


ʻʻ ವಂದೂರಿಲಿ ಅಜ್ಜಿ ಮುದ್ಕಿ ಮತ್ತೆ ಅದ್ರ ಮೊಮ್ಮಗ್ಳು ಇದ್ದಿದ್ವಡಾ. ವಂದಿವ್ಸಾ ಅಜ್ಜಿ ಮುದ್ಕಿ ಆ ಮೊಮ್ಮಗ್ಳು ಅಡ್ವೀಗೆ ಗೆಡ್ಡೆ ಗೆಣ್ಸು ತಪ್ಲೆ ಹೋಗಿದ್ವಡಾ. ಅಜ್ಜಿ ಹತ್ರೆ ಬಡಾ ಬಡಾ ನೆಡೂಲೆ ಆಗ್ತಿಲ್ಲೆ ಹೇಳೂದು ಅದ್ಸಾವ್ಕಾಶ್ ಬಂತು. ಅದರ ಮೊಮ್ಮಗ್ಳು ಬಡಾ ಬಡಾ ಮುಂದೋತು. ಅದ್ಕೆ ಒಂದು ರಾಜ್ನ ಮನೆ ಕಂಡ್ತು. ಅದು ರಾಜ್ನ ಮನೆ ಹೊಕ್ತು. ಅಜ್ಜಿ ಸಾವಕಾಶಾ ನೆಡ್ಕತ್ನೆಯಾ ಬಂತು. ಎಸ್ಟ್ ನೆಡದ್ರೂವಾ ಮೊಮ್ಮಗ್ಳೇ ಕಾಣ್ತಿಲ್ಲೆ. ಹಾಂಗೇಯಾ ಇದೆಂತಾ ಗ್ರಾಚಾರ್ವಪ್ಪಾ ಹೇಳಿ ಅಜ್ಜಿ ಮನೇಗೋತು. ʼʼ ( ಕೆಂಬರ್ಗೆ ಸೊಪ್ಪು. ಕತೆ.)
ಇದೊಂದು ಉತ್ತರಕನ್ನಡ ಜಿಲ್ಲೆಯ ಕನ್ನಡದ ಉಪಭಾಷೆ ಹವಿಗನ್ನಡದ ಜನಪದ ಕತೆ.
https://samajamukhi.net/2022/05/09/shastri-elected-kdcc-director/
ಸರ್ವ ಜನಾಂಗದ ಶಾಂತಿ ಯ ತೋಟವಾದ ಉತ್ತರ ಕನ್ನಡಜಿಲ್ಲೆಯ ಜಾನಪದ ಸಂಸ್ಕೃತಿಯ ಜೀವಾಳವಾದ ಶಾಂತಿ ನಾಯಕ್ ಹೊನ್ನಾವರರ ʻʻ ಹವ್ಯಕ ಜಾನಪದ ಕತೆಗಳುʼʼ ಕೃತಿಯನ್ನು ಕಂಡು ರೋಮಾಂಚನ ಗೊಂಡೆ. ಕನ್ನಡದ ನೂರಾರು ಉಪಭಾಷೆಗಳಲ್ಲಿ ಒಂದಾದ ಮತ್ತು, ಅಲಕ್ಷತೆಗೆ, ಅವಜ್ಞತೆಗೆ ಒಳಗಾಗುತ್ತಿರುವ ಹವಿಗನ್ನಡ ಭಾಷೆಯ ಅನನ್ಯತೆಯನ್ನು ಹವ್ಯಕ ಜನಪದ ಕತೆಗಳ ಅಪರೂಪದ ಸಂಗ್ರಹ, ಮತ್ತು ತಲಸ್ಪರ್ಶೀ ಅಧ್ಯಯನದ ಮೂಲಕ, ಉಪಭಾಷೆಗಳ ಬಗೆಗೆ ಎಚ್ಚರ ಮೂಡಿಸುವ ಸಾಹಸವನ್ನು ಶಾಂತಿ ನಾಯಕ್ ಕೈಗೊಂಡಿದ್ದಾರೆ.
ಹೊನ್ನಾವರ ತಾಲೂಕಿನ ಅಪರೂಪದ ೬೩ ಹವಿಗನ್ನಡ ಕತೆಗಳ ಸಂಗ್ರಹವಾದ ಪ್ರಸ್ತುತ ಕೃತಿಗೆ ಕನ್ನಡದ ಪ್ರಸಿದ್ಧ ಭಾಷಾತಜ್ಞ ಡಾ- ಪುರುಷೋತ್ತಮ ಬಿಳಿಮಲೆ ಕನ್ನಡದ ನೂರಾರು ಉಪಭಾಷೆಗಳ ಅನನ್ಯತೆ, ವೈವಿಧ್ಯತೆ, ಪ್ರಾಮುಖ್ಯತೆ, ಮತ್ತು ಉಪಭಾಷೆಗಳ ಸೌಂದರ್ಯದ ಬಗೆಗೆ, ತಲಸ್ಪರ್ಶೀ ಮುನ್ನುಡಿ ನೀಡಿ, ಕೃತಿಗೆ ಇನ್ನಷ್ಟು ಆಳವೊದಗಿಸಿದ್ದಾರೆ. ತಮ್ಮ ಸುದೀರ್ಘ ಮುನ್ನುಡಿಯ ಕೊನೆಯಲ್ಲಿ,
ʻʻ ಇಲ್ಲಿಯ ಕಥೆಗಳ ಭಾಷಿಕ ಅಧ್ಯಯನವನ್ನು ಯಾರಾದರೂ ಮುಂದುವರಿಸಬಹುದು. ದಾಂಟು, ನಾಂಟು, ಕಲಂಕು, ಕಾಡಿಂಗೆ, ಮರಂಗೋ, ಮೊದಲಾದ ಪದಗಳು ಅನುನಾಸಿಕಗಳನ್ನು ಹಾಗೆಯೇ ಉಳಿಸಿಕೊಂಡು ಮುಂದುವರಿಯುತ್ತಿರುವುದನ್ನು ನಾವು ಗಮನಿಸಬೇಕು. ಕತೆಗಳಲ್ಲಿ ಬಹುವಚನಗಳೇ ಕಡಿಮೆ. ಏಕವಚನವು ಹೆಚ್ಚಿನ ಆತ್ಮೀಯತೆಯನ್ನು ಸಾಧ್ಯಮಾಡುತ್ತದೆ ಎಂಬ ಅಂಶವನ್ನು ಒಪ್ಪಿಕೊಂಡರೆ, ಇಲ್ಲಿನ ಕತೆಗಳು ಹವ್ಯಕ ಸಂಸ್ಕೃತಿಯ ಕೆಲವು ಮೂಲ ಗುಣಗಳ ಮೇಲೂ ಬೆಳಕು ಚೆಲ್ಲುವಲ್ಲಿ ಯಶಸ್ವೀಯಾಗಿರುವುದನ್ನು ಗಮನಿಸಬಹುದು. ಈ ಭಾಷೆಯ ಪದಕೋಶವು ಬಹಳ ಶ್ರೀಮಂತವಾಗಿದೆ. ಮತ್ತು ವಿಶಿಷ್ಟವಾಗಿದೆ. ಎಂಬುದಕ್ಕೆ ಪ್ರಸ್ತುತ ಸಂಕಲನವು ಅತ್ಯುತ್ತಮ ಉದಾಹರಣೆಯಾಗಿದೆ. ʼʼ ಎನ್ನುತ್ತಾರೆ.

ನಿಜಕ್ಕೂ ಉತ್ತರಕನ್ನಡದ ವೈವಿಧ್ಯಮಯ ಉಪಭಾಷೆಗಳೆಲ್ಲವೂ ಸಂಶೋಧನೆಗೆ ಕಾಯುತ್ತಿವೆ. ಈ ಜಿಲ್ಲೆಯಲ್ಲಿಯ, ಈಡಿಗ, ಕುಣಬಿ, ಸಿದ್ದಿ, ಗ್ರಾಮೊಕ್ಕಲು, ಹಾಲಕ್ಕಿ, ನಾಡವ, ಉಪ್ಪಾರ, ಪಟಗಾರ, ಗೊಂಡ, ಮುಂತಾದ ಹತ್ತು ಹಲವು ಜನಸಮುದಾಯದ ಆಡುಭಾಷೆಗಳು ಕುತೂಹಲ ಕೆರಳಿಸುತ್ತವೆ. ಅಲ್ಲಿಯ ಸಾವಿರಾರು ಅಪೂರ್ವ ಶಬ್ದಗಳು ಇನ್ನೂ ಸಂಗ್ರಹಗೊಂಡಿಲ್ಲ. ಆ ನಿಟ್ಟಿನಲ್ಲಿ ಡಾ- ಶಾಂತಿ ನಾಯಕರ ಅಧ್ಯಯನಾಸಕ್ತಿ, ಉಪಭಾಷೆಗಳ ಬಗೆಗಿನ ಪ್ರೇಮ ಮೆಚ್ಚುವಂಥಹದ್ದಾಗಿದೆ. ಕರಾವಳಿಯ ಹಲವು ಸಮುದಾಯಗಳ ಆಡುಭಾಷೆಗಳ ಬಗೆಗೆ ಸಾಕಷ್ಟು ಅಧ್ಯಯನಗೈದ ಶಾಂತಿ ನಾಯಕರು, ಅದದೇ ಆಡುಭಾಷೆಯ ಧ್ವನಿಯಲ್ಲೇ ಮಾತನಾಡಬಲ್ಲರು. ಅದರ ಸ್ವಾರಸ್ಯವನ್ನು ವಿವರಿಸಬಲ್ಲರು.
ಕವಲಕ್ಕಿ ಎಂಬ ಗ್ರಾಮದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿಯ ಹಿರಿ ಕಿರಿಯರಿಂದ ಮೌಖಿಕವಾಗಿಯೇ ಕತೆಹೇಳಿಸುತ್ತಾರೆ. ೧೯೭೧ ರಿಂದಲೇ ಸರಿಸುಮಾರು ಮುನ್ನೂರಕ್ಕೂ ಹೆಚ್ಚು ಕತೆಗಳನ್ನು ಸಂಗ್ರಹಿಸಿ, ಭಾಷಾಶಾಸ್ತ್ರೀಯ ಹಿನ್ನೆಲೆಯಲ್ಲಿ ಶಿಸ್ತುಬದ್ಧ ಮೌಲಿಕ ಅಧ್ಯಯನ ಕೈಗೊಳ್ಳುತ್ತಾರ. ಅವುಗಳಲ್ಲಿಯೇ ವೈವಿಧ್ಯಮಯ ವೈಶಿಷ್ಟ್ಯಮಯ ಕತೆಗಳನ್ನಾಯ್ದು ಪ್ರಕಟಿಸುತ್ತಾರೆ.
ಅದೆಷ್ಟೋ ಕತೆಗಳು, ರಾಜ್ಯದಾದ್ಯಂತ ಜನಪದರ ಬಾಯಲ್ಲಿ ನೆಲೆನಿಂತಿದ್ದರೂ, ವಿವಿಧ ಆಡುಭಾಷೆಗಳಲ್ಲಿ ಅದೇ ಕತೆಯನ್ನು ಕೇಳುವುದೇ ಅದೊಂದು ಅದ್ಭುತ ಅನುಭವ. ಕಾಕಣ್ಣಾ –ಗುಬ್ಬಣ್ಣ, ನೂರಾವಂದ್ ತಲೆಬೊಂಡಾ, ದಡ್ಡ ಪಂಡಿತಾ, ಅಚ್ಮುತ್ತೈದೆ, ಹಿಟ್ಟುಂಬೆ, ಸುಂಟೀಕೊಂಬಿನಾಟಾ, ಮುಂತಾದ ಕತೆಗಳು, ಅದರ ಭಾಷಾಸೌಷ್ಠವ, ನಾಟಕೀಯತೆ, ಅಲ್ಲಲ್ಲಿ ಬರುವ ಒಗಟು, ಮುಂಡಿಗೆಯಂತ ಆಕರ್ಷಕ ಮಿಂಚುಗಳು ಕತೆಯ ಕುತೂಹಲವನ್ನು ವೃದ್ಧಿಸುತ್ತವೆ.
ಅರ್ಧ ಶತಮಾನಕ್ಕೂ ಹೆಚ್ಚುಕಾಲದಿಂದ ಜನಪದರ ನಡುವೆಯೇ ವಾಸಿಸಿ, ಜಾನಪದ ಸಂಶೋಧನೆಯಲ್ಲೇ ಜೀವಸವೆಸಿದ ಶಾಂತಿ ನಾಯಕ, ಮತ್ತು ಪತಿ ಡಾ- ಎನ್. ಆರ್. ನಾಯಕ್ ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯಾಗಿ ನಮ್ಮೊಂದಿಗಿದ್ದಾರೆ. ಸುಂದರ ಜನಪದ ರೇಖಾ ಕೌಶಲ್ಯದಿಂದ ಒಡಗೂಡಿದ ಮುಖಚಿತ್ರ, ಕಲಾವಿದ ಡಾ- ಕೃಷ್ಣ ಗಿಳಿಯಾರ ಅವರದ್ದು.
ಉತ್ತರಕನ್ನಡ ಜಿಲ್ಲೆಯ ಹವ್ಯಕ ಜನಪದ ಕತೆಗಳು.
ಲೇ — ಡಾ. ಶಾಂತಿ ನಾಯಕ. ಪ್ರ– ಭೂಮಿ ಜಾನಪದ ಪ್ರಕಾಶನ. ಹೊನ್ನಾವರ.
ಪುಟ—೧೫೨, ಬೆಲೆ – ರೂ-೧೫೦. ( email bhoomijanapada@gmail.com )
Mob— 9482438577
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
