

ಸಮಗ್ರ ಕೃಷಿ ಚಿಕ್ಕ ಹಿಡುವಳಿದಾರರ ಲಾಭದಾಯಕ ವ್ಯವಸಾಯ.ಮಲೆನಾಡು,ಕರಾವಳಿಗಳಲ್ಲಿ ದೊಡ್ಡ ರೈತರಿಗಿಂತ ಚಿಕ್ಕ ಹಿಡುವಳಿದಾರರ ಸಂಖ್ಯೆಯೆ ಹೆಚ್ಚು. ಆಧುನಿಕ ಕೃಷಿ,ಕೃಷಿ ಪ್ರಯೋಗ ಮಾಡದೆ ಚಿಕ್ಕ ಹಿಡುವಳಿಯಲ್ಲಿ ಲಾಭಗಳಿಸುವುದು ಸುಲಭವಲ್ಲ ಆದರೆ ಚಿಕ್ಕ ಹಿಡುವಳಿಯಲ್ಲಿ ಲಾಭಮಾಡುವ ವಿರಳ ಸಾಧಕರಿಗೇನೂ ಕಡಿಮೆ ಇಲ್ಲ.
ನೀವಿಲ್ಲಿ ಓದುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಡ್ಡೇಕೊಪ್ಪದ ಪ್ರಕಾಶ ಹೆಗಡೆಯವರ ತೋಟದ ಬಗ್ಗೆ. ಅನಿಶ್ಚಿತ ಮಳೆ, ಅವೈಜ್ಞಾನಿಕ ಬೆಲೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಘೇಗಾರಿನ ಗುಡ್ಡೆಕೊಪ್ಪದ ಪ್ರಕಾಶ್ ಹೆಗಡೆ ತಮ್ಮ ವಯೋವೃದ್ಧ ತಂದೆಯೊಂದಿಗೆ ಚಿಕ್ಕ ಹಿಡುವಳಿಯಲ್ಲಿ ಕೃಷಿ ಪ್ರಯೋಗ,ಸಂಶೋಧನೆ ಪ್ರಾರಂಭಿಸಿದರು.
ತಮ್ಮ ೨.೫ ಎಕರೆ ಒಣ ಜಮೀನಿನಲ್ಲಿ ಅಡಿಕೆ,ತೆಂಗು ಬಾಳೆಯ ಜೊತೆಗೆ ಪ್ರತ್ಯೇಕವಾಗಿ ಏಲಕ್ಕಿ ಮತ್ತು ಕಬ್ಬನ್ನು ನಾಟಿ ಮಾಡಿದರು.
ಈ ಕೆಲಸದ ಜೊತೆಗೆ ಕೃಷಿ ಕೆಲಸಕ್ಕೆ ಬಳಸುವ ಚೂಳಿ, ಕಲ್ಲಿ ತಯಾರಿಸತೊಡಗಿದರು. ಮಾರುಕಟ್ಟೆಯಿಂದ ತಂತಿ-ರಬ್ಬರ್ ಪೈಪ್ ತರಿಸಿ ಚೂಳಿಬುಟ್ಟಿಯನ್ನು ತಯಾರಿಸಿದರು. ದಿನವೊಂದಕ್ಕೆ ಎರಡ್ಮೂರು ಚೂಳಿ ತಯಾರಿಸುವ ಹೆಗಡೆ ಈ ಸಿದ್ಧ ವಸ್ತುಗಳನ್ನು ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡುತ್ತಾರೆ. ರಬ್ಬರ್ ಚೂಳಿ, ಕಲ್ಲಿ ತಯಾರಿಸುವ ಪ್ರಕಾಶ್ ಹೆಗಡೆಯವರ ಹವ್ಯಾಸ ಇದಾದರೆ ಕೃಷಿ ಅವರ ವೃತ್ತಿ ಮತ್ತು ಅಭ್ಯಾಸ.
ಕಡಿಮೆ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಮಾಡಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುವ ಇವರು ಕೆಂಪಕ್ಕಿ ಸಣ್ಣಕ್ಕಿ ಬೆಳೆದು ಜಯಗಳಿಸಿದ್ದಾರೆ.
ಇವರ ಗದ್ದೆಯ ಕುಳಿ ಕಬ್ಬು ಕಡಿಮೆ ಕೆಲಸದಲ್ಲಿ ಹೆಚ್ಚು ಇಳುವರಿ ನೀಡುತ್ತಿದೆ.
ಮಲೆನಾಡಿನ ಕೃಷಿಕರು ಬಿಡುತ್ತಿರುವ ಏಲಕ್ಕಿ ಬೆಳೆಗೆ ಶೇಡ್ ನೆಟ್ ಮೂಲಕ ವಿನೂತನ ವಿಧಾನ ಪರಿಚಯಿಸಿರುವ ಪ್ರಕಾಶ್ ಹೆಗಡೆಯವರ ತೋಟದಲ್ಲಿ ಒಂದು ವರ್ಷದ ಏಲಕ್ಕಿ ಹಿಂಡುಗಳನ್ನು ನೋಡಿದರೆ ಹೀಗೂ ಉಂಟೆ ಎನಿಸದಿರದು.
ಭತ್ತ ಕಬ್ಬು, ಬಾಳೆ ಏಲಕ್ಕಿ ಜೊತೆಗೆ ಅಡಿಕೆ, ಕಾಳು ಮೆಣಸು ಬೆಳೆದಿರುವ ಪ್ರಕಾಶ ಹೆಗಡೆ ಸಮಗ್ರ ಕೃಷಿಯ ಸಾಧಕರಾಗಿ ಹೆಸರು ಮಾಡುತಿದ್ದಾರೆ. ಕೃಷಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಲಾಭದಾಯಕವಾಗದಿದ್ದರೆ ಹೊಸ ವಿಧಾನಗಳ ಮೂಲಕ ಲಾಭಗಳಿಸುವ ತಂತ್ರ ಹುಡಕಬೇಕು ಎನ್ನುವ ಹೆಗಡೆಯವರ ಬಹುಬೆಳೆಯ ಮಾದರಿ ಇತರರಿಗೂ ಅನುಕರಣೀಯವಾಗಿದೆ.



