ಮಾಗಡಿಗ್ಯಾಕೆ ಬರ ಬಾಧಿಸಲ್ಲ…!!?

ಪರಿಸರ ಗಿರಿಸರ ಮಣ್ಣಾಂಗಟ್ಟಿ….!

[ಜೂನ್‌ ತಿಂಗಳು ಎಂದರೆ ಪರಿಸರ ಕಾರ್ಯಕ್ರಮಗಳಿಗೂ ಜಡಿಮಳೆಯ ದಿನಗಳು. ಭಾಷಣಕ್ಕೆ ಬರೋದಿಲ್ಲ ಎಂದು ಅದೆಷ್ಟೇ ಹಿಂದಕ್ಕೆ ಸರಿದರೂ ಈ ಬಾರಿ ಹಾಸನ, ಕೋಲಾರ, ಮಾಗಡಿ ಮತ್ತು ಬೆಂಗಳೂರಿನ ಆ ತುದಿ, ಈ ತುದಿ ಸುತ್ತಬೇಕಾಗಿ ಬಂತು. ಒಂದೊಂದೂ ಚಂದದ ಅನುಭವಗಳು. ಹಾಸನದ್ದನ್ನು “ಕಕ್ಕಸು ತೊಳೆದವನ ಹೆಸರಲ್ಲಿ ಕಸ ಎತ್ತಿದ್ದುʼʼ ಹೆಸರಲ್ಲಿ ಜೂನ್‌ 12ರಂದು ಬರೆದಿದ್ದೆ. ಆ ಸಭೆಯಲ್ಲಿ 600 ವಿದ್ಯಾರ್ಥಿನಿಯರು ಪೀಪಿಟ್ಟೆನ್ನದೆ ನನ್ನ ಪೀಪಿಟಿಗಾಗಿ ಕಾದು ಕೂತಿದ್ದರೆ ಅದಕ್ಕೆ ತದ್ವಿರುದ್ಧವಾದ ಮಾಗಡಿ ಬಳಿಯ ತೋಟದ ಅನುಭವ ಇಲ್ಲಿದೆ. ಕೊನೆಯಲ್ಲಿ ಸಿಕ್ಕ ಅಚ್ಚರಿಯ ಅನುಭವವಂತೂ ಎಂದೂ ಮರೆಯಲಾಗದ್ದು!]

*

ಚಿತ್ರ ನೋಡಿದರೆ ಯಾವುದೋ ಸಮಾರಾಧನೆಯಲ್ಲಿ ಊಟಕ್ಕೆ ಕೂತಂಥ ಕಲ್ಪನೆ ಬರುತ್ತದೆ (ʻತೃಪ್ತಿಗಾಗಿ ಮಾಡುವ ಸಾಧನೆಗೆ ʼಸಮಾರಾಧನೆʼ ಎನ್ನುತ್ತಾರೆ.) ಇದೂ ಸಮಾರಾಧನೆ ಹೌದು. ಆದರೆ ಇದು ಬೀಜಗೋಲಿ ಸಮಾರಾಧನೆ. ಇಲ್ಲಿ 150 ವಿದ್ಯಾರ್ಥಿಗಳು ಕೈಕೆಸರು ಮಾಡಿಕೊಳ್ಳುತ್ತ ಕೂತಿದ್ದಾರೆ. ಅವರೆದುರು ಭಾಷಣಕ್ಕೆ ನಿಂತ ನಾನು ಈ ಫೋಟೊ ಕ್ಲಿಕ್‌ ಮಾಡಿದ್ದೇನೆ.

ಬೆಂಗಳೂರಿನಲ್ಲಿ ಬಿಸಿನೆಸ್‌ ಮಾಡುತ್ತಿರುವ ಲಿಂಗೇಶ್‌ ಮತ್ತು ನಾಗಶ್ರೀ ದಂಪತಿ ಮಾಗಡಿಯ ಸಮೀಪ “ಕಾಮ್ಯಕವನʼʼ ಹೆಸರಿನ ತೋಟವನ್ನು ಸೃಷ್ಟಿಸಿದ್ದಾರೆ. ಅಲ್ಲಿಗೆ ಅವರು ಪ್ರತಿವರ್ಷ ಕಾಲೇಜು ಮಕ್ಕಳನ್ನು ಕರೆಸಿ ಬೀಜಗೋಲಿ ಮಾಡಿಸುತ್ತಾರೆ. ಟನ್‌ ಅಲ್ಲದಿದ್ದರೂ ಕ್ವಿಂಟಾಲ್‌ ಗಟ್ಟಲೆ ಗೋಲಿ! ಅವರೆಲ್ಲ ಗೋಲಿ ಮಾಡ್ತಾ ಇರುವಾಗ ಯಾರೋ ಒಂದಿಬ್ಬರು ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ಮಾತಾಡುತ್ತಾರೆ. ಮುಂದೆ ಜುಲೈ ತಿಂಗಳಲ್ಲಿ ಇನ್ನೊಂದು ಕಾಲೇಜಿನ ಮಕ್ಕಳಿಂದ ಗೋಲಿಗಳನ್ನೆಲ್ಲ ಟಿಜಿ ಹಳ್ಳಿ ಜಲಾಶಯದ ಸುತ್ತಲಿನ ಬೆಟ್ಟಗಳಲ್ಲಿ ಬಿತ್ತರಣೆ ಮಾಡುತ್ತಾರೆ.

ಈ ಬಾರಿ ಮಾತಾಡಲು ನನ್ನನ್ನು ಕರೆದಿದ್ದರು. ವೇದಿಕೆ ಅಂತ ಏನೂ ಇರಲಿಲ್ಲ ಇಲ್ಲ. ಸ್ವಾಗತ, ದೀಪ, ಪ್ರಾರ್ಥನೆ ಅದೂ ಇದೂ ಎನೇನೂ ಇಲ್ಲ. ಉದ್ಘಾಟನೆಗೆ ಎಂದರೆ ಮುಷ್ಟಿ ಮಣ್ಣಿಗೆ ಬೀಜ ಸೇರಿಸಿ ಉಂಡೆ ಕಟ್ಟುವುದು. ಹುಲ್ಲುಹಾಸಿನ ಮೇಲೆ ವಿದ್ಯಾರ್ಥಿಗಳೂ ಅಂಥದ್ದೇ ಉಂಡೆ ಮಾಡಲು ಪ್ರಾರಂಭಿಸಿದಾಗ ನಾನು ಭಾಷಣ ಮಾಡುವುದು.

ಅದು ಸುಲಭದ ಕೆಲಸವಲ್ಲ ಎಂದು ನನಗೆ ಆರಂಭದಲ್ಲೇ ಅನ್ನಿಸಿತ್ತು. ಮಿತ್ರ ನರೇಂದ್ರ ಬಾಬು ನನ್ನನ್ನು ಪರಿಚಯಿಸುವಾಗಲೇ ಎದುರು ಕೂತವರೆಲ್ಲ ಇತ್ತ ಗಮನವನ್ನೇ ಕೊಡದೆ ಕೈ-ಬಾಯಿ ಎರಡಕ್ಕೂ ಸಖತ್‌ ಕೆಲಸ ಕೊಟ್ಟಿದ್ದರು. ಓಪನ್‌ ಅಂಗಳವಾಗಿದ್ದರಿಂದ ಉಂಡೆ ಕಟ್ಟುವ ಜೊತೆಜೊತೆಗೇ ಕ್ಲಾಸ್‌ಮೇಟ್‌ಗಳ ಜೊತೆ ಪಟ್ಟಾಂಗಕ್ಕೂ ಅವಕಾಶವಿತ್ತು. ಅವರ ಗಮನವನ್ನು ಇತ್ತ ಸೆಳೆಯಲೆಂದು ನಾನು ಅವರಿಗೆ ಒಂದೆರಡು ಕ್ವಿಝ್‌ ಪ್ರಶ್ನೆ ಕೇಳಿದೆ.

ಇಷ್ಟೊಂದು ಬೀಜಗಳ ಉಂಡೆ ಕಟ್ಟುತ್ತಿದ್ದೀರಿ. ಇಂದು ಬೆಳಿಗ್ಗೆ ನಿಮ್ಮ ಹೊಟ್ಟೆಗೆ ಯಾವ್ಯಾವ ಬೀಜಗಳು ಹೋಗಿವೆ?

ಒಂದೆರಡು ಕ್ಷಣ ಗಾಢ ಮೌನ. ತುಸು ಗುಸುಗುಸು. ಹೊಟ್ಟೆಗೆ ಬೀಜ ಹಾಕ್ಕೊತಾರಾ ಯಾರಾದರೂ? ಆದರೂ ʼಪಪ್ಪಾಯಾʼ ಎಂದ ಒಬ್ಬ. ʼಸೀಬೆʼ ಎಂದಳು ಅಲ್ಲೊಬ್ಬಳು. ಉಳಿದೆಲ್ಲರ ಬಾಯಿ ಕಟ್ಟಿತ್ತು. ಏಕೆಂದರೆ ಬೀಜ ಎಂದರೆ ಅದು ಉಗುಳುವ ವಸ್ತು ತಾನೆ?

ʼನೀವ್ಯಾರೂ ಹೊಟ್ಟೆಗೆ ಅನ್ನ ತಿನ್ನೋಲ್ಲವಾ?ʼ ಕೇಳಿದೆ ತುಸು ಬ್ಲಂಟ್‌ ಆಗಿ, ತುಸು ತಮಾಷೆಯಾಗಿ. ಮತ್ತೆ ಮೌನ. ʻಅನ್ನ, ಚಪಾತಿ, ರಾಗಿಮುದ್ದೆ ಎಲ್ಲವೂ ಬೀಜಗಳಿಂದಲೇ ಆಗಿದ್ದಲ್ಲವಾ?ʼ ಕೇಳಿದೆ.

ಸಭಾಸಾಲಿನಲ್ಲಿ ಈಗ ಗುಸುಗುಸು. ಹೌದಲ್ಲವಾ! ಬೇಳೆ ಸಾರಿನ ಬೇಳೆಯೂ ಬೀಜವೇ… ಚಟ್ನಿಗೆಂದು ರುಬ್ಬುವ ಕಡಲೆ, ಸೇಂಗಾ, ಕೊಬ್ಬರಿ, ಒಗ್ಗರಣೆಗೆ ಸಾಸಿವೆ ಎಲ್ಲವೂ ಬೀಜಗಳೇ ತಾನೆ? ಒಗ್ಗರಣೆಗೆ ಎಣ್ಣೆ? ಅದೂ ಬೀಜದಿಂದಲೇ ತಾನೆ?

ಪ್ರಕೃತಿ ನೀಡುವ ಬಹುತೇಕ ಎಲ್ಲ ಬೀಜಗಳನ್ನೂ ಮನುಷ್ಯ ತಾನೇ ಸ್ವಾಹಾ ಮಾಡುತ್ತಾನೆ. ಅಥವಾ ತಾನು ಸಾಕಿಕೊಂಡ ದನ, ಎಮ್ಮೆಗಳಿಗೆ ತಿನ್ನಿಸುತ್ತಾನೆ. ಬೇರೆ ಜೀವಿಗಳಿಗೆ ಬೀಜಗಳೇ ಸಿಗದಂತೆ ಮಾಡುತ್ತಾನೆ. “ಮಕ್ಕಳೆ, ನೀವೀಗ ನಿಸರ್ಗದ ಇತರ ಜೀವಿಗಳಿಗಾಗಿ ಬೀಜ ಬಿತ್ತರಣೆಯ ಸಿದ್ಧತೆ ಮಾಡುತ್ತಿದ್ದೀರಿ. ನಿಮ್ಮದು ಪರಮ ಪವಿತ್ರ ಕೆಲಸ” ಎಂದೆ.

ಮಕ್ಕಳ ಬ್ರಹ್ಮಾಂಡ ಈಗ ತುಸುತುಸು ತೆರೆದುಕೊಳ್ಳತೊಡಗಿತ್ತು.

ಎಲ್ಲರ ಬಳಿಯಲ್ಲಿ ಮಣ್ಣಿನ ರಾಶಿಯಿತ್ತು ಮತ್ತು ಪಕ್ಕದಲ್ಲಿ ಬಿದಿರಕ್ಕಿ, ಹೊಂಗೆ, ಸೀತಾಫಲ ಇತ್ಯಾದಿ ಬೀಜಗಳು ಇದ್ದವು. ಬಿದಿರಿನ ಬೀಜಗಳ ಬಗೆಗೇ ಅರ್ಧ ಗಂಟೆ ಉಪನ್ಯಾಸ ಕೊಡಬಹುದಿತ್ತು. ಹೇಗೆ ಪ್ರತಿ 45, 60 ವರ್ಷಗಳಿಗೊಮ್ಮೆ ಬಿದಿರು ಬೀಜ ಉದುರಿಸಿ ಸಾಯುತ್ತದೆ, ಹೇಗೆ ಮರುವರ್ಷ ಬರಗಾಲ ಬರುತ್ತದೆಂಬ ಪ್ರತೀತಿ ಹುಟ್ಟಿಕೊಂಡಿತು ಎಲ್ಲ ಹೇಳಬಹುದಿತ್ತು. ಸೀತಾಫಲದ ಬೀಜ ಅದೆಷ್ಟು ವಿಷಕಾರಿ ಎಂದು ವಿವರಿಸಬೇಕಿತ್ತು. ಆದರೆ ಅದನ್ನೆಲ್ಲ ಹೇಳಲಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಪರಿಚಯ ಮಾಡಿಸಬೇಕಿತ್ತು.

ಅಷ್ಟರಲ್ಲಿ ಮಕ್ಕಳು ತಲೆತಗ್ಗಿಸಿ, ಅರ್ಧ ನಿಲ್ಲಿಸಿದ್ದ ತಮ್ಮ ಕಲರ್‌ ಕಲರ್‌ ಕಲರವಗಳನ್ನು ಮುಂದುವರೆಸಿದ್ದರು. ಮಕ್ಕಳಿಗೆ ಮೌನವಾಗಿರಲು ಸನ್ನೆ ಮಾಡುತ್ತ ಪ್ರಜಾವಾಣಿಯ ಮಾಗಡಿ ವರದಿಗಾರ ಮಾರಣ್ಣ ಫೋಟೊ ಕ್ಲಿಕ್‌ ಮಾಡುತ್ತ ಓಡಾಡುತ್ತಿದ್ದಾರೆ.

“ಮಾಗಡಿ ತಾಲ್ಲೂಕಿನ ವೈಶಿಷ್ಟ್ಯ ಗೊತ್ತೆ?” ಎಂದು ಕೇಳಿದೆ. ನಾನು ಪ್ರಶ್ನೆ ಕೇಳಿ ಮೌನವಾದಾಗಲೆಲ್ಲ ನನ್ನ ಕಡೆ ನೋಡುತ್ತಿದ್ದ ಮಕ್ಕಳು ಮತ್ತೆ ತಲೆತಗ್ಗಿಸುತ್ತಿದ್ದರು. ಉತ್ತರ ಗೊತ್ತಿಲ್ಲವೊ ಅಥವಾ ಗೊತ್ತಿದ್ದರೂ ಹೇಳಲು ಸಂಕೋಚವೊ? ಅಂತೂ ಮಾಗಡಿ ತಾಲ್ಲೂಕಿನ ವೈಶಷ್ಟ್ಯವನ್ನು ಹೇಳತೊಡಗಿದೆ. ಈ ತಾಲ್ಲೂಕಿಗೆ ಎಂದೂ ಬರಗಾಲ ಬಂದಿದ್ದೇ ಇಲ್ಲ ಗೊತ್ತಾ? ಎಂದು ಹೇಳುತ್ತ ಅದಕ್ಕೆ ಕಾರಣಗಳನ್ನು ವಿವರಿಸಲು ಹೋದೆ. ಕೇಳುಗರ ಸಾಲಿನಲ್ಲಿ ಮತ್ತೆ ಕಲರವ ಶುರುವಾಯಿತು. ಈ ಬಾರಿ ಕಾಲೇಜಿನ ಪ್ರಾಂಶುಪಾಲ ರಾಜಣ್ಣನವರು ವಿದ್ಯಾರ್ಥಿಗಳನ್ನು ಗದರಿಸಿದರು.

ಸಂತೆಯಲಿ ನಿಂತ ಸಂತ ಕಬೀರನ ಸ್ಥಿತಿ ನನ್ನದಾಗಿತ್ತು. ಅಲ್ಲ, ಅದಕ್ಕಿಂತ ಉತ್ತಮ ಉದಾಹರಣಗೆ ಎಂದರೆ: ಚುನಾವಣೆಗೆ ನಿಂತ ಕಾರಂತರನ್ನು ಗೆಲ್ಲಿಸಿರೆಂದು ಹೇಳಲು ಹೊನ್ನಾವರದ ಮೀನುಮಾರ್ಕೆಟ್‌ನಲ್ಲಿ ಭಾಷಣಕ್ಕೆ ನಿಂತಂತಾಗಿತ್ತು.

ಕಲ್ಲಿನ ಬೃಹತ್‌ ಉಂಡೆಯಂತೆ ವಿದ್ಯಾರ್ಥಿಗಳ ಕಣ್ಣೆದುರಿಗೇ ಸಾವನದುರ್ಗದ ಏಕಶಿಲಾ ಬೆಟ್ಟ ಕಾಣುತ್ತಿತ್ತು. ಇಲ್ಲೇ ಸಮೀಪದಲ್ಲಿ ತಿಮ್ಮಕ್ಕನಿಗೆ ಸಾಲುಸಾಲು ಪ್ರಶಸ್ತಿಗಳನ್ನು ತಂದುಕೊಟ್ಟ ಸಾಲುಮರದ ಮಹತ್ವದ ಬಗ್ಗೆ ಪ್ರಶ್ನೆ ಕೇಳಬೇಕಿತ್ತು. ತೇಜಸ್ವಿಯವರ ʼಮುನಿಶಾಮಿ ಮತ್ತು ಮಾಗಡಿ ಚಿರತೆʼ ಪುಸ್ತಕದ ಬಗ್ಗೆ, ಕೆನ್ನೆತ್‌ ಆಂಡರ್ಸನ್‌ ಬಗ್ಗೆ ಗೊತ್ತೇ ಕೇಳಬೇಕಿತ್ತು.

ಅವನ್ನೆಲ್ಲ ಬಿಟ್ಟು ಇಲ್ಲೇ ಹತ್ತು ಕಿಲೊಮೀಟರ್‌ ಆಚೆ ವಿಖ್ಯಾತ ʼತಿಪ್ಪಗೊಂಡನಹಳ್ಳಿ ಜಲಾಶಯ ಇದೆʼ ಗೊತ್ತಿದೆ ತಾನೆ?ʼ ಕೇಳಿದೆ. ಅನೇಕರು ಹೌದೆಂದರು. “ಅದಕ್ಕೆ ಕಟ್ಟಿದ ಡ್ಯಾಮಿನ ವಿಶೇಷ ಗೊತ್ತಾ? ಯಾರಾದರೂ ಹೇಳ್ತೀರಾ?” ಕೇಳಿದೆ. ಮೌನ ಆವರಿಸಿತು. ಪ್ರಾಂಶುಪಾಲ ರಾಜಣ್ಣನವರು ಧಮಕಿ ಹಾಕದಿದ್ದರೂ ಮೌನ ಆವರಿಸಿತು.

ಮಂಗಳೂರು-ಚೆನ್ನೈ ಮಧ್ಯೆ ನೇರ ಗೆರೆ ಹಾಕಿದರೆ, ಆ ಗೆರೆಯ ನಟ್ಟ ನಡುವೆ ಈ ಡ್ಯಾಮ್‌ ಇದೆ. 1933ರಲ್ಲಿ ಸರ್‌ ಎಮ್‌ ವಿಶ್ವೇಶ್ವರಯ್ಯ ಅವರ ಉಸ್ತುವಾರಿಯಲ್ಲಿ , ಅರ್ಕಾವತಿ-ಕುಮುದ್ವತಿ ನದಿಗಳ ಸಂಗಮದಲ್ಲಿ ಈ ಅಣೆಕಟ್ಟೆ ನಿರ್ಮಾಣವಾಯಿತು- ಎಂದೆಲ್ಲ ನಾನು ಹೇಳಬೇಕಿತ್ತು. ನಕಾಶೆ ಇರಲಿಲ್ಲ. ಹಾಗಾಗಿ ಕೈಯನ್ನೇ ಮಾರಗಲಿಸಿ ಹೇಳಿದೆ. ಹ್ಯಾಂಡ್‌ಮೈಕ್‌ ಈಗ ತೋಳಿನ ತುದಿಗೆ ಹೋಗಿದ್ದರಿಂದ ನನ್ನ ಮಾತು ಕೇಳಿಸಿರಲಿಕ್ಕಿಲ್ಲ.

ಬೀಜದುಂಡೆಗಳ ವಿಷಯಕ್ಕೆ ಮತ್ತೆ ಬಂದೆ. ನಿಮ್ಮ ಮುಷ್ಟಿಯಲ್ಲಿನ ಬೀಜದ ಸುತ್ತ ಅಂಟುಮಣ್ಣು ಇದೆ. ಕಾಂಪೋಸ್ಟ್‌ ಮಿಶ್ರಣದ ಪೋಷಕಾಂಶ ಇದೆ. ಒದ್ದೆ ಮಣ್ಣು ಇದೆ. ಇದು ವಿದ್ಯಾರ್ಥಿಗಳ ವ್ಯಕ್ತಿವಿಕಸನದ ಅತ್ಯುತ್ತಮ ರೂಪಕ. ಬೀಜದಲ್ಲಿ ಸತ್ವ ಇದ್ದರೆ, ಅದಕ್ಕೆ ಶಿಕ್ಷಕರ ಪೋಷಕಾಂಶ ಸಿಕ್ಕರೆ, ಉತ್ತಮ ಸ್ನೇಹಿತರ ಅಂಟುನಂಟು ಇದ್ದರೆ, ಚೆನ್ನಾದ ಮೊಳಕೆ ಒಡೆಯುತ್ತದೆ. ಪಠ್ಯಪುಸ್ತಕದಾಚೆಗಿನ ಮಾಹಿತಿಗಳನ್ನೂ ನೀರಿನಂತೆ ಸಲೀಸಾಗಿ ಹೀರಿಕೊಳ್ಳುತ್ತ ನೀವು ಬೆಳೆಯಬಲ್ಲಿರಿ. ಬೆಳೆಯುವ ಜೀವಿಗೆ ರಕ್ಷಣೆ ಬೇಕಲ್ಲ?

ಈ ಉಂಡೆಯನ್ನು ಎಲ್ಲೆಲ್ಲೋ ಬಿಸಾಕುವ ಬದಲು ʻಮುಳ್ಳು ಪೊದೆಯ ನಡುವೆ ಬಿಸಾಕಿದರೆ ಹೊಸ ಗಿಡ ಸುರಕ್ಷಿತ ಬೆಳೆಯುತ್ತದೆ ಯಾಕೆ ಹೇಳಿ?ʼ ಎಂದು ಕೇಳಿದೆ.

ಈಗ ನೋಡಿ, ಒಕ್ಕೊರಲಿನ ಉತ್ತರ ಬಂತು. ಉಂಡೆ ಮಾಡುತ್ತಿದ್ದ ಎಲ್ಲರ ಗಮನ ಸೆಳೆಯಲು ನಾನು ಯಶಸ್ವಿಯಾಗಿದ್ದೆ. ನನಗೆ ಬೇಕಿದ್ದ ಉತ್ತರ ಸಿಕ್ಕಿತು. ಗ್ರಾಮೀಣ ಪ್ರಜ್ಞೆಯನ್ನು ಅರೆದು ಕುಡಿದ ಈ ಮಕ್ಕಳಿಗೆ ನಾನು ಪರಿಸರ ಪಾಠ ಹೇಳಬೇಕಾಗಿಯೇ ಇರಲಿಲ್ಲ.

ಆದರೂ ಮೇಕೆಗಳು ಹೇಗೆ ನಮ್ಮ ದೇಶದ ಹಸಿರುನಾಶದ ಬಹುಮುಖ್ಯ ವಿಲನ್‌ ಎಂಬುದನ್ನು ತುಸು ಹೇಳಿದೆ. ಮೇಯುವ ಪ್ರಾಣಿಗಳಿಂದ ರಕ್ಷಣೆ ಸಿಕ್ಕರೆ ಯಾವ ಭೂಮಿಯಲ್ಲಾದರೂ ಹಕ್ಕಿಪಕ್ಷಿ, ಕೀಟಪತಂಗ, ತಂಗಾಳಿಯೂ ಬೀಜ ಪ್ರಸಾರ ಮಾಡುತ್ತಿರುತ್ತದೆ. ಗಿಡಮರಗಳು ತಾವಾಗಿ ಬೆಳೆಯುತ್ತವೆ.

ನೀವೆಲ್ಲ ಹೀಗೆ ಬೀಜದುಂಡೆ ಮಾಡುವ ಬದಲು ಮೇಕೆಗಳನ್ನು ಮನೆಯಲ್ಲೇ ಕಟ್ಟಿ ಮೇಯಿಸುವಂತೆ ಹಳ್ಳಿಯ ಜನರಿಗೆ ತಾಕೀತು ಮಾಡಿದರೂ ಮಾಗಡಿಯ ನಿಸರ್ಗ ಮತ್ತಷ್ಟು ಸಮೃದ್ಧವಾಗುತ್ತದೆ….

ಈ ಕೊನೆಯ ಮಾತನ್ನು ನಾನು ಹೇಳಲಿಲ್ಲ. ಮಕ್ಕಳಿಗೆ ತಮ್ಮ ಬೀಜದುಂಡೆಯ ಶ್ರಮ ನಿರರ್ಥಕ ಎಂಬ ಸಂದೇಶ ಹೋಗಬಾರದಲ್ಲ.

ಸೀಡ್‌ಬಾಲ್‌ ಕಾರ್ಯಕ್ರಮವನ್ನು ಆಯೋಜಿಸಿದ ಲಿಂಗೇಶ್‌ ಮತ್ತು ನಾಗಶ್ರೀ ದಂಪತಿ ಈ ʼಕಾಮ್ಯಕವನʼವನ್ನು ಅಪರೂಪದ ಸಸ್ಯಗಳ ಒಂದು ಮ್ಯೂಸಿಯಮ್‌ ಎಂಬಂತೆ ರೂಪಿಸಿದ್ದಾರೆ. ಪಾಂಡವರು ಕಾಮ್ಯಕವನದಲ್ಲಿದ್ದಾಗಲೇ ತಾನೆ ಶ್ರೀಕೃಷ್ಣನಿಂದ ದ್ರೌಪದಿಗೆ ಅಕ್ಷಯ ಪಾತ್ರೆ ಸಿಕ್ಕಿದ್ದು? ಹಾಗೇ ಇಲ್ಲೂ ಆರೋಗ್ಯಕ್ಕೆ ಪೂರಕವಾದ ವೈವಿಧ್ಯಮಯ ಅಕ್ಷಯ ಸಸ್ಯಧಾಮವೊಂದು ಎದ್ದುನಿಂತಿದೆ. ವಿಯೆಟ್ನಾಂನಿಂದ ಹಿಡಿದು ಲ್ಯಾಟಿನ್‌ ಅಮೆರಿಕದವರೆಗಿನ ಅಪರೂಪದ ಸಸ್ಯಗಳು ಇಲ್ಲಿ ಬೆಳೆಯುತ್ತಿವೆ. ಜೇನು ಸಂವರ್ಧನೆಗೆಂದು ಪ್ರಯೋಗಾಲಯವನ್ನೂ ಕಟ್ಟಿದ್ದಾರೆ.

ಲಿಂಗೇಶ್‌ ಅವರಿಗೆ ಇದು ಹವ್ಯಾಸ ಅಷ್ಟೆ. ಅವರು ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ವೈದ್ಯಕೀಯ ಸಲಕರಣೆಗಳ ಪೂರೈಕೆ ಮಾಡುವ ʼಅಭಯ್‌ʼ ಕಂಪನಿಯನ್ನು ನಡೆಸುತ್ತಿದ್ದಾರೆ. ವೈದ್ಯಕೀಯದ ಸರಂಜಾಮುಗಳ ಅಗತ್ಯವೇ ಬೀಳದಂತೆ ನಿಸರ್ಗದ ಜೊತೆ ಹೊಂದಿಕೊಂಡು ಬಾಳುವ ಕನಸು ಈ ದಂಪತಿಯದು.

ಬೀಜದುಂಡೆ ಕಾರ್ಯಕ್ರಮದ ನಂತರ ನನಗೊಂದು ಅಚ್ಚರಿ ಕಾದಿತ್ತು.

ನನ್ನ ಕೈಯಿಂದ ಒಂದು ವಿಶಿಷ್ಟ ಸಸ್ಯವೊಂದನ್ನು ನೆಡಿಸಬೇಕೆಂದು ಲಿಂಗೇಶ್‌ ಅವರು ಗುಂಡಿ ತೋಡಿ ಸಸ್ಯವನ್ನು ಸಜ್ಜಾಗಿಟ್ಟುಕೊಂಡಿದ್ದರು.

ಆ ಅಪರೂಪದ ಸಸ್ಯ ಯಾವುದು ಗೊತ್ತೆ? ಸೀಡ್ಲೆಸ್‌ ಅವಕಾಡೊ!

ಬೀಜದ ಮಹತ್ವದ ಬಗ್ಗೆ ಅಷ್ಟೆಲ್ಲ ಮಾತಾಡಿದವನ ಕೈಯಿಂದ ಬೀಜರಹಿತ ಬೆಣ್ಣೆ ಹಣ್ಣಿನ ಸಸ್ಯವನ್ನು ಭೂಮಿಗಿಳಿಸುವ ಕೆಲಸ!

[ಲಿಂಗೇಶ್‌ ಅವರ ಕಾಮ್ಯಕವನದ ಡ್ರಾಗನ್‌ ಫ್ರುಟ್‌ ತೋಟದಲ್ಲಿ ನಿಂತ ನನ್ನ ಕವರ್‌ ಚಿತ್ರವನ್ನು ತೆಗೆದವರು ಮಾಗಡಿಯ ಪತ್ರಕರ್ತ ಮಾರಣ್ಣ. ಪ್ರಜಾವಾಣಿಯ ವರದಿಯೂ ಅವರದ್ದೇ. ನಾನು ಸೀಡ್‌ಲೆಸ್‌ ಬಟರ್‌ಫ್ರುಟ್‌ ಗಿಡವನ್ನು ನೆಡುತ್ತಿರುವ ಸಂದರ್ಭದ ಚಿತ್ರವನ್ನು ಮಾಗಡಿಯ ವೆಂಕಟೇಶ್‌ ತೆಗೆದಿದ್ದು.] (-ನಾಗೇಶ್‌ ಹೆಗಡೆ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *