

ಚಿರಾಪುಂಜಿ, ಮೊಹ್ಸಿನ್ ರಾಮ್ ಗಳ ಬಗ್ಗೆ ತಿಳಿಯದವರಾರೂ ಇಲ್ಲ. ಒಂದು ಕಾಲದಲ್ಲಿ ಪ್ರಪಂಚದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಕಿರೀಟ ಹೊತ್ತಿದ್ದ ಚಿರಾಪುಂಜಿಯನ್ನು ಪದಚ್ಯುತಗೊಳಿಸಿ ಈಗ ಮೊಹ್ಸಿನ್ ರಾಮ್ ಅತಿ ಹೆಚ್ಚಿನ ವರ್ಪಾಭಿಷೇಕದ ಕಾರಣದಿಂದ ತಾನೇ ಪಟ್ಟಾಭಿಷಿಕ್ತನಾಗಿದೆ. ಆಗುಂಬೆ ಎಲ್ಲರಿಗೂ ಗೊತ್ತು. ಇದು ಕರ್ನಾಟಕದ ಚಿರಾಪುಂಜಿ. ತನ್ನ ಮೋಹಕ ಸೂರ್ಯಾಸ್ತಕ್ಕಾಗಿಯೂ ಜಗತ್ಪ್ರಸಿದ್ಧ. ಆದರೆ ಉತ್ತರ ಕನ್ನಡದ ನಿಲ್ಕುಂದದ ಬಗ್ಗೆ ಬಹಳ ಕೇಳಿಲ್ಲ. ಇದು ಉತ್ತರಕನ್ನಡದ ಮೊಹ್ಸಿನ್ ರಾಮ್ ಅಥವಾ ಉತ್ತರಕನ್ನಡದ ಆಗುಂಬೆ.


ಉತ್ತರಕನ್ನಡದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿಯ ತೆಂಗಿನ ಮರಗಳು ಬರಕ್ಕೆ ಬಲಿಯಾದಂತೆ ಮೂರ್ನಾಲ್ಕು ಗರಿಗಳನ್ನು ಮಾತ್ರ ಹೊತ್ತು ನಿಂತಿರುವುದನ್ನು ಕಾಣುತ್ತೀರಿ. ಇಂತಹ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬರವೇ ಎಂದು ಕೇಳಬೇಡಿ. ಅತಿಯಾದ ನೀರೂ ಸಸ್ಯಗಳಿಗೆ ಒಳ್ಳೆಯದಲ್ಲ. ಸಸ್ಯಗಳು ನೀರನ್ನು ಹೀರಿಕೊಳ್ಳಲು ಬೇರುಗಳಿಗೆ ಶಕ್ತಿ ಬೇಕು. ಅಂದರೆ ಅವು ನಿರಂತರ ಉಸಿರಾಡುತ್ತವೆ. ಮಣ್ಣಿನಲ್ಲಿ ಅತಿಯಾದ ನೀರು ನಿಂತರೆ ಅದು ಗಾಳಿಯನ್ನು ಹೊರದೂಡಿ ಬೇರಿನ ಉಸಿರುಗಟ್ಟಿಸುತ್ತದೆ. ಇದನ್ನು ಜೀವಭೌತಿಕ ಬರ (physiolocal drought) ಎಂದು ಕರಯುತ್ತೇವೆ.

ಈಗ ತಿಳಿಯಿತೇ ಶ್ರೀ ಪದ್ದತಿಯ ಭತ್ತ ಏಕೆ ಹೆಚ್ಚು ಇಳುವರಿ ನೀಡುತ್ತದೆಂದು.ನಿಲ್ಕುಂದದ ಸಮೀಪ ಹೆಬಳೆ ಗದ್ದೆ ಎಂಬ ಒಂದು ಊರು ಇದೆ. ಇಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯನ್ನು ಶಿಕ್ಷಕರೊಬ್ಬರು ತುಂಬಾ ಚನ್ನಾಗಿ ನಿರ್ವಹಿಸುತ್ತಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸದಾನಂದ ಸ್ವಾಮಿ ಹೇಳಿದ್ದರು. ನನ್ನ ಪ್ರವಾಸದ ವೇಳೆ ಆ ಶಾಲೆಯನ್ನು ಸಂದರ್ಶಿಸಿದ್ದೆ. ಇರುವುದು 15 ಮಕ್ಕಳು. ಒಂದನೆಯ ತರಗತಿಗೆ ಒಂದು ದಾಖಲಾತಿಯಾದರೆ 5 ನೆಯ ತರಗತಿಯ 7 ಮಕ್ಕಳು ಹೊರ ಹೋಗಿದ್ದರು. ಮುಂದಿನ ವರ್ಷ ಒಂದನೆಯ ತರಗತಿಗೆ 3 ಮಕ್ಕಳು ದಾಖಲಾಗುತ್ತಾರೆಂದು ಶಿಕ್ಷಕಿ ಶ್ರೀಮತಿ ಮುಕಾಂಬೆ ಶೆಟ್ಟಿ ತಿಳಿಸಿದರು ಎಲ್ಲ ಕೊಠಡಿಗಳನ್ನು ಸ್ವಚ್ಛವಾಗಿಡಲು ಅನುಕೂಲವಾಗುವಂತೆ ವಿಟ್ರಿಫೈಡ್ ಟೈಲ್ಸ್ ಹಾಕಿಸಿದ್ದಾರೆ. ಧೂಳು ರಹಿತ ಕಂಪ್ಯೂಟರ್ ಕೊಠಡಿ ನಿರ್ಮಿಸಿದ್ದಾರೆ. ಮಕ್ಕಳು ಒಳಗೆ ಹೋಗುತ್ತಿದ್ದ ಹಾಗೆ ಬಾಗಿಲು ತಾನಾಗಿ ಮುಚ್ಚಿಕೊಳ್ಳುತ್ತದೆ. ಒಂದನೆಯ ತರಗತಿಯ ಮಕ್ಕಳೂ ಕಂಪ್ಯೂಟರ್ ಆನ್ ಆಫ್ ಮಾಡುವುದಲ್ಲದೆ, ಚಿತ್ರ ಬರೆಯುವುದು, ಪದಗಳನ್ನು ಟೈಪ್ ಮಾಡುವುದನ್ನು ಮಾಡುತ್ತಾರೆ. ಕಂಪ್ಯೂಟರ್ ಏಕೆ ಧೂಳು ತಿನ್ನುತ್ತಿವೆ ಎಂದರೆ ಅದಕ್ಕೆ ಟೀಚರ್ ಇಲ್ಲ ಎನ್ನುವ ಶಿಕ್ಷಕರ ನಡುವೆ 4 ತರಗತಿಗಳನ್ನು ಬೋಧಿಸಿಕೊಂಡು ಎಲ್ಲ ಮಕ್ಕಳಿಗೂ ಕಂಪ್ಯೂಟರ್ ಪರಿಚಯಿಸುವ ಇವರು ಭಿನ್ನವಾಗಿ ಕಂಡರು.

ನನಗೆ ಮತ್ತೂ ಖುಷಿ ಕೊಟ್ಟುದು ನಲಿ ಕಲಿ ಕೊಠಡಿ. ಒಳಗೆ ಕಾಲಿಡುತ್ತಿದ್ದಂತೆ ಅಲ್ಲಿನ ಅಚ್ಚುಕಟ್ಟುತನ ಮನ ಸೆಳೆಯುತ್ತದೆ. ಸ್ವಚ್ಛವಾದ ನೆಲ. ಆಕರ್ಷಕ ಪೀಠೋಪಕರಣ, ನಲಿ ಕಲಿ ಚಪ್ಪರ, ಗೋಡೆಯ ಮೇಲೆ ಅಂದವಾಗಿ ಜೋಡಿಸಿದ ಕಲಿಕೋಪಕರಣಗಳು. ಒಂದು ಕಡೆ ಇರಿಸಿದ ಕಾಗುಣಿತ ಬುಟ್ಟಿ ಬೇರೆ ಕಡೆ ನಾನು ನೋಡದ್ದು. ಪ್ರತೀ ಕಾಗುಣಿತದ ಮಿಂಚುಪಟ್ಟಿಗಳನ್ನು ಸಿದ್ದಪಡಿಸಿ ಸಂಬಂಧಿಸಿದ ಚೀಲಕ್ಕೆ ಸಿಕ್ಕಿಸಿದ್ದಾರೆ. ಪ್ರತಿಯೊಂದಕ್ಕೂ ಹತ್ತಕ್ಕಿಂತ ಹೆಚ್ಚಿನ ಉದಾಹರಣೆಗಳು ಅಭ್ಯಾಸ ಮತ್ತು ಬಳಕೆ ಮತ್ತು ಮೌಲ್ಯಮಾಪನ ಚಟುವಟಿಕೆಗಳಿಗೆ ಬಳಸಲು ಸಿದ್ಧ ಸ್ಥಿತಿಯಲ್ಲಿವೆ. ಮಕ್ಕಳಂತೂ ಚೈತನ್ಯದ ಚಿಲುಮೆಗಳು. ಕಲಿತದ್ದನ್ನು ಒಪ್ಪಿಸಲು ನಾ ಮುಂದು ತಾಮುಂದು ಎಂಬ ತಹತಹ.ಚಿತ್ರಗಳನ್ನು ಹೊಂದಿರುವ ಶೌಚಾಲಯದ ಬಾಗಿಲುಗಳೂ ಇವರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ. ಇದಕ್ಕೆ ಬೇಕಾದ ಅನುದಾನ ಹೇಗೆ ದೊರೆಯಿತು ಎಂದು ಕೇಳಿದೆ. ತಾನು, ತನ್ನ ಸ್ನೇಹಿತರು, ಮತ್ತು ಸಂಬಂಧಿಕರಿಂದಲೇ ಅನುದಾನ ಜೋಡಿಸಿದೆ ಎಂದರು. ಒಬ್ಬರೇ ದಾನಿಗಳು 2.80 ಲಕ್ಷಕ್ಕೂ ಹೆಚ್ಚು ನೀಡಿದ್ದಾರಂತೆ. ಇದೆಲ್ಲವೂ ಶಿಕ್ಷಕರ ಮೇಲಿನ ಸದಭಿಪ್ರಾಯದಿಂದ ಹಿರಿಯ ಪ್ರಾಥಮಿಕ ಶಾಲೆಗೆ ಹೋದ ಇಲ್ಲಿನ ಮಕ್ಕಳ ಕಲಿಕೆಯನ್ನು ಮೆಚ್ಚಿ ನೀಡಿದ್ದು. ಇಂತಹ ಶಿಕ್ಷಕರಿಂದಾಗಿ ನಮಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
