
+++++++++++ಈ ಬರಹ ಯಾರಿಗಾದರೂ ಉಪಯೋಗ ಆಗಬಹುದು ಎಂದು ಬರೆಯಬೇಕೆನಿಸಿತು. – nArAyN ravishankar

ಇದು ನನಗನ್ನಿಸಿದ್ದು. ಒದೊಂದು ಬಾರಿ ಹೆಣ್ಣು ಮಕ್ಕಳ, ಮುಟ್ಟು ಬಸಿರು, ಬಾಣಂತನಗಳ ನೋವು; ಆದಾದ ಮೇಲೆ ಬೆಳೆಯುವ ಮಕ್ಕಳನ್ನು ಅವರು ಮಾನಸಿಕ ಹಾಗೂ ದೈಹಿಕವಾಗಿ ಆರೈಕೆ ಮಾಡುವುದು; ಮನೆವಾರ್ತೆ ಹಾಗೂ ಮನೆಮಂದಿಯ ಆರೈಕೆ; ಎಲ್ಲರ ಊಟೋಪಚಾರಗಳು; ಇದರ ಮಧ್ಯೆ ಅವರ ಆರೋಗ್ಯ ಅವರೇ ನೋಡಿಕೊಳ್ಳುವುದು (ಇದಕ್ಕೆ ಅವರು ಕಾಳಜಿ ವಹಿಸುವುದಿಲ್ಲ). ಬೇರೆ ಯಾವ ಕೆಲಸವೂ ಬೇಡ. ಬರೀ ಬಟ್ಟೆ ಒಗೆಯುವುದು ಮತ್ತು ಪಾತ್ರೆ ತೊಳೆಯುವುದರಿಂದಲೇ ಹೆಣ್ಣುಮಕ್ಕಳ ಆರೋಗ್ಯ ಹದಗೆಡುತ್ತದೆ. ಕೈಬೆರಳುಗಳ ಸಣ್ಣಮೂಳೆಗಳು (knuckle ಗಳು) ಕಾಲಾಂತರದಲ್ಲಿ ಸವೆದು ಆಥ್ರಟೀಸ್ ಕೂಡಾ ಬರಬಹುದು …. … ಇವೆಲ್ಲಾ ನೋಡುತ್ತಿದ್ದರೆ, ಇವರು ಮದುವೆ ಆಗದೆ ಉಳಿದಿದ್ದರೇನೇ ಎಲ್ಲೋ ಇನ್ನೂ ಹೆಚ್ಚಿನ ಆರೋಗ್ಯ ಹಾಗೂ ಸಂತೋಷದಿಂದ ಇರುತ್ತಿದ್ದರೇನೋ ಅನಿಸಿಬಿಡುತ್ತದೆ. ಅವರಿಗೆ, ಮಾನಸಿಕವಾಗಿ ಒತ್ತಾಸೆ ನೀಡುವ ಪತಿ ಇಲ್ಲದಿದ್ದರಂತೂ ಅವರ ಅರ್ಧ ಆಯುಸ್ಸು ಮುಗಿದು ಹೋದ ಹಾಗೆಯೇ! ಚಂದನೆಯ ಅಲಂಕಾರ ಮಾಡಿಸಿ ಖುಷಿ ಖುಷಿಯಾಗಿ ಮದುವೆ ಮಾಡಿಕೊಳ್ಳುವುದು. ಮನೆಗೆ ಬಂದ ಮೇಲೆ ಒಂದು ಗೊಂಗಡಿ (ನೈಟಿ) ಹಾಕಿ ಜೀವನಪರ್ಯಂತ ಮನೆ ಕೆಲಸ ಮಾಡಿಸುವುದು. ಇದು ಅವರಿಗೆ ಅರ್ಥವಾಗುವ ಹೊತ್ತಿಗೆ ಬಹಳ ದೂರಾ ಸಾಗಿ ಬಂದು ಬಿಟ್ಟಿರುತ್ತಾರೆ.
ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿದ್ದಂತೆ ಆ ಕ್ಷಣಕ್ಕೆ ಸಿಡಿಮಿಡಿ ಮಾಡಿಕೊಂಡು ನನ್ನ ಕರ್ಮ ಇಷ್ಟೇನೇ ಅಂದುಕೊಂಡು ಸುಮ್ಮನಾಗುತ್ತಾರೆ.ಅದೇನೋ ಇಂದಿನ ಹೆಣ್ಣು ಮಕ್ಕಳ ದೈಹಿಕ ಶಕ್ತಿ ಹಾಗೂ ಕ್ಷಮತೆ ನಮ್ಮ ಮನೆಯ ಹಿರಿಯ ಹೆಂಗಸರಿಗೆ ಹೋಲಿಸಿದರೆ ತೀರಾ ಕಡಿಮೆ ಅನಿಸುತ್ತದೆ. Nucleus ಕುಟುಂಬಗಳು ಸಹ ಅದಕ್ಕೆ ಕಾರಣವೇನೋ? ಮನೆಯಲ್ಲಿ ವಯಸ್ಸಾದ ಹಿರಿಯ ಹೆಂಗಸರಿದ್ದರೆ ಕಿರಿಯರಿಗೆ ಕಾಲಕಾಲಕ್ಕೆ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿಗಳ ಬಗ್ಗೆ ಹೇಳುತ್ತಾರೆ ಹಾಗೂ ಸಮಯ ಸಂದರ್ಭಗಳಲ್ಲಿ ಕಿರಿಯರಿಗೆ ಸಹಾಯ ಮಾಡಿ ಅವರಿಗೆ ಮಾನಸಿಕ / ದೈಹಿಕವಾಗಿ ಒತ್ತಾಸೆಯಾಗಿ ಸಹ ನಿಲ್ಲುತ್ತಾರೆ. ಹಿರಿಯರಿಗೆ ಗೊತ್ತಿರುವ ಎಷ್ಟೊಂದು ಮನೆಮದ್ದುಗಳ ಜ್ಞಾನ ವರ್ಗಾವಣೆ ಆಗದೇ ನಶಿಸಿ ಹೋಗುತ್ತಿದೆ? ಇಂತಹಾ ವಿಷಯಗಳು ಹಲವಾರು ಸಂದರ್ಭಗಳಲ್ಲಿ ಹಿರಿಯರಿಂದ ಕಿರಿಯರಿಗೆ ವರ್ಗಾವಣೆ ಆಗುವುದಿಲ್ಲ. ಇದಕ್ಕೆಲ್ಲಾ ಕೂಡುಕುಟುಂಬಗಳ ಪರಿಕಲ್ಪನೆ ನಿದಾನವಾಗಿ ಮರೆಯಾಗುತ್ತಿರುವುದೇ ಕಾರಣವೇನೋ? ಈ ವಿದ್ಯೆಗಳು ಗಂಡು ಮಕ್ಕಳಿಗೆ ವರ್ಗಾವಣೆ ಆಗುವುದಂತೂ ಬಹಳ ಅಪರೂಪ. ಹೆಣ್ಣುಮಕ್ಕಳಲ್ಲಿ ಮೂತ್ರದ ಸಮಸ್ಯೆ ಸಾಮಾನ್ಯವಾಗಿ ಹೆಚ್ಚು. ಅನೇಕರು, ಸಾಮಾಜಿಕ ಕಾರಣಗಳಿಂದಾಗಿ ಮೂತ್ರ ತಡೆ ಹಿಡಿಯುತ್ತಾರೆ. ಕೆಲವು ವೇಳೆ, ಮಕ್ಕಳಾದ ಮೇಲೆ ಮೂತ್ರದ ಸಮಸ್ಯೆ ಅವರಿಗೆ ಉಲ್ಭಣಿಸುತ್ತದೆ. ಸರಾಗವಾಗಿ ಮೂತ್ರ ಮಾಡುವ ಹೆಂಗಸರನ್ನು ನೋಡಿ ಮೂತ್ರದ ಸಮಸ್ಯೆ ಇರುವ ಹೆಂಗಸರು ಅವರ ಸ್ಥಿತಿಯ ಬಗ್ಗೆ ಅಲವತ್ತುಗೊಳ್ಳುತ್ತಾರೆ.
ಮೂತ್ರದ ಸೋಂಕು ಹೆಚ್ಚಾದಾಗ ರಾತ್ರಿಯೆಲ್ಲಾ ಚಳಿಜ್ವರ ಬಂದು ಅವರ ದೇಹ, ಸರಿಯಾದ ಬೆಡ್ಡಿಂಗ್ ಇಲ್ಲದ ಡೀಸಲ್ ಇಂಜಿನ್ ಗದಗುಟ್ಟುವಂತೆ, ಕಂಪಿಸುತ್ತಿರುತ್ತದೆ. ಮನೆಯ ಯಜಮಾನರಿಗೆ ಏನು ಮಾಡಬೇಕೆಂದು ತೋಚದೆ ತಲೆಮೇಲೆ ಕೈ ಇಟ್ಟುಕೊಂಡು ತಳ ಸುಟ್ಟ ಬೆಕ್ಕಿನಂತೆ ಮನೆಯೆಲ್ಲಾ ಶತಪಥ ಹಾಕುವುದನ್ನು ಬಿಟ್ಟು ಏನೂ ಮಾಡಲು ಆಗುವುದಿಲ್ಲ. ಮೂತ್ರದ ಸೋಂಕು long run ನಲ್ಲಿ ಕಿಡ್ನಿಗಳನ್ನೂ ಸಹ ಹಾಳು ಮಾಡಬಹುದು. ಹೃದಯದ ತೊಂದರೆ ಆದಾಗ ಸಕಾಲದಲ್ಲಿ ವೈದ್ಯರಲ್ಲಿ ಹೋದರೆ, ಸುಲಭವಾಗಿ ರಿಪೇರಿ ಮಾಡಿಸಿಕೊಳ್ಳಬಹುದು. ಆದರೆ, ಕಿಡ್ನಿ ತೊಂದರೆ ಆದರೆ ಅದರ ಪರಿಣಾಮಗಳು ಗಂಭೀರ. ಸದ್ಯ, ಯಾರಿಗೂ ಹೃದಯ ಅಥವಾ ಕಿಡ್ನಿಗಳ ತೊಂದರೆ ಆಗದಿರಲಿ.ನನ್ನಾಕೆಗೆ UTI (Urinary track inspection) ಆಗಿ ಪಡಬಾರದ ಭಾದೆ ಪಟ್ಟಳು. ಮಲ್ಲೇಶ್ವರಂನಾ ಮಣಿಪಾಲ್ ಆಸ್ಪತ್ರೆಯ ಯುರೋಲಾಜಿಸ್ಟ್ ಡಾ: ಆನಂದ್ ಬಳಿ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸಿದ ಮೇಲೆ ಗುಣ ಕಂಡಿತು. ಆ ಡಾಕ್ಟರ್ ಒಂದು ಸರ್ಜರಿ ಮಾಡಬೇಕೆಂದರು. ಮಲ್ಲೇಶ್ವರಮ್ ನಾ ಮಣಿಪಾಲ್ ನಲ್ಲಿ ತೆಗೆದುಕೊಳ್ಳುವ ಚಿಕಿತ್ಸೆಗೆ ಸರ್ಕಾರಿ ಕಚೇರಿಯಲ್ಲಿ ಮರುಪಾವತಿ ಇಲ್ಲ. ಮಲ್ಲಿಗೆಯಲ್ಲಿ ಮಾಡಿಸೋಣ ಅಂದೆ. ಎಲ್ಲಾದರೂ ಸರಿ ಎಂದಳು. ಮಲ್ಲಿಗೆಯಲ್ಲಿ ಸರ್ಜರಿ ಮಾಡಿಸಿದ 4-5 ದಿನಕ್ಕೆ ಪುನ: ತೊಂದರೆ ಮರುಕಳಿಸಿತು. ಪುನ:, ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆ. ನನ್ನಾಕೆ ಇಷ್ಟೂ ದಿನ ಒಬ್ಬಳೇ ಆ ಆಸ್ಪತ್ರೆಗೆ ಹೋಗಿಬರುತ್ತಿದ್ದಳು. ಸರ್ಜರಿ ಪ್ರಯುಕ್ತ ನಾನೂ ಹೋದೆ. ಆಕೆಯನ್ನು ಆಸ್ಪತ್ರೆಗೆ ಸೇರಿದಾಗಲೆಲ್ಲಾ ರಾತ್ರಿ-ಹಗಲು ನಾನೇ ಆಕೆಯೊಂದಿಗೆ ಇರುತ್ತಿದುದು. ಇನ್ ಪೇಷೆಂಟ್ ಆಗಿ ರೋಗಿ ಆಸ್ಪತ್ರೆ ಒಳಗೆ ಹೇಗೋ ಇರ್ತಾರೆ. ಅವರ ಅಟೆಂಡರ್ ಗಳದ್ದೇ ನಾಯಿಪಾಡು. ಒಂದು ಕಡೆ ಮನಸಿನ ಆತಂಕ. ಇನ್ನೊಂದು ಕಡೆ ದೈಹಿಕ ಶ್ರಮ. ಮತ್ತೊಂದು ಕಡೆ ಹಣಕಾಸಿನ ತೊಂದರೆ. ಯುರೋಲಾಜಿಸ್ಟ್ ಆದ ಡಾಕ್ಟರ್ ಆನಂದ್ ರವರನ್ನು ನಾನು ನೋಡಿದ್ದು ಅದೇ ಮೊದಲ ಬಾರಿ.
ಸ್ಥೂಲ ದೇಹ. ಹಾಕಿಕೊಂಡಿರುವ ಬಟ್ಟೆಬರೆ, ಮಾಡಿರೋ ಇನ್ ಶರ್ಟ್ ಅಸ್ತವ್ಯಸ್ತ. ಆಸ್ಪತ್ರೆಯಲ್ಲಿ ಸ್ಕೆತಾಸ್ಕೋಪಿನೊಂದಿಗೆ ನೋಡದಿದ್ದರೆ, ಅವರು ಡಾಕ್ಟರ್ ಅನಿಸುವುದೇ ಇಲ್ಲ. ಆದರೆ ಬಂಗಾರದ ಮನಸ್ಸು ಹಾಗೂ ಕೈಗುಣ. ಅವರಿಂದ ಸರ್ಜರಿ ಮಾಡಿಸಿಕೊಳ್ಳದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಅವರಿಗೆ ನನ್ನ ಮಡದಿಗೆ ಇದ್ದ ನಿಜವಾದ ಸಮಸ್ಯೆ ಏನೆಂಬುದು ಚೆನ್ನಾಗಿ ಗೊತ್ತಿತ್ತು. ಅವರ ಬೇಸರ ಕ್ಷಣ ಮಾತ್ರದ್ದು ಅಷ್ಟೇ. ಮಾರನೆಯ ದಿನಕ್ಕೇ ಪುನ: ಇನ್ನೊಂದು ಸರ್ಜರಿಯನ್ನು ನಿಗದಿಪಡಿಸಿದರು. ಸರ್ಜರಿಯನ್ನು ಸುಸೂತ್ರವಾಗಿ ನಡೆಸಿ, “ಆಸ್ಪತ್ರೆಯಲ್ಲಿ ಇನ್ನು ಇರುವುದು ಬೇಡ. ಅನಾವಶ್ಯಕ ಖರ್ಚು. ಯೂರಿನ್ ಬ್ಯಾಗ್ ಹಾಕಿ, ಡಿಸ್ ಚಾರ್ಜ್ ಮಾಡ್ತೀನಿ. ಎರಡು ದಿನ ಆದ ಮೇಲೆ ಬಂದು ತೆಗೆಸಿಕೊಳ್ಳಿ” ಎಂದು ಹೇಳಿದರು. ಇದಲ್ಲದೆ, dilation ಮಾಡಿಕೊಳ್ಳುವುದನ್ನು ಸಹ ಮಡದಿಗೆ ಹೇಳಿಕೊಟ್ಟರು.ಈಗ ನನ್ನ ಮಡದಿ ನೆಮ್ಮದಿಯಾಗಿದ್ದಾಳೆ.
ಕೊನೆ ಮಾತು. ಮಡದಿ ಮನೆಯಲ್ಲಿ ಸಿಡಿಮಿಡಿಗೊಂಡರೆ, ಸುಮ್ಮನಾಗಬೇಕು. ಅವರಿಗೆ ದೈಹಿಕ ಕ್ಷಮತೆ ಕಡಿಮೆ ಇದ್ದರೂ ಮಾನಸಿಕವಾಗಿ ಅಂದುಕೊಂಡ ಕೆಲಸವೆಲ್ಲಾ ಮಾಡಬೇಕು ಎನ್ನುವ ತುಡಿತ ಇರುತ್ತದೆ. ಕೆಲಸ ಆಗದಿದ್ದಾಗ ಕೋಪ ಮಾಡಿಕೊಳ್ಳುತ್ತಾರೆ. ಇದರೊಂದಿಗೆ, ಒಂದು ಕಡೆಯಿಂದ ಅವರು ಒಪ್ಪ ಮಾಡಿಕೊಂಡು ಬಂದರೆ, ಮನೆ ಗಂಡಸರು, ಅದಕ್ಕೆ ಬೆಲೆ ಇಲ್ಲದಂತೆ ಇನ್ನೊಂದು ಕಡೆಯಿಂದ ಹರಡಿಕೊಂಡು ಬರುವುದನ್ನು ಅವರು ಸಹಿಸುವುದಿಲ್ಲ. ಗಂಡು ಪ್ರಾಣಿ ಸಾಮಾನ್ಯವಾಗಿ, unorganized. ಜೊತೆಗೆ ಪ್ರಕೃತಿ ನೀಡಿರುವ ದೈಹಿಕ ಕಷ್ಟಗಳು ಸಹ ಅವರನ್ನು ಹೈರಾಣಾಗಿಸುತ್ತದೆ. ಮನೆಯ ಹೆಣ್ಣುಮಕ್ಕಳಿಗೆ, ಅವರು ಮಡದಿ-ತಾಯಿ-ಅಕ್ಕತಂಗಿ ಯಾರೇ ಆಗಿದ್ದರೂ ಗಂಡಸರು ಆದಷ್ಟೂ ಸಹಾಯ ಮಾಡಬೇಕು. ನಿಮ್ಮಾಕೆಯೇ ನೀವು ಕಷ್ಟದಲ್ಲಿದ್ದಾಗ ನಿಮಗೆ ಮರುಗುವುದು. ಬೇರಾರೂ ಖಂಡಿತಾ ಇಲ್ಲ. (-ಡಾ: ಆನಂದ್ ಯುರೋಲಾಜಿಸ್ಟ್:)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
