

ಸಿದ್ಧಾಪುರ ತಾಲೂಕಿನ ಮಳವತ್ತಿ ಗ್ರಾಮದಲ್ಲಿ ಕಳೆದ 21 ದಿನಗಳಿಂದ ಪರಮೇಶ್ವರಯ್ಯ ಕಾನಳ್ಳಿಮಠ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ದಂಡಸಿ ವಿರಕ್ತ ಮಠದ ಶ್ರೀ ಮು.ನಿ.ಪ್ರ ಕುಮಾರ ಮಹಾಸ್ವಾಮಿಗಳು ಕೈಗೊಂಡಿದ್ದ ಮೌನ ಅನುಷ್ಠಾನದ ಅನುಷ್ಠಾನ ಮಂಗಲ ಕಾರ್ಯಕ್ರಮ ಜರುಗಿತು. ಗ್ರಾಮಸ್ಥರ ಅಪೇಕ್ಷೆಯಂತೆ ಸಮಸ್ತ ದೋಷ ಪರಿಹಾರಾರ್ಥವಾಗಿ ಹಾಗೂ ಗ್ರಾಮದ ಶ್ರೇಯೋಭಿವೃದ್ಧಿಗೆ ಜನವರಿ 31ರಿಂದ ಫೆಬ್ರವರಿ 20ರವರೆಗೆ 21 ದಿನಗಳವರೆಗೆ ಶ್ರೀ ಮು.ನಿ.ಪ್ರ ಕುಮಾರ ಮಹಾಸ್ವಾಮಿಗಳು ಮೌನ ಅನುಷ್ಠಾನ ಕೈಗೊಂಡಿದ್ರು.
ನಿನ್ನೆ ಫೆ.20ರಂದು ಕಾರ್ಯಕ್ರಮವನ್ನ ಸಂಪನ್ನಗೊಳಿಸಲಾಯಿತು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಿರಸಿಯ ಬಣ್ಣದ ಮಠದ ಮು.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ರುದ್ರಾಭಿಷೇಕ ಹಾಗೂ ಮಹಾಪೂಜೆಯನ್ನ ನೆರವೇರಿಸಿದರು. ಆ ಬಳಿಕ ಮು.ನಿ.ಪ್ರ ಕುಮಾರ ಮಹಾಸ್ವಾಮಿಗಳು,ಬೀಳಗಿಯ ಶಿವಾನಂದ ದೇವರು ಬೃಹನ್ಮಠ, ಮು.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಧರ್ಮಸಭೆಯಲ್ಲಿ ಆರ್ಶಿವಚನ ನೀಡಿದರು. ಮಾನವ ಧರ್ಮ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ನೆರೆದಿದ್ದ ಭಕ್ತವೃಂದಕ್ಕೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಳವತ್ತಿಯ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ್ ಗೌಡರ್ ಸ್ವಾಗತಿಸಿದ್ರೆ, ಸಂತೋಷ್ ಗೌಡರ್ ಕಾರ್ಯಕ್ರಮವನ್ನ ನಿರೂಪಿಸಿದ್ರು. ಪೂಜಾ ಗೌಡರ್ ವಂದನಾರ್ಪಣೆ ಸಲ್ಲಿಸಿದ್ರು.


ಸಿದ್ದಾಪುರ: ಸಾಹಿತಿಗಳು ಸಾಮಾಜಿಕ ಭದ್ರತೆಯನ್ನು ಇಟ್ಟುಕೊಂಡು ಜವಾಬ್ದಾರಿಯುತವಾಗಿ ಸಮಾಜದಲ್ಲಿನ ಸಮಸ್ಯೆಗಳನ್ನು ಬಿಂಬಿಸುವಂತಹ ಬರಹಗಳನ್ನು ಬರೆಯಬೇಕು ಎಂದು ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಬಾಲಭವನದಲ್ಲಿ ಸ್ಪಂದನ ಸೇವಾ ಸಂಸ್ಥೆ ಆಯೋಜಕತ್ವದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹಧನ ಪಡೆದ ಕವಯಿತ್ರಿ ಶಿಕ್ಷಕಿ ಸುಧಾರಾಣಿ ನಾಯ್ಕ ಬರೆದ “ಮನದ ರಿಂಗಣ” ಕವನ ಸಂಕಲನ ಬಿಡುಗಡೆ ಹಾಗೂ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪುಸ್ತಕ ಬಿಡುಗಡೆ ಕೆಲಸ ಬೆಳಕನ್ನು ಬಿಡುಗಡೆಗೊಳಿಸುವಂತಹ ಅತ್ಯುತ್ತಮ ಕೆಲಸ. ಮಾನವೀಯ ಮೌಲ್ಯಗಳು ಇದ್ದಾಗ ಆಗ ಮನುಷ್ಯರಾಗುತ್ತೇವೆ.
ಕವನ ಯಾವುದೇ ರೂಪದಲ್ಲಿ ಹೇಗೆ ಇರಲಿ ಅದಕ್ಕೆ ಹೃದಯ ಇರಬೇಕು. ನಮ್ಮ ಮನಸ್ಸಿಗೆ ತಟ್ಟುವಂತೆ ಇರಬೇಕು ಮಾನವನ ಭಾವನೆಗಳನ್ನು ರೂಪಿಸುವ ಕೆಲಸ ಕವನಗಳಿಂದ ಆಗಬೇಕು.
ನಮ್ಮ ಚಾರಿತ್ರವನ್ನು ಅವಲೋಕಿಸಿದಾಗ ಸ್ತ್ರೀ ಪರ ನಿಲುವು ನಗಣ್ಯವಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ಮಾತೃಪ್ರಧಾನ ವ್ಯವಸ್ಥೆಯ ಸ್ತ್ರೀಯರ ಕಡೆ ಕವಿಯತ್ರಿಯರು ಗಮನಹರಿಸಬೇಕು. ಇಂದಿನ ಧಾರವಾಹಿಗಳು ಸಿನಿಮಾಗಳು ಕಾವ್ಯಗಳಲ್ಲಿ ಮನುಷ್ಯನ ತಳಮಟ್ಟದ ಬದುಕಿನ ಮೇಲೆ ಬದುಕು ಚೆಲ್ಲುವ ಕಾರ್ಯವಾಗಬೇಕು. ಸಾಹಿತಿಗಳು ಉತ್ತಮ ಬರಹವನ್ನು ಬರೆಯಲು ಅಧ್ಯಯನ ಹಾಗೂ ಅನುಭವದ ಅವಶ್ಯಕತೆ ಇದೆ. ಸುಧಾರಾಣಿ ನಾಯ್ಕ ರವರ ಕವನಗಳು ಗಟ್ಟಿಯಾಗಿವೆ ಎಂದರು.
ಖ್ಯಾತ ಲೇಖಕಿ, ಕನ್ನಡ ಉಪನ್ಯಾಸಕರಾದ ಕಾತ್ಯಾಯಿನಿ ಕುಂಜುಬೆಟ್ಟು ಮಾತನಾಡಿ
ಮನುಷ್ಯ ದೇಹದೊಟ್ಟಿಗೆ ಬದುಕುವುದಿಲ್ಲ. ಅದರೊಳಗೆ ಒಂದು ಮನಸ್ಸಿದೆ ಅದರಲ್ಲಿ ನಾವು ಬದುಕಬೇಕು. ಇಂದಿನ ದಿನಮಾನದಲ್ಲಿ ಶಿಕ್ಷಣವು ಗಂಡು-ಹೆಣ್ಣು, ಮೇಲ್ಜಾತಿ-ಕೆಳಜಾತಿ ಅನ್ನುವ ಭೇದ ಭಾವದಲ್ಲಿ ಬದಲಾವಣೆಯನ್ನು ತಂದಿದೆ. ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಕಾವ್ಯಗಳು ಒಂದು ಮುಖ ಚಂದ ಆದರೆ ಇನ್ನೊಂದು ಬೆಂದ ಮುಖದ ಬಗ್ಗೆಯೂ ಹೇಳುತ್ತದೆ. ಇಂದು ಬದಲಾವಣೆಯಾಗಬೇಕು. ಹೆಣ್ಣು ಮಕ್ಕಳು ಸಹ ಬರಿಯಬೇಕು. ಕಲಾತ್ಮಕ ದೃಷ್ಟಿಕೋನ ಸುಧಾರಾಣಿ ಅವರ ಬರಹದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಂಗಾಧರ್ ಕೊಳಗಿ, ಡಾ, ಶ್ರೀಧರ್ ವೈದ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಗೋಪಾಲ ನಾಯ್ಕ್ ಭಾಶಿ, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮನದ ರಿಂಗಣ ಕವನಸಂಕಲನದ ಕವಯತ್ರಿ ಸುಧಾರಾಣಿ ನಾಯ್ಕ ವೇದಿಕೆಯಲ್ಲಿದ್ದರು.
ಚಿತ್ರಕಲಾವಿದ ನಾಗರಾಜ್ ಹನೇಹಳ್ಳಿ ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಶಿಕ್ಷಕಿಯರಾದ ಸುಮಿತ್ರ ಶೇಟ್ ಹಾಗೂ ಸುಮಾ ಹೆಗಡೆ ಕವನ ಸಂಕಲನದ ಕವನ ಗಾಯನ ಮಾಡಿದರು. ಉಷಾ ನಾಯ್ಕ ನಿರೂಪಿಸಿದರು.

