ಮಂಚೀಕೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧುನಿಕ ರಂಗಪರಂಪರೆಯನ್ನ ಹುಟ್ಟುಹಾಕಿದ ನೆಲಗಳಲ್ಲೊಂದು. ಹಿಂದಿನಿಂದಲೂ ನಾಟಕಗಳನ್ನ ಆಡುತ್ತಿದ್ದ ಮಂಚೀಕೇರಿಯ ಹವ್ಯಾಸಿಗಳು ಇಂಥದೊಂದು ಹೊರಳುವಿಕೆಯ ಕಾಲದಲ್ಲಿ ಪ್ರಭಾವಿತರಾದದ್ದು ಹೆಗ್ಗೋಡು ರಂಗ ಮಾದರಿಯಿಂದ. ಮತ್ತು ಆ ಕಾರಣಕ್ಕಾಗಿಯೇ ಹಲವಾರು ಪ್ರತಿಭಾವಂತ ನಿರ್ದೇಶಕರು ಮಂಚೀಕೇರಿಗೆ ಬಂದು ನಾಟಕವಾಡಿಸಿದರು.ಸ್ಥಳೀಯ ಸಿದ್ದಿ ಸಮುದಾಯವನ್ನು ಕೂಡ ರಂಗಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವದರ ಮೂಲಕ ವಿಸ್ತೃತವಾದ ಸಮುದಾಯ ರಂಗಭೂಮಿಯೊಂದನ್ನು ಕಟ್ಟುವ ಪ್ರಯತ್ನ ನಡೆಯಿತು. ಮಂಚೀಕೇರಿಯಲ್ಲೊಂದು ನಾಟಕ್ಕಾಗಿಯೇ ಕಟ್ಟಲ್ಪಟ್ಟ ಸರಳ ರಂಗಮಂದಿರದ ನಿರ್ಮಾಣವಾಯಿತು. ನಾಟಕಗಳ ನಿರ್ಮಾಣ ಸುಲಭವಾಯಿತು. ಹವ್ಯಾಸಿಗಳ ಉಮೇದೂ ಹೆಚ್ಚಿತು.ಇಂಥ ಹುಮ್ಮಸ್ಸಿನಿಂದಲೇ ಹುಟ್ಟಿಕೊಂಡಿದ್ದು ‘ಸಂಹತಿ’ ಬಳಗ ಮಂಚೀಕೇರಿ.
ಸ್ಥಳೀಯ ಸಂಪನ್ಮೂಲವನ್ನು ಕ್ರೋಢೀಕರಿಸಿ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಅಪೇಕ್ಷೆಯ ಈ ಸಂಸ್ಥೆ ಇದುವರೆಗೆ ಹಲವು ನಾಟಕಗಳನ್ನಾಡಿದೆ. ‘ಕೃಷ್ಣೇಗೌಡನ ಆನೆ’, ‘ಸಂಹತಿ’ ಯ ಹೊಸ ನಾಟಕ. ಅದರ ಮೊದಲ ಪ್ರಯೋಗವನ್ನು ನಾನು ಮಂಚೀಕೇರಿಯ ನವೀಕೃತ ರಂಗಮಂದಿರದಲ್ಲಿ ನೋಡಿದೆ.ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿಯ ನಾಟಕ ಇದು.ಊರಲ್ಲಿ ಹುಚ್ಚು ನಾಯಿಗಳ ಕಾಟ ವಿಪರೀತವಾಗಿದೆ. ಸಿಕ್ಕ ಸಿಕ್ಕವರನ್ನೆಲ್ಲ ಕಚ್ಚುತ್ತಿದೆ. ಈ ಬಗ್ಗೆ ಕಂಪ್ಲೇಂಟ್ ಕೊಡೋದಕ್ಕೆ ನಿರೂಪಕ, ಮುನಸಿಪಾಲ್ಟಿ ಚೆರಮನ್ ಖಾನಸಾಹೇಬ್ ರಲ್ಲಿಗೆ ಬಂದಿದ್ದಾನೆ. ಕಷ್ಟ ಹೇಳಿಕೊಂಡಿದ್ದಾನೆ. ನಗುತ್ತಾರೆ ಸಾಹೇಬರು. ಎದುರಿಗಿನ ‘ಡಾಗ್ ಪಾಯ್ಸನ್’ ಡಬ್ಬಿಯೊಂದರಿಂದ ವಿಷವನ್ನು ತೆಗೆದು ತಿಂದುಬಿಡುತ್ತಾರೆ. ನಿರೂಪಕನಿಗೆ ಗಾಬರಿ. ಆದರೆ ಖಾನ್ ಸಾಹೇಬರಿಗೆ ಏನೂ ಆಗಿಲ್ಲ. ‘ನೋಡಿದ್ರಾ, ಈ ವಿಷವೂ ಖೊಟ್ಟಿ. ಇಂಥ ಖೊಟ್ಟಿ ವಿಷವನ್ನಿಟ್ಕೊಂಡು ಹೇಗೆ ಹುಚ್ಚು ನಾಯಿಗಳನ್ನ ಕಂಟ್ರೋಲ್ ಮಾಡೋದು?
ನೀವೇ ಹೇಳಿ ಅಂತಾರೆ ಸಾಹೇಬ್ರು….ಹೀಗೆ, ಖೊಟ್ಟಿ ವಿಷವನ್ನಷ್ಟೇ ಅಲ್ಲ ಖೊಟ್ಟಿ ಮನುಷ್ಯರನ್ನೂ ಬಯಲು ಮಾಡುತ್ತ ಸಾಗುತ್ತದೆ ಈ ನಾಟಕ.ಮೂಡಿಗೆರೆ ಪಟ್ಟಣವನ್ನು ನಿಮಿತ್ತಮಾತ್ರವಾಗಿಟ್ಟುಕೊಂಡು ಅದರಾಚೆಗೂ ಚಾಚುತ್ತ ಕಾಲ ದೇಶಗಳನ್ನೂ ಮೀರಿ ಬೆಳೆಯುತ್ತದೆ.ನಾಟಕ ಆರಂಭ. ಮಠದ ಸ್ವಾಮಿಯೊಬ್ಬರಿಗೆ ಆನೆಯೊಂದನ್ನ ಮಾರಬೇಕಿದೆ. ಸಾಕಲಾಗದ ಆನೆಯೊಂದನ್ನು ಮಾರಿ ಬೆಂಝ್ ಕಾರು ಕೊಳ್ಳಬೇಕಿದೆ. ಅದಕೂ ಮುಂಚೆ ಜ್ಯೋತಿಷಿಯೊಬ್ಬರನ್ನ ಕರೆಸಿ ಆನೆಯ ಪಾದ ರೇಖೆ ಯನ್ನ ಪರೀಕ್ಷಿಸುತ್ತಾರೆ. ಶಾಸ್ತ್ರಿಗಳ ಕೋಲ ತುದಿಗೆ ಅಂಟಿಕೊಂಡ ಆನೆಯ ಪಾದರೇಖೆ ನಾಟಕದುದ್ದಕ್ಕೂ ಹರಿಯುತ್ತ, ಊರ ಜನಗಳನ್ನೆಲ್ಲ ಆವರಿಸಿಕೊಳ್ಳುತ್ತ ಮುಖವಾಡಗಳನ್ನ ಕಿತ್ತೆಸೆಯುತ್ತ ಪಲಾಯನವಾದ, ಮೋಸ, ವಂಚನೆ, ದುರಹಂಕಾರ ದಗಲ್ಬಾಜಿತನ, ಕೃತಘ್ನತೆಗಳಿಂದ ತುಂಬಿದ ಜಗತ್ತಿನ ಕಥೆಯೊಂದನ್ನ ಕಟ್ಟುತ್ತದೆ.
ಆಗಲೇ ಹೇಳಿದ ಆನೆಯನ್ನು ಶಾಸ್ತ್ರಿಗಳ ಕುಮ್ಮಕ್ಕಿನಿಂದ ಕೃಷ್ಣೇಗೌಡ ಕೊಂಡುಕೊಳ್ಳುತ್ತಾನೆ. ಸಾಕಷ್ಟು ಕಾಸು ಮಾಡಿಕೊಳ್ಳುತ್ತಾನೆ ಕೂಡ. ಸಮಸ್ಯೆಗಳಿಂದಲೇ ತುಂಬಿಹೋದ ಮೂಡಿಗೆರೆಯ ಜನಕ್ಕೆ ಆನೆಯ ಆಗಮನ, ನಡೆ, ಚರ್ಚೆಯ ವಸ್ತುವಾಗಿಬಿಡುತ್ತದೆ. ಸದಾ ಹೋಗುತ್ತಿರುವ ಕರೆಂಟ್ ಸರಿ ಮಾಡಲಾಗದ ಲೈನಮನ್, ಮರಗಳನ್ನ ಕಾಪಾಡಲಾರದ ಫಾರೆಸ್ಟಿನವರು, ಅನಾಹುತದಲ್ಲಿ ಅಂಗಡಿ ಕೆಡಿಸಿಕೊಂಡ ಜಬ್ಬಾರ್, ಸದಾ ನಮಾಜಿನಲ್ಲೇ ಇರುವ ಸಮಸ್ಯೆಗಳಿಗೆ ಬೆನ್ನು ಹಾಕಿಕೊಡಿರುವ ಖಾನ್ ಸಾಹೇಬ್ ಎಲ್ಲ ತಮ್ಮ ತಮ್ಮ ಬೇಜವಾಬ್ದಾರಿತನಕ್ಕೆ ಆನೆ ಗೌರಿಯನ್ನು ಕಾರಣವಾಗಿಸುತ್ತ ನುಣುಚಿಕೊಳ್ಳುತ್ತಾರೆ. ಬಲಿಪಶುಮಾಡುತ್ತಾರೆ. ಎಲ್ಲದಕೂ ಆನೆಯೇ ಕಾರಣವೆಂದು ದೂರುತ್ತಾರೆ. ಸಾಲದ್ದಕ್ಕೆ ಕಾಡ ಸಲಗನಿಂದ ಹತನಾದ ಮಾವುತ ವೇಲಾಯುಧ ನ ಸಾವಿನ ಆರೋಪವೂ ಆನೆಯ ಮೇಲೇ ಬೀಳುತ್ತದೆ.ಕಥೆಯ ನಿರೂಪಕನನ್ನೂ ನಾಟಕದ ಪಾತ್ರವಾಗಿಸುವದರೊಂದಿಗೆ ಕಥೆ ಹೇಳುವದನ್ನು ಸುಲಭವಾಗಿಸಿಕೊಳ್ಳುತ್ತಾರೆ ನಿರ್ದೇಶಕ ವಿನಾಯಕ ಭಟ್ ಹಾಸಣಗಿ.
ರಿಯಲಿಸ್ಟಿಕ್ ನಿರೂಪಣೆಯಾದರೂ ತುಂಬ ಸರಳವಾದ ಮತ್ತು ಸೂಚ್ಯವಾದ ರಂಗಸಜ್ಜಿಕೆಯೊಂದಿಗೆ, ರಂಗಪರಿಕರಗಳೊಂದಿಗೆ ಕಥೆ ಕಟ್ಟುತ್ತಾರೆ. ನಾಟಕದುದ್ದಕ್ಕೂ ತೀಕ್ಷ್ಣವಾದ ಮಾತುಗಳಿವೆ. ಚುರುಕಾದ ಸಂಭಾಷಣೆಗಳಿವೆ. ಹಾಗೆ ನೋಡಿದರೆ ಒಂಥರಾ ಸಂಭಾಷಣೆಗಳೇ ಕಟ್ಟುವ ಗಟ್ಟಿ ಕಥೆಯಿದು.ಹವ್ಯಾಸಿ ನಟನಟಿಯರೆಲ್ಲ ತುಂಬ ಆಸ್ಥೆಯಿಂದ ತಮ್ಮನ್ನು ನಾಟಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನವರೆಲ್ಲ ಕೃಷಿಕರೇ. ದೂರದೂರದ ಊರಿನವರು. ದಿನಕ್ಕೆರಡು ಮೂರು ತಾಸು ಬಿಡುವು ಮಾಡಿಕೊಂಡು ತಿಂಗಳುಗಟ್ಟಲೇ ಅಭ್ಯಾಸಕ್ಕೆ ಬರುವದೇನೂ ಸುಲಭದ ಮಾತಲ್ಲ. ಅಂಥದರಲ್ಲಿ ಹಳ್ಳಿಯವರೆಲ್ಲ ಕಲೆತು ಇಂಥದೊಂದು ಮಹತ್ವದ ನಾಟಕ ಆಡುವದೊಂದು ಮಹತ್ವದ ಘಟನೆಯೇ. ಸಮುದಾಯ ರಂಗಭೂಮಿ ವಿರಳವಾಗುತ್ತಿರುವ ದಿನಗಳಲ್ಲಿ ಇದೊಂದು ದೊಡ್ಡ ಸಂತಿಯೇ. ನಾಟಕದ ನಟ ನಟಿಯರೆಲ್ಲ ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಮಾತುಗಳಲ್ಲಿ ಚುರುಕುತನ ಇನ್ನಷ್ಟು ಮೊನಚಾಗಬೇಕಿದೆ. ಆಗ ನಾಟಕದ ಗತಿ ಇನ್ನಷ್ಟು ವೇಗ ಪಡೆದುಕೊಳ್ಳಬಹುದು. ಹೆಣಿಗೆ ಗಟ್ಟಿಯಾಗಬಹುದು. ಪ್ರಯೋಗಗಳು ಹೆಚ್ಚಾದಂತೆ ಇವೆಲ್ಲ ಸರಿಯಾಗುತ್ತ ಹೋಗುತ್ತವೆ.ಮೈಸೂರು ರಂಗಾಯಣದಲ್ಲಿದ್ದು ನಿವೃತ್ತರಾದಮೇಲೆ ಪುನ: ತನ್ನ ಹಳ್ಳಿಗೇ ಬಂದು ನಾಕವಾಡಿಸಿದ ಹಾಸಣಗಿ ವಿನಾಯಕ ಭಟ್ ರಿಗೆ ಅಭಿನಂದನೆಗಳು. ಇಂಥದೊಂದು ನಾಟಕ ಆಡಿದ ‘ ಸಂಹತಿ ಬಳಗ’ ಕ್ಕೂ ಅಭಿನಂದನೆಗಳು.ನಾಟಕ: ಕೃಷ್ಣೇಗೌಡರ ಆನೆಮೂಲ ಕಥೆ: ಪೂರ್ಣಚಂದ್ರ ತೇಜಸ್ವಿಪರಿಕಲ್ಪನೆ, ವಿನ್ಯಾಸ, ನಿರ್ದೇಶನ- ವಿನಾಯಕ ಭಟ್, ಹಾಸಣಗಿ- ಕಿರಣ ಭಟ್ (*ಈ ಬರಹ ‘ ಅವಧಿ’ ಯಲ್ಲಿ ಪ್ರಕಟವಾಗಿದೆ.)