ಕಾಡು ಹೂವಿನ ಕುರಿತು… ನೂರ್‌ ಶ್ರೀಧರ್‌ ಬರಹ

ನೊಂದವರ ದನಿಯಾದವರಿಗೆ ಸಿಗಬಹುದಾದ ಸಾಮಾಜಿಕ ಸಿರಿ ಎಂಥದ್ದು ಎಂಬುದರ ಒಂದು ಜೀವಂತ ಸ್ಯಾಂಪಲ್ ಅನ್ನು ನಿನ್ನೆ ಕಂಡಂತಾಯಿತು. ನಾನು ಸೋಷಿಯಲ್ ಮೀಡಿಯಾದಲ್ಲಿ ಇರುವವನಲ್ಲ. ಚಳವಳಿ ಕೆಲಸಕ್ಕೆ ಸೋಷಿಯಲ್ ಮೀಡಿಯಾ ಅಷ್ಟಿಷ್ಟು ಬಳಸುತ್ತೇನೆ ಅಷ್ಟೆ. ನಿನ್ನೆ ಇಡೀ ದಿನ ಬರುತ್ತಲೇ ಇದ್ದ ವಿಚಾರಣೆಯ, ಕಾಳಜಿಯ ಕರೆಗಳಿಗೆ ಉತ್ತರಿಸುತ್ತಲೇ, ಕೆಲವು ಮುಖ್ಯ ಕೆಲಸಗಳನ್ನೂ ಅಟೆಂಡ್ ಮಾಡಲೇಬೇಕಿತ್ತು. ಎಲ್ಲಾ ಕೆಲಸ ಮುಗಿಯುವ ಹೊತ್ತಿಗೆ ರಾತ್ರಿ 12 ಗಂಟೆ. ಮಗಳ ವಿದಾಯ ಹೇಗಾಯ್ತು ಎಂಬುದನ್ನಾದರೂ ನೋಡೋಣ ಎಂದು ಸೋಷಿಯಲ್ ಮೀಡಿಯಾ ತೆಗೆದೆ. ಫೇಸ್ಬುಕ್ ತೆಗೆದಾಗಂತೂ ದಂಗಾಗಿ ಹೋದೆ….ಪ್ರೀತಿಯ ಮಹಾಪೂರವೇ ಹರಿದುಹೋಗಿತ್ತು. ನೋಡಿ ಕಣ್ತುಂಬಿ ಬಂತು. ಇದನ್ನೆಲ್ಲಾ ನೇಮಿಗೆ ಕಾಣಲು ಸಾಧ್ಯವಾಗಿದ್ದರೆ, ದೊಡ್ಡ ಮುಖವನ್ನು ಆನೆ ಅಗಲ ಮಾಡಿ ಎಂಥಾ ಖುಷಿಪಟ್ಟಿರುತ್ತಿದ್ದಳು ಅನಿಸಿತು.ಪ್ರೀತಿ ಮತ್ತು ನೋವಿನ ಪ್ರವಾಹದ ನಡುವೆ ಅನುಮಾನದ, ಟೀಕೆಯ ಹಾಗೂ ದ್ವೀಪಗಳೂ ಗೋಚರಿಸಿದವು. ಒಂದು ನಂಜಿನ ಕೆಂಡದುಂಡೆಯೂ ಕಾಣಿಸಿತು. ಆಪ್ತರು ಇಂಥ ಕೆಲವನ್ನು ಆಯ್ಕೆ ಮಾಡಿ ವ್ಯಕ್ತಿಗತವಾಗಿಯೂ ಕಳುಹಿಸಿಕೊಟ್ಟಿದ್ದರು. ಅದಕ್ಕೆ ಚಳವಳಿಯ ಮಿತ್ರರು ತಮ್ಮ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಪ್ರಯತ್ನವನ್ನೂ ಮಾಡಿದ್ದರು

. ಮೊದಲಿಗೆ ನೇಮಿ ಎಂಬ ಒಂದು ಪುಟ್ಟ ಜೀವಕ್ಕೆ ಇಷ್ಟೊಂದು ಮಿಡಿದ ಎಲ್ಲಾ ಸಹೃದಯಗಳಿಗೂ ದೊಡ್ಡ ಸಲಾಂ. ಸಾಮಾಜಿಕ ಕೆಲಸದಲ್ಲಿ ತೊಡಗಿರುವವರು ಬಯಸುವುದು ಆಸ್ತಿ ಅಧಿಕಾರವನ್ನಲ್ಲ. ಇಂತಹ ಪ್ರೀತಿ ಮತ್ತು ಮನ್ನಣೆಯನ್ನು ಮಾತ್ರ. ಅದನ್ನು ಅಭಿವ್ಯಕ್ತಿಪಡಿಸಿದ ಮನಸ್ಸುಗಳು ಅಗಲಿದ ನೇಮಿಗೆ ನಮಿಸಿರುವುದು ಮಾತ್ರವಲ್ಲ, ಬದುಕಿರುವ ನೇಮಿಯರಿಗೆ ಬದುಕಿನ ಅರ್ಥವನ್ನೂ ಅಭಿವ್ಯಕ್ತಪಡಿಸಿವೆ. ಇದಕ್ಕಾಗಿ ಎಲ್ಲರಿಗೂ ಮನದಾಳದ ಶರಣು. ಹಾಗೆಯೇ ಸಂಘಟನೆಯ ಪರಿಶ್ರಮವನ್ನು ಗುರುತಿಸಿರುವ ಸಂಗಾತಿಗಳಿಗೂ ಪ್ರೀತಿಯ ಅಪ್ಪುಗೆ.ಅನುಮಾನ ಮತ್ತು ಟೀಕೆ ವ್ಯಕ್ತಪಡಿಸಿದ ಸಂಗಾತಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವುದು, ಉತ್ತರಿಸುವುದು ಕಷ್ಟವಿದೆ. ಏಕೆಂದರೆ ಇದೊಂದು ದೊಡ್ಡ ಕಥೆ.

ಕಾಡು ಹೂವಿನ ಜೀವನ ಗಾಥೆ. ಇದರಲ್ಲಿ ಹೂವು ಮತ್ತು ಮುಳ್ಳು ಎರಡೂ ಇದೆ. ನೇಮಿ ಎರಡರ ಮಿಶ್ರಣ. ನಿನ್ನೆ ತಾವೆಲ್ಲಾ ಕೊಂಡಾಡಿದ ಅದ್ಭುತ ಗುಣಗಳ ಜೊತೆ ಅಷ್ಟೇ ವಿಚಲಿತಗೊಳಿಸುವ ದೌರ್ಬಲ್ಯಗಳನ್ನೂ ಹೊಂದಿದ ವ್ಯಕ್ತಿತ್ವ ನೇಮಿಯದು. ಕಾಡು ಹೂವಿನ ಕುರಿತು ಕವನ ಬರೆಯುವುದು ಸುಲಭ, ದೂರದಿಂದ ನಿಂತು ಆಸ್ವಾದಿಸುವುದು ಸುಲಭ. ಅದರ ಜೊತೆ ಬಾಳ್ವೆ ಮಾಡುವುದು ಸುಲಭವಲ್ಲ. ಮುಳ್ಳಿನ ರುಚಿ ಮನೆಯವರಿಗೆ, ನೆರೆಯವರಿಗೆ, ಜೊತೆ ಸೇರಿ ಕೆಲಸ ಮಾಡುವವರಿಗೆ ಮಾತ್ರ ಗೊತ್ತಿರುತ್ತದೆ. ಕಾಡು ಹೂವಿನ ದ್ವಂದ್ವವೆಂದರೆ ದೂರದವರಿಗೆ ಚಂದಕಾಣುತ್ತದೆ. ಜೊತೆಗಿದ್ದವರಿಗೆ ಚುಚ್ಚಿ ಕಿರಿಕಿರಿ ಮಾಡುತ್ತದೆ. ಹತ್ತಿರವಿರುವವರು ಮುಳ್ಳನ್ನು ಮಾತ್ರ ನೋಡದೆ ಹೂವಿನ ಪರಿಮಳವನ್ನು ಆಸ್ವಾದಿಸುವುದ ಕಲಿಯಬೇಕು. ದೂರವಿರುವವರು ಅಂದದ ಗುಂಗಿನಲ್ಲಿ ಮಾತ್ರ ಮುಳುಗದೆ ಅದರ ಮುಳ್ಳುಗಳು ಸೃಷ್ಟಿಸಿರಬಹುದಾದ ಸಂಕಟವನ್ನೂ ಕಲ್ಪಿಸಿಕೊಳ್ಳುವಂತಾಗಬೇಕು.ನೇಮಿಯ ಬದುಕನ್ನು ಬಿಚ್ಚಲು ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ. ಕಾಡು ಹೂವು ಕಾಡು ಹೂವು ಅಷ್ಟೆ. ಅದನ್ನು ನೋಡುವ ಪರಿ ನೋಡುಗರಿಗೆ ಬಿಟ್ಟದ್ದು. ಈ ಕಾಡು ಹೂವನ್ನು ಕಳೆದ ಆರು ವರ್ಷ ಹೃದಯದಲ್ಲಿಟ್ಟುಕೊಂಡಿದ್ದವನಾಗಿ ಯಾವ ವಿವರಣೆಗೂ ಹೋಗದೆ, ಇರಬಹುದಾದ ಅನುಮಾನಗಳಿಗೆ ನನ್ನ ಮಟ್ಟಿಗೆ ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ನಂಬುವುದೂ ನಂಬದೇ ಇರುವುದೂ ಓದುಗರಿಗೇ ಬಿಟ್ಟದ್ದು.· ನೇಮಿ ಜನರನ್ನು ಎಷ್ಟು ಪ್ರೀತಿಸಿದ್ದಳೋ ಅಷ್ಟೇ ಪ್ರೀತಿಯನ್ನು ಅನೇಕರು ಆಕೆಗೆ ನೀಡಿದ್ದಾರೆ. ಆಕೆಯ ಸುಖದುಖಃದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಎಂದೋ ನಲುಗಿಹೋಗಬಹುದಾದ ಈ ಹೂವಿನ ಸಸಿಯನ್ನು ತಮ್ಮತಮ್ಮದೇ ರೀತಿಯಲ್ಲಿ ಸಲಹಿದ್ದಾರೆ. ಇದರಲ್ಲಿ ಹೆಸರು ತೆಗೆದುಕೊಳ್ಳಲು ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಬಿಟ್ಟುಹೋಗಿಬಿಡುವ ಅಪಾಯವೂ ಇದೆ. ಹಾಗಾಗಿ ಹೆಸರು ತೆಗೆದುಕೊಳ್ಳುತ್ತಿಲ್ಲ ಕ್ಷಮಿಸಿ. ಆದರೂ ಮೂರು ತಂಡಗಳ ಹಾಗೂ ಇಬ್ಬರು ವ್ಯಕ್ತಿಗಳ ಪಾತ್ರವನ್ನು ಸ್ಮರಿಸಲೇಬೇಕಿದೆ. ‘ಸಮನೆ’ತಂಡ, ಈಗ ಪಾಂಡಿಚರಿಯಲ್ಲಿರುವ ರಶ್ಮಿಯವರು, ಎ.ಕೆ. ಸುಬ್ಬಯ್ಯ, ಜನಶಕ್ತಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ. ಇವರೆಲ್ಲಾ ಕಾಡು ಹೂವಿನ ಜೊತೆ ನಿಂತು ಮುಳ್ಳಿನ ರುಚಿಯನ್ನೂ ಅನೇಕ ಬಾರಿ ಅನುಭವಿಸಿದರೂ ಅದನ್ನು ಪೋಷಿಸಲು ತಮ್ಮ ಮಿತಿಯಲ್ಲೇ ಮಾಡಿದ ಪ್ರಯತ್ನ ಊಹಿಸಲೂ ಕಷ್ಟವಾಗುವಂಥದ್ದು. ಇದರ ವಿವರಣೆಗೂ ನಾನು ಹೋಗುವುದಿಲ್ಲ. ದಯವಿಟ್ಟು ಈ ಸಂಗಾತಿಗಳು ವ್ಯಕ್ತಿಗಳಾಗಿಯೂ, ತಂಡಗಳಾಗಿಯೂ ಮಾಡಿರುವ ಕಾಳಜಿ ಮತ್ತು ಪ್ರೀತಿಯ ಕೆಲಸವನ್ನು ಅಲ್ಲಗೆಳೆಯಬೇಡಿ ಮತ್ತು ಅನುಮಾನಿಸಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಅಷ್ಟೆ.·

ನೇಮಿ ಬದುಕಿನಲ್ಲಿ ಬಡತನ ಇದ್ದದ್ದು ನಿಜ. ಅವಳಿಗೆ ಯಾವ ಆದಾಯವೂ ಇರಲಿಲ್ಲ. ಆದರೆ ಯಾವ ಬಡವರಿಗೂ ಸಾಧ್ಯವಿಲ್ಲದ ರೀತಿಯಲ್ಲಿ ಅವಳು ಬದುಕಿದಳು. ಕೆಲವೊಮ್ಮೆ ಅತಿಯಾಯಿತು ಎಂಬಂತೆಯೂ ಬದುಕಿದಳು. ಅವಳಿಗೆ ಮತ್ತು ಅವಳ ಕುಟುಂಬಕ್ಕೆ ಮೇಲೆ ನಾನು ಉಲ್ಲೇಖಿಸಿದ ಸಹೃದಯರಿಂದ ಮತ್ತು ಸಂಘಟನೆಗಳಿಂದ ಸಿಕ್ಕ ಆಸರೆ ಅಂಥದ್ದು. ಕಷ್ಟವಿರಲಿಲ್ಲ ಎಂದಲ್ಲ, ಇತ್ತು. ಆದರೆ ಊಟಕ್ಕೆ, ಓದಿಗೆ, ಚಿಕಿತ್ಸೆಗೆ ಹಣವಿಲ್ಲದೆ ನರಳಬೇಕಾದ ಪರಿಸ್ಥಿತಿ ಆಕೆಗೆ ಎಂದೂ ಬಂದಿರಲಿಲ್ಲ.· ನೇಮಿ ಯಾವ ಸಂಘಟನೆಯಲ್ಲೂ ಇರಲಿಲ್ಲ ಮತ್ತು ಆಕೆ ಪೂರ್ಣಾವಧಿ ಕಾರ್ಯಕರ್ತೆಯೂ ಆಗಿದ್ದಿಲ್ಲ. ಅದೊಂದು ಇಷ್ಟವಾದ ಕಡೆಯಲ್ಲೆಲ್ಲಾ ಹರಿದು ಬೆಳೆಯಲು ಬಯಸುವ ಕಾಡು ಬಳ್ಳಿ. ಅದನ್ನು ಯಾವ ಸಂಘಟನೆಯೂ ದುರುಪಯೋಗ ಮಾಡಿಕೊಳ್ಳಲು ಬಯಸಿಲ್ಲ. ಆಕೆ ಫುಲ್ ಟೈಮರ್ ಆಗಲು ಒತ್ತಾಯಿಸಿದರೂ ಆಕೆಯ ಮನಸ್ಥಿತಿ, ಕುಟುಂಬದ ಪರಿಸ್ಥಿತಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಓದಲು ಹಚ್ಚಿದ್ದು ಸುಬ್ಬಯ್ಯನವರು ಮತ್ತು ಸಂಘಟನೆ. ಅವಳ ಕಾಲೇಜ್ ಫೀಸ್, ಜೀವನ ನಿರ್ವಹಣೆ, ಮೆಡಿಕಲ್ ವೆಚ್ಚ, ತಾಯಿಯ ಚಿಕಿತ್ಸೆ ಮತ್ತು ನಿರ್ವಹಣೆ. ಇದೆಲ್ಲಾ ಸಣ್ಣ ಖರ್ಚಲ್ಲ. ಆಕೆಯನ್ನು ಪ್ರೀತಿಸುವವರು ಆಗಾಗ ನೆರವಿಗೆ ಧಾವಿಸಿರುವುದು ನಿಜವಾದರೂ ನಿರಂತರ ನಿರ್ವಹಣೆ ಮೇಲ್ಕಂಡ ಐದು ಮೂಲಗಳಿಂದ ನಡೆದಿದೆ. ಸಂಘಟನೆಯ ಸಕ್ರಿಯ ಕಾರ್ಯಕರ್ತೆಯಲ್ಲದ ವ್ಯಕ್ತಿಯೊಬ್ಬರ ಇಷ್ಟೊಂದು ಜವಬ್ದಾರಿಯನ್ನು ಯಾವುದಾದರೂ ಸಂಘಟನೆ ಹೊತ್ತು ನಿರ್ವಹಿಸಲು ಸಾಧ್ಯವೇ?

ಒಮ್ಮೆ ಆಲೋಚಿಸಿ. ಅನುಮಾನ ಬರುವುದು ಸಹಜ. ಏಕೆಂದರೆ ಇದನ್ನು ಸಧ್ಯದ ಸಂದರ್ಭದಲ್ಲಿ ಊಹಿಸುವುದೂ ಸ್ವಲ್ಪ ಕಷ್ಟವೆ.· ವ್ಯಕ್ತಿಗತ ಸಂಬಂಧಗಳಲ್ಲಿ, ಪ್ರೀತಿ-ಪ್ರೇಮದ ನಿರ್ವಹಣೆಯಲ್ಲಿ ನೇಮಿ ಅನೇಕ ಒಳಿತು – ಕೆಡಕುಗಳನ್ನು ಕಂಡಿರುವುದು, ನೋವು-ನಿರಾಶೆಯನ್ನು ಅನುಭವಿಸಿರುವುದು ನಿಜ. ಆದರೆ ಆಕೆಯ ಅನಾರೋಗ್ಯಕ್ಕೆ ಮತ್ತು ಈ ರೀತಿಯ ಧಿಡೀರ್ ಅಂತ್ಯಕ್ಕೆ ಆ ಯಾವ ಕಾರಣಗಳೂ ಇರಲಿಲ್ಲ. ಸಂಘಟನೆ ಜೊತೆಗಿತ್ತು, ಕುಟುಂಬವೂ ಮತ್ತೆ ಹತ್ತಿರವಾಗಿತ್ತು. ಆಕೆ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು ಆ ವ್ಯಕ್ತಿಯೂ ಜೊತೆಗಿದ್ದು ಆಕೆಯ ಆರೈಕೆ ಮಾಡುತ್ತಿದ್ದರು. ಜೊತೆಗಿದ್ದು ನೋಡಿಕೊಂಡ ಈ ಎಲ್ಲರ ಕಾಳಜಿ ಕಡೆಗಣನೆಯಾಗದಿರಲಿ.· ಕೊನೆಯ ಮಾತು – ಇದರ ಅರ್ಥ ಸಂಘಟನೆ ಮತ್ತು ಸಂಗಾತಿಗಳು ಸರಿಯಾಗೇ ನಡೆದುಕೊಂಡಿದ್ದಾರೆ, ಯಾವ ತಪ್ಪನ್ನೂ ಮಾಡಿಲ್ಲ ಎಂಬುದಲ್ಲ. ಕಾಡಿನ ಹೂವನ್ನು ಸಮಗ್ರ ರೀತಿಯಲ್ಲಿ ಅರ್ಥಮಾಡಿಕೊಳ್ಳದ, ಮುಳ್ಳನ್ನು ಕಂಡು ಇದರ ಸಹವಾಸ ಬೇಡ ದೂರ ಇದ್ದುಬಿಡೋಣ ಎಂಬಂತೆ ನಡೆದುಕೊಂಡ ತಪ್ಪುಗಳು ಸಹ ಕೆಲವರಿಂದ ನಡೆದದ್ದಿದೆ. ಅವು ನೇಮಿಗೂ ನೋವು ತಂದದ್ದಿದೆ. ಸಂಘಟನೆ ಬಗ್ಗೆ ಇದ್ದಿ ಪ್ರೀತಿಯಂತೆಯೇ ಈ ಅಸಮಧಾನವನ್ನೂ ಆಕೆ ಆಪ್ತರ ಬಳಿ ಹಂಚಿಕೊಂಡದ್ದಿದೆ. ಇದ್ಯಾವುದೂ ಸುಳ್ಳಲ್ಲ. ಸಂಘಟನೆ ಮತ್ತು ಅದರ ಸಂಗಾತಿಗಳನ್ನೂ ಕಪ್ಪು ಬಿಳುಪಿನಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದನ್ನಷ್ಟೇ ಹೇಳಲು ಪ್ರಯತ್ನಿಸುತ್ತಿದ್ದೇನೆ.

ಎಲ್ಲರೂ ಶಕ್ತಿ ಮತ್ತು ದೌರ್ಬಲ್ಯಗಳ ಮಿಶ್ರಣವೇ. ಜನಶಕ್ತಿಯೂ ಇದರಿಂದ ಹೊರತಲ್ಲ. ಆದರೆ ಇಲ್ಲಿ ಮುಳ್ಳು ಗಿಡವೆಂದು ಕಿತ್ತು ಬಿಸಾಕುವ ಕೆಟ್ಟ ಆಲೋಚನೆಯನ್ನೂ ಯಾರೊಬ್ಬರೂ ಮಾಡಿದ್ದಿಲ್ಲ. ತಮ್ಮ ಮಿತಿಗಳಲ್ಲೇ, ಮಿತಿಯನ್ನೂ ದಾಟಿ ಉಳಿಸಿಕೊಳ್ಳುವ ಪರದಾಟ ನಡೆದಿದೆ. ಸದಾ ಹಣಕಾಸು ಮುಗ್ಗಟ್ಟಿನ ನಡುವೆ ನಿರಂತರ ಕೆಲಸದಲ್ಲಿ ತಲ್ಲೀನವಾಗಿರುವ ಸಂಗಾತಿಗಳು ಮತ್ತು ಸಂಘಟನೆ ತನ್ನ ಇಕ್ಕಟ್ಟುಗಳ ನಡುವೆಯೇ ನೇಮಿಯಂತಹ ಇನ್ನೂ ಹಲವರನ್ನೂ ಸಲಹಲು ಪರಿಪಾಟಲು ನಡೆಸಿದೆ. ಸ್ವಾವಲಂಬಿ ಸಂಘಟನೆಯೊಂದರ ಈ ಪರದಾಟವನ್ನು ಪರಿತಪಿಸುತ್ತಿರುವ ಮನಗಳೂ ಗಮನಕ್ಕೆ ತೆಗೆದುಕೊಳ್ಳಲಿ.· ಸಾಕು, ನಿಲ್ಲಿಸುತ್ತೇನೆ. ಕಾಳಜಿಯಿಂದ ಹುಟ್ಟಿರುವ ಅನುಮಾನಗಳಿಗೆ ಅಮೂರ್ತವಾಗಿ ಪ್ರತಿಕ್ರಿಯಿಸಿದ್ದೇನೆ. ಅರ್ಥಪಡಿಸಲು ನಾನು ವಿಫಲನಾಗಿದ್ದರೆ ನನ್ನನ್ನು ಕ್ಷಮಿಸಿ. ಇನ್ನು ನಂಜಿನ ಮಾತುಗಳಿಗೆ ನನ್ನ ಬಳಿ ಉತ್ತರವಿಲ್ಲ. ನಂಜು ಮತ್ತೊಬ್ಬರ ಸುಡುವುದಿಲ್ಲ. ನಂಜು ನಂಜನ್ನು ಹೊತ್ತವರನ್ನೇ ಸುಡುತ್ತದೆ. ಆ ನನ್ನ ಒಡನಾಡಿಗಳ ಮನ ಸಾಧ್ಯವಾದಷ್ಟು ಬೇಗ ನಂಜುಮುಕ್ತಗೊಳ್ಳಲಿ.*ಕ್ಷಮಿಸು ಮಗಳೆ….ಇದನ್ನೆಲ್ಲಾ ಬರೆದಿದ್ದಕ್ಕೆ, ಬರಿಯಬೇಕಾಗಿ ಬಂದುದಕ್ಕೆ. ಲವ್ ಯು ಡಿಯರ್.

-**ನೂರ್ ಶ್ರೀಧರ್*

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *