ನದಿಯ ಹುಟ್ಟಿಗೆ ಕಾರಣ,ಗುರಿಗಳ ಹಂಗಿಲ್ಲ ನದಿ ಹರಿಯುತ್ತಾ ಗಮ್ಯ ಸೇರುವುದೇ ಅದರ ಸಾರ್ಥಕತೆ.
ಮೈಸೂರು ಸಂಸ್ಥಾನದ ಕೊನೆಯ ಗಡಿ ಸಾಗರ ತಾಲೂಕಿನ ತಡಗಳಲೆಯಲ್ಲಿ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದ ಕುಟುಂಬ ಒಂದಕ್ಕೆ ವ್ಯಹಾರಿಕ ಸೋಲಿನ ದೆಸೆಯಿಂದ ಊರು ಬಿಡಬೇಕಾದ ಪ್ರಸಂಗ ಅನಿವಾರ್ಯವಾದಾಗ ಆ ಕುಟುಂಬ ನೆರೆಯ ಮಹಾರಾಷ್ಟ್ರ ಪ್ರೆಸಿಡೆನ್ಸಿಯ ಉತ್ತರ ಕನ್ನಡದ ಸಿದ್ಧಾಪುರಕ್ಕೆ ವಲಸೆ ಬರುತ್ತದೆ. ಹೊನ್ನೆಗುಂಡಿಯಲ್ಲಿ ನೆಲೆಸಿ, ಕೂಲಿ-ನಾಲಿ ಮಾಡಿ ಬದುಕುತಿದ್ದ ಕುಟುಂಬದಲ್ಲಿ ಮಗುವಿನ ಜನನವಾಗುತ್ತದೆ. ಆ ಮಗು ರಾಮಚಂದ್ರ ಕಾಳಾ ಹೊನ್ನೆಗುಂಡಿ. ಎಫ್ರಿಲ್ ೨ ರ ೧೯೪೦ ರಲ್ಲಿ ಹುಟ್ಟಿದ ರಾಮಚಂದ್ರ ನೆರೆಹೊರೆಯ ಸಾಮಾಜಿಕ ಸನ್ನಿವೇಶಗಳಿಗೆ ಒಗ್ಗಿಕೊಳ್ಳುತ್ತಾ ಬೆಳೆಯತೊಡಗಿ ಮುಂದೆ ಹೈಸ್ಕೂಲು ಶಿಕ್ಷಣ ಪಡೆಯುವ ವೇಳೆಗಾಗಲೇ ಸುಗ್ಗಿಪದ, ಕೋಲಾಟ,ಜಾನಪದ ಹಾಡು,ಬರವಣಿಗೆಗಳ ಬಗ್ಗೆ ಆಸಕ್ತಿ ಮೊಳಕೆಯೊಡೆಯುತ್ತದೆ.
ಈ ನದಿಯ ಮೊದಲ ತಿರುವು ಹೈಸ್ಕೂಲು ಶಿಕ್ಷಣದ ನಂತರ, ಮೆಟ್ರಿಕ್ ಪಾಸಾಗಿದ್ದ ರಾಮಚಂದ್ರ ಹೊನ್ನೆಗುಂಡಿ ಸ್ನೇಹಿತನ ಭೋದೆಯಿಂದ ವಿಚಲಿತನಾಗಿ ಶಿಕ್ಷಣ ಮುಂದುವರಿಸದೆ.ಖಾದಿಗ್ರಾಮೋದ್ಯೋಗದ ಕಲಿಕೆಯೊಂದಿಗಿನ ಗಳಿಕೆಗೆ ಸೇರಿ ತರಬೇತಿ ಮುಗಿಸುತ್ತಾರೆ. ನಂತರಚಿತ್ರದುರ್ಗದಲ್ಲಿ ಖಾದಿ ಕಾರ್ಯಕರ್ತ ಶಿಕ್ಷಣ ಮುಗಿಸಿ ಹುಟ್ಟೂರಿಗೆ ಸ್ವಯಂ ಸೇವಕರಾಗಿ ಮರಳುತ್ತಾರೆ. ಹೀಗೆ ಸಾಗಿದ ನದಿಯ ಚಲನೆ ನಂತರ ಹಠಾತ್ ಆಗಿ ಮತ್ತೊಂದು ಮಗ್ಗುಲಿಗೆ ತೆರಳುತ್ತದೆ. ಹಿಂದಿ ಪ್ರಚಾರ ಸಭೆಯ ಹಿಂದಿ ಪರೀಕ್ಷೆಗಳಿಗೆ ಓದುತ್ತಾ, ಹೋಂಗಾರ್ಡ್ ಆಗಿ ಸೇವೆ ಸಲ್ಲಿಸುತ್ತಾ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರಾಗಿ ವೃತ್ತಿ ಪ್ರಾರಂಭವಾಗುತ್ತದೆ. ಈ ವೃತ್ತಿ ಮುಂದೆ ಜನತಾ ವಿದ್ಯಾಲಯದ ಹೈಸ್ಕೂಲಿನ ಹಿಂದಿ ಶಿಕ್ಷಕರಾಗಿ ಮುಂದುವರಿದು ೧೯೯೮ ರಲ್ಲಿ ನಿವೃತ್ತಿಯಾಗುತ್ತಾರೆ.
ಬದುಕು,ಶಿಕ್ಷಣ,ಸೇವೆ, ವೃತ್ತಿ ಹೀಗೆ ವಿಭಿನ್ನ ತಿರುವುಗಳ ಮೂಲಕ ಹೊನ್ನೆಗುಂಡಿಯವರ ಬದುಕಿನ ನದಿ ಹರಿಯುತ್ತಿರುವಾಗ ಅವರ ಅಭ್ಯಾಸ, ಹವ್ಯಾಸ ರಂಗಭೂಮಿಪ್ರವೇಶಿಸಿ ಅಲ್ಲಿ ನಟನಾಗಿ,ನಿರ್ಧೇಶಕನಾಗಿ ಹೆಸರುಮಾಡುವವ ವರೆಗೆ ಅವರಿಂದ ಅನೇಕ ಬರಹಗಳು ಪ್ರವಹಿಸುತ್ತವಾದರೂ ಅವರ ಕೃತಿಗಳಿಗೆ ಪ್ರಕಟಣಾ ಯೋಗ ಬಂದದ್ದು ಅವರ ನಿವೃತ್ತಿಯ ಹತ್ತು ವರ್ಷಗಳ ನಂತರವೇ.
ಸುಮಾರು ಆರೇಳು ಕೃತಿಗಳು ಪ್ರಕಟವಾಗುವ ವೇಳೆಗೆ ೭೦ ವರ್ಷ ಕಳೆದ ಹೊನ್ನೆಗುಂಡಿ ಬರೆದ ನೂರಾರು ಬರಹಗಳು, ಪದ್ಯಗಳು ಪ್ರಕಟಣೆಯ ರೂಪ ಪಡೆಯಲೇ ಇಲ್ಲ. ಮಕ್ಕಳಿಗಾಗಿ ಗೀತೆ ರಚನೆ,ನಾಟಕಕ್ಕೆ ಸಂಗೀತ, ಸಾಹಿತ್ಯ ಒದಗಿಸಿದ್ದು ಅಪಾರ. ಈ ಅವಧಿಯಲ್ಲಿ ಸಂಗೀತ ನಾಟಕಗಳೂ ಸೇರಿ ಅವರು ಮಾಡಿಸಿದ್ದು, ನಿರ್ಧೇಶಿಸಿದ್ದು ಅದೆಷ್ಟೋ ನಾಟಕಗಳು.
ಸಿದ್ಧಾಪುರದ ಕನ್ನಡ ಸಂಘ, ಸಮಾಜವಾದಿ ಗೋವಿಂದ ಶಾನಭಾಗರ ಸ್ನೇಹ, ಅಂಬರ ಚರಕದಕೆಲಸ ಹೀಗೆ ಹೊನ್ನೆಗುಂಡಿ ಮುಟ್ಟಿದ್ದು,ತಟ್ಟಿದ್ದು ಅನೇಕ ಮಗ್ಗಲುಗಳನ್ನು ಅವುಗಳಲ್ಲಿ ದಾಖಲೆಗೆ ಸಿಕ್ಕಿದ್ದು ಅತ್ಯಲ್ಪ. ಪ್ರಕಟಣೆಯಾದ ಕೃತಿಗಳ ಮೌಲ್ಯ ಮಾತ್ರ ಉತ್ಕೃಷ್ಟ.
ಜಾನಪದ, ಸಾಂಪ್ರದಾಯಿಕತೆಗಳ ಒಲವಿನಿಂದ ಸಾಹಿತ್ಯ ಕೃಷಿಗೆ ಪ್ರೇರಣೆ ಪಡೆದ ಹೊನ್ನೆಗುಂಡಿ ವ್ಯಕ್ತಿ ಚಿತ್ರಗಳನ್ನು ಬರೆದರು, ಅದ್ಭುತ ಎನ್ನಬಹುದಾದ ಸಂಗೀತ ನಾಟಕಗಳನ್ನು ಬರೆದು, ನಿರ್ಧೇಶಿಸಿದರು. ವ್ಯಕ್ತಿಚಿತ್ರಗಳಲ್ಲಿ ಸಹಜ ನದಿಯಂತಹ ಗೊಂದಲವಿಲ್ಲದ ವೈಯಕ್ತಿಕತೆ ಹೇರದ ವಸ್ತನಿಷ್ಠತೆ ಕಾಯ್ದುಕೊಂಡರು. ಮಹಾಕಾವ್ಯ ಪುರಾಣಗಳ ವಸ್ತು ವಿಷಯ ಇಟ್ಟುಕೊಂಡೇ ಗದ್ಯವನ್ನು ಪದ್ಯವಾಗಿಸಿ ಎರಕಹೊಯ್ದರು ಹೊನ್ನೆಗುಂಡಿಯವರ ಬರಹದ ಈ ವೈಶಿಷ್ಟ್ಯತೆ ಕನ್ನಡದ ಅನನ್ಯ ಬರವಣಿಗಳ ಅಸ್ಮಿತೆ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಸಂಶೋ ಧಕರಿಗೂ ವಸ್ತುವೆ. ಹೊನ್ನೆಗುಂಡಿಯವರ ವೈಯಕ್ತಿಕ ಅವಿವಾಹಿತ ಬದುಕು. ಕೀರ್ತಿ.ಹಣ,ಅಧಿಕಾರಗಳ ಬಗೆಗಿನ ದಿವ್ಯ ನಿರ್ಲಿಪ್ತತೆ. ಓದುತ್ತಾ ಬರೆಯುತ್ತಾ ನಿಶ್ಯಬ್ಧವಾಗಿ ಬದುಬೇಕೆನ್ನುವ ಹಂಬಲ ಅವರದ್ದೇ ಅನನ್ಯ ವಿಶೇಷಗಳು.
ಧಾರ್ಮಿಕತೆ,ಆಧ್ಯಾತ್ಮ,ಸರಳ ಬದುಕು ಇವು ಆರ್.ಕೆ ಹೊನ್ನೆಗುಂಡಿಯವರಿಂದ ಎಷ್ಟು ಪಡೆದುಕೊಂಡಿವೆಯೋ? ಸಮೃದ್ಧವಾಗಿವೆಯೋ ತಿಳಿದಿಲ್ಲ ಆದರೆ ದಿನಕರ ದೇಸಾಯಿಯಂಥ ಸಮಾಜವಾದಿಯ ಸಂಘ,೨೦ ನೇ ಶತಮಾನದ ಪ್ರಖರ ಜಾತ್ಯಾತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಸೈದ್ಧಾಂತಿಕ ವಾತಾವರಣದಲ್ಲಿ ಆ ವಿಭಾಗಕ್ಕೆ ತಣ್ಣನೆಯ ನದಿಯಂಥ ಹೊನ್ನೆಗುಂಡಿಯವರ ತಂಪು ಸಿಕ್ಕಿದ್ದು ಕಡಿಮೆ ಎನ್ನುವುದೊಂದೇ ಕೊರಗು.