ರಾಹುಲ್…ಎದೆಗೆ ಇರಿಯುವ ಮಾನವೀಯತೆ!


ಸಿಂಗಪೂರ್ ಪ್ರವಾಸದ ಸಂದರ್ಭದಲ್ಲಿ ಐ.ಐ.ಎಂ. ಹಳೆ ವಿದ್ಯಾರ್ಥಿಗಳ ಸಂಗಡ ಸಂವಾದ ಕಾರ್ಯಕ್ರಮದ್ದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ನಾನು ಮತ್ತು ತನ್ನ ಅಕ್ಕ, ತಮ್ಮ ತಂದೆಯ ಕೊಲೆಗಾರರನ್ನು ಸಂಪೂರ್ಣವಾಗಿ ಕ್ಷಮಿಸಿದ್ದೇವೆ,” ಎಂದು ಹೇಳಿದ್ದಾನೆ.

ಅದೇ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ನನ್ನ ಅಜ್ಜಿ ಮತ್ತು ನನ್ನ ತಂದೆಯ ಹತ್ಯೆಗೊಳಗಾಗುವ ಸಂಭವ ಇತ್ತು ಎಂದು ನನಗೆ ತಿಳಿದಿತ್ತು,” ಎಂದು ಹೇಳಿದ ರಾಹುಲ್ ಗಾಂಧಿ, “ಮೊದಲಿಗೆ ನನ್ನೊಳಗೆ ತುಂಬಾ ನೋವು ಮತ್ತು ಸಿಟ್ಟು ಇದ್ದಿತ್ತು. ಆದರೆ ಕ್ರಮೇಣ ನಾನು ಎಲ್ಲರನ್ನು ಕ್ಷಮಿಸಿದೆ,” ಎಂದ. “ಇತಿಹಾಸದಲ್ಲಿ ಅದೆಷ್ಟೋ ಶಕ್ತಿಗಳು ಒಂದಕ್ಕೊಂದು ಡಿಕ್ಕಿಯಾಗುತ್ತವೆ, ಅಂಥಾ ಘರ್ಷಣೆಗಳಲ್ಲಿ ಸಾವು ನೋವು ಉಂಟಾಗುತ್ತವೆ,” ಎಂದು ಹೇಳುತ್ತಾ, ತನ್ನ ಮಾತನ್ನು ಅಷ್ಟಕ್ಕೇ ನಿಲ್ಲಿಸದೆ ಆತ, “ಎಲ್.ಟಿ.ಟಿ.ಈ. ಮುಖಂಡ ಪ್ರಭಾಕರನ್ ಹತ್ಯೆಯಾದಾಗ ನನಗೆ ಆತನ ಮಕ್ಕಳ ನೆನಪಾಯಿತು ಮತ್ತು ಅದಕ್ಕೆ ನಾನು ಆ ಸ್ಥಿತಿಯಲ್ಲಿದ್ದ ಅನುಭವದ ಸ್ಮೃತಿ ಕಾರಣ,” ಎಂದ ರಾಹುಲ್ ಗಾಂಧಿ.

ದ್ವೇಷದ ಮಾತುಗಳೇ ಹೆಚ್ಚುತ್ತಿರುವ ರಾಜಕೀಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕ್ಷಮೆ, ದುಃಖ, ನೋವು ಇಂಥಾ ಮಾನವೀಯ ಸ್ಪರ್ಷವುಳ್ಳ ಮಾತುಗಳನ್ನು ಆಡಿದ್ದು ಅವನ ಘನತೆಯನ್ನು ಹೆಚ್ಚಿಸಿದೆ. ಕಳೆದ ಕೆಲವು ಸಮಯದಿಂದ ಪುನರುತ್ಥಾನಗೊಳ್ಳುತ್ತಿರುವ ರಾಹುಲ್ ಗಾಂಧಿಯ ಈ ಮಾತುಗಳು, ತೋರಿಕೆಗೆಗಾಗಿ ಆಡಿದಂತ ಮಾತುಗಳು ಎಂದೆನಿಸದೆ ಪ್ರಾಮಾಣಿಕ ಮಾತುಗಳಾಗಿ ಕಂಡು ಬಂದು, ಅವನ ಬಗ್ಗೆ ಕೆಲವರಲ್ಲಿ ಒಂದಿಷ್ಟು ವಿಶ್ವಾಸ ಮೂಡಿಸಿದೆ.

ಆದರೂ ೫೬ ಇಂಚಿನ ವಿಶಾಲ ಎದೆಯನ್ನು ತಮ್ಮ ನಾಯಕನಲ್ಲಿ ನೋಡ ಬಯಸುವ ದೇಶದ ಜನರ ಕಣ್ಣಲ್ಲಿ ಈ ಹೃದಯವಂತ ಮಾತು, ಮನಸ್ಸು ಮತ್ತೆ ಜೋಕ್ ಆದರೆ ಅಚ್ಚರಿಯಿಲ್ಲ.


ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ಒಬ್ಬ ನಾಯಕನ ಗುಣವುಳ್ಳ ವ್ಯಕ್ತಿ ಎಂದು ಯಾವತ್ತೂ ಅನಿಸಿಲ್ಲ. ಆತನ ಅಭಿಮಾನಿಯೂ ಅಲ್ಲ, ಹಿಂಬಾಲಕನೂ ಅಲ್ಲ. ಆದರೂ ನನಗೆ ರಾಹುಲ್ ಗಾಂಧಿ ಕುರಿತು ಬಹಳ ಕಾಲದಿಂದ ಸಾಫ್ಟ್ ಕಾರ್ನರ್!

ರಾಹುಲ್ ಗಾಂಧಿ ತನ್ನ ಹತ್ತನೇ ವಯಸ್ಸಿಗೆ ತನ್ನ ಚಿಕಪ್ಪನ ಸಾವು ಕಂಡ. ಅವನು ಹದಿನಾಲ್ಕನೇ ವಯಸ್ಸಿರುವಾಗ ಆತ ಯಾರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದ ನೋ ಅವರ ಕೈಯಿಂದಲೇ ಆತನ ಅಜ್ಜಿಯ ಹತ್ಯೆಯಾಯಿತು. ರಾತ್ರಿ ಬೆಳಗಾಗುವುದರಲ್ಲಿ ಆ ತನಕ ರಾಜಕೀಯದಿಂದ ದೂರ ಉಳಿದಿದ್ದ ಅವನ ತಂದೆ ದೇಶದ ಪ್ರಧಾನಿಯಾದ, ಕೆಲ ವರ್ಷಗಳಲ್ಲಿ ಹತ್ಯೆಯಾದ. ಅವನ ತಾಯಿಯನ್ನು ಈ ದೇಶದ ಜನ ಪ್ರೀತಿಯಿಂದ ಸ್ವೀಕರಿಸಲಿಲ್ಲ. ಆಕೆ ಅನ್ಯಳು ಎಂದು ವಿಧವಿಧವಾದ ರೀತಿಯಲ್ಲಿ ಮತ್ತೆ ಮತ್ತೆ ಹೇಳುತ್ತಾ ಬರಲಾಯಿತು. ಮುಂದೆ ಆಕೆ ಪ್ರಧಾನಿ ಆಗಬಹುದು ಎಂದಾಗ ಆಕೆಯ ವಿರುದ್ಧ ಅಸಂಖ್ಯ ಮಂದಿ ವಿಷ ಕಾರಿದರು, ಸುಶ್ಮಾ ಸ್ವರಾಜ್ ನಂಥವರು ಅಸಂಬದ್ಧ ಮಾತನಾಡಿ ಆತನ ತಾಯಿಯನ್ನು ಅವಮಾನಿಸಿದಳು. ಇದನ್ನೆಲ್ಲಾ ರಾಹುಲ್ ಹತ್ತಿರದಿಂದ ನೋಡಿದ.

ಈ ಎಲ್ಲಾ ಸಂಗತಿಗಳು ಅವನ ಮೇಲೆ ಎಂಥಾ ಪ್ರಭಾವ ಬೀರಿರಬಹುದು? ತನ್ನ ಬೆಳೆಯುವ ದಿನಗಳಲ್ಲಿ ಇಷ್ಟೆಲ್ಲಾ ಸಾವು, ನೋವು, ದ್ವೇಷ, ವಿಷ ನೋಡಿದ ಅನುಭವಿಸಿದ ರಾಹುಲ್ ಗಾಂಧಿ ಅಂತರಂಗ ಯಾವ ರೀತಿಯಲ್ಲಿ ರೂಪಿತಗೊಂಡಿರಬಹುದು? ಇಷ್ಟೆಲ್ಲಾ ಅನುಭವಗಳನ್ನು ತನ್ನೊಳಗೆ ಇರಿಸಿಕೊಂಡ ರಾಹುಲ್ ಗಾಂಧಿಯ ಸ್ವಗತ ಏನಿರಬಹುದು? ಹೇಗಿರಬಹುದು? ಇಷ್ಟು ವರುಷಗಳ ಕಾಲ ಆತ ತನ್ನೊಂದಿಗೆ ನೆಡೆಸಿಕೊಂಡ ಸಂಭಾಷಣೆ ಏನು? ಆತನನ್ನು ಕಾಡಿದ ದುಃಸ್ವಪ್ನಗಳು ಯಾವುದು?

ಇಂದಿರಾ ಗಾಂಧಿ ಚಿತೆಯ ಬಳಿ ನೆಡೆದ ಒಂದು ಹೃದಯಸ್ಪರ್ಶಿ ಘಟನೆಯನ್ನು ಉಷಾ ಕಟ್ಟೆಮನೆ ತಮ್ಮ ಒಂದು ಲೇಖನದಲ್ಲಿ ಬರೆದಿದ್ದಾರೆ. ಚಿತೆ ಹೊತ್ತಿ ಉರಿಯುತ್ತಿದೆ. ಅಲ್ಲಿಗೆ ಮನೆತನದಿಂದ ದೂರವಾದ ಮೇನಕಾ ಗಾಂಧಿ ತನ್ನ ಪುಟ್ಟ ಕಂದ ವರುಣ್ ಗಾಂಧಿ ಜೊತೆ ಬರುತ್ತಾಳೆ. ರಾಹುಲ್ ಗಾಂಧಿ ತನ್ನ ಅಕ್ಕ ಪ್ರಿಯಾಂಕಾ ಗಾಂಧಿ ಪಕ್ಕದಲ್ಲಿ ನಿಂತಿದ್ದಾನೆ. ಮೇನಕಾ ಗಾಂಧಿ ತನ್ನ ಮಗನನ್ನು ಪಕ್ಕದಲ್ಲಿ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿದ್ದಾಳೆ. ಆ ಕ್ಷಣದಲ್ಲಿ ಸಾವಿನ ಗಾಂಭೀರ್ಯ, ತನ್ನ ಮನೆತನದ ಘನತೆ, ಅಲ್ಲಿ ಉಂಟಾದ ಸಾವಿನ ಪರಿಣಾಮ್ ಇದ್ಯಾವುದರ ಅರಿವೂ ಇಲ್ಲದ ಪುಟ್ಟ ವರುಣ್ ಅನ್ನು ಪ್ರಿಯಾಂಕಾ ಕೈ ಹಿಡಿದು ತನ್ನ ಬಳಿ ಕರೆದುಕೊಳ್ಳುತ್ತಾಳೆ, ಪ್ರೀತಿಯಿಂದ ಆತನನ್ನು ತನ್ನ ಬಳಿಯೇ ಆಪಿಕೊಂಡು ಇರಿಸಿಕೊಳ್ಳುತ್ತಾಳೆ.

ಈ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲ ನನ್ನಲ್ಲಿ ಮೂಡುವ ಪ್ರಶ್ನೆ: ರಾಹುಲ್ ಗಾಂಧಿ ಇನ್ನೂ ಹಸಿ ಮನಸ್ಸಿನವಾಗಿರುವಾಗಲೇ ಆತನ ಮುಂದೆ ಭೀಕರ ಘಟನೆಗಳು ಸಂಭವಿಸಿದವು. ಅವನ ಮನಸ್ಸು ಹಸಿಯಾಗಿದ್ದರೂ ತನ್ನ ಮುಂದೆ ಘಟಿಸುತ್ತಿರುವ ಘಟನೆಗಳು ಅರ್ಥವಾಗದಷ್ಟು ಸಣ್ಣವನಲ್ಲ. ಕಂಡದ್ದು ಅರ್ಥವಾಗುತ್ತಿತ್ತು, ಆದರೆ ಅದ್ದನ್ನು ಪ್ರಬುದ್ಧವಾಗಿ ಅರ್ಥೈಸಿಕೊಂಡು ನಿಭಾಯಿಸಬಲ್ಲ ಪ್ರೌಢಿಮೆ ಇರದ ವಯಸ್ಸದು. ಆ ಸಂದರ್ಭದಲ್ಲಿ ಮತ್ತು ಮುಂದೆ ಅವನ ತಾಯಿಯ ವಿರುದ್ಧ ವಿಷ ಕಾರಲಾದ ಸಂದರ್ಭದಲ್ಲಿ, ಅವನನ್ನೇ ಒಂದು ಜೋಕ್ ಮಾಡಿದ ಸಂದರ್ಭದಲ್ಲಿ, ಪ್ರಿಯಾಂಕಾ ವರುಣನನ್ನು ಬಳಿಗೆಳೆದುಕೊಂಡಂತೆ ಯಾರಾದರೂ ಪ್ರೀತಿಯಿಂದ ಅವನ ಕೈ ಹಿಡಿದು ಸಾಂತ್ವನ ನೀಡಿದರೆ? ಆ ಸಂದರ್ಭಗಳಲ್ಲಿ ಅವನ ಮನಸ್ಸಿಗೆ ಅಗತ್ಯವಾಗಿ ಬೇಕಾದ ಭದ್ರತಾ ಭಾವನೆ ಹುಟ್ಟಿಸಲು ಯಾರಾದರೂ ಪ್ರಯತ್ನ ಪಟ್ಟರೆ? ಒಂದು ವೇಳೆ ಪ್ರಯತ್ನ ಪಟ್ಟಿದ್ದರೂ ಅದು ಅವನ ಅಂತರಂಗಕ್ಕೆ ಅಗತ್ಯ ಬೇಕಾಗುವಷ್ಟು ದೊರಕಿತೆ? ಆತನೊಳಗೆ ಸದಾ ಇದ್ದಿರಬಹುದಾದ ಭಯ ಮತ್ತು ತಿರಸ್ಕೃತಾ ಭಾವನೆಯನ್ನು ಅಳಿಸುವಷ್ಟು ಪ್ರೀತಿ, ವಿಶ್ವಾಸ, ಸಾಂತ್ವನ, ಧೈರ್ಯ ಅವನಿಗೆ ಸಿಕ್ಕಿತೆ?

ದಲಿತ್ ಪ್ಯಾಂಥರ್ ಕವಿ ನಾಮ್ದೇವ್ ಢಸಾಳ್ ಕುರಿತು ಬರೆಯುವ ಸಂದರ್ಭದಲ್ಲಿ ದಿಲೀಪ್ ಚಿತ್ರೆ ಹೀಗೆ ಹೇಳುತ್ತಾನೆ: “ಎಳೆ ವಯಸ್ಸಿನಲ್ಲಿ ಅನುಭವಿಸಿದ ಯಾತನೆ, ಸಂಕಷ್ಟಗಳ ಭಾರ ಹೊರುವುದು, ಹೊತ್ತಿಕೊಂಡು ಬದುಕುವುದು ಸುಲಭವಲ್ಲ. ವಯಕ್ತಿತ್ವವನ್ನು ರೂಪಿಸುವುದು ಮಾತ್ರವಲ್ಲದೆ, ವ್ಯಕ್ತಿತ್ವದ ಭಾಗವೇ ಆಗಿಹೋಗುವ ಈ ಸಂಕಟಗಳನ್ನು ಮೀರಿ ಬೆಳೆಯಲು ಅತಿಮಾನವ ಶಕ್ತಿ ಮತ್ತು ಚೈತನ್ಯ ಬೇಕಾಗುತ್ತದೆ.”
ಒಡಲಲ್ಲಿ ಬೆಂಕಿ ಇಟ್ಟುಕೊಂಡು ಬೆಳೆದ ರಾಹುಲ್ ಗಾಂಧಿಗೂ ಈ ಮಾತು ಅನ್ವಯಿಸುತ್ತದೆ.

ಸಹಜವಾದ ಬಾಲ್ಯ, ಯವ್ವನ, ಬೆಳವಣಿಗೆ ಕಾಣದ ವ್ಯಕ್ತಿ, ಭಯ, ಆತಂಕ, ತಿರಸ್ಕೃತಾ ಭಾವನೆ ಹೊತ್ತು ಬೆಳೆದ ವ್ಯಕ್ತಿ ಓರ್ವ ನಾಯಕನ ಗುಣ ಬೆಳೆಸಿಕೊಳ್ಳುವುದು ಬಿಡಿ, ಸಾಮಾನ್ಯ ಜೀವನಕ್ಕೆ ಬೇಕಾಗುವ ಬದುಕಿನ ಸೂತ್ರಗಳನ್ನು ಬೆಳೆಸಿಕೊಳ್ಳಲು ಕಷ್ಟ ಪಡುತ್ತಾನೆ. ಅಷ್ಟು ಸಾಲದು ಎಂಬಂತೆ ಅವನ ಮೇಲೆ ರಾಜಕೀಯ ನಿರೀಕ್ಷೆಗಳ ಒತ್ತಡ. ಕಾಲವೇ ಅವನ ಮೇಲೆ ವ್ಯಂಗ್ಯವಾಡಿದಂತೆ ಕಾಣಿಸುತ್ತದೆ ಆತನ ಬದುಕು.
ಭೂತದ ನೆರಳು, ಭವಿಷ್ಯದ ನಿರೀಕ್ಷೆ: ಈ ಎಲ್ಲಾ ಒತ್ತಡವನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂದು ಯಾರೂ ಆತನನ್ನು ಕೇಳಿದ್ದಿಲ್ಲ, ತಮ್ಮನ್ನು ತಾವೇ ಕೇಳಿಕೊಂಡದ್ದೂ ಇಲ್ಲ. ಅವನನ್ನು ಕೇಳಲು ಅವಕಾಶ ಸಿಕ್ಕಾಗ ಅರ್ನಾಬ್ ಗೋಸ್ವಾಮಿಯಂಥಾ ಪತ್ರಕರ್ತ ಅವನ ಮೇಲೆ ಎರಗಿ ಸಂದರ್ಶನವೋ ಇಲ್ಲ ರಣರಂಗವೋ ಎಂಬುದು ತಿಳಿಯದಂತೆ ವರ್ತಿಸಿದ. ರಾಹುಲ್ ಗಾಂಧಿ ಎಂದರೆ ನಗೆಪಾಟಲಿಗೆ ಮಾತ್ರ ಅರ್ಹ ಎಂದು ನಂಬಿಸಿದ ಕೇಸರಿ ಪಡೆ ಮತ್ತು ಮಾಧ್ಯಮ, ನಾವು ರಾಹುಲ್ ಗಾಂಧಿಯನ್ನು ಮನುಷ್ಯನಾಗಿ ನೋಡದಂತೆಯೇ ಮಾಡಿವೆ, ಅವನ ಒಳಜಗತ್ತಿನ ಕುರಿತು ಆಲೋಚಿಸುವುದು, ಅವನ ಕುರಿತು ಸಹಾನುಭೂತಿ ಇಟ್ಟುಕೊಳ್ಳುವುದು, ಎಲ್ಲವನ್ನೂ ಅಸಾಧ್ಯಗೊಳಿಸಿದೆ.

ತನ್ನ ಒಳಗೆ ಇಷ್ಟೆಲ್ಲಾ ಭೀಕರ ಅನುಭವ ಹೊತ್ತಿದ್ದರೂ, ತನ್ನ ಭುಜದ ಮೇಲೆ ತನ್ನ ಅನುಭವಕ್ಕೂ ಮೀರಿದ ಭಾರ ಹೊತ್ತಿದ್ದರೂ, ತನ್ನ ಮೇಲೆ ನಿರೀಕ್ಷೆಗಳ ಒತ್ತಡ ಇದೆ ಎಂದು ಮತ್ತು ಅದಕ್ಕೆ ತಾನು ಸಂಪೂರ್ಣ ತಯಾರಾಗಿಲ್ಲ ಎಂಬ ಅರಿವಿದ್ದರೂ ಮತ್ತು ತಾನು ಈ ದೇಶದ ಕಣ್ಣಲ್ಲಿ ಒಂದು ಜೋಕ್ ಆಗಿದ್ದೇನೆ ಎಂಬುದು ಗೊತ್ತಿದ್ದರೂ, ತನಗೆದುರಾದ ಸಮಸ್ಯೆಗಳಿಗೆ, ಭೀಕರ ಸಂದರ್ಭಗಳಿಗೆ, ಎದುರಾಗುವ ಪ್ರಶ್ನೆಗಳಿಗೆ ಅಂಜದೆ ಆತ ಮತ್ತೆ ಮತ್ತೆ ಎದ್ದು ನಿಲ್ಲುವ ಪ್ರಯತ್ನ ನೆಡೆಸಿದ್ದಾನೆ.

ಮುಜುಗರವಾಗುವಂಥಾ ಸಂದರ್ಭದಲ್ಲೂ ಆತ ಕಾಲು ಕಿತ್ತಿಲ್ಲ. ತನ್ನ ಪಕ್ಷದಿಂದ ಆಗಿರುವ ಪ್ರಮಾದಗಳನ್ನು ಪ್ರಮಾದ ಎಂದು ಒಪ್ಪಿಕೊಂಡಿದ್ದಾನೆ, ತನ್ನ ತಂದೆಯ ಹತ್ಯೆಗೈದವರನ್ನು ಕ್ಷಮಿಸಿದ್ದಾನೆ ಮತ್ತು ಆ ಹತ್ಯೆಗೆ ಐತಿಹಾಸಿಕ ಕಾರಣ ಇದೆ ಎಂಬ ಪ್ರಬುದ್ಧವಾದ ನೋಟ ಬೆಳೆಸಿಕೊಂಡಿದ್ದಾನೆ. ಮತ್ತು ಇಷ್ಟೆಲ್ಲದರ ನಡುವೆ ಆತ ಎಂದೂ ಬದುಕಿಗೆ ಬೆನ್ನು ಮಾಡಿಲ್ಲ.

ಬಹುಷಃ ತನ್ನ ಐವತ್ತನೇ ವಯಸ್ಸಿಗೆ ಹತ್ತಿರುವಾಗುವ ಸಂದರ್ಭದಲ್ಲಿ ರಾಹುಲ್ ತನ್ನ ಜೀವನದುದ್ದಕ್ಕೂ ತನ್ನೊಳಗೆ ಹೊತ್ತ ಸಂಕಟಗಳನ್ನು ಮೀರುತ್ತಿದ್ದಾನೆ. ಇದು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ನಾಯಕನನ್ನು ಕಟ್ಟಿಕೊಡುತ್ತದೋ ಎಂಬುದನ್ನು ಕಾಲವೇ ಉತ್ತರಿಸಬೇಕು. ಆದರೆ ರಾಹುಲ್ ಗಾಂಧಿಯನ್ನು ರಾಜಕೀಯ ವ್ಯಕ್ತಿಯಾಗಿ ಅಲ್ಲದೆ ಕೇವಲ ಮನುಷ್ಯನಾಗಿ ನೋಡಲು ಇಚ್ಚಿಸುವ ನನ್ನ ಮಟ್ಟಿಗಂತೂ, ಒಂದು ವೇಳೆ ನಾನು ಅಂದುಕೊಂಡಂತೆ ಆತ ತನ್ನೊಳಗಿನ ಭಾರವನ್ನು ಇಳಿಸಿದ್ದಾನೆ, ತನ್ನ ನೋವುಗಳನ್ನು ಮೀರಿದ್ದಾನೆ ಎಂದಾದದರೆ, ರಾಹುಲ್ ಗಾಂಧಿಯ ಈ ಅಂತರಂಗದ ಜಿಗಿತ, ಸಂತಸದ ಸಂಗತಿ, ನೆಮ್ಮದಿಯ ಸಂಗತಿ.

  • Samvartha ‘Sahil’

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *