದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ.’ಸಂಸ್ಕಾರ’ವನ್ನು ಮತ್ತೆ ಓದಿದಾಗ ನನಗೆ ಅದರ ಒಂದೊಂದೇ ಕೊರತೆಗಳು ಗಮನಕ್ಕೆ ಬರತೊಡಗಿದವು.‌

ಎಂ.ಜಿ.ಕೆ ಗುರುತಿಸಿದಂತೆ, ‘ಸಂಸ್ಕಾರ’ದ ವಿಮರ್ಶೆ ‘ಹಿಂದೂ ಸಂಸ್ಕೃತಿ’ಯ ವಿಮರ್ಶೆ ಎಂದು ಅನಿಸಲಿಲ್ಲ.ಅಥವಾ ಇಲ್ಲಿಯ ಪಾತ್ರಗಳು ಇಡೀ ಭಾರತವನ್ನು ಪ್ರತಿನಿಧಿಸುವ ಪಾತ್ರಗಳು ಎಂದೂ,ಇದು ಭಾರತದ ನೈಜ ಸ್ಥಿತಿಯ ಚಿತ್ರಣ ನೀಡುತ್ತಿದೆ ಎಂದೂ ಅನಿಸಲಿಲ್ಲ.’ಹಿಂದೂ ಸಂಸ್ಕೃತಿ’ ಅಥವಾ ‘ಭಾರತೀಯ ಸಂಸ್ಕೃತಿ’ ಎಂಬ ಮಾತುಗಳೇ ತಪ್ಪು ಅಭಿಪ್ರಾಯ ಕೊಡುವಂಥವು.ಅಂಥದರಲ್ಲಿ ‘ಸಂಸ್ಕಾರ’,ಕಾದಂಬರಿ ‘ಹಿಂದೂ ಸಂಸ್ಕೃತಿಯ ವಿಮರ್ಶೆ’ಎಂಬ ಮಾತೇ ಅರ್ಥಹೀನವಾದುದು.ಇನ್ನು ‘ಬ್ರಾಹ್ಮಣರ ಸಂಸ್ಕೃತಿ’ ಯೇ ‘ಭಾರತೀಯ ಸಂಸ್ಕೃತಿ’ಎಂಬ ವಾದದಲ್ಲಿಯೂ ಹುರುಳಿಲ್ಲ.ಆದುದರಿಂದ ಇದು ಈ ಮೊದಲೇ ಹೇಳಿದಂತೆ,ಒಂದು ಬ್ರಾಹ್ಮಣ ಅಗ್ರಹಾರದಲ್ಲಿ ನಡೆಯುವ ಕಾಲ್ಪನಿಕ ಕಥೆ ಎಂದಷ್ಟೇ ಹೇಳಬಹುದು.

ಹಾಗೆ ಹೇಳುವಾಗಲೂ ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಅಗ್ರಹಾರದ ಅವನತಿಯನ್ನು ಹೋಲುವ ಇನ್ನೂ ಅನೇಕ ಉದಾಹರಣೆಗಳು ಇದ್ದಿರಬಹುದಾದರೂ ಇಡೀ ಭಾರತದ ಬ್ರಾಹ್ಮಣ ಕೇರಿಗಳು ಇಲ್ಲಿ ಚಿತ್ರಿಸಿದ ಹಾಗೇ ಇವೆ ಎಂದೇನೂ ಅಲ್ಲ. ಆದುದರಿಂದ ಇದು ಒಂದು ಪ್ರಾತಿನಿಧಿಕ ಚಿತ್ರಣ ಎಂದು ಹೇಳುವ ಹಾಗಿಲ್ಲ.ಇಲ್ಲಿನ ನಾರಣಪ್ಪ, ಪ್ರಾಣೇಶಾಚಾರ್ಯ, ಮಾಲೇರ ಪುಟ್ಟ ಮುಂತಾದ ಕೆಲವೇ ಪಾತ್ರಗಳನ್ನು ಹೊರತುಪಡಿಸಿ ಉಳಿದ ಪಾತ್ರಗಳು ಲೇಖಕರ ಕೈಗೊಂಬೆಯಂತಹ ಪಾತ್ರಗಳಾಗಿವೆ. ಇಲ್ಲಿನ ಬ್ರಾಹ್ಮಣ ಪಾತ್ರಗಳು ತೋರಿಸುವ ಅಪ್ರಾಮಾಣಿಕತೆ, ಆಸೆಬುರುಕುತನ,ಮತ್ಸರ, ಅಸಹನೆ,ಕಪಟತನದ ಚಿತ್ರಣವೂ ಸಮಸ್ಯಾತ್ಮಕವಾದುದು. ಇವು ಮೊದಲೇ ಊಹಿಸಿ ಬರೆದಂತಿರುವ ಸಿದ್ಧ ಮಾದರಿಯ ಪಾತ್ರಗಳು. ಕಾದಂಬರಿಯ ಉದ್ದೇಶದತ್ತ ದುಡಿಯಲು ಮತ್ತು ಗೊತ್ತಾದ ಅರ್ಥ ಹೊರಡಿಸಲು ಲೇಖಕರು ಸೃಷ್ಟಿಸಿರುವ ಪಾತ್ರಗಳು. ಇದು ಕೂಡ ಈ ಕಾದಂಬರಿಯ ಒಂದು ಬಹು ದೊಡ್ಡ ದೋಷ.

ಹೀಗಿರುವಾಗ ‘ಸಂಸ್ಕಾರ’ಇಡೀ ಭಾರತದ ಕಥೆ ಎಂದು ಹೇಳುವುದು ಹೇಗೆ?ಎಲ್ಲಕ್ಕಿಂತ ಮುಖ್ಯವಾಗಿ ಹೆಣ್ಣುಗಳನ್ನು ಅದರಲ್ಲೂ ಮುಖ್ಯವಾಗಿ ಕೆಳ ವರ್ಗದ ಹೆಣ್ಣುಗಳನ್ನು ಅನಂತಮೂರ್ತಿ ಚಿತ್ರಿಸಿರುವ ರೀತಿಯಂತೂ ಪ್ರಶ್ನಾರ್ಹವಾದುದು. ಅನಂತಮೂರ್ತಿ ಈ ಪಾತ್ರಗಳ ಬಾಹ್ಯ ವರ್ಣನೆಗಷ್ಟೇ ಮಹತ್ವ ಕೊಟ್ಟ ಹಾಗೆ ತೋರುತ್ತದೆ. ಅವರಿಗೊಂದು ಸ್ವಂತ ವ್ಯಕ್ತಿತ್ವ, ಮನಸ್ಸು ಇರಬಹುದು ಎಂಬುದನ್ನೇ ಲೇಖಕರು ಮರೆತುಬಿಟ್ಟಿದ್ದಾರೆ.ಈ ಕುರಿತು ಯಾರಾದರೂ ಬರೆದಿರಬಹುದೇ ಎಂದು ನೋಡಿದೆ. ‘ಜೆಂಡರಿಂಗ್ ಸಂಸ್ಕಾರ’ಎಂಬ ಲೇಖನದಲ್ಲಿ Sarah clerhout ಮತ್ತು Nele de Gersem ಅನ್ನುವ ಲೇಖಕರು ಈ ಕುರಿತು ವಿವರವಾಗಿ ಬರೆದಿರುವುದು ಗಮನಕ್ಕೆ ಬಂತು. ಅವರ ಬರಹದ ಕೆಲವು ಮುಖ್ಯ ಮಾತುಗಳು ಹೀಗಿದೆ:”ಕಾದಂಬರಿಯಲ್ಲಿ ಬರುವ ಸ್ತ್ರೀಯರ ಚಿತ್ರಣವನ್ನು ಗಮನಿಸಿದರೆ… ಇಲ್ಲಿನ ಹೆಣ್ಣುಗಳು ಗಂಡಿನ ಕಾಮ ವಾಂಛೆಯನ್ನು ಒಪ್ಪಿಕೊಳ್ಳುವ ಅಥವಾ ಅದಕ್ಕೆ ಸಾಮರ್ಥ್ಯ ಇಲ್ಲದವರು ಎನ್ನುವ ಹಾಗೆ ಚಿತ್ರಣಕ್ಕೊಳಗಾಗಿದ್ದಾರೆ.ಅವರು ಮುಕ್ತವಾಗಿ, ನಿರ್ಭಿಡೆಯಿಂದ,ಸಮಸ್ಯೆ ಇಲ್ಲದ ಹಾಗೆ ಪುರುಷರ ಕಾಮಕ್ಕೆ ಅಣಿಯಾಗುತ್ತಾರೆ. ಅದರಲ್ಲಿಯೂ ಕೆಳಜಾತಿಯ ಸ್ತ್ರೀಯರನ್ನಂತೂ ಹೀಗೆಯೇ ಚಿತ್ರಿಸಲಾಗಿದೆ”( ‘ಸಂಸ್ಕಾರ’ ಕಾದಂಬರಿ ಲಿಂಗವಿವಕ್ಷೆಯು ಕನ್ನಡಕ್ಕೆ – ಡಾ.ಮಾಧವ ಪೆರಾಜೆ ಸಂಚಯ ಪುಟ ೧೫ )ಆದರೆ ‘ಸಂಸ್ಕಾರ’ಕೇಂದ್ರ ಘಟನೆಯಾದ ಪ್ರಾಣೇಶಾಚಾರ್ಯ ಮತ್ತು ಚಂದ್ರಿಯ ಸಮಾಗಮದ ಕುರಿತು ಎಂ.ಜಿ.ಕೆ ಹೇಳಿರುವುದನ್ನು ನೊಡಿ – “ಕಾಡಿನಲ್ಲಿ ಅಮಾವಾಸ್ಯೆಯ ಕತ್ತಲಲ್ಲಿ ಪ್ರಾಣೇಶಾಚಾರ್ಯರು ಚಂದ್ರಿ ಸುಲಿದು ಕೊಟ್ಟ ಬಾಳೆಯ ಹಣ್ಣನ್ನು ತಿಂದು ಅವಳೊಡನೆ ಮಲಗುವುದು ಸಾಂಕೇತಿಕವಾಗಿದೆ ..ಮಣ್ಣಿಗೆ ಹಿಂತಿರುವುದರ ಸಂಕೇತವಾಗಿದೆ”(ಯು.ಆರ್ .ಅನಂತಮೂರ್ತಿ ಸಂ:ಮುರಳೀಧರ ಉಪಾಧ್ಯ ಹಿರಿಯಡಕ.ಸಂಸ್ಕಾರ ಎಂ.ಜಿ. ಕೃಷ್ಣಮೂರ್ತಿ ಪುಟ ೨೪೨)

ಎಂ.ಜಿ.ಕೆ ಅವರಿಗೆ, ಪ್ರಾಣೇಶಾಚಾರ್ಯ ಅವರಿಂದ ಗರ್ಭದಾನ ಮಾಡಿಸಿಕೊಳ್ಳಬೇಕೆಂಬ ಚಂದ್ರಿಯ ಆಸೆ, ಅವಳು ನಿಸರ್ಗದ ಕಡೆಗೆ ಅವರನ್ನು ತಿರುಗಿಸುವ ದೇವತೆ ಕೂಡ ಆಗುವುದು – ಎಲ್ಲವೂ ಸಂಕೇತಗಳಾಗಿ ಕಾಣುತ್ತವೆ.’ಅವರನ್ನು ತಬ್ಬಿಕೊಂಡು ಮಲಗುವ ಚಂದ್ರಿ ತಾಯಿಯ ಪ್ರತೀಕ ಕೂಡ ಆಗುತ್ತಾಳೆ’ಎಂದೂ ಅವರು ಬರೆಯುತ್ತಾರೆ. ಇಲ್ಲೆಲ್ಲ ಲೇಖಕರ ಮನದಾಳದ ಆಸೆ ಏನಿತ್ತು ಎಂದು ಬಗೆದು ತೋರುವುದೇ ವಿಮರ್ಶೆ ಆಗಿಬಿಟ್ಟಿದೆ!”ಮನುಷ್ಯ ತನ್ನ ಪ್ರಾಕೃತಿಕ ಪ್ರವೃತ್ತಿಗಳನ್ನು ಹತ್ತಿಕ್ಕಿದರೆ…ಆತನಿಗೆ ಜೀವನ ಸಾಫಲ್ಯ ದೊರೆಯಲಾರದು”ಎಂದು ಬರೆದಿರುವ ಶಾಂತಿನಾಥ ದೇಸಾಯಿ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಧ್ವನಿಸಿದ್ದಾರೆ (ಸಂಸ್ಕಾರ: ಪ್ರೇರಣೆ- ತಂತ್ರ ಅದೇ ಪುಸ್ತಕ ಪುಟ ೨೫೭)ಎಂ.ಜಿ.ಕೆ ಮತ್ತು ಶಾಂತಿನಾಥ ದೇಸಾಯಿ,ಈ ಬಗೆಯ ಚಿತ್ರಣದ ಹಿಂದಿರುವ ಮತ್ತು ಒಟ್ಟಾರೆಯಾಗಿ ಕಾದಂಬರಿಯ ಮೇಲಿನ ಆಗಿರುವ ಡಿ.ಎಚ್.ಲಾರೆನ್ಸ್ , ಜೀನ್ ಪಾಲ್ ಸಾರ್ತ್ರೆ, ಜೇಮ್ಸ್ ಜಾಯ್ಸ್, ಜಿ.ಕೆ ಮುಂತಾದವರ ಪ್ರಭಾವವನ್ನೂ ಗುರುತಿಸಿದ್ದಾರೆ.

ಈಗ ನೋಡಿದರೆ ಆ ಪ್ರಭಾವಗಳೆಲ್ಲ ಕಾದಂಬರಿಗೆ ಒಂದು ತೊಡಕೇ ಆಗಿವೆ ಎಂಬುದು ಗೊತ್ತಾಗುತ್ತದೆ. ಮುಖ್ಯವಾಗಿ ಕಾದಂಬರಿಯ ಕೊನೆಯ ಭಾಗದಲ್ಲಿ ಸಾತ್ರೆ೯ಯ ‘ಅಸ್ತಿತ್ವವಾದ’ದ ಪ್ರಭಾವ ತುಂಬಾ ದಟ್ಟವಾಗಿದೆ.ಪ್ರಾಣೇಶಾಚಾರ್ಯ ಮತ್ತು ಚಂದ್ರಿಯ ಸಮಾಗಮ ಮೊಗಳ್ಳಿ ಗಣೇಶ್ ಗೆ ಬೇರೆಯದೇ ರೀತಿಯಾಗಿ ಕಾಣಿಸಿದೆ – “ಸಂಸ್ಕಾರ ಕಾದಂಬರಿಯಲ್ಲಿ ನಾರಣಪ್ಪ ಕಾಮನೆಯ ಅಧಿಕಾರವನ್ನು ಪ್ರತಿನಿಧಿಸಿದರೆ, ಆತನಿಗೆ ಎದುರಾದ ಪ್ರಾಣೇಶಾಚಾರ್ಯ ಧರ್ಮಪ್ರಭುತ್ವದ ಯಾಜಮಾನ್ಯವನ್ನು ಪ್ರತಿಬಿಂಬಿಸುತ್ತಾನೆ….ಇಂತಹ ಎರಡು ವೈರುಧ್ಯಗಳ ಮಧ್ಯೆ ದಲಿತ ಪಾತ್ರವೆನಿಸಿಕೊಂಡ ಚಂದ್ರಿಯನ್ನು ಭೋಗಪಣದ ಆಟದಲ್ಲಿ ಬಳಸಿಕೊಳ್ಳುವುದು ಸೃಜನಶೀಲತೆಯ ಅನೈತಿಕತೆಯೆನಿಸಿಬಿಡುತ್ತದೆ.(ವೈದಿಕ ದಿವ್ಯದ ಅನಂತಮೂರ್ತಿ. ತಕರಾರು.ಮೊಗಳ್ಳಿ ಗಣೇಶ್ ಪುಟ ೬೩)’ಸಂಸ್ಕಾರ ಕಾದಂಬರಿಯ ಲಿಂಗವಿವಕ್ಷೆಯು’ ಪ್ರಬಂಧದಲ್ಲಿಯೂ ಈ ಮಾತಿನ ವಿಸ್ತರಣೆ ಇದೆ – “ಚಂದ್ರಿಯು ತನ್ನ ದೇಹವನ್ನು ಬ್ರಾಹ್ಮಣನೋರ್ವನು ಬಳಸಿಕೊಳ್ಳಬೇಕು ಎಂದು ಎಂದಿನಿಂದಲೂ ಕಾಯುತ್ತಿದ್ದಳೇನೋ ಎನ್ನುವ ಹಾಗೆ ಈ ಪ್ರಸಂಗ ನಡೆದುಹೋಗುತ್ತದೆ….

ಕಾದಂಬರಿಯಲ್ಲಿ ಬರುವ ಎಲ್ಲ ಕೆಳಜಾತಿ ಹೆಣ್ಣುಮಕ್ಕಳಿಗೂ ಗಂಡಸರ ದೈಹಿಕ ಸುಖದ ಸಾಧನವಾಗುವುದಕ್ಕೆ ತುಂಬಾ ಸಂತೋಷವಿದೆ”ಅನಂತಮೂರ್ತಿ ಅವರು ತಮ್ಮ ಕೃತಿಗಳಲ್ಲಿ ಹೆಣ್ಣಿನ ಬಗ್ಗೆ ಸಮರ್ಪಕವಾದ ಚಿತ್ರಣವನ್ನು ನೀಡುವುದರಲ್ಲಿ ಉದ್ದಕ್ಕೂ ಸೋಲುತ್ತ ಬಂದಿದ್ದಾರೆ ಎನ್ನುವುದು ನನ್ನ ಮಾತು ಕೂಡ. ಅದು ‘ಭಾರತೀಪುರ’ ಇರಬಹುದು,’ಅವಸ್ಥೆ’ಇರಬಹುದು ಅಥವಾ ಅವರ ಕೊನೆಯ ಕೃತಿಯಾದ ‘ಪಚ್ಚೆ ರೆಸಾರ್ಟ್’ ಇರಬಹುದು;ಅವರು ಸೃಷ್ಟಿಸುವುದು ಗಂಡಸರ ಕಾಮದ ಕೈಗೊಂಬೆಯಂತಿರುವ ಕಾರ್ಡ್ ಬೋರ್ಡ್ ಪಾತ್ರಗಳನ್ನೇ.ಈ ಬಗ್ಗೆ ಜಿ.ಎಚ್ .ನಾಯಕ್ ಅವರು ಹೇಳಿರುವುದು ಕುತೂಹಲಕಾರಿಯಾಗಿದೆ -“ಬೇರೆ ಜಾತಿಯ ವ್ಯಕ್ತಿಗಳು – ಮುಖ್ಯವಾಗಿ ಶೂದ್ರ ಹೆಣ್ಣುಗಳು- ಪರಂಪರಾಗತ ಮೌಲ್ಯ ಪ್ರಜ್ಞೆಯ ಅರ್ಥ ಹೀನತೆಯನ್ನು ಎತ್ತಿತೋರಿಸಲೆಂಬಂತೆ ಬರುತ್ತವೆ. ಅದರಲ್ಲೂ ಮುಖ್ಯವಾಗಿ ಕಾಮ-ಪ್ರೇಮ ಸಂಬಂಧಿಯಾದ ನೀತಿ ಅನೀತಿ ಗಳನ್ನು ವ್ಯಾಖ್ಯಾನಿಸುವುದಕ್ಕೆ ಪೋಷಕದ್ರವ್ಯವಾಗಿ ಬರುತ್ತಾರೆ. ‘ಪ್ರಶ್ನೆ’ಯ ಲಚ್ಚಿ, ನಂಜಿ;’ಕಾರ್ತಿಕ’ದ ಅಬ್ಬಕ್ಕ ,’ಸಂಸ್ಕಾರ’ದ ಬೆಳ್ಳಿ ಕೂಡ-ಇವರನ್ನು ಈ ದೃಷ್ಟಿಯಿಂದಲೇ ನೋಡಿರುವುದರಿಂದ ಕಥೆಗಳಲ್ಲಿ ಇವರೆಲ್ಲ ಭಿನ್ನಭಿನ್ನ ಹೆಸರುಗಳನ್ನು ಪಡೆದು ಬಂದರೂ ಒಟ್ಟಿನಲ್ಲಿ ಹೆಚ್ಚುಕಡಿಮೆ ಒಂದೇ ಅಚ್ಚಿನಲ್ಲಿ ಹೊಯ್ದ ಪಾತ್ರಗಳಾಗಿ ಬರುತ್ತಾರೆ.

ಕಾಮ ಒಂದನ್ನುಳಿದು ಬದುಕಿನ ಇನ್ಯಾವ ಮೈಯಲ್ಲಿಯೂ ಅವರು ಜೀವಂತವಾಗಿ ಬದುಕುವ ಪಾತ್ರಗಳಾಗುವುದಿಲ್ಲ. ಸರಳವಾದ ಕಾರಣಕ್ಕಾಗಿ ಸುಲಭವಾಗಿ ಚಿತ್ರಿತವಾಗಿರುವ ಪಾತ್ರಗಳಾಗಿಬಿಟ್ಟಿವೆ. ಒಟ್ಟಿನಲ್ಲಿ ಇವರ ಸಹಜ ಕಾಮ ವ್ಯಾಪಾರವನ್ನು ಸಂಪ್ರದಾಯ ಜಡರ ಬದುಕಿನ ಬರಡುತನ, ಅಸಹಜತೆಯನ್ನು ತೀವ್ರಗೊಳಿಸಲೆಂದು ಒಂದು ರೀತಿಯ ಪ್ರಶಂಸಾಭಾವದಿಂದೆಂಬಂತೆ ಅನಂತಮೂರ್ತಿಯವರು ಚಿತ್ರಿಸುತ್ತಾರೆ.’ಖೋಜರಾಜ’ಮತ್ತು ‘ಪ್ರಶ್ನೆ’ ಕಥೆಗಳಲ್ಲಿನ ಕಪ್ಪೆಗಳನ್ನು ಬಳಸಿಕೊಂಡಂತೆಯೇ ಹೆಚ್ಚು ಕಡಿಮೆ ಇವರನ್ನೂ ಬಳಸಿಕೊಳ್ಳಲಾಗಿದೆ…

ಈ ಶೂದ್ರ ಹೆಣ್ಣುಗಳೆಲ್ಲ ಕಾಮ ವ್ಯಾಪಾರಗಳನ್ನು ನೀತಿ ಅನೀತಿಗಳ ಗೊಂದಲಕ್ಕೊಳಗಾಗದೆ ನಡೆಸುವವರು. ದೈಹಿಕವಾಗಿ ತುಂಬಿಕೊಂಡಿರುವವರು.ಆದರೆ ಸಾಮಾನ್ಯವಾಗಿ ಬ್ರಾಹ್ಮಣ ಹೆಂಗಸರಲ್ಲಿ ಲಕ್ಷ್ಮಿ (‘ಪ್ರಕೃತಿ’), ಪಾರ್ವತಿ (‘ಪ್ರಶ್ನೆ ‘) ಯಮುನಕ್ಕ (‘ಘಟಶ್ರಾದ್ಧ ‘) ಇಂಥವರನ್ನು ಬಿಟ್ಟರೆ ಉಳಿದವರೆಲ್ಲ’ಮೋಟು ಜಡೆಯ ಮುತ್ತೈದೆಯರು…(‘ಸಂಸ್ಕಾರ’ ಪುಟ ೧೬) ಬಚ್ಚುಗಲ್ಲದ,ಬಚ್ಚಿದ ಮೊಲೆಯ,ಬೇಳೆ ಹುಳಿ ವಾಸನೆ ಬರುವ ಬಾಯಿಯ….(‘ಸಂಸ್ಕಾರ’ಪುಟ೪೦)… ಎಲ್ಲಾ ಪಿರಿಪಿರಿ ಮುಂಡೇರು… (ಶ್ರೀಪತಿ ‘ಸಂಸ್ಕಾರ’ ಪುಟ ೭೯)…….

“(ಯು.ಆರ್.ಅನಂತಮೂರ್ತಿ ಸಂ: ಮುರಳೀಧರ ಉಪಾಧ್ಯ ಹಿರಿಯಡಕ ಅನಂತಮೂರ್ತಿಯವರ ಕಥಾಸಾಹಿತ್ಯ ಜಿ.ಎಚ್.ನಾಯಕ ಪುಟ ೨೧೬)ಮೇಲಿನ ಮಾತುಗಳಲ್ಲಿ ಅನಂತಮೂರ್ತಿ ಕಾಮವನ್ನು ನೋಡುವ ಬಗೆಯನ್ನು ಜಿ. ಎಚ್ .ನಾಯಕ ಕರಾರುವಾಕ್ಕಾಗಿ ಹಿಡಿದಿಟ್ಟಿದ್ದಾರೆ. ಎಂ.ಜಿ.ಕೆ, ಶಾಂತಿನಾಥ ದೇಸಾಯಿ ಲೇಖಕರ ದೃಷ್ಟಿಕೋನವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದರೆ,ಜಿ. ಎಚ್.ನಾಯಕ್ ನವ್ಯತೆಯ ಹೆಸರಿನಲ್ಲಿ ಅನಂತಮೂರ್ತಿಯಂಥವರು ಹೆಣ್ಣುಗಳನ್ನು ಅದರಲ್ಲೂ ದಲಿತ ಹೆಣ್ಣುಗಳನ್ನು ನೋಡುವ ದೃಷ್ಟಿಕೋನದಲ್ಲಿರುವ ಸಮಸ್ಯೆಯನ್ನು ನೇರವಾಗಿ ಮಂಡಿಸಿದ್ದಾರೆ.ಈ ಎಲ್ಲ ಕಾರಣಕ್ಕಾಗಿ ‘ಸಂಸ್ಕಾರ’,ವಿಮರ್ಶಕರು ಅಂದು ಉತ್ಸಾಹದಲ್ಲಿ ಘೋಷಿಸಿದಂತೆ ಸಾರ್ವಕಾಲಿಕ ಮಹತ್ವದ ಕೃತಿ ಎಂದೇನೂ ನನಗೆ ಅನಿಸುವುದಿಲ್ಲ. ನವ್ಯ ಸಾಹಿತ್ಯಕ್ಕೆ ತಿರುವು ಕೊಟ್ಟ ಮುಖ್ಯ ಕೃತಿ ಎನ್ನಬಹುದು,ಅಷ್ಟೇ.ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಗಳ ಪಾತ್ರಚಿತ್ರಣ, ಹರಹು, ಜೀವನದೃಷ್ಟಿ , ಸಮಗ್ರತೆಗಳನ್ನು ಗಮನಿಸಬೇಕಾಗುತ್ತದೆ. ಈ ಕಾದಂಬರಿಗಳಲ್ಲಿ ಜಮೀನ್ದಾರಿ ಕ್ರೌರ್ಯವನ್ನು ಮೆರೆಯುವ ಒಕ್ಕಲಿಗ ಪಾತ್ರಗಳಿದ್ದರೂ ಅವು ಅದಷ್ಟನ್ನೇ ಚಿತ್ರಿಸುವ ಉದ್ದೇಶದಿಂದ ಬರೆದ ಕಾದಂಬರಿಗಳಲ್ಲ. ಅವನತಿ ಜೊತೆಜೊತೆಗೇ ಚಿಗುರುವ ಜೀವನೋತ್ಸಾಹದ ಚಿತ್ರವೂ ಈ ಕಾದಂಬರಿಗಳಲ್ಲಿ ಇರುವುದರಿಂದಲೇ ಅವು ಇವತ್ತಿಗೂ ಕನ್ನಡದ ಅಸಾಮಾನ್ಯ ಕಾದಂಬರಿಗಳಾಗಿ ನಮ್ಮ ಮುಂದಿವೆ.ಯಾವ ಕೃತಿಯೇ ಇರಲಿ,ಕಾಲದಿಂದ ಕಾಲಕ್ಕೆ ಪುನರ್ ಮೌಲ್ಯಮಾಪನಕ್ಕೆ ಒಳಪಡಬೇಕಾದ ಅವಶ್ಯಕತೆಯಂತೂ ಇದ್ದೇ ಇರುತ್ತದೆ.ಇದಕ್ಕೆ ‘ಸಂಸ್ಕಾರ’ವೂ ಹೊರತಲ್ಲ. – ವಸಂತ ಬನ್ನಾಡಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. ‌ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿಯ ಬಗ್ಗೆ ವಸಂತ ಬನ್ನಾಡಿಯವರ ವಿಮರ್ಶೆ ನೋಡಿದೆ. ನಾವೆಲ್ಲ ನಮ್ಮ ದೈನಂದಿನ ಜೀವನದಲ್ಲಿ ಜಮೀನ್ದಾರಿ ಕಪಿಮುಷ್ಟಿಯಲ್ಲಿ, ವೈದಿಕ ದಬ್ಬಾಳಿಕೆಯಲ್ಲಿ, ಬೆಳೆದ ಸಂದರ್ಭದಲ್ಲಿ ‘ಸಂಸ್ಕಾರ’, ‘ಘಟಶ್ರಾದ್ಧ’ಗಳನ್ನು ಓದಿದ್ದೆವು. ಓದುವ ಮೊದಲು, ಪಟ್ಟಭದ್ರವೆನಿಸಿದ್ದ ಪುರೋಹಿತಶಾಹಿ ಬಗ್ಗೆ ತಿರಸ್ಕಾರ ಇತ್ತು. ಅದರ ಪ್ರತೀಕವಾದ ಬ್ರಾಹ್ಮಣ್ಯದ ಬಗ್ಗೆ ಅಸಹನೆಯಿತ್ತು. ನಮ್ಮೂರ ದೇವಸ್ಥಾನದ ಗರ್ಭಗುಡಿ, ನಮಗೂ ತೆರೆದಿರಬೇಕು ಎಂಬ ಕಾಗೋಡು ತಿಮ್ಮಪ್ಪನವರ ಮುಂದಾಳತ್ವದಲ್ಲಿ ನಡೆದ ಹೋರಾಟದಲ್ಲಿ ಎದ್ದು ಕಾಣುತ್ತಿತ್ತು. ವಿಮರ್ಶೆ ಏನೇ ಇರಲಿ, ಸಂಸ್ಕಾರ – ಘಟಶ್ರಾದ್ಧ’ಗಳು, ಬ್ರಾಹ್ಮಣ್ಯದ ಬಗ್ಗೆ ಮರುಕ ಬರುವಂತೆ ಮಾಡಿ, ನಮ್ಮ ಅಸಹನೆಯನ್ನು ಕಡಿಮೆ ಮಾಡಿದವು. ಅದರೊಂದಿಗೆ, ನಮ್ಮ ಎದುರಿಗೆ ತಲೆ ಬೋಳಿಸಿಕೊಂಡು, ಕೆಂಪು ಸೀರೆ ಉಟ್ಟ ಎಳೆಯ ವಿಧವೆಯರು, ಮರುಕ ಹುಟ್ಟಿಸುವಂತಿದ್ದವು. ಇವೆಲ್ಲಾ, ಬ್ರಾಹ್ಮಣ್ಯ ಪ್ರತಿನಿಧಿಸುವ ಜೀವವಿರೋಧಿ ವಿರೋಧಾಭಾಸ; ಇವೆಲ್ಲವನ್ನೂ ಪ್ರಾತಿನಿಧಿಕವಾಗಿ ನೋಡುವ ಅನಂತಮೂರ್ತಿಯವರ ಕತೆ, ಕಾದಂಬರಿಗಳು!

    ‌ಈಗ ತಿರುಗಿ ನೋಡಿದಾಗ, ತನ್ನನ್ನು ಕೊರೆಯುತ್ತಿರವ ಸಂಗತಿಗಳನ್ನು ಹೊರಹಾಕುವ ಧಾವಂತದಲ್ಲಿ, ಅನಂತಮೂರ್ತಿಯವರು ಇದ್ದರೆ? ಹಾಗಾಗಿ, ಆಗ ಕಂಡಿರದ ಹಲವು ನ್ಯೂನತೆಗಳು ಇಂದು ಕಾಣುತ್ತಿವೆಯೇ?

    ‌ವಸಂತ ಬನ್ನಾಡಿಯವರು ಶೋಧಿಸದಂತೆ, ಈ ಕತೆ-ಕಾದಂಬರಿಗಳ ಮಿತಿಯೂ ಇರಬಹುದು.

Leave a Reply

Your email address will not be published. Required fields are marked *