ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ – ಬಗ್ಗೆ ಸುಬ್ರಾಯ ಮತ್ತೀಹಳ್ಳಿ ಬರೆಹ

ಪುಸ್ತಕದ ಹೆಸರು – ಬಿಂಗ್ ಲಾಂಗ್ ಮತ್ತು ಲಂಬ್ ನಾಗ್,
ಲೇಖಕ – ಬಾಲಚಂದ್ರ ಸಾಯಿಮನೆ.
ಭೂಮಿ ಬುಕ್ಸ್‌ ಪ್ರಕಾಶನ ಬೆಂಗಳೂರು .
ಬೆಲೆ;– ರೂ- 200-00, ಪುಟ—210.

ತಿರುಗಾಟಕ್ಕೆ ತಾತ್ವಿಕತೆ ನೀಡಿದ ಕೃತಿ ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ

ನಿತ್ಯವೂ ನೆಲವನ್ನೇ ಅವಲಂಬಿಸಿದ ನೆಲಮೂಲಿಗಳಿಗೆ, ಮೂರು ದಶಕಗಳಿಂದ ನೆಲವೆಂದರೇನೆಂದು ಮೌನ ಬೋಧನೆಗೈಯ್ಯುತ್ತಿರುವ ಹಸಿರ ಧ್ಯಾನಿ, ʻʻ ಬಾಲಚಂದ್ರ ಸಾಯಿಮನೆʼʼ ನಮ್ಮ ನಡುವಣ ಅನುಪಮ ಸಾಧಕ. ಅರಣ್ಯ ,ನದಿ, ಪರ್ವತ, ಮಣ್ಣು ಮರಗಿಡಗಳ ಸಹಯಾನಿ. ಕೃಷಿ ಸಂಸ್ಕೃತಿಯ ಆಳದಲ್ಲಿರುವ ಚಿಂತನೆಯನ್ನೇ ಉಸಿರಾಡುತ್ತಿರುವ ಅಪರೂಪದ ಸಂಪನ್ಮೂಲ ವ್ಯಕ್ತಿ.

ಅವರ ಸಿದ್ಧಿ ಸಾಧನೆಯನ್ನು ಸೂಕ್ಷ್ಮವಾಗಿ ಗುರುತಿಸಿ ಗೌರವಿಸಿದ, ಆತ್ಮೀಯವಾಗಿ ಸಮ್ಮಾನಿಸಿದ ಉತ್ತರಕನ್ನಡ ಜಿಲ್ಲೆಯ ʻʻ ಪಾವನಾ ಪ್ರತಿಷ್ಠಾನʼʼ ಪ್ರಸ್ತುತ ವರ್ಷದ ಪರಿಸರ ಪ್ರಶಸ್ತಿಯನ್ನು ಬಾಲಚಂದ್ರ ಸಾಯಿಮನೆಯವರಿಗೆ ನೀಡಿತು. ಐವತ್ತು ಸಾವಿರ ರೂಪಾಯಿ ಮತ್ತು ಫಲ ತಾಂಬೂಲ ನೀಡಿ ಗೌರವಿಸಿದವರು, ನಿವೃತ್ತ ಉಚ್ಛನ್ಯಾಯಾಲಯದ ನ್ಯಾಯಾಧೀಶ ಎಚ್. ಎನ್. ನಾಗಮೋಹನದಾಸರು.
ಪ್ರಸ್ತುತ ಪಾವನಾ ಪ್ರತಿಷ್ಠಾನ, ಸುಪ್ರಸಿದ್ಧ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರ ತಂದೆ ತಾಯಿಯವರ ನೆನಪಿನಲ್ಲಿ ಸ್ಥಾಪಿಸಿದ, ಕಳೆದ ಒಂದು ದಶಕದಿಂದ ಪರಿಸರ ನಿಷ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಘಟನೆ.

ಅಡಕೆಗೆ ಹೋದ ಮಾನ ಆನೆಕೊಟ್ಟರೂ ಬಾರದು. ನಿಜಕ್ಕೂ ನಮ್ಮ ಮಲೆನಾಡಿನ ಅಡಿಕೆಬೆಳೆಗಾರರನ್ನೇ ಉದ್ದೇಶಿಸಿ ಸೃಷ್ಟಿಸಿರುವ ಗಾದೆಮಾತಾಗಿರಬಹುದು. ಶತಮಾನಗಳಿಂದ ಅಡಿಕೆ ಬೆಳೆಯಲ್ಲೇ ಬದುಕುತ್ತಿರುವ ಇಲ್ಲಿನ ಕೃಷಿಕರು, ಬೆಳೆಯುವುದು, ಮಾರುವುದು ಬದುಕುವುದು, ಇದೇ ಮೂರು ಸಿದ್ದಾಂತವನ್ನು ನೆಚ್ಚಿಕೊಂಡು ಸಾಲದ ಶೂಲದಲ್ಲಿ ಸದಾ ನರಳುತ್ತಿರುವ ಸ್ಥಿತಿಯನ್ನು ನೋಡುತ್ತಿರುವಾಗಲೇ, ನಮ್ಮದೇ ಪಕ್ಕದ ಚೈನಾ , ಅಡಿಕೆ ಮತ್ತು ಬಿದಿರು ಬೆಳೆಗಳಿಂದ ರೈತರೇ ವೈವಿಧ್ಯಮಯ ಪರ್ಯಾಯ ಉತ್ಪನ್ನಗಳನ್ನು ಸೃಷ್ಟಿಸಿ, ವಿಶ್ವಮಾರುಕಟ್ಟೆಯಲ್ಲಿ ಮಿಂಚುತ್ತಿರುವ, ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿಕೊಂಡ, ಅಲ್ಲಿಯ ರೈತರ ಯಶೋಗಾಥೆಯನ್ನು, ನಮ್ಮನಾಡಿನಲ್ಲಿ ಬಿತ್ತಿದ ಅನನ್ಯ ಸಾಧನೆ ಬಾಲಚಂದ್ರರದ್ದು.

ಚೈನಾ ಅಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಸಾಕಷ್ಟು ಬಾರಿ ಪೆಟ್ಟುತಿಂದು ಸೋತ ಭಾರತೀಯ ಮನಸ್ಸು ಚೀನಾದ ಆಹಾರ ಮತ್ತು ರಾಜಕಾರಣಗಳನ್ನು ವ್ಯಂಗ್ಯವಾಗಿ ಚಿತ್ರಿಸಿಕೊಳ್ಳುತ್ತ, ಹತಾಶೆಯನ್ನು ಮರೆಯಲು ಪ್ರಯತ್ನಿಸುತ್ತದೆ. ಆದರೆ ಕಳೆದೊಂದೆರಡೇ ದಶಕಗಳಲ್ಲಿ, ಆರ್ಥಿಕವಾಗಿ ಬಲಿಷ್ಟಗೊಂಡು ವಿಶ್ವದ ದೊಡ್ಡಣ್ಣನಾಗುವ ಹಂತ ತಲುಪಿದ ಸಾಧನೆ ಮಾತ್ರ ನಮಗೆ ಮಾದರಿಯಾಗಲೇ ಇಲ್ಲ. ಅವರೇ ನೀಡಿದ ಅಗ್ಗದ ದರದ ಟಾರ್ಚ್ ಮತ್ತು ಐಷಾರಾಮೀ ಸಾಮಗ್ರಿಗಳು ಸಹ ಅವರನ್ನು ಅರ್ಥಮಾಡಿಕೊಳ್ಳಲು ಸೋತಿತು. ಕೇವಲ ದೇವಾಲಯ, ಧರ್ಮ ಪ್ರತಿಮೆಗಳಲ್ಲೇ ದಿನದೂಡುತ್ತಿರುವ ನಾವು ನಮ್ಮ ಹಳ್ಳಿಗಳಿಗೆ ಕೊಳ್ಳಿಯಿಟ್ಟೆವು. ನಗರಗಳನ್ನು ಕೊಳೆಗೇರಿಯಾಗಿಸಿದೆವು. ಚೈನಾ ಮಾತ್ರ ನಗರಗಳನ್ನೇ ಹಳ್ಳಿಗೆ ಕರೆ ತಂದಿತು. ಗ್ರಾಮದ ಹಸಿರಿಗೆ ಕಸುವನ್ನಿತ್ತಿತು. ಇಂದು ಅಲ್ಲಿಯ ರೈತ ಕೇವಲ ಕೃಷಿಕನಲ್ಲ. ಕೃಷಿ ಉದ್ಯಮಿ.

ಭೌತವಿಜ್ಞಾನ ಪದವೀಧರರಾಗಿಯೂ ಕೃಷಿವ್ಯವಸಾಯವನ್ನೇ ಅಪ್ಪಿಕೊಂಡ, ಬಾಲಚಂದ್ರರು, ಅರಣ್ಯ ಸಮೀಕ್ಷೆ, ವನ್ಯಜೀವಿ ಸಂಶೋಧನೆಯನ್ನು ಕೈಗೊಳ್ಳುತ್ತಲೇ, ಜರ್ಮನಿ, ನೆದರ್‌ಲ್ಯಾಂಡ್‌ ಚೈನಾಗಳಲ್ಲಿ ಅಧ್ಯಯನ ಪ್ರವಾಸದಲ್ಲಿ ನಿರತರಾಗುತ್ತಾರೆ. ಅಲ್ಲಿಯ ಪರಿಸರ, ಕೃಷಿಸಾಧನೆಗಳನ್ನೇ ಗುರಿಯಾಗಿಸಿಕೊಂಡು, ಅವರ ಪ್ರಯೋಗಶೀಲತೆ, ಆರ್ಥಿಕ ಪ್ರಗತಿಗಳ ಮೂಲವನ್ನು ಶೋಧಿಸುತ್ತಾರೆ. ತಮ್ಮ ಆಸುಪಾಸಿನ ಗಿಡಮರ ಕಾಡು ಕಣಿವೆಗಳನ್ನೇ ತಮ್ಮ ಪ್ರಯೋಗ ಕ್ಷೇತ್ರವಾಗಿಸಿ ಕೊಂಡಿರುವ ಇವರ ಜ್ಞಾನ ಸಾಮರ್ಥ್ಯವನ್ನು ಗುರುತಿಸಿರುವ ಬೆಂಗಳೂರು, ಪುಣೆ ನಗರಗಳ ವಿಜ್ಞಾನ ಸಂಸ್ಥೆಗಳು, ಅವರಿಂದಲೇ ದತ್ತಾಂಶ ಪಡೆಯುತ್ತಿವೆ.

ಇವರನ್ನು ಸಮ್ಮಾನಿಸಿದ ಸಂಸ್ಥೆಯೇ ಪ್ರಕಟಿಸಿದ ʻʻ ಬಾಲಚಂದ್ರರು ಇತ್ತೀಚೆಗೆ ಬರೆದ ʻʻ ಬಿಂಗ್ ಲಾಂಗ್, ಮತ್ತು ಲಂಬನಾಗ್ ʼʼ ಕೃತಿ ಒಂದು ದೃಷ್ಟಿಯಲ್ಲಿ ನಮ್ಮ ದೇಶದ ಸಾಂಪ್ರದಾಯಿಕ ಕೃಷಿಕರ ಕಣ್ಣು ತೆರೆಸುವ ಕೃತಿ. ಅಪ್ಪನೆಟ್ಟ ಆಲದ ಮರಕ್ಕೇ ಜೋತು ಬೀಳುವ ಇಲ್ಲಿಯ ಸಾಂಪ್ರದಾಯಿಕ ಕೃಷಿಕರೆಲ್ಲರೂ ಅವಶ್ಯವಾಗಿ ಓದಬೇಕಾದ ಮಹತ್ವದ ಪುಸ್ತಕವಿದು. ಚೀನಾ ಮತ್ತು ಪಿಲಿಪೈನ್ಸ್‌ ದೇಶದ ಅಡಿಕೆ, ಭತ್ತ ತೆಂಗು ಮತ್ತು ಬಿದಿರು ಬೆಳೆಗಳ, ಬೆಳೆಗಾರರ ಬಗೆಗೆ ಅವರೊಂದಿಗೇ ಉಳಿದು ಅಧ್ಯಯನ ಗೈದ ಅಪೂರ್ವ ಕೃತಿಯಿದು.

ನಮ್ಮ ರಾಜ್ಯದ ಶಾಸಕರು, ಮಂತ್ರಿಮಹೋದಯರು, ಸರಕಾರೀ ಖರ್ಚಿನಲ್ಲಿ ಸಾಕಷ್ಟುಬಾರಿ ಚೈನಾ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಐಷಾರಾಮಿ ಹೋಟೆಲ್ಗಳಲ್ಲಿ ಉಳಿದು, ಅಲ್ಲಿಯ ನಗರ ವೈಭವಗಳನ್ನು ಕಣ್ತುಂಬಿಕೊಂಡು ಮರಳಿದ್ದಾರೆ. ಜನತೆಗೆ ಮಾತ್ರ ಸಿಕ್ಕಿದ್ದು ಅವರ ಪ್ರವಾಸದ ಸುದ್ದಿಮಾತ್ರ.

ಸ್ವಥಃ ಪುಟ್ಟ ಅಡಿಕೆ ಕೃಷಿಕರಾದ ಭಾಲಚಂದ್ರರ ಪ್ರವಾಸ ಇಂಥ ಮಾದರಿಯದ್ದಲ್ಲ. ಅಧ್ಯಯನದ ಯೋಜನಾಬದ್ಧ ಕ್ಷೇತ್ರ ಕಾರ್ಯ. ಸಾಹಸ ಪೂರ್ಣ ಚಟುವಟಿಕೆ. ಚೈನಾದಂಥಹ ಕಮ್ಯೂನಿಷ್ಟ ದೇಶದ ನಿಗೂಢ ಕಾನೂನಿನ ಬಲೆ ಬೇಧಿಸಿ ಕೈಗೊಳ್ಳುವ ಅಧ್ಯಯನ ಅದೊಂದು ಅಪಾಯಕಾರೀ ಕೆಲಸ. ಅವರ ಆಸಕ್ತಿ ಮತ್ತು ಧೈರ್ಯವನ್ನು ನಾವು ಮೆಚ್ಚಲೇಬೇಕು. ಅದು ಹೇಗೆ ಪವಾಡಸದೃಷವಾಗಿ ಚೈನಾ ಪ್ರಗತಿಸಾಧಿಸಿತು, ಅಲ್ಲಿಯ ವಿಜ್ಞಾನಿಗಳ, ಕೃಷಿಕರ, ಸಾಮಾಜಿಕ ಕಾರ್ಯಕರ್ತರ ರಚನಾತ್ಮಕ ಸೇವೆ ಹೇಗಿತ್ತು. ಸಾಂಪ್ರದಾಯಿಕ ಕೃಷಿಕನನ್ನೂ ತರಬೇತು ಗೊಳಿಸಿ, ಕೃಷಿಗೆ ಹೊಸ ಹರಿವು ಹೊಸ ಆಯಾಮ ನೀಡಿದ ಚೈನಾದೇಶದ ಸಾಧನೆಯ ಹಿನ್ನೆಲೆಯನ್ನು ಶೋಧಿಸಿದ ಬಾಲೂ, ನಮ್ಮ ಕಣ್ಣಿಗೆ ಕಟ್ಟುವಂತೇ ವರ್ಣಿಸಿದ ಪರಿ ನಿಜಕ್ಕೂ ರೋಮಾಂಚನಗೊಳಿಸುತ್ತದೆ.

ಎಳೇ ಅಡಿಕೆಯನ್ನು ಸಿಪ್ಪೆಸಹಿತ ಬೇಯಿಸಿ, ಪರಿಮಳ ವಸ್ತುವಿನೊಂದಿಗೆ ಸಂಸ್ಕರಿಸಿ ತಯಾರಿಸುವ ಅಡಿಕೆಗೆ ಚೈನಾ ಭಾಷೆಯಲ್ಲಿ ʻʻ ಬಿಂಗ್ ಲಾಂಗ್ ʼʼ ಎನ್ನುತ್ತಾರಂತೆ. ʻʻ ಅದರ ಜನಪ್ರಿಯತೆಯ ಬಗೆಗೆ ಲೇಖಕರೇ ವರ್ಣಿಸುತ್ತಾರೆ. ವಿದ್ಯಾರ್ಥಿಗಳಿಗಾಗಲೀ, ಅಧ್ಯಾಪಕರಾಗಲೀ ಅಧಿಕಾರಿಗಳಾಗಲೀ ಶ್ರೀ ಸಾಮಾನ್ಯರಾಗಲೀ ಎಲ್ಲರಿಗೂ ಬಿಂಗ್ ಲಾಂಗ್ ಬೇಕು. ಮದುವೆಯಾಗಲೀ, ಶವಸಂಸ್ಕಾರವಾಗಲೀ ಬಿಸಿನೆಸ್ ಕೂಟವಾಗಲೀ ಎಲ್ಲೆಡೆ ಬಿಂಗ್ ಲಾಂಗ್ ಇರಲೇಬೇಕು.ʼʼ ಎಂದು. ʻʻ ಲಂಬನಾಗ್ʼʼ ಎಂದರೆ ತೆಂಗಿನಿಂದ ತಯಾರಿಸಿದ ವೈನ್.

ಚೈನಾದಲ್ಲೂ ಅಡಿಕೆ ಕೃಷಿಗೆ ೧೪೦೦ ವರ್ಷ ಇತಿಹಾಸವಿದೆಯಂತೆ. ಅಲ್ಲಿಯೂ ಉಳಿದ ಕೃಷಿಕರಂತೇ ಅಡಿಕೆ ಕೃಷಿಕರೂ ಬಡತನದ ಕತ್ತರಿಯಲ್ಲಿ ಸಿಲುಕಿದವರೇ ಆಗಿದ್ದರು. ಇತ್ತೀಚಿನ ಅಡಿಕೆಯ ಪರ್ಯಾಯ ಉಪಯೋಗದ ವಿವಿಧ ಆಯಾಮಗಳು ಸೃಷ್ಟಿಯಾದಮೇಲೆಯೇ ಅವರ ಬದುಕು ಸುಸ್ಥಿರತೆಯ ನೆಲೆಗೆ ತಲುಪಿದೆ. ಅಡಿಕೆಯ ಮರ, ಸಹ ವಿವಿಧ ಉಪಕರಣಗಳ ಸೃಷ್ಟಿಗೆ ಮೂಲ ಆಕರವಾಗಿದ್ದು, ರೈತರ ಆರ್ಥಿಕತೆಗೆ ಮತ್ತಷ್ಟು ಚುರುಕು ಮೂಡಿಸಿದೆ.

ಅದರಂತೇ ಬಿದಿರು ವ್ಯವಸಾಯಗಾರರ ಕತೆಯೂ ಸಹ. ಭತ್ತ ಬೆಳೆಗಾರರೂ ಬಿದಿರು ಬೆಳೆದು ಕೋಟಿಗಳಿಸಿದ ವಿವರಗಳು ರೋಮಾಂಚನಗೊಳಿಸುತ್ತದೆ. ಚೀನಾ ದೇಶವೂ ದಶಕಗಳ ಹಿಂದೆಯೇ ಗ್ರಾಮಗಳು ನಗರಕ್ಕೆ ಗುಳೇ ಹೋಗುವುದನ್ನು ಗಂಭೀರವಾಗಿ ಪರಿಗಣಿಸಿತು. ನಗರವನ್ನು ಬಿಟ್ಟು ಹಳ್ಳಿಗೆ ಮರಳಿ ಹೋಗಬಯಸುವವರಿಗೆ ಚೀನಾ ಸರಕಾರ ವಿಶೇಷ ಯೋಜನೆಗಳನ್ನು ರೂಪಿಸಿತು. ರಿಯಾಯತಿ ದರದಲ್ಲಿ ಸರಕಾರಿ ಜಮೀನು ಒದಗಿಸಿತು. ಕೃಷಿಗೆ ಕೈಗಾರಿಕೆಗೆ ಹೆಚ್ಚುವರಿ ಸವಲತ್ತು ನೀಡಿತು. ಇಂದು ಜಗತ್ತಿನಲ್ಲಿಯೇ ಗ್ರಾಮಗಳ ನಗರ ವಲಸೆಯನ್ನು ತಹಬಂದಿಗೆ ತಂದ ಯಶಸ್ವೀ ದೇಶ ಚೀನಾ ಆಗಿದೆ. ʻʻವರ್ಕ್‌ ಫ್ರಾಮ್‌ ಹೋಮ್‌‌ʼʼ ಎಂಬ ನುಡಿಗಟ್ಟು ನಮ್ಮ ದೇಶದಲ್ಲಿ, ಕೊರೋನಾ ಕಾಲದಲ್ಲಿ ಜನಪ್ರಿಯವಾಯಿತು. ಮತ್ತೆ ಗ್ರಾಮಗಳು ಖಾಲಿಯಾಗಿವೆ. ಚೈನಾದಲ್ಲಿ ʻʻ ಮರಳಿ ಭೂಮಿಗೆ ʼʼ ಚಳವಳಿ ಸ್ವರೂಪದಲ್ಲಿ ಪ್ರಾರಂಭವಾಗಿ ಯಶಪಡೆದ ಕತೆ, ನಮ್ಮನ್ನು ಚುಚ್ಚುವಂತಿದೆ. ಗ್ರಾಮಗಳು ಹೊಸ ಹೊಸ ಬೆಳೆಯಲ್ಲಿ, ಮತ್ತು, ಬೆಳೆಗಳ ಸಂಸ್ಕರಿತ ರೂಪದಲ್ಲಿ ಸಿದ್ಧಗೊಂಡು ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಮಿಂಚಿದ ಯಶೋಗಾಥೆ ಮೈನವಿರೇಳಿಸುತ್ತಿದೆ. ಗ್ರಾಮಗಳು, ಮತ್ತೆ ಹಸಿರಾಗುತ್ತಿದೆ. ಯುವ ಸುಶೀಕ್ಷಿತ ತಜ್ಞ ಪಡೆಯೇ ಗ್ರಾಮಗಳಲ್ಲಿ ನೆಲೆಯೂರುತ್ತಿದೆ. ಅವರೇ ಅಭಿವೃದ್ಧಿಪಡಿಸಿದ ಕೃಷಿಪೂರಕ ಯಂತ್ರಗಳು, ಸಂಸ್ಕರಿತ ಹಣ್ಣು ಆಹಾರ ಮತ್ತು ನಿತ್ಯೋಪಯೋಗಿ ವೈವಿಧ್ಯಮಯ ವಸ್ತುಗಳು ಗ್ರಾಮಗಳಲ್ಲಿಯೇ ತಯಾರಿಸುತ್ತಿರುವುದು, ನಮ್ಮ ದೇಶಕ್ಕೆ ದೊಡ್ಡ ಪಾಠವಾಗಬೇಕು.

ಇಷ್ಟೆಲ್ಲ ಮಹತ್ವ ಪೂರ್ಣ ಸಾಧನೆಗಳನ್ನು, ಚೈನಾದಲ್ಲಿ ಪ್ರತ್ಯಕ್ಷಕಂಡ ಬಾಲಚಂದ್ರರು ʻʻ ಹಳ್ಳಿಗಳಲ್ಲಿಯೇ ಉದ್ಯೋಗ ಸೃಷ್ಟಿಸಿರುವ ಚೈನಾದ ಸಾಧನೆಯ ಬಗೆಗೆ ನಮ್ಮ ಸರಕಾರ ಜಾಣ ಕಿವುಡಾಗಿದೆ. ಆಡಳಿತದ ಮಂದಿ, ಸರಕಾರದ ಪ್ರತಿನಿಧಿಗಳು ಈ ಸಮಸ್ಯೆಯನ್ನು ವೇದಿಕೆಯಲ್ಲಿ ಪ್ರಸ್ಥಾಪಿಸುವುದಕ್ಕಿಂತ, ಒಂದಿಂಚೂ ಮುಂದೆ ಹೋಗಿಲ್ಲ. ಸಮಸ್ಯೆಯ ಆಳವನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಏಕೆಂದರೆ ಇದು (ನಗರ ವಲಸೆ ) ಹಳ್ಳಿ ಮತ್ತು ನಗರ ಎರಡನ್ನೂ ಸಮಾನವಾಗಿ ಬಾಧಿಸುತ್ತದೆ. ಚೀನಾದಿಂದ ನಾವು ಈಗಲಾದರೂ ಕಲಿಯಬೇಕಾಗಿದೆ.ʼʼ ಎಂಬ ಎಚ್ಚರವನ್ನು ನೀಡುತ್ತಾರೆ.

ಫಿಲಿಪೈನ್ಸ್‌ ಎಂಬ ಪುಟ್ಟ ದ್ವೀಪರಾಷ್ಟ್ರವೂ ಸಹ ಅಲ್ಲಿಯ ಸಾಂಸ್ಕೃತಿಕ ವೈವಿಧ್ಯ, ಪ್ರಯೋಗಶೀಲತೆ, ಪುಟ್ಟ ಪುಟ್ಟ ಕೈಗಾರಿಕೆಗಳ ಮೂಲಕ ಬದುಕಿಗೆ ಆಧುನಿಕ ಮಿಂಚುಗಳಿಸಿಕೊಂಡ ಯಶದ ಪ್ರಕ್ರಿಯೆಯ ವಿವರಗಳು, ರೋಚಕವೆನ್ನಿಸುತ್ತಿವೆ. ಸಮುದಾಯದಲ್ಲಿರುವ ಅಜ್ಞಾನ ಮತ್ತು ಆಲಸ್ಯ, ಆಡಳಿತದಲ್ಲಿರುವ ಅಶೃದ್ಧೆ ಮತ್ತು ಇಚ್ಛಾಶಕ್ತಿಯ ಕೊರತೆಗಳ ಬಗೆಗೆ, ಕ್ಷ ಕಿರಣ ಬೀರಿರುವ ಪ್ರಸ್ತುತ ʻʻ ಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ ಕೃತಿ ಜನತೆ ಮತ್ತು ಆಳುವ ವರ್ಗಗಳಿಗೆ ಏಕಕಾಲದಲ್ಲಿ ಚುರುಕು ಮುಟ್ಟಿಸುವ ಮೂಲಕ, ಗಮನಸೆಳೆಯುತ್ತಿದೆ. ಇಂಥದೊಂದು ಅಪರೂಪದ ಕೃತಿ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

                                                                                                  -ಸುಬ್ರಾಯ  ಮತ್ತೀಹಳ್ಳಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *