

ವಾಡಿಕೆಗಿಂತ ಈ ಬಾರಿ ಒಂದು ವಾರ ತಡವಾಗಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಅಪ್ಪಳಿಸಿದ್ದು, 48 ಗಂಟೆಯಲ್ಲಿ ಅಂದರೆ ಜೂನ್ 10 ಅಥವಾ 11ರಂದು ಕರ್ನಾಟಕಕ್ಕೆ ಮಾನ್ಸೂನ್ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
https://www.facebook.com/reel/622306433188338

ಬೆಂಗಳೂರು: ವಾಡಿಕೆಗಿಂತ ಈ ಬಾರಿ ಒಂದು ವಾರ ತಡವಾಗಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಅಪ್ಪಳಿಸಿದ್ದು, 48 ಗಂಟೆಯಲ್ಲಿ ಅಂದರೆ ಜೂನ್ 10 ಅಥವಾ 11ರಂದು ಕರ್ನಾಟಕಕ್ಕೆ ಮಾನ್ಸೂನ್ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತೀಯ ಹವಾಮಾನ ಇಲಾಖೆ (IMD) ಕೊನೆಗೂ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ನೈರುತ್ಯ ಮುಂಗಾರು ಕೊನೆಗೂ ದೇಶವನ್ನು ಪ್ರವೇಶಿಸಿದೆ. ಗುರುವಾರ ಕೇರಳ ಕರಾವಳಿಗೆ ಅಪ್ಪಳಿಸಿರುವುದಾಗಿ ಐಎಂಡಿ ಅಧಿಕೃತವಾಗಿ ಪ್ರಕಟಿಸಿದೆ. ಈ ಹಿಂದೆ ಹವಾಮಾನ ಇಲಾಖೆ ಜೂನ್ 4 ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ, ಅರಬ್ಬಿ ಸಮುದ್ರದಲ್ಲಿ ಬಿಪರ್ಜೋಯ್ ಎಂಬ ಅತ್ಯಂತ ತೀವ್ರವಾದ ಚಂಡಮಾರುತದ ರಚನೆಯು ಮಾನ್ಸೂನ್ ಆರಂಭವನ್ನು ವಿಳಂಬಗೊಳಿಸಿತು. ಹೀಗಾಗಿ ಹವಾಮಾನ ಇಲಾಖೆ ನಿರೀಕ್ಷಿಸಿದ್ದಕ್ಕಿಂತ ಏಳು ದಿನಗಳ ನಂತರ ಮುಂಗಾರು ದೇಶವನ್ನು ಪ್ರವೇಶಿಸಿದೆ. ಪ್ರಸ್ತುತ, ನೈರುತ್ಯ ಮುಂಗಾರು ಲಕ್ಷದ್ವೀಪ ಮತ್ತು ಕೇರಳದಲ್ಲಿ ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಹೇಳಿಕೆಯ ಪ್ರಕಾರ ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಗುರುವಾರ, ನೈಋತ್ಯ ಮಾನ್ಸೂನ್ ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಸಂಪೂರ್ಣ ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳು, ಮನ್ನಾರ್ ಕೊಲ್ಲಿ ಮತ್ತು ಇನ್ನೂ ಕೆಲವು ಭಾಗಗಳಿಗೆ ಮುಂದುವರೆದಿದೆ ಎಂದು ಹೇಳಿದೆ.
ಮೊದಲ ವಾರ ಸಾಮಾನ್ಯ ಮಳೆ
ಮುಂಗಾರು ಆರಂಭವಾದ ಕಾರಣ ಕೇರಳದಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ, ಕೇರಳದ ಇತರ ಭಾಗಗಳು, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಚಲಿಸಲು ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಆದರೆ, ಮೊದಲ ವಾರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1 ರಂದು ಕೇರಳ ಕರಾವಳಿಯನ್ನು ಅಪ್ಪಳಿಸಬೇಕಿತ್ತು. ಹವಾಮಾನ ಬದಲಾವಣೆ ಮತ್ತು ಚಂಡಮಾರುತದ ಚಲನೆಯಿಂದಾಗಿ, ಇದು ಒಂದು ವಾರ ತಡವಾಗಿ ದೇಶವನ್ನು ಪ್ರವೇಶಿಸಿದೆ. ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ರಂದು ಮತ್ತು 2020 ರಲ್ಲಿ ಜೂನ್ 1 ರಂದು ಕರಾವಳಿಯನ್ನು ಅಪ್ಪಳಿಸಿತ್ತು. ಈ ಬಾರಿ ಎಲ್ನಿನೋ ಪರಿಣಾಮ ಸಮುದ್ರದ ಮೇಲೆ ಬೀರುತ್ತದೆ.. ಈ ಸೀಸನ್ನಲ್ಲಿ ದೇಶದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಏಪ್ರಿಲ್ನಲ್ಲಿ ಘೋಷಿಸಿತ್ತು.
ಭಾರತದಲ್ಲಿ ಮಾನ್ಸೂನ್ ಮಹತ್ವ
ನಮ್ಮ ದೇಶದಲ್ಲಿ 52% ನಿವ್ವಳ ಸಾಗುವಳಿ ಭೂಮಿ ಮಳೆಯೇ ಮುಖ್ಯ ಆಧಾರವಾಗಿದೆ. ದೇಶದ ಒಟ್ಟು ಕೃಷಿ ಉತ್ಪಾದನೆಯ 40% ಈ ಸಾಗುವಳಿ ಭೂಮಿಯಿಂದ ಬರುತ್ತದೆ. ಅದಕ್ಕಾಗಿಯೇ ನೈಋತ್ಯ ಮಾನ್ಸೂನ್ ಭಾರತದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೂ ಮುನ್ನ ಜೂನ್ 7 ಅಥವಾ 8ರ ವೇಳೆಗೆ ಮುಂಗಾರು ಕೇರಳಕ್ಕೆ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನೈಋತ್ಯ ಮಾನ್ಸೂನ್ ಉತ್ತರದ ಗಡಿ ಲಕ್ಷದ್ವೀಪದ ದ್ವೀಪ ಪ್ರದೇಶ ಮಿನಿಕೋಯ್ ಮೂಲಕ ಹಾದುಹೋಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು.
ಕೇರಳ ಬಳಿಕ ಕರ್ನಾಟಕ, ತಮಿಳುನಾಡಿನತ್ತ ಮಾನ್ಸೂನ್ ಚಲನೆ
ದಕ್ಷಿಣ ಅರಬ್ಬಿ ಸಮುದ್ರದ ಮೇಲೆ ಪಶ್ಚಿಮ ಮಾರುತಗಳು ಕೇಂದ್ರಿಕೃತವಾಗುವುದಿಂದ ಮಳೆ ಬೀಳಲು ಅನುಕೂಲಕರ ಪರಿಸ್ಥಿತಿಗಳನ್ನ ನಿರ್ಮಾಣ ಮಾಡಲಿದೆ. ಇದರೊಂದಿಗೆ, ಪಶ್ಚಿಮ ಮಾರುತಗಳ ಆಳವು ಕ್ರಮೇಣ ಹೆಚ್ಚುತ್ತಾ ಸಾಗುತ್ತದೆ. ಆಗ್ನೇಯ ಅರಬ್ಬಿ ಸಮುದ್ರದ ಮೇಲೂ ಮೋಡದ ಪ್ರಮಾಣ ಹೆಚ್ಚುತ್ತಿದ್ದು. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮಾನ್ಸೂನ್‌ನ ಆರಂಭಕ್ಕೆ ಈ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣ ಆಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿತ್ತು. ಅದರಂತೆ ಇಂದು ಕೇರಳಕ್ಕೆ ನೈರುತ್ಯ ಮುಂಗಾರು ಅಪ್ಪಳಿಸಿದ್ದು, ಮಾನ್ಸೂನ್ ಮಾರುತಗಳು ಕೇರಳ ತಲುಪಿದ ನಂತರ, ಕರ್ನಾಟಕ, ತಮಿಳುನಾಡು ಮತ್ತು ಈಶಾನ್ಯದ ಭಾಗಗಳಿಗೆ ಚಲಿಸಲಿವೆ. (kpc)
