

ಮುರಳಿ ಅಭಿನಯದ ಮದಗಜ ಚಿತ್ರದ ಟ್ರೈಲರ್
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷಿತ ಮದಗಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ
ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಯವರನ್ನು ನೋಡಿ ನಕ್ಕಿದ್ದವರು, ಈ ಸಿನಿಮಾ ನೋಡಿ ಗಂಭೀರವದನ ತಾಳುವುದರಲ್ಲಿ ಸಂಶಯವೇ ಇಲ್ಲ. ತಾವು ಸೀರಿಯಸ್ ಆಕ್ಟರ್ ಅಂಡ್ ಡೈರೆಕ್ಟರ್ ಎನ್ನುವುದನ್ನು ರಾಜ್ ಬಿ. ಶೆಟ್ಟಿ ಈ ಸಿನಿಮಾ ಮೂಲಕ ಸಾಬೀತುಪಡಿಸಿದ್ದಾರೆ.


ವಿಮರ್ಶೆ: ಹರ್ಷವರ್ಧನ್ ಸುಳ್ಯ
ಒಂದೇ ಮಾತಿನಲ್ಲಿ ಸಿನಿಮಾ ವಿಮರ್ಶೆ ಮುಗಿಸಬೇಕೆಂದರೆ ‘ಇಡೀ ಬ್ರಹ್ಮಾಂಡವನ್ನೇ ತನ್ನಲ್ಲಿ ಹುದುಗಿಸಿಕೊಂಡ ಸಿನಿಮಾ ‘ಗರುಡ ಗಮನ ವೃಷಭ ವಾಹನ’.
ಈ ಸಿನಿಮಾದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂವರೂ ಇದ್ದಾರೆ. ನಾರದನೂ ಇದ್ದಾನೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಸಿನಿಮಾದಲ್ಲಿ ಇನ್ನಷ್ಟು ಪುರಾಣ ಪಾತ್ರಗಳ ಛಾಯೆಯನ್ನು ಕಾಣುವುದರಲ್ಲಿ ಸಂಶಯವಿಲ್ಲ. ಗರುಡ ಗಮನ ವೃಷಭ ವಾಹನ- basically ಈ ಸಿನಿಮಾದ ಶೀರ್ಷಿಕೆ ಹರಿಹರನನ್ನು ಸೂಚಿಸುತ್ತದೆ. ಅಂದರೆ ವಿಷ್ಣು ಮತ್ತು ಶಿವ. ವಿಷ್ಣು ಕಾಯುವವನಾದರೆ (protector), ಶಿವ ತೆಗೆಯುವವನು (destroyer).https://imasdk.googleapis.com/js/core/bridge3.489.0_en.html#goog_795532649https://imasdk.googleapis.com/js/core/bridge3.489.0_en.html#goog_795532650https://imasdk.googleapis.com/js/core/bridge3.489.0_en.html#goog_795532653https://imasdk.googleapis.com/js/core/bridge3.489.0_en.html#goog_795532655
ಸೃಷ್ಟಿಯ ಲಯ ಇವರಿಬ್ಬರ ಮೇಲೆ ನಿಂತಿದೆ. ವಿಷ್ಣು ಮತ್ತು ಶಿವ ಇಬ್ಬರೂ ತಮ್ಮ ಜವಾಬ್ದಾರಿಗಳನ್ನು (role) ಅದಲು ಬದಲು ಮಾಡಿಕೊಂಡರೆ ಏನಾಗುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ. ಇರಲಿ, ಈಗ ಪುರಾಣದ ರೆಫರೆನ್ಸು ಬಿಟ್ಟು ನೇರವಾಗಿ ಸಿನಿಮಾಗೆ ಬರೋಣ. ಸಿನಿಮಾದಲ್ಲಿ ಶಿವ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ, ಪೊಲೀಸ್ ಬ್ರಹ್ಮಯ್ಯ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಗೋಪಾಲಕೃಷ್ಣ ಅವರು ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯಾಂಡ್ ಮಾಸ್ಟರ್ ಆಗಿ ಚೆನ್ನಾದ ಅಭಿನಯ ನೀಡಿದ್ದರು. ಈ ಸಿನಿಮಾದಲ್ಲೂ ಅವರ ಅಭಿನಯ ಚಾತುರ್ಯ ಮುಂದುವರಿದಿದೆ.
ಮೊದಲ ದೃಶ್ಯದಿಂದಲೇ ಹಿಡಿತ
ಮೊದಲ ದೃಶ್ಯದಿಂದಲೇ ಸಿನಿಮಾ ಪ್ರೇಕ್ಷಕನ ಮೇಲೆ ಹಿಡಿತ ಸಾಧಿಸುತ್ತದೆ. ಕಡೆಯವರೆಗೂ ಪ್ರೇಕ್ಷಕನ ಗಮನ ಬೇರೆಡೆ ಹರಿಯದಂತೆ ಅಟೆನ್ಷನ್ ಕಾಪಾಡಿಕೊಳ್ಳುವುದು ಸಿನಿಮಾದ ಚಿತ್ರಕಥೆಯ ಹೆಗ್ಗಳಿಕೆ. ಇದುವರೆಗೂ ಒಂದು ಮೊಟ್ಟೆಯ ಕಥೆಯ ಮೂಲಕ ಹಾಸ್ಯ ನಟರಾಗಿ ಕನ್ನಡಿಗರಿಗೆ ಪರಿಚಯವಾಗಿದ್ದ ರಾಜ್ ಬಿ. ಶೆಟ್ಟಿ ಅವರು ತಾವು ಎಂಥಾ ಸೀರಿಯಸ್ ಆಕ್ಟರ್ ಎನ್ನುವುದನ್ನು ಈ ಸಿನಿಮಾದ ಮೂಲಕ ಸಾಬೀತುಪಡಿಸಿದ್ದಾರೆ.
ಎಪಿಕ್ ಕೌ ಬಾಯ್ ಸಿನಿಮಾ good bad uglyಯಲ್ಲಿ ಸಂಭಾಷಣೆಯೊಂದು ಬರುತ್ತದೆ- when you are going to shoot, shoot. don’t talk. ಅಂದರೆ ಯಾರಿಗಾದರೂ ಶೂಟ್ ಮಾಡಬೇಕೆಂದಿದ್ದರೆ ಮೊದಲು ಶೂಟ್ ಮಾಡು. ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡಬೇಡ ಎಂದು. ಈ ಮಾತು ಸಿನಿಮಾದಲ್ಲಿನ ರಾಜ್ ಬಿ. ಶೆಟ್ಟಿ ಪಾತ್ರಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ಸೈಲೆಂಟ್ ಕಿಲ್ಲರ್ ಪಾತ್ರಕ್ಕೆ ಸಂಪೂರ್ಣ ನ್ಯಾಯವನ್ನು ಅವರು ಒದಗಿಸಿದ್ದಾರೆ. ಕೊಲ್ಲಲು ಮನಸು ಮಾಡಿದಾಕ್ಷಣ ದೂಸ್ರಾ ಮಾತೇ ಇಲ್ಲ, ಕಚಕ್.
ಅಂಡರ್ ಆರ್ಮ್ ಕ್ರಿಕೆಟ್
ಸೀನೊಂದರಲ್ಲಿ ರಿಷಬ್ ರನ್ನು ಕೊಲ್ಲಲು ಪುಂಡರ ತಂಡ ಮುಂದಾಗುತ್ತದೆ. ತನ್ನನ್ನು ಸುತ್ತುವರಿದ ಎಳೆ ವಯಸ್ಸಿನ ಪುಂಡರನ್ನು ರಿಷಬ್ ಎದುರುಗೊಳ್ಳುವ ರೀತಿ, ಅವರನ್ನು ಹೆದರಿಸುವ at a same time ಕೆಣಕುವ ಪರಿಯನು ನೋಡುವುದೇ ಚೆಂದ. ಸಿನಿಮಾದ ಸೀನ್ ಗಳು ಅತ್ಯಂತ ಸಹಜವಾಗಿ ಮೂಡಿಬಂದಿದೆ.
ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಬಹಳವೇ ಫೇಮಸ್. ಕರಾವಳಿಯ ಪ್ರತಿಯೊಬ್ಬರೂ ಅದರ ಜೊತೆ ಕನೆಕ್ಟ್ ಮಾಡಿಕೊಳ್ಳಬಲ್ಲರು. ಅಲ್ಲಿ ನಡೆಯುವ ಜಿದ್ದು, ರಾಜಕೀಯವನ್ನು ರಾಜ್ ಬಿ. ಶೆಟ್ಟಿ ತೆರೆ ಮೇಲೆ ಬಹಳ ಚೆನ್ನಾಗಿ ತೋರ್ಪಡಿಸಿದ್ದಾರೆ. ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಅಭಿನಯ ಕುರಿತಾಗಿ ಅಂಡರ್ ಆರ್ಮ್ ಪಂದ್ಯಾವಳಿಯ ಕಾಮೆಂಟರಿ ಭಾಷೆಯಲ್ಲಿಯೇ ಹೇಳುವುದಾದರೆ ‘ಅಮೋಘ ಬ್ಯಾಟಿಂಗ್, ಚೆಂಡು ಅಂಕಣದಿಂದ ಹೊರಕ್ಕೆ!’
ಎಪಿಕ್ ಮತ್ತು ಕ್ಲಾಸಿಕ್ ಗುಣ
‘ಗ್ಯಾಂಗ್ ಆಫ್ ವಸೇಪುರ್’ ಎನ್ನುವ ಬಾಲಿವುಡ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಂಡಿತ್ತು. ಅದರಲ್ಲಿ ಎರಡು ರೌಡಿಗಳ ನಡುವಿನ ವೈಷಮ್ಯವನ್ನು ಗ್ರಾಸ್ ರೂಟ್ ಮಟ್ಟದಿಂದ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಮಾಡಿದ್ದರು. ಹುಟ್ಟಿನಿಂದ ಸಾವಿನ ತನಕದ ರೌಡಿಯೊಬ್ಬನ ಜೀವನಗಾಥೆಯನ್ನು ಆ ಸಿನಿಮಾದಲ್ಲಿ ವಿಸ್ತೃತವಾಗಿ ತೋರಿಸಲಾಗಿತ್ತು. ಆ ಬಗೆಯ ಕಥಾ ನಿರೂಪಣಾ ಶೈಲಿಯಿಂದಲೇ ಸಿನಿಮಾಗೆ epic, classic ಗುಣ ಪ್ರಾಪ್ತವಾಗಿತ್ತು. ಅಂಥದ್ದೇ ಪ್ರಯತ್ನವನ್ನು ರಾಜ್ ಬಿ. ಶೆಟ್ಟಿ ತಂಡ ಈ ಸಿನಿಮಾ ಮೂಲಕ ಮಾಡಿದೆ. ಚಿತ್ರದ ಕಥೆ ನಡೆಯುವುದು ಮಂಗಳಾದೇವಿ ಎನ್ನುವ ಕರಾವಳಿ ಪ್ರದೇಶದ ಕಾಲ್ಪನಿಕ ಊರಿನಲ್ಲಿ. ಕಥಾ ನಾಯಕರು ಹರಿ ಮತ್ತು ಶಿವ. ಅನಾಥನಾಗಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ ಬಾಲಕ ಶಿವನನ್ನು ಹರಿಯ ತಾಯಿಯೇ ಕರೆ ತಂದು ಸಾಕುತ್ತಾಳೆ. ಹರಿ ಶಿವ ಇಬ್ಬರೂ ಜೊತೆಯಾಗಿ ಬೆಳೆಯುತ್ತಾರೆ.
ಪೇಪರ್ ವೇಯ್ಟ್ ಆಯುಧ
ಶಿವನ ಹಿನ್ನೆಲೆ ಯಾರಿಗೂ ಗೊತ್ತಿಲ್ಲ. ಆದ ಕಾರಣ ಅವನ ಬಗ್ಗೆ ನೂರಾರು ಕತೆಗಳು ಚಾಲ್ತಿಯಲ್ಲಿದ್ದವು. ಆತನ ಹೆತ್ತ ತಾಯಿ ಲಾರಿ ಡ್ರೈವರ್ ಜೊತೆ ಸಂಬಂಧ ಇಟ್ಟುಕೊಂಡಿದ್ದು ಅವನೊಡನೆ ಬಾಳುವ ಸಲುವಾಗಿ ಬೇಡದ ಮಗನನ್ನು ಸಾಯಿಸುವ ಯತ್ನ ಮಾಡಿದ್ದಳು ಎನ್ನುವುದು ಆ ಕಥೆಗಳಲ್ಲೊಂದು. ಅವ ಡಿಸ್ಟರ್ಬ್ಡ್ ಮನಸ್ಥಿತಿಯವನು, ಮಾತು ಯಾವತ್ತೂ ಕಮ್ಮಿ. ಯಾರೇನೇ ಅಂದರೂ, ಹೊಡೆದರೂ ಬಡಿದರೂ ಹಿಂಸಿಸಿದರೂ ಮಾತನಾಡಲೊಲ್ಲ. ಅವನಿಗೆ ಹರಿ ಎಂದರೆ ಪ್ರಾಣ. ಆ ವಿಚಾರ ಹರಿಗೆ ತಿಳಿದಿದ್ದು ಬೆಳೆದು ದೊಡ್ಡವರಾದ ಮೇಲೆಯೇ.
ಶಿವ, ಹರಿಯನ್ನು ಎಷ್ಟು ಹಚ್ಚಿಕೊಂಡಿದ್ದಾನೆ ಎನ್ನುವುದು ಇಡೀ ಮಂಗಳಾದೇವಿ ಊರಿಗೇ ಗೊತ್ತಾಗಲು ಆ ಒಂದು ಘಟನೆ ಕಾರಣವಾಗುತ್ತದೆ. ಹರಿ, ತಾನು ಕೊಟ್ಟಿದ್ದ ಸಾಲ ವಾಪಸ್ ಕೇಳಲು ಹೋದಾಗ ವೈನ್ ಸ್ಟೋರ್ ಮಾಲೀಕನೊಬ್ಬ ಪಿಸ್ತೂಲ್ ತೋರಿಸಿ ಧಮ್ಕಿ ಹಾಕುತ್ತಾನೆ. ಹೊರಗೆ ತನ್ನ ಪಾಡಿಗೆ ನಿಂತಿದ್ದ ಶಿವನಿಗೆ ವೈನ್ ಸ್ಟೋರಿನ ಟಿಂಟೆಡ್ ಗಾಜಿನೊಳಗಿಂದ ಆ ದೃಶ್ಯ ಕಣ್ಣಿಗೆ ಬೀಳುತ್ತದೆ. ಅಷ್ಟೇ. ಮೈಮೇಲೆ ದೇವರು ಬಂದವನಂತೆ ಒಳಗೆ ನುಗ್ಗುವ ಶಿವ ‘ಬ್ಯಾವರ್ಸಿ’ ಎನ್ನುತ್ತಾ ಟೇಬಲ್ ಮೇಲಿದ್ದ ಪೇಪರ್ ವೈಟ್ ನಿಂದ ಧಮ್ಕಿ ಹಾಕಿದವನ ತಲೆಗೆ ಹೊಡೆದು ಕೆಳಕ್ಕುರುಳಿಸುತ್ತಾನೆ. ಬಿದ್ದವನ ಪ್ರಾಣಪಕ್ಷಿ ಹಾರಿಹೋದರೂ ಶಿವ ಮಾತ್ರ ಪೇಪರ್ ವೇಯ್ಟ್ ನಿಂದ ಚಚ್ಚುವುದನ್ನು ನಿಲ್ಲಿಸಿಲ್ಲ. ಗೋಡೆ ಮೇಲೆಲ್ಲಾ ರಕ್ತ ಪಿಚಕಾರಿಯಂತೆ ಚಿಮ್ಮುತ್ತದೆ. ಇಬ್ಬರೂ ಮಂಗಳಾದೇವಿಯ ಭೂಗತಲೋಕದೊಳಕ್ಕೆ ಪ್ರವೇಶವಾಗಲು ಈ ಒಂದು ಘಟನೆ ಕಾರಣವಾಗುತ್ತದೆ.
ಹರಿ ಕ್ಲಾಸು, ಶಿವ ಮಾಸು
ಊರಲ್ಲಿದ್ದವರು ಹರಿ ಶಿವ ಇಬ್ಬರಿಗೂ ಹೆದರುತ್ತಿದ್ದರಾದರೂ ಅದಕ್ಕೆ ಮುಖ್ಯ ಕಾರಣ ಶಿವನೇ ಆಗಿದ್ದ. ಹರಿಯ ಕುರಿತಾಗಿ ಒಂದು ಕೆಟ್ಟ ಮಾತನಾಡಿದರೂ ಶಿವ ಸಹಿಸುತ್ತಿರಲಿಲ್ಲ ಮತ್ತು ಅವರನ್ನು ಉಳಿಸುತ್ತಿರಲಿಲ್ಲ. ಶಿವನನ್ನು ಸಮಾಧಾನಿಸುವ ಕೆಲಸ ಹರಿಯದು. ಹರಿ, ಸಂಭಾವಿತ, ಗೌರವಾನ್ವಿತ. ದುಡ್ಡು, ಪ್ರತಿಷ್ಠೆ, ಪ್ರಭಾವಿ ವ್ಯಕ್ತಿಗಳೊಡನೆ ಒಡನಾಟ ಅವನಿಗೆ ಬೇಕು. ಆದರೆ, ಶಿವ ಹಾಗಲ್ಲ ಹರಕಲು ಶರ್ಟು, ಪಂಚೆ ತೊಟ್ಟುಕೊಂಡು ಮೈದಾನದಲ್ಲಿ ಮಕ್ಕಳೊಡನೆ ಅಂಡರ್ ಆರ್ಮ್ ಕ್ರಿಕೆಟ್ ಆಡುವಾತ. ಅವರಿಬ್ಬರ ನಡುವಿನ ವ್ಯತ್ಯಾಸ ಥೇಟ್ ತಿರುಪತಿ ವೆಂಕಟೇಶ್ವರನಿಗೂ ಗವಿ ಗಂಗಾಧರೇಶ್ವರನಿಗೂ ಇರುವಷ್ಟೇ ವ್ಯತ್ಯಾಸ. ಒಬ್ಬ ದೇವರು ಗುಡ್ಡದ ಮೇಲೆ ಶ್ರೀಮಂತಿಕೆಯಂದ ನೆಲೆಸಿದ್ದರೆ, ಇನ್ನೊಬ್ಬ ದೇವರು ಭೂಮಿಯಡಿ ಕತ್ತಲಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಸಿಂಪಲ್ಲಾಗಿ ಹೇಳುವುದಾದರೆ ಹರಿ ಕ್ಲಾಸು, ಶಿವ ಮಾಸು. ಸಿರಿವಂತಿಕೆ ಮತ್ತು ಬಡತನ ಎರಡರ ನಡುವಿನ ವ್ಯತ್ಯಾಸಗಳನ್ನು ಸಿನಿಮಾ ಸೂಚ್ಯವಾಗಿ ಹೇಳಲು ಪ್ರಯತ್ನಿಸುತ್ತದೆ. ಅವರಿಬ್ಬರ ನಡುವಿನ ಕಾಂಟ್ರಾಸ್ಟೇ ಸಿನಿಮಾಗೆ ಅಂತ್ಯ ಹಾಡುತ್ತದೆ.
ಚಿತ್ರಕಥೆ ಮತ್ತು ಕ್ಯಾರೆಕ್ಟರೈಸೇಷನ್
ಸಿನಿಮಾದ ಚಿತ್ರಕಥೆ ಬಗ್ಗೆ ಹೇಳುವುದಾದರೆ ನೋ ನಾನ್ ಸೆನ್ಸ್. ತುಂಬಾ ಕ್ರಿಸ್ಪ್ ಆಗಿಯೂ ಮೊನಚಾಗಿಯೂ ಇದೆ. ಕಥೆಗೆ ಸಂಬಂಧಪಡದ ಯಾವುದೇ ಅಂಶವನ್ನು ಸಿನಿಮಾದಲ್ಲಿ ತುರುಕಲಾಗಿಲ್ಲ. ಹಾಡುಗಳೂ ಅಷ್ಟೆ ಚಿತ್ರಕಥೆಯ ಭಾಗವಾಗಿ ಕಾರ್ಯ ನಿರ್ವಹಿಸಿದೆ. ಪ್ರತಿ ದೃಶ್ಯ ಮೊನಚಾಗಿ ಬಂದಿರುವುದರ ಶ್ರೇಯ ಸಿನಿಮೆಟೊಗ್ರಾಫರ್ ಮತ್ತು ಸಂಕಲನ ಎರಡೂ ಹೊಣೆಗಲನ್ನು ನಿಭಾಯಿಸಿರುವ ಪ್ರವೀಣ್ ಶ್ರಿಯಾನ್ ಅವರಿಗೆ ಸಲ್ಲಬೇಕು. ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಪಾತ್ರಗಳ characterization.
ಮುಖ್ಯ ಪಾತ್ರಗಳಾದ ಹರಿ, ಶಿವ, ಬ್ರಹ್ಮಯ್ಯ ಅಲ್ಲದೆ ಎಂ ಎಲ್ ಎ, ಕ್ರಿಕೆಟ್ ಆಡುವ ಹುಡುಗರು ಸೇರಿದಂತೆ ಸಣ್ಣ ಸಣ್ಣ ಪಾತ್ರಗಳ ಪೋಷಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಅದಕೊಂದು ಉದಾಹರಣೆ- ಶಿವನಿಗೊಂದು ಅಭ್ಯಾಸ ತಾನು ಯಾರದೇ ಕೊಲೆ ಮಾಡಿದ ನಂತರ ಅವರ ಶೂ ಗಳನ್ನು ಧರಿಸುತ್ತಾನೆ. ಅದು ಅವನ ಪಾಲಿನ ಟ್ರೋಫಿ. ಅಂಗುಲಿಮಾಲ ಬೆರಳುಗಳ ಮಾಲೆ ತೊಟ್ಟಂತೆಯೇ ಇದು. ಒಮ್ಮೆ ಪ್ರಭಾವಿ ವ್ಯಕ್ತಿಯ ಸಂಬಂಧಿಕನೋರ್ವ ಹರಿಯ ಕುರಿತು ಕೆಟ್ಟದಾಗಿ ಮಾತಾಡುತ್ತಾನೆ. ಮುಂದಿನ ಸೀನ್ ನಲ್ಲಿ ಆತನ ಶೂ ಶಿವನ ಕಾಲಲ್ಲಿರುತ್ತದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಉನ್ಮಾದದಿಂದ ಕಿರುಚುತ್ತಾರೆ, ಶಿಳ್ಳೆ ಹಾಕುತ್ತಾರೆ. ದೂರದಲ್ಲಿ Rx100 ಬೈಕಿನ ಸದ್ದು ಕೇಳುತ್ತಲೇ ಥಿಯೇಟರ್ ನಲ್ಲಿ ಉನ್ಮಾದ ಏಳುತ್ತದೆ. ಒಟ್ರಾಶಿಯಾಗಿ ಮೇಕಪ್ಪೇ ಇಲ್ಲದೆ, ಪ್ರಾಪರ್ ಶೇವ್ ಕೂಡ ಮಾಡದೆ, ಮಾಸಿರುವ ಹಳೆಬಟ್ಟೆ, ಹವಾಯಿ ಚಪ್ಪಲಿ, ಮುಂಡು ಧರಿಸಿಕೊಂಡು Rx100 ಬೈಕಿನಲ್ಲಿ ಬರುವ ತೆಳ್ಳಗಿನ ನಾಯಕನೊಬ್ಬ ಕನ್ನಡ ಚಿತ್ರರಂಗಕ್ಕೆ ದೊರೆತಿದ್ದಾರೆ.
ಜಾಕ್ವಿನ್ ಫೀನಿಕ್ಸ್ ಮತ್ತು ಹುಲಿಕುಣಿತ
ಆರ್ಟ್ ಮತ್ತು ಮಾಸ್ ಸಿನಿಮಾಗಳ ಪರ್ಫೆಕ್ಟ್ ಮಿಶ್ರಣ ಗರುಡ ಗಮನ ವೃಷಭ ವಾಹನ. ಸಿನಿಮ್ಯಾಟಿಕ್ ಅನ್ನಿಸಿಕೊಳ್ಳಬೇಕಾದ ಎಲ್ಲಾ ಅಂಶಗಳೂ ಈ ಸಿನಿಮಾಗೆ ದಕ್ಕಿವೆ. ಒಂದು ಮನೆಯಲ್ಲಿ ಸಾವಾಗಿರುತ್ತದೆ. ಕೊಲೆಯ ಸಾವು. ಅದೇ ಮನೆಗೆ ಕೊಲೆ ಮಾಡಿದ ತಂಡವೂ ಹೋಗಿರುತ್ತದೆ. ಅಲ್ಲಿ ಭಜನೆ ಮಾಡುವವರು ‘ಯಾರಿಗೆ ಯಾರುಂಟು ಒಲವಿನ ಸಂಸಾರ ನಿಜವಲ್ಲಾ ಹರಿಯೇ’ ಹಾಡನ್ನು ಭಜನಾತ್ಮಕವಾಗಿ ಹಾಡುತ್ತಿರುತ್ತಾರೆ. ಸಾವಿನ ದೃಶ್ಯವನ್ನು ಇದಕ್ಕಿಂತ classy ಆಗಿ ತೋರಿಸಲು ಸಾಧ್ಯವಿಲ್ಲವೇನೋ. cinematic ಮತ್ತು classinessಗೆ ಅದಕ್ಕೂ ಮಿಗಿಲಾದ ಉದಾಹರಣೆಯೆಂದರೆ ಹುಲಿಕುಣಿತದ ದೃಶ್ಯ.
ಹಾಲಿವುಡ್ ನ ಜೋಕರ್ ಸಿನಿಮಾದಲ್ಲಿ ನಟ ಜಾಕ್ವಿನ್ ಫೀನಿಕ್ಸ್ ಮೆಟ್ಟಿಲಿನಿಂದ ತನ್ಮಯರಾಗಿ ಕುಣಿದುಕೊಂಡು ಬರುವ ದೃಶ್ಯ ಜಗದ್ವಿಖ್ಯಾತವಾಗಿತ್ತು. ಇಂಪ್ರೊವೈಸೇಷನ್ ಗೆ ಹೆಸರಾದ ಜಾಕ್ವಿನ್ ಫೀನಿಕ್ಸ್ ಆ ದೃಶ್ಯದಲ್ಲಿ ನಿರ್ದೇಶಕ ಹೇಳಿದಂತೆ ನರ್ತಿಸದೇ ಮೈಮರೆತು ತನಗೆ ತೋರಿದಂತೆ ನರ್ತಿಸಿದ್ದರು. ಅದೇ ದೃಶ್ಯ ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಅದೇ ಸುಯೋಗ ಈ ಸಿನಿಮಾಗೂ ಒದಗಿಬರಲು ರಾಜ್ ಶೆಟ್ಟಿಯವರ ಹುಲಿಕುಣಿತ ಕಾರಣವಾಗಿದೆ. ಭಾವತೀವ್ರತೆ, ಪರವಶತೆ ಈ ದೃಶ್ಯದಲ್ಲಿ ವ್ಯಕ್ತವಾಗಿರುವುದೇ ಈ ದೃಶ್ಯ ಉತ್ತಮವಾಗಿ ಮೂಡಿಬರಲು ಕಾರಣವಾಗಿದೆ. ಹುಲಿಕುಣಿತವೇ ಈ ಶಿವನ ತಾಂಡವ ನೃತ್ಯ!
ಎದೆ ಝಲ್ಲೆನ್ನಿಸುವ ಸಂಗೀತ
ಮಿದುನ್ ಮುಕುಂದನ್ ಅವರ ಸಂಗೀತಕ್ಕೆ ಒಂದು ಸಲಾಮು ಸಲ್ಲಿಸಲೇ ಬೇಕು. ಕೇವಲ ಒಂದು humming ಸೌಂಡಿನಿಂದಲೂ ಪ್ರೇಕ್ಷಕರ ಎದೆಯಲ್ಲಿ ಭೀತಿ ಸೃಷ್ಟಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಿನಿಮಾ ಮುಗಿದ ನಂತರವೂ ಪ್ರೇಕ್ಷಕರನ್ನು ಅದರ ಗುಂಗಲ್ಲೇ ಇಡುವಲ್ಲಿ ಅವರ ಸಂಗೀತ ಯಶಸ್ವಿಯಾಗಿದೆ. ಸಿನಿಮಾದ ಶುರುವಿನಲ್ಲಿ ಕ್ರೆಡಿಟ್ ರೋಲ್ ಆಗುವಾಗ ಪರದೆ ಮೇಲೆ ಮಿದುನ್ ಕಾಣಿಸಿಕೊಂಡಿದ್ದಾರೆ.
ಕನ್ನಡ ಪ್ರೇಕ್ಷಕರ ಮಟ್ಟಿಗೆ ಭೂಗತ ಲೋಕದ ಸಿನಿಮಾಗಳು ಎಂದರೆ ಲಾಂಗು, ಮಚ್ಚು, ಗುಂಡಿನ ಮೊರೆತ, ಲವ್ವು, ಸೆಂಟಿಮೆಂಟು ಎಂದಿತ್ತು. ಆದರೆ ಈ ಸಿನಿಮಾ ಅವೆಲ್ಲದರಿಂದ ಅಂತರ ಕಾಯ್ದುಕೊಳ್ಳುತ್ತದೆ. ಹಿಂಸೆಯನ್ನು, ರೌಡಿಸಂ ಅನ್ನು ವೈಭವೀಕರಿಸಲಾಗಿಲ್ಲ. ‘ಹಮ್ ಜಹಾ ಪೆ ಖಡೆ ಹೋತೆ ಹೆ, ಲೈನ್ ವಹೀಸೆ ಶುರು ಹೋತಿ ಹೆ’ ಎನ್ನುವ ಅಮಿತಾಭ್ ಬಚ್ಚನ್ ರ ಜನಪ್ರಿಯ ಡಯಲಾಗಿನಂತೆಯೇ ಗರುಡ ಗಮನ ವೃಷಭ ವಾಹನ ಸಿನಿಮಾ ಕನ್ನಡದಲ್ಲಿ ಹೊಸದೊಂದು ಲೈನನ್ನು ಸೃಷ್ಟಿಸಿದೆ. ಈ ಸಾಲಿನಲ್ಲಿ ಅದೆಷ್ಟು ಮಂದಿ ಹಿಂದುಗಡೆ ನಿಲ್ಲುತ್ತಾರೋ ಕಾದು ನೋಡಬೇಕು. (kpc)
