

ವಿಧಾನ ಪರಿಷತ್ ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ; ೭ ಬಾರಿ ಗೆದ್ದ ಬಸವರಾಜ ಹೊರಟ್ಟಿಯವರಿಗೆ ೮ನೇ ಬಾರಿ ಗೆಲ್ಲುವುದು ಏಕೆ ಕಷ್ಟವಾಗುತ್ತಿದೆ
-ಎಂ.ಆರ್.ಮಾನ್ವಿ ಭಟ್ಕಳ
ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹಳೆಯ ಮತ್ತು ಅದೃಷ್ಟದ ಕಾರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ.
ಕಳೆದ ೭ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರವನ್ನೇ ಪ್ರತಿನಿಧಿಸಿ ವಿಜಯದ ಪತಾಕೆ ಹಾರಿಸುತ್ತ ಬಂದಿರುವ ಹೊರಟ್ಟಿ ಸಾಹೇಬರಿಗೆ ೮ನೇ ಬಾರಿ ಗೆಲ್ಲುವುದೇನು ಕಷ್ಟವಾಗಿರಲಿಲ್ಲ. ಅವರು ತಮ್ಮ ಜೀವನ ಪೂರ್ತಿ ಶಿಕ್ಷಣ, ಶಿಕ್ಷಕ ಹಾಗೂ ಶಿಕ್ಷಣ ಸಂಸ್ಥೆಗಳ ಕುರಿತಂತೆ ಸುಧೀರ್ಘವಾದ ಹೋರಾಟ ಮತ್ತು ಸೇವೆ ಎರಡನ್ನೂ ಮಾಡಿದ್ದಾರೆ.
ಅವರಿಗೆ ರಾಜಕೀಯ ನೆಲೆ ನೀಡಿದ ಜಾತ್ಯಾತೀತ ಜನತಾದಳ ಪಕ್ಷವನ್ನು ನೆಚ್ಚಿಕೊಂಡೇ ಕಳೆದ ೩೫ ವರ್ಷಗಳಿಂದ ರಾಜಕೀಯ ಮಾಡುತ್ತ ಬಂದವರು. ಆ ಪಕ್ಷ ಇವರಿಗೆ ಎಲ್ಲವನ್ನೂ ನೀಡಿದೆ. ಆದರೂ ಇವರು ಉಂಡ ಮನೆಗೆ ದ್ರೋಹ ಬಗೆದರು ಎಂಬಂತೆ ತನಗೆ ಅನ್ನ ನೀಡಿದ ಬದುಕು ಕಟ್ಟಿಕೊಟ್ಟ ಪಕ್ಷವನ್ನು ನಡುನೀರಲ್ಲಿ ಬಿಟ್ಟು ಬೇರೊಂದು ಪಕ್ಷವನ್ನು ಸೇರಿದ್ದು ಈಗ ತನಗೆ ಒಗ್ಗಿಕೊಳ್ಳದೇ ಇರುವ ಸಿದ್ಧಾಂತದ ಪರ ಪ್ರಚಾರ ಮಾಡಲು ಹೊರಟಿರುವಂತೆ ತೋರುತ್ತಿದೆ.
ಇವರು ಯಾವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ ಎಂದರೆ ಇವರಿಗೀಗ ಯಾವುದೇ ಪಕ್ಷದ ಬ್ಯಾನರ್ ಆಗಲಿ, ಆಸರೆಯಾಗಲಿ ಬೇಕಾಗಿಲ್ಲ. ಇವರೇ ಒಂದು ಪಕ್ಷವಾಗಿ ಬೆಳೆದಿದ್ದಾರೆ. ಚುನಾವಣೆ ಪ್ರಚಾರಕ್ಕೂ ಹೋಗದೇ ಮನೆಯಲ್ಲೇ ಕುಳಿತುಕೊಂಡರೂ ಕೂಡ ಇವರ ಅಭಿಮಾನಿ ಬಳಗೆ ಇವರನ್ನು ಗೆಲ್ಲಿಸಿ ಮತ್ತೇ ವಿಧಾನಪರಿಷತ್ತಿಗೆ ಕಳುಹಿಸುತ್ತದೆ. ೭ ಬಾರಿ ಗೆದ್ದ ಇವರಿಗೆ ೮ನೇ ಬಾರಿ ಗೆಲ್ಲುವುದಕ್ಕೆ ಯಾವುದೇ ಅಡ್ಡಿ ಆತಂಕ ಇದ್ದಿಲ್ಲ. ಹಾಗಾದರೆ ಮತ್ತೇಕೆ ತಾನು ನಂಬದ, ತಾನು ಇಷ್ಟಪಡದ ತಾನು ವಿರೋಧಿಸುವ ಸಿದ್ದಾಂತವೊಂದರ ಪಕ್ಷದ ಸೆರಗನ್ನು ಹಿಡಿದುಕೊಂಡು ತಮಗೆ ಈ ಬಾರಿ ಮತ್ತೊಂದು ಅವಕಾಶ ನೀಡಿ ಎಂದು ದಯನೀಯವಾಗಿ ಬೇಡಿಕೊಳ್ಳುತ್ತಿದ್ದಾರೆ?.
ಇವರಿಗೆ ಕಾಡುತ್ತಿರುವ ಭಯವಾದರೂ ಯಾವುದು? ಯಾಕೆ ತನಗೆ ಅನ್ನನೀಡಿದ ಪಕ್ಷಕ್ಕೆ ಇವರು ದ್ರೋಹ ಮಾಡಿದರು? ಬಸವರಾಜ ಹೊರಟ್ಟಿ ಕೋಮುವಾದಿಯಾಗಿಬಿಟ್ಟರೆ?, ತನಗೆ ಅಧಿಕಾರ ಸಿಗುತ್ತದೆ ಎಂದು ತಾನು ನಂಬಿದ ತನ್ನ ತಾಯಿ ಸಮಾನ ಪಕ್ಷವೊಂದಕ್ಕೆ ದ್ರೋಹ ಬಗೆಯುವುದು ಸರಿಯೇ? ಎಂಬ ಹತ್ತು ಹಲವು ಪ್ರಶ್ನೆಗಳು ಅವರ ಅಭಿಮಾನಿ ಬಳಗಕ್ಕೆ ಕಾಡುತ್ತಿವೆ.
ಇವರಿಗೆ ಪಕ್ಷ ಇರಲಿ ಅಥವಾ ಬಿಡಲಿ. ಇವರದ್ದು ಮಾತ್ರ ಜಾತ್ಯಾತೀತ ಸಿದ್ಧಾಂತ. ಇವರ ಸೇವೆಯನ್ನು ಗುರುತಿಸಿಯೇ ಇದುವರೆಗೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಶಿಕ್ಷಕ ಸಮುದಾಯ ಮತವನ್ನು ನೀಡುತ್ತ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಗೆಲುವು ಕೂಡ ಸಾಧಿಸುತ್ತಾರೆ ಎಂದೇ ತಿಳಿಯಲಾಗಿತ್ತು. ಆದರೆ ಅವರು ತಾವು ನೆಚ್ಚಿಕೊಂಡ ಸಿದ್ಧಾಂತದ ವಿರುದ್ಧ ಕೋಮುವಾದಿ, ಪಕ್ಷಪಾತಿ ರಾಜಕೀಯ ಪಕ್ಷವೊಂದನ್ನು ನೆಚ್ಚಿಕೊಂಡಿದ್ದು ಮಾತ್ರ ಒಂದು ದೊಡ್ಡ ದುರಂತ ಎಂದೇ ವಿಶ್ಲೇಷಿಸಲಾಗುತ್ತಿದೆ.
ಆದರೂ ಕೂಡ ಅವರಿಗೆ ಕಾಡುತ್ತಿದ್ದ ಭಯ ಯಾವುದು ಎನ್ನುವುದೇ ಅರ್ಥವಾಗದ ಸ್ಥಿತಿಯಲ್ಲಿರುವ ಅವರ ಅಭಿಮಾನಿ ಬಳಗದಲ್ಲಿ ಸಣ್ಣದೊಂದು ಆತಂಕ ಮನೆ ಮಾಡಿಕೊಂಡಿದೆ. ಏಕೆಂದರೆ ಸೋಲಿಲ್ಲದ ಸರದಾರನಿಗೆ ೮ನೇ ಬಾರಿ ಗೆಲುವು ಸಾಧಿಸಲು ತಾನು ಒಪ್ಪದ ಸಿದ್ಧಾಂತವೊಂದರ ಪಕ್ಷದ ಸೆರಗನ್ನು ಹಿಡಿಯಬೇಕಾದ ಅನಿವಾರ್ಯತೆ ಅವರಿಗೇನಿತ್ತು? ಯಾವ ಸಿದ್ದಾಂತಗಳ ವಿರುದ್ಧ ನಿರಂತರ ೩೫ ವರ್ಷಗಳ ಕಾಲ ತಾನು ಹೋರಾಡಿದ್ದರೋ ಈಗ ಅದೇ ಸಿದ್ದಾಂತದ ಸೆರಗಿನೊಳಗೆ ತನ್ನನ್ನು ತಾನು ಸುರಕ್ಷಿತ ಎಂದು ಭಾವಿಸಿಕೊಂಡಿದ್ದು ಅವರ ಜಾಣಮೂರ್ಖತನವೋ ಅಥವಾ ಅವರ ರಾಜಕೀಯ ಭವಿಷ್ಯದ ಅಂತ್ಯವೋ ಗೊತ್ತಿಲ್ಲ. ಅಂತಹ ಸ್ಥಿತಿ ಇವರಿಗೇಕೆ ಬಂದಿದೆ? ಈ ಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಗಳು ಕೂಡ ಸಹಜವಾಗಿ ಕಾಡುತ್ತಿವೆ.
ನಿಷ್ಕಳಂಕ ರಾಜಕೀಯ ವ್ಯಕ್ತಿ ಎನಿಸಿಕೊಂಡಿರುವ ಬಸವರಾಜ ಹೊರಟ್ಟಿ ಏಕಾಏಕಿ ಒಂದು ಕೋಮುವಾದಿ, ಪಕ್ಷವನ್ನು ಏಕೆ ಅಪ್ಪಿಕೊಂಡರು? ಇವರಿಗೆ ಯಾವ ಭಯ ಅಂತಹ ಪಕ್ಷವೊಂದನ್ನು ಸೇರಲು ಕಾರಣವಾಯಿತು? ತಾನು ಬಿಜೆಪಿ ಸೇರದೆ ಇದ್ದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟವಾದೀತು ಎಂಬ ಅರಿವು ಅಥವಾ ಜ್ಞಾನೋದಯವೇನಾದರೂ ಹೊರಟ್ಟಿಯವರಿಗೆ ಆಯಿತೇ? ಅಥವಾ ಇವರ ಯಾವುದಾದರೂ ಕರ್ಮಕಾಂಡವನ್ನು ಮುಂದಿಟ್ಟುಕೊಂಡು ಬಿಜೆಪಿ ಇವರನ್ನು ಬ್ಲಾಕ್ ಮೇಲ್ ಮಾಡಿತೆ ಎಂಬ ಮಾತುಗಳು ಕೂಡ ಅವರ ಅಭಿಮಾನಿ ಬಳಗದಿಂದ ಕೇಳಿಬರುತ್ತಿವೆ.
ಮಂಗಳವಾರ ಬೆಳಗ್ಗೆ ಪತ್ನಿ ಹೇಮಲತಾ ಅವರೊಂದಿಗೆ ತಮ್ಮ ಅದೃಷ್ಟದ ‘ಸಿಎನ್‌ಬಿ-೫೭೫೭’ ನೋಂದಣಿ ಸಂಖ್ಯೆ ಅಂಬಾಸಿಡರ್ ಕಾರಿನಲ್ಲೇ ತೆರಳಿ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರ ಅದೃಷ್ಟ ಸಿಎನ್ಬಿ ೫೭೫೭ ಕಾರಿನ ನೋಂದಣಿ ಸಂಖ್ಯೆಯೋ ಅಥವಾ ಪಶ್ಚಿಮ ಶಿಕ್ಷಕ ಮತದಾರರ ಕ್ಷೇತ್ರದ ಶಿಕ್ಷಕರೋ ಎನ್ನುವುದನ್ನು ಕಾದು ನೋಡಬೇಕಷ್ಟೆ.
