

ತಮ್ಮಣ್ಣ ಬೀಗಾರರ ಪರಿಚಯ
‘ತಮ್ಮಣ್ಣ ಬೀಗಾರ’ ಎಂಬ ಕಾವ್ಯ ನಾಮದಿಂದ ಮೂರು ದಶಕಗಳಿಂದ ಬರೆಯತ್ತಿರುವ ತಮ್ಮಣ್ಣ ಕೋಮಾರ ಅವರು ನವೆಂಬರ ೨೨, ೧೯೫೯ ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದವರು. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಶಿಕ್ಷಕರಾಗಿ ಮೂವತ್ತೇಳು ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುತ್ತಾರೆ. ಸಿದ್ದಾಪುರದಲ್ಲಿ ವಾಸಿಸಿರುವ ಇವರು ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು.
ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನು ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ-ನೀತಿಗಳ ಹಂಗಿಲ್ಲದೆ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ ಅವರು. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಗದ್ಯ ಹಾಗೂ ಕವಿತೆಗಳಲ್ಲಿ ಅಡಕವಾಗಿವೆ. ಮಲೆನಾಡಿನ ಮಕ್ಕಳ ಬದುಕು ಮತ್ತು ಅವರ ಬದುಕಿನ ಸಂಗತಿಗಳು ತುಂಬಾ ವೈವಿಧ್ಯಮಯವಾಗಿ ಅರಳಿಕೊಳ್ಳುವುದನ್ನು ಕಾಣಬಹುದು. ಬೆಟ್ಟ-ಕಣಿವೆಗಳನ್ನು ಏರಿ ಇಳಿದ ಮಕ್ಕಳ ಖುಷಿ, ವಿನೋದ, ಹುಡುಗಾಟಿಕೆ ಮುದ ನೀಡುತ್ತವೆ. ಅದೇರೀತಿ ಅಲ್ಲಿಯ ವೈರುಧ್ಯಗಳನ್ನು ಕೂಡಾ ಹೇಳಲು ತಮ್ಮಣ್ಣ ಅವರು ಹಿಂಜರಿಯಲಾರರು. ಮೊದಲಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. ಒಂದು ರೀತಿಯಲ್ಲಿ ಅದು ಯಾವುದೇ ನಿಡುಸುಯ್ಯುವಿಕೆ ಇಲ್ಲದ ನಿಸರ್ಗದ ನಿತ್ಯೋತ್ಸವ.
.
‘ಗುಬ್ಬಚ್ಚಿ ಗೂಡು’ ‘ಚಿಂವ್ ಚಿಂವ್’ ‘ಜೀಕ್ ಜೀಕ್’ ‘ಪುಟಾಣಿ ಪುಡಿಕೆ’ ‘ಸೊನ್ನೆ ರಾಶಿ ಸೊನ್ನೆ’ ‘ತೆರೆಯಿರಿ ಕಣ್ಣು’ ‘ಖುಷಿಯ ಬೀಜ’ ‘ಹಾಡಿನ ಹಕ್ಕಿ’ ಮುಂತಾದ ಮಕ್ಕಳ ಕವನಸಂಕಲನಗಳು, ‘ಕಪ್ಪೆಯ ಪಯಣ’ ‘ಜಿಂಕೆ ಮರಿ’ ‘ಹಸಿರೂರಿನ ಹುಡುಗ,’ ‘ಮಲ್ನಾಡೆ ಮಾತಾಡು’, ‘ಅಮ್ಮನ ಚಿತ್ರ,’ ‘ಪುಟ್ಟನ ಕೋಳಿ’, ‘ಉಲ್ಟಾ ಅಂಗಿ’ ‘ಗಿರಗಿಟ್ಟಿ’ ‘ನಕ್ಷತ್ರ ನೋಡುತ್ತ’ ‘ಪುಟ್ಟಿಯೂ ಹಾರುತ್ತಿದ್ದಳು’ ಮುಂತಾದ ಮಕ್ಕಳ ಕಥಾಸಂಕಲನಗಳು .
‘ಮಾತಾಟ ಮಾತೂಟ’, ‘ಮರಬಿದ್ದಾಗ’, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳು, ‘ಬಾವಲಿ ಗುಹೆ’ ‘ಫ್ರಾಗಿ ಮತ್ತು ಗೆಳೆಯರು’ ಎಂಬ ಮಕ್ಕಳ ಕಾದಂಬರಿಗಳೂ ಸೇರಿ ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ. ಆಕಾಶವಾಣಿಯಲ್ಲಿ ಇವರ ಕವಿತಗಳು, ದೂರದರ್ಶನದಲ್ಲಿ ಕಲಾಕೃತಿ ಹಾಗೂ ಸಂದರ್ಶನ ಪ್ರಸಾರ ಆಗಿವೆ. ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ಫ್ರಾಗಿ ಮತ್ತು ಗೆಳೆಯರು ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಇದಲ್ಲದೇ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ.

