

ಕಸ್ತೂರಿ ರಂಗನ್ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ ಶೇ. 35 ಭಾಗ ಸೂಕ್ಷ್ಮ ಪ್ರದೇಶ- ಜಿಲ್ಲೆಯ ಅಭಿವೃದ್ಧಿ ಕುಂಠಿತ- ಸಾರ್ವಜನಿಕರ ಆತಂಕ
ಶಿರಸಿ(ಉತ್ತರ ಕನ್ನಡ): ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆ ಹಾಗೂ ಶರಾವತಿ ಅಭಯಾರಣ್ಯ ಪರಿಸರ ಅತಿ ಸೂಕ್ಷ್ಮ ಪ್ರದೇಶ ನಿಗದಿಗೊಳಿಸಲು ಸುಪ್ರೀಂಕೋರ್ಟ್ನಿಂದ ಆದೇಶ ಬಂದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವುದಲ್ಲದೇ, ಅರಣ್ಯ ಭೂಮಿ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಆತಂಕ ಉಂಟಾಗಿದೆ.
ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ವರದಿ ತಯಾರಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕರ್ನಾಟಕದ ಹತ್ತು ಜಿಲ್ಲೆಗಳ 1,597 ಹಳ್ಳಿಗಳು ಒಳಪಡುತ್ತವೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಗೊಂಡಿವೆ.
ಇದು ಜಿಲ್ಲೆಯ ಸಂಪೂರ್ಣ ಜನಜೀವನದ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತಾಗಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಬಂಧಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋದ್ಯಮಕ್ಕೆ ಮಾರಕ, ಟೌನ್‌ಶಿಪ್ ಮತ್ತು ಬಹುಮಡಿಗೆ ಕಟ್ಟಡಗಳಿಗೆ ನಿರ್ಬಂಧ , ವಾಣಿಜ್ಯಕರಣ ಮುಂತಾದ ನಿರ್ಬಂಧ ಗ್ರಾಮಸ್ಥರ ಜೀವನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ ಅಭಿವೃದ್ಧಿಗೆ ಮಾರಕವಾಗಲಿದೆ.
ಯಥಾಸ್ಥಿತಿಯಲ್ಲಿ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ : ಈ ಬೆಳವಣಿಗೆ ಬಗ್ಗೆ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕಸ್ತೂರಿ ರಂಗನ್ ವರದಿಯ ಬಗ್ಗೆ ಮಲೆನಾಡು ಭಾಗದ ಶಾಸಕರುಗಳು ಹಾಗೂ ಸಚಿವರುಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜೊತೆ ಸೋಮವಾರವಷ್ಟೇ ಸಭೆ ನಡೆಸಿದ್ದೇವೆ. ಇದು ಕೇಂದ್ರ ಸರ್ಕಾರದಿಂದ ಜಾರಿಗೆ ಬಂದ ಯೋಜನೆಯಾಗಿದೆ. ಆದರೂ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಸ್ತೂರಿ ರಂಗನ ವರದಿಗೆ ಉತ್ತರ ಕನ್ನಡದಲ್ಲಿ ವಿರೋಧ
ಈಗಿರುವ ಅರಣ್ಯ ಸಮಸ್ಯೆಗಳೇ ಸಾಕಾಗಿದೆ. ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ನಾವು ಇಟ್ಟು ಹೋಗಬೇಕು ನಿಜ ಆದರೆ ಇಲ್ಲಿನ ಜನರು ಸಹ ಬದುಕಬೇಕು. ತೂಗುಗತ್ತಿಯನ್ನು ತಲೆಮೇಲೆ ಇಟ್ಟು ಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಯಥಾಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜನಜೀವನಕ್ಕೆ ಅಭಿವೃದ್ಧಿಗೆ ಪೂರಕವಾಗುವಂತಹ ಅಂಶಗಳನ್ನು ಈಗಾಗಲೇ ತಿಳಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು. (ಈಟಿಬಿಕೆ)
