
ಈಗ್ಗೆ 8 ವರ್ಷದ ಹಿಂದೆ ಅಪಘಾತವಾಗಿ ನಂತರ ಪರಿಹಾರವಾಗಿ ಬರಬೇಕಾದ ಹಣ ಖಾತೆಗೆ ಬರಬೇಕಿತ್ತು . ಎರಡು ರೀತಿಯಲ್ಲಿ ಆ ಹಣ ಸಂದಾಯವಾಗುತ್ತದೆ. ಕೋರ್ಟ್ ನಿಂದ ಆದೇಶವಾದ ನಂತರ ಒಂದಿಷ್ಟು ನೇರ ಖಾತೆಗೆ ಮತ್ತೊಂದಿಷ್ಟು ಅರ್ಧ ಬಾಂಡ್ ರೂಪದಲ್ಲಿ ಕೈಸೇರುತ್ತದಂತೆ. ಆದೇಶವಾಗಿ ಆರು ಏಳು ತಿಂಗಳ ನಂತರ ಅರ್ಧ ಹಣ ಖಾತೆ ಸೇರಿತ್ತು. ಉಳಿದ ಅರ್ಧ ಒಂದು ವರ್ಷವಾದರೂ ಬಾಂಡ್ ಕೈಸೇರಿರಲಿಲ್ಲ. ಕೇಳಲು ಹೋದರೆ ಬ್ಯಾಂಕಿಗೆ ಕಳಿಸಿದ್ದೇವೆ ಅಂತ ಇಲ್ಲಿ, ಇಲ್ಲಿಗೆ ಬಂದಿಲ್ಲ ಅಂತ ಅಲ್ಲಿ ಓಡಾಡಿಸಿ ಸತಾಯಿಸಿ.. ಹೀಗೇ ಮುಂದುವರೆದಿದೆ.

” ಹೇಳೋರು ಕೇಳೋರು ಯಾರೂ ಇಲ್ಲ ” ಅಂತಾರಲ್ಲ ಹಾಗಾಗಿ ಜಡ್ಡು ಹಿಡಿದ ವ್ಯವಸ್ಥೆ ಅಲ್ಲಲ್ಲೇ ಸ್ಥಗಿತವಾಗಿದೆ. ಮತ್ತದು ಹಾಗೇ ಇರಬೇಕು ಕೂಡ!! ಇಲ್ಲಾಂದ್ರೆ ನಮ್ಮಗಳಿಗೆ ಕೆಲಸವೇ ಇಲ್ಲದಂತಾಗುತ್ತದಲ್ಲ.
ಇರಲಿ..
ಬ್ಥಾಂಕಿನಲ್ಲಿ ವಿಚಾರಿಸಲೆಂದು ಹೋದಾಗ ಅಲ್ಲಿಗೊಬ್ಬರು ಗ್ರಾಹಕರು ಉದ್ವೇಗದಲ್ಲಿ ಬಂದು ಮ್ಯಾನೇಜರರನ್ನು ವಿಚಾರಿಸತೊಡಗಿದರು. ತಮ್ಮ ಹಳ್ಳಿಯ ಯಾವುದೊ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಅವರು ಎ ಟಿ ಎಂ ನಿಂದ ಹಣ ಸೆಳೆದಿದ್ದರಂತೆ. ಪಿನ್ ಒತ್ತಿ ಇನ್ನೇನು ಹಣ ಹೊರಬರಬೇಕು ಅಷ್ಟರಲ್ಲಿ ನೆಟ್ ಕೈಕೊಟ್ಟಿದೆ. ಹಣ ಹೊರಬಂದಿಲ್ಲ ಆದರೆ ಅಕೌಂಟಿನಲ್ಲಿ ‘ಹಣ ಪಡೆದಿದ್ದೀರಿ ‘ಎಂಬ ಸಂದೇಶ ಬಂದಿದೆ. ಕಂಗಾಲಾದ ಅವರು ಮೊದಲು ಆ ಬ್ಯಾಂಕಿನಲ್ಲಿ ವಿಚಾರಿಸಿದರೆ ಅವರು, ಮೂಲ ಬ್ಯಾಂಕ್ ನಲ್ಲಿಯೇ ಹೋಗಿ ಕೇಳಿ ಎಂದಿದ್ದಾರೆ. ಆ ವ್ಯಕ್ತಿ ಈ ಬಗ್ಗೆ ವಿಚಾರಿಸಿ, ಮುಖ್ಯ ಕಚೇರಿಗೆ ದೂರು ನೀಡಿ, ಫೋನ್ ನಲ್ಲಿ ದೂರು ನೀಡಿ, ಅದು ‘ ದೂರು ದಾಖಲಾಗಿದೆ ‘ ಅಂತ ಉತ್ತರಿಸಿ ತಿಂಗಳಾದರೂ ಯಾವುದೇ ಪ್ರಯೋಜನ ಕಂಡಿಲ್ಲ. ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಎಲ್ಲರೂ ಮತ್ತೊಬ್ಬರ ಮೇಲೆ ಜವಾಬ್ದಾರಿ ಹೇರಿ ನುಣುಚಿಕೊಳ್ಳುತ್ತಿದ್ದಾರೆ.
ಅಮೇಜಾನ್ ಪ್ರೈಮ್ ನಲ್ಲಿ ನೋಡಿದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ” ಫಿಲ್ಮ್ ದೃಶ್ಯಗಳೆಲ್ಲ ಕಣ್ಮುಂದೆ ಬಂದುಹೋಯಿತು.
ಖಾತೆಯಿಂದ ಕಡಿತವಾದ ಹೆಚ್ಚಿನ ಹಣದ ಕಾರಣಕ್ಕಾಗಿ ವ್ಯಕ್ತಿಯೊಬ್ಬರು ಅನುಭವಿಸಿದ ಕೋಟಲೆಗಳನ್ನೆಲ್ಲಾ ಮತ್ತು ವ್ಯವಸ್ಥೆಯ ದರಿದ್ರತನವನ್ನು ಯಥಾವತ್ತು ತೆರೆದಿಟ್ಟ ಸಿನೆಮಾವಿದು. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿ ಈ ಸಂಕಷ್ಟದ ಅರಿವಿದ್ದೇ ಇರುತ್ತದೆ. ದೈನಂದಿನ ಉಪಯೋಗಕ್ಕೆಂದು ಕಷ್ಟಪಟ್ಟು ಗಳಿಸಿದ್ದ ಹಣ ಕಳೆದುಕೊಂಡು ವೈಯಕ್ತಿಕ ನಷ್ಟವಲ್ಲದೆ ಮಾನಸಿಕ ಕ್ಷೋಭೆ, ಆತಂಕ, ನೋವನ್ನು ಅನುಭವಿಸಿ ಕಡೆಗೆ ಜಯ ದಕ್ಕಿಸಿಕೊಂಡರೂ ಅಲ್ಲೀವರೆಗೆ ಅವರ ಅನುಭವಕ್ಕೆ ಬಂದ ದಯನೀಯ ಸಂಕಟಕ್ಕೆ ಹೊಣೆ ಯಾರು? ಯಾಕೆ ಅನುಭವಿಸಬೇಕು? ತಮ್ಮದಲ್ಲದ ತಪ್ಪಿನ ಹೊರೆಯನ್ನು ಹೊತ್ತು ಯಾಕೆ ತೊಳಲಾಡಬೇಕು ? ಸಮಯ ಹಣ ಶ್ರಮ ಎಲ್ಲವನ್ನೂ ಈ ಅಸಹಜ , ಅಸಹನೀಯ ವ್ಯವಸ್ಥೆಗಾಗಿ ಯಾಕೆ ವಿನಿಯೋಗಿಸಬೇಕು?
ಏನೆಲ್ಲಾ ಪ್ರಶ್ನೆಗಳು ಧುಮ್ಮಿಕ್ಕಿ ಮನಸು ಹೊಯ್ಧಾಡುತ್ತದೆ.
ಸುಂದರವಾದ ಶರಾವತಿ ಪರಿಸರ, ಹಸಿರು ಪ್ರಕೃತಿ, ಆ ಭಾಗದ ಜನಜೀವನ, ಭಾಷೆ, ವ್ಯಾಪಾರ , ವ್ಯವಹಾರ , ಸ್ನೇಹ, ಒಡನಾಟ, ಎಲ್ಲ ಸೂಕ್ಷ್ಮ ವಿವರಗಳನ್ನು ದಾಖಲಿಸುತ್ತಾ, ಸಹಜ ಅಭಿನಯ, ನಾಟಕೀಯ ದೃಶ್ಯಗಳೊಂದಿಗೆ ನವಿರಾದ ಹಾಸ್ಯ ಬೆರೆಸಿ ಹದಪಾಕದ ತಯಾರಿಯನ್ನು ತೆರೆಯೋಣ ಮೇಲೆ ತಂದಿದ್ದಾರೆ ನಿರ್ದೇಶಕರು. ವೈವಿಧ್ಯ ಬದುಕಿನ ಅನಾವರಣ, ಆಪ್ತವೆನಿಸುವ ಸಂಭಾಷಣೆ, ಮುಗ್ಧರು- ಜಾಣರು , ಸರಳ ಜೀವಿಗಳು ಇಲ್ಲಿನ ಪಾತ್ರವರ್ಗ. ಅಬ್ಬರ ಆಡಂಬರವಿಲ್ಲ. ಯಾವುದೇ ಕೃತಕತೆ ಯಿಲ್ಲದ ಸೀದಾ ಸಾದಾ ಮಂದಿ ಹಾಗೂ ದೃಶ್ಯಗಳು.
ಹಳ್ಳಿ ಬದುಕಿಗೆ ಬೇಸತ್ತು ಶಹರ ಸೇರುವ , ಶಹರದಿಂದ ಹಿಂಜರಿದು ಮಲೆನಾಡಿನ ಹಳ್ಳಿಯನ್ನು ಇಷ್ಟಪಡುವ ವೈರುಧ್ಯ ವ್ಯಕ್ತಿತ್ವದ ನಾಯಕಿಯರು ಕಡಿಮೆ ಅವಧಿಯಲ್ಲೂ ನಟನೆ ಮೂಲಕ ಗಮನಸೆಳೆಯುತ್ತಾರೆ. ಹಾಸ್ಯ ಪ್ರಸಂಗಗಳು ಗುಣಮಟ್ಟದಿಂದ ಕೂಡಿವೆ.
ಪರಿವಾರವೆಲ್ಲ ಕುಳಿತು ವೀಕ್ಷಿಸಬಹುದಾದ ಚಿತ್ರ ಇದು.
ಇಡೀ ಚಿತ್ರರಂಗಕ್ಕೆ ಅಭಿನಂದನೆಗಳು.
ಚಿರಪರಿಚಿತ ಮುಖಗಳು ಖುಷಿ ಕೊಟ್ಟವು. ರಂಜನಿ ರಾಘವನ್, ಆಕರ್ಷ್ ಕಮಲ , ಮೊದಲಾದವರ ಅಭಿನಯ ಕಚಗುಳಿಡುವಂತದ್ದು.
ಖುಷಿಯಾಯ್ತು ನೋಡಿ.
-ಮಮತಾ ಅರಸಿಕೆರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
