
ಪ್ರಕೃತಿಯ ವಿಸ್ಮಯಗಳಿಗೆ ಮಿತಿ ಇಲ್ಲ. ಭೂಮಿಯ ಒಳಗೆ ಚಿನ್ನ, ಕಲ್ಲಿನ ಒಳಗೆ ನೀರು ಇನ್ನೂ ಅನೇಕ ವಿಸ್ಮಯಗಳಿವೆ. ಉತ್ತರ ಕನ್ನಡ ಜಿಲ್ಲೆಯ ಉಳವಿಯ ಹೆಸರು ಕೇಳದವರಿಲ್ಲ ಬಸವಣ್ಣನ ವಚನಗಳನ್ನು ಸಂರಕ್ಷಿಸಿದ ಚನ್ನ ಬಸವಣ್ಣನ ನೆಲೆವೀಡು ಉಳವಿ. ಈ ಉಳವಿಯೇ ಒಂದು ರಮ್ಯ ಪ್ರಾಕೃತಿಕ ವೈಶಿಷ್ಟ್ಯ. ಜೊಯಿಡಾ ತಾಲೂಕಿನ ಈ ಉಳವಿ ಮಾರ್ಗದಲ್ಲಿ ಪ್ರಕೃತಿಯ ಸ್ತಿತ್ಯಂತರಗಳಿಂದ ಆಗಿರುವ ಅದ್ಭುತವೇ ಸಿಂತೇರಿ ರಾಕ್.
ಬ್ರಟಿಷ್ ಮಹಿಳೆ ಸಿಂಥೇರಿ ಶೋಧಿಸಿದ ಈ ವಿಸ್ಮಯ ಕಲ್ಲಿಗೆ ಸಿಂಥೇರಿ ಎಂದು ರೂಢನಾಮವಾಗಿದ್ದು ಅನೇಕ ವರ್ಷಗಳ ನಂತರ. ಸುಮಾರು ಮೂರು ನೂರು ಅಡಿಗಳ ಎತ್ತರದ ಒಂದೇ ಶಿಲೆ ಕ್ರಮೇಣ ಶಿಥಿಲವಾಗುತ್ತ ಸೃಷ್ಟಿಸಿರುವ ಸೊಬಗೇ ಸಿಂಥೇರಿ ರಾಕ್. ಈ ಕಲ್ಲು ಶಿಲಾಸ್ಫೋಟದ ನಂತರ ಶಿಥಲವಾಯಿತೋ? ಮಳೆ,ಗಾಳಿ ಬಿಸಿಲು, ಚಳಿಗಳಿಗೆ ಒಡ್ಡಿಕೊಳ್ಳುತ್ತಾ ಕ್ಷೀಣಿಸುತ್ತಾ ಸುಂದರಪ್ರದೇಶವಾಯಿತೋ ತಿಳಿಯದ ವಿಷಯ.
ಸ್ಥಳಿಯರು ಮಾತ್ರ ಕಾಳಿಯ ಉಪ ನದಿ ಕಾನೇರಿ ನದಿ ಹರಿದು ಕ್ರಮೇಣ ಶಿಥಿಲವಾದ ಕಲ್ಲಿನ ಬುಡದಲ್ಲಿ ಗುಹೆಗಳಾಗಿ ಸಿಂತೇರಿ ರಾಕ್ ಜನನೋಡಬಯಸುವ ಪ್ರಾಕೃತಿಕ ಆಕರ್ಷಣೆಯಾಯಿತು ಎನ್ನುತ್ತಾರೆ.
ರಾಜ್ಯ ಅರಣ್ಯ ಇಲಾಖೆ ಈ ಸಿಂಥೇರಿ ರಾಕ್ ಬಳಿ ಕಲ್ಲಿನ ವಿಶೇಶ ಗುಣಧರ್ಮಗಳನ್ನು ಸೂಚಿಸುವ ಶಿಲಾಫಲಕಗಳೊಂದಿಗೆ ಶಿಲೆಗಳನ್ನೂ ಪ್ರದರ್ಶನಕ್ಕಿಟ್ಟಿದೆ. ನೈಸರ್ಗಿಕ ಸುಂದರ ಸಿಂಥೇರಿ ಕಲ್ಲಿನ ಜೊತೆಗೆ ಆಸಕ್ತರಿಗೆ ನೂರಾರು ಕಲ್ಲಿನ ಪರಿಚಯ ಮಾಡಿಸುವ ಇಲಾಖೆಯ ಈ ಪ್ರಯೋಗ ಸಿಂಥೇರಿ ರಾಕ್ ನ ಮಹತ್ವ ಹೆಚ್ಚಿಸಿದೆ. ದೇಶ-ವಿದೇಶಗಳ ಪ್ರವಾಸಿಗರು ನಮ್ಮ ರಾಜ್ಯದ ನಾನಾ ಜಿಲ್ಲೆಗಳ ಆಸಕ್ತರು , ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶ ದಟ್ಟ ಕಾನನದ ನಡುವಿನ ಸುಂದರ ಪ್ರದೇಶ. ಸಿಂತೇರಿ ರಾಕ್ ಕಾನೇರಿ ನದಿಯ ನೀರಿನಿಂದ ಜರಿಯಾಗಿಯೂ ಪ್ರಸಿದ್ಧ. ಈ ಕಲ್ಲಿನ ಗುಹೆಗಳಲ್ಲಿ ಪಾರಿವಾಳಗಳು ವಾಸವಾಗಿ ಪ್ರಾಕೃತಿಕ ಹೊಂದಾಣಿಕೆಯನ್ನೂ ಸೂಚಿಸುತ್ತವೆ.ಉತ್ತರ ಕನ್ನಡ ಗೋವಾ ರಾಜ್ಯಗಳ ಪ್ರವಾಸ ಮಾಡುವ ಜನರು ಬೆಳಗಾವಿ, ಕಾರವಾರ ರಸ್ತೆ ನಡುವೆ ಅಣತಿ ದೂರದಲ್ಲಿ ಕಾಣಸಿಗುವ ಈ ಸಿಂಥೇರಿ ರಾಕ್ ನೋಡಿ ಸಂಭ್ರಮಿಸಲು ಕಾಲದ ಮಿತಿಗಳೂ ಇಲ್ಲ.
