



ನಮ್ಮ ಭರತಖಂಡ ನಮ್ಮ ಸನಾತನ ಧರ್ಮದ ತವರೂರು. ದೇವಾಲಯಗಳ ಬೀಡು. ಬ್ರಹ್ಮ ವಿಷ್ಣು ಮಹೇಶ್ವರ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮೀ ಸರಸ್ವತಿ ಪಾರ್ವತಿಯರಲ್ಲದೇ, ನಮ್ಮ ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಗ್ರಾಮದೇವರ್ತೆಗಳಿದ್ದು ನಮ್ಮ ದೇಶದ ಜನಸಂಖ್ಯೆ ಸುಮಾರು 130-140 ಕೋಟಿಗಳಿದ್ದರೇ ನಾವು ನಂಬುವ ಮತ್ತು ಪರಮ ಭಕ್ತಿಯಿಂದ ಆರಾಧಿಸುವ ದೇವಾನು ದೇವತೆಗಳ ಸಂಖ್ಯೆಯೇ ಸುಮ

ನಮ್ಮ ಭರತಖಂಡ ನಮ್ಮ ಸನಾತನ ಧರ್ಮದ ತವರೂರು. ದೇವಾಲಯಗಳ ಬೀಡು. ಬ್ರಹ್ಮ ವಿಷ್ಣು ಮಹೇಶ್ವರ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮೀ ಸರಸ್ವತಿ ಪಾರ್ವತಿಯರಲ್ಲದೇ, ನಮ್ಮ ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಗ್ರಾಮದೇವರ್ತೆಗಳಿದ್ದು ನಮ್ಮ ದೇಶದ ಜನಸಂಖ್ಯೆ ಸುಮಾರು 130-140 ಕೋಟಿಗಳಿದ್ದರೇ ನಾವು ನಂಬುವ ಮತ್ತು ಪರಮ ಭಕ್ತಿಯಿಂದ ಆರಾಧಿಸುವ ದೇವಾನು ದೇವತೆಗಳ ಸಂಖ್ಯೆಯೇ ಸುಮಾರು 33ಕೋಟಿ. ಪ್ರತಿಯೊಂದು ದೇವಾಲಯಕ್ಕೂ ಮತ್ತು ಅಲ್ಲಿಯ ದೇವತೆಗೂ ಒಂದು ಐತಿಹ್ಯವಿದ್ದು ಅಲ್ಲಿಯದೇ ಆದ ಸುಂದರವಾತ ಮತ್ತು ಅಷ್ಟೇ ರೋಚಕವಾದ ಕಥೆ ಇರುತ್ತದೆ. ನಾವಿಂದು ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕ್ಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿಯ ಕುರಿತಾದ ವಿಷಯಗಳನ್ನು ತಿಳಿಯೋಣ ಬನ್ನಿ.


ಹಾಸನ ಚಿಲ್ಲೆ ಎಂದೊಡನೆಯೇ ಥಟ್ ಅಂತಾ ನಮ್ಮೆಲ್ಲರ ಕಣ್ಮುಂದೆ ಬರುವುದೇ ಬೇಲೂರು, ಹಳಿಬೀಡು ಶ್ರವಣಬೆಳಗೊಳ ಇನ್ನು ಮುಂತಾದ ಶಿಲ್ಪಕಲೆಗಳ ಬೀಡು, ಆದರೆ ನಾವಿಂದು ಚರ್ಚಿಸುತ್ತಿರುವ ಮಾಡಾಳು ಸ್ವರ್ಣಗೌರಮ್ಮದೇವಿಯ ಇವೆಲ್ಲಕ್ಕಿಂತಲು ವಿಭಿನ್ನವಾಗಿದೆ. ಸಾಮಾನ್ಯವಾಗಿ ಪ್ರತೀ ದೇವಾಲಯಗಳಲ್ಲಿಯೂ ಒಂದು ದೇವಿ/ದೇವರ ವಿಗ್ರಹವಿದ್ದು ಅದಕ್ಕೆ ನಿತ್ಯಪೂಜೆಯು ನಡೆಯುತ್ತಿದ್ದರೆ, ಇಲ್ಲಿ ದೇವಾಲಯವಿದ್ದರು ಅಲ್ಲಿ ಶಾಶ್ವತವಾದ ದೇವಿಯೇ ಇಲ್ಲ ಎನ್ನುವುದೇ ಗಮನಾರ್ಹವಾದ ಅಂಶವಾಗಿದೆ. ಪ್ರತೀ ವರ್ಷ ಭಾದ್ರಪದ ಮಾಸದ ಶುದ್ಧ ತದಿಗೆಯಂದು ಗ್ರಾಮದ ಬಸವಣ್ಣ ದೇವಾಲಯದಲ್ಲಿ ಅರಿಶಿನ, ಕಡಲೇ ಹಿಟ್ಟು ಮತ್ತು ಮೃತ್ತಿಕೆಗಳನ್ನು ಹದವಾಗಿ ಕಲಸಿ ಶಾಸ್ತ್ರೋಕ್ತವಾಗಿ ದೇವಿಯ ಮೂರ್ತಿಯನ್ನು ಮಾಡಿ ಅದನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಕೋಡೀ ಮಠದ ಶ್ರೀಗಳು ಆ ಸ್ವರ್ಣ ಗೌರಿಗೆ ಮೂಗುತಿಯನ್ನು ತೊಡಿಸುವ ಮೂಲಕ ದೇವಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ 10 ದಿನಗಳ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಡಲಾಗುತ್ತದೆ.
ಇಲ್ಲಿಯ ಸ್ವರ್ಣಗೌರೀ ದೇವಿಗೆ ಸುಮಾರು 150ವರ್ಷಗಳ ಇತಿಹಾಸವಿದ್ದು ಈ ಸ್ವರ್ಣಗೌರಿ ಈ ಊರಿಗೆ ಬಂದಿರುವ ಹಿಂದೆಯೂ ಒಂದು ಕುತೂಹಲಕಾರಿಯದ ಕಥೆಯಿದೆ. ಹಾರನಹಳ್ಳಿ ಕೋಡಿಮಠದ ಶಿವಲಿಂಗಜ್ಜಯ್ಯನವರು ಮತ್ತು ಮಾಡಾಳು ಗ್ರಾಮದ ಮುದ್ದೇಗೌಡರು ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದಲ್ಲಿ ನಡೆಯುವ ಗೌರಮ್ಮ ಜಾತ್ರೆಯನ್ನು ಮುಗಿಸಿಕೊಂಡು ಮಾದಾಳು ಗ್ರಾಮಕ್ಕೆ ಹಿಂದಿರುಗುವಾಗ, ನನ್ನನ್ನೂ ಕರೆದುಕೊಂಡು ಹೋಗಿ ಎಂಬ ಹೆಣ್ಣಿನ ಧನಿ ಕೇಳಿದಂತಾಗಿ ಹಿಂದಿರುಗಿ ನೋಡಿದಾಗ ಒಂದು ಹೆಣ್ಣಿನ ರೂಪದಲ್ಲಿ ಶ್ರೀ ದೇವಿಯು ನಾನೂ ನಿಮ್ಮೊಂದಿಗೆ ಬರುತ್ತೇನೆ. ನನ್ನನ್ನೂ ಕರೆದುಕೊಂಡು ಹೋಗಿ ಎಂಬ ಕೋರಿಕೆಯನ್ನು ಒಪ್ಪಿಕೊಂಡು ಶಿವಲಿಂಗಜ್ಜಯವರು ಆಕೆಯನ್ನು ಗಂಗೆಯ ರೂಪದಲ್ಲಿ ತೆಗೆದುಕೊಂಡು ಮಾಡಾಳು ತಪುಪಿದ ನಂತರ ಆ ಗಂಗೆಯನ್ನು ಮುದ್ದೇಗೌಡರ ಮನೆಯ ಬಾವಿಯಲ್ಲಿ ಹಾಕಿ ತಾಯೀ ಗೌರಮ್ಮ ದಯವಿಟ್ಟು ನೀನು ಇಲ್ಲೇ ಶಾಶ್ವತವಾಗಿ ನೆಲಸಿರು. ಪ್ರತಿ ವರ್ಷದ ಗೌರೀ ಹಬ್ಬದ ದಿನದಂದು ಅರಿಶಿನದಿಂದ ನಿನ್ನ ವಿಗ್ರಹವನ್ನು ತಯಾರಿಸಿ ಅದರಲ್ಲಿ ನಿನ್ನನ್ನು ಅಹ್ವಾನಿಸುತ್ತೇವೆ. ಆಗ ನೀನು ವಿಗ್ರಹದ ರೂಪದಲ್ಲಿ ನಿನ್ನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನುಗ್ರಹಿಸು ಎಂದು ಕೋರಿಕೊಳ್ಳುತ್ತಾರೆ. ಅಂದಿನಿಂದ ಪ್ರತೀವರ್ಷವು ಶಿವಲಿಂಗಜ್ಜಯ್ಯನವರು ತಮ್ಮೂರಿನ ಆಚಾರಿಗಳನ್ನು ಕರೆಸಿ, ಅವರಿಗೆ ಒಂದು ದಾರದ ಅಳತೆಯನ್ನು ನೀಡಿ ಅದರ ಅಳತೆಗೆ ತಕ್ಕಂತೆ ಗೌರಮ್ಮನವರನ್ನು ತಯಾರಿಸಲು ವಿನಂತಿಸಿಕೊಳ್ಳುತ್ತಾರೆ ಮತ್ತು ಆಚಾರಿಗಳು ತಯಾರಿಸಿಕೊಟ್ಟ ವಿಗ್ರಹಕ್ಕೆ ಗೌರಿ ಹಬ್ಬದಂದು ವಜ್ರದ ಮೂಗುತಿಯನ್ನು ಹಾಕುತ್ತಾರೆ. ಅಂದಿನಿಂದ ಆರಂಭವಾದ ಪದ್ದತಿ ಇಂದಿನವರೆಗೂ ಸ್ವರ್ಣ ಗೌರಿಗೆ ಕೋಡಿಮಠದ ಶ್ರೀಗಳೇ ಮೊದಲ ಮತ್ತು ಅಂತಿಮ ಪೂಜೆಯನ್ನು ಸಲ್ಲಿಸುವುದು ರೂಢಿಯಲ್ಲಿದೆ.
ಗೌರೀ ಹಬ್ಬದಿಂದ ಮುಂದಿನ 10 ದಿನಗಳ ಕಾಲ ಸ್ವರ್ಣ ಗೌರಿಗೆ ತ್ರಿಕಾಲ ಪೂಜೆಯೊಂದಿಗೆ ಬಹಳ ವೈಭವದಿಂದ ಸೇವೆ ಸಲ್ಲಿಸಲಾಗುತ್ತಿದೆ. ಇಂತಹ ಅಪರೂಪದ ಸ್ವರ್ಣಗೌರಿಯ ದರ್ಶನಕ್ಕೆ ಕೇವಲ ನಮ್ಮ ರಾಜ್ಯದ ನಾನಾ ಭಾಗಗಳಿಂದಲ್ಲದೇ, ಅಕ್ಕ ಪಕ್ಕದ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಿಂದಲೂ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಿಯ ಮಹಿಮೆ ವರ್ಷದಿಂದ ವ ಯುತ್ತಿದ್ದಾರೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಎಲ್ಲರಿಗೂ ದೇವಿಯ ದರ್ಶನಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ದೇವಸ್ಥಾನದ ಆಡಳಿತ ಮಂಡಳಿ ಮುಂಜಾನೆ 5ರಿಂದ ಮಧ್ಯರಾತ್ರಿ 2ಘಂಟೆಯವರೆಗೂ ಅನುವು ಮಾಡಿಕೊಡಬೇಕಾಗಿದೆ ಎಂದರೆ ಅಲ್ಲಿಗೆ ಸೇರುವ ಜನಸಂದಣಿ ಎಷ್ಟು ಇರುತ್ತದೆ ಎಂಬುದನ್ನು ಊಹಿಸಬಹುದಾಗಿದೆ.
ಸಾಮಾನ್ಯವಾಗಿ ಬೇರೆಲ್ಲಾ ದೇವರುಗಳ ಮೇಲೇ ಮುತ್ತು ರತ್ನ ವಜ್ರ ವಿಢೂರ್ಯ ಖಚಿತ ಚಿನ್ನಾಭರಣಗಳೊಂದಿಗೆ ಅಲಂಕರಿಸಿದರೆ, ಹೆಸರಿನಲ್ಲೇ ಸ್ವರ್ಣವಿರುವ ಮಾಡಾಳುವಿನ ಸ್ವರ್ಣಗೌರಿ ದೇವಿಗೆ ಮೂಗಿನ ನತ್ತಿನ ಹೊರತಾಗಿ ಮತ್ತಾವುದೇ ಆಭರಣಗಳನ್ನು ಹಾಕದಿರುವುದು ಅಚ್ಚರಿಯಾಗಿದೆ. ಇನ್ನು ಈಕೆಯನ್ನು ಒಲಿಸಿಕೊಳ್ಳುವುದೂ ಬಹಳ ಸುಲಭವಾಗಿದ್ದು ಕೇವಲ ಕರ್ಪೂರ, ದಾಸೋಹಕ್ಕೆ ಅಕ್ಕಿ ಮತ್ತು ಮಡಿಲು ತುಂಬಿಸುವ ಸೀರೆ ಮತ್ತು ಬಳೆ ಇವಿಷ್ಟೇ ಆಕೆಗೆ ಸಮರ್ಪಿಸ ಬಹುದಾಗಿದೆ. ಕರ್ಪೂರಾದಾರತಿ ಪ್ರಿಯೇ ಸ್ವರ್ಣಗೌರೀ ಜಾತ್ರೇ ಆರಂಭದ ದಿವಸ ದುಗ್ಗಳವನ್ನು ಹೊತ್ತು ದೇವಾಲಯದ ಮುಂದಿರುವ ಹೋಮ ಕುಂಡದಲ್ಲಿ ಕರ್ಪೂರ ಬೆಳಗಿಸಿದರೆ ಅದು ಮುಂದಿನ ಹತ್ತು ದಿನಗಳ ಕಾಲ ನಿರಂತವಾಗಿ ಪ್ರಜ್ವಲಿಸುತ್ತಿವಂತೆ ಅಲ್ಲಿನ ಭಕ್ತಾದಿಗಳು ಕರ್ಪೂರವನ್ನು ಆ ಕುಂಡಕ್ಕೆ ಹಾಕಿ ತಮ್ಮ ಇಷ್ಟಕಾಮ್ಯಗಳನ್ನು ಈಡೇರಿಸಿಕೊಳ್ಳುತಾರೆ. ಒಂದು ಅಂದಾಜಿನ ಪ್ರಕಾರ 10 ದಿನಗಳ ಕಾಲ ಬಳಸುವ ಕರ್ಪೂರದ ವೆಚ್ಚವೇ 30-40 ಲಕ್ಷಕ್ಕೂ ಅಧಿಕವಾಗಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಶ್ರದ್ಧಾಭಕ್ತಿಯಿಂದ ತಮ್ಮ ಮನದಾಳದ ಬಯಕೆ ತಾಯಿ ಗೌರಮ್ಮನಲ್ಲಿ ನಿವೇದಿಸಿಕೊಂಡರೆ ಖಂಡಿತವಾಗಿಯೂ ಮುಂದಿನ ವರ್ಷದಲ್ಲಿಅವೆಲ್ಲವೂ ಈಡೇರುತ್ತದೆ ಎಂಬ ನಂಬಿಕೆ ಇರುವ ಕಾರಣ, ಕಂಕಣಭಾಗ್ಯ, ಸಂತಾನ ಭಾಗ್ಯ, ಉದ್ಯೋಗ ಭಾಗ್ಯ ಹೀಗೆ ಹತ್ತು ಹಲವಾರು ನಿವೇದನೆಗಳೊಂದಿಗೆ ತಾಯಿಯನ್ನು ದರ್ಶನ ಮಾಡಲು ಜಾತ್ರೆಯ ಪ್ರತಿ ದಿನವೂ ಲಕ್ಷಾಂತರ ಜನರು ಮೂರ್ನಾಲ್ಕು ಕಿ.ಮೀ.ಕ್ಕೂ ಹೆಚ್ಚಿನ ಉದ್ದದ ಸರದಿ ಸಾಲಿನಲ್ಲಿ ನಿಂತು ಭಕ್ತಿಯಿಂದ ಸಕುಟುಂಬ ಸಮೇತರಾಗಿ ದೇವಿಗೆ ಪೂಜೆ ಸಲ್ಲಿಸಿ ಮಡಿಲಕ್ಕಿಯನ್ನು ಅರ್ಪಿಸಿ, ದುಗ್ಗಲಹೊತ್ತು ಕರ್ಪೂರ ಹಚ್ಚುವ ಮೂಲಕ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ಹೀಗೆ ಬರುವ ಎಲ್ಲಾ ಭಕ್ತಾದಿಗಳಿಗೂ ದೇವಸ್ಥಾನದ ಆಡಳಿತ ಮಂಡಳಿಯವತಿಯಿಂದ ಅಲ್ಲಿ ಸಂಗ್ರಹವಾದ ಅಕ್ಕಿಯಿಂದಲೇ ದಾಸೋಹವನ್ನು ಏರ್ಪಡಿಸುವುದು ವಿಶೇಷವಾಗಿದೆ.
ಹೀಗೆ ಹತ್ತು ದಿನಗಳ ಕಾಲ ಸಡಗರ ಸಂಭ್ರಮಗಳಿಂದ ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಆರಾಧಿಸುವ ಮಾಡಾಳು ಗ್ರಾಮಸ್ಥರು ಒಂಬತ್ತನೆಯ ದಿನದ ರಾತ್ರಿಯಿಂದಲೇ ಹತ್ತನೇ ದಿನದ ವಿಸರ್ಜನೆ ಮಹೋತ್ಸವದ ವಿಶೇಷ ಪೂಜಾ-ಕೈಂಕರ್ಯಗಳನ್ನು ಆರಂಭಿಸಿ, ಹತ್ತನೆಯ ದಿನದ ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಗೌರಮ್ಮಗೆ ಮಹಾ ಮಂಗಳಾರತಿ ಮಾಡಿದ ನಂತರ ವಿವಿಧ ರೀತಿಯ ಹರಕೆಗಳನ್ನು ಹೊತ್ತಿರುವ ಸಹಸ್ರಾರು ಭಕ್ತರು ದೇವಾಲಯದ ಮುಂದೆ ದುಗ್ಗುಲ ಹೊತ್ತು ಕರ್ಪೂರವನ್ನು ಉರಿಸಿ, ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಆದಾದ ನಂತರ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ರಥದ ಮೇಲೆ ಸ್ವರ್ಣಗೌರಿಯನ್ನ ಪ್ರತಿಷ್ಠಾಪಿಸಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ರಥೋತ್ಸವ ಸಾಗುತ್ತದೆ. ಹಾಗೆ ರಥ ಹೋಗುವ ಬೀದಿಗಳನ್ನು ಗ್ರಾಮಸ್ಥರು ತಳಿರು-ತೊರಣಗಳಿಂದ ಅಲಂಕರಿಸಿದರೆ, ಹೆಂಗಳೆಯರು ಬಣ್ಣ-ಬಣ್ಣದ ರಂಗೋಲಿಗಳನ್ನು ಬಿಡಿಸುವ ಮುಖಾಂತರ ತಮ್ಮ ಕಲಾವಂತಿಕೆಯನ್ನು ತೋರ್ಪಡಿಸುತ್ತಾರೆ.
ಸಂಜೆ ಗೋಧೂಳಿ ಸಮಯದಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮಿಗಳು ಮತ್ತು ಮಾಡಾಳು ನಿರಂಜನ ಪೀಠದ ರುದ್ರಮಿನಿ ಸ್ವಾಮೀಜಿಗಳ ಸಮ್ಮುಖದಲ್ಲಿ ಕೋಡಿ ಮಠಾಧೀಶರು ಮೊದಲನೇ ದಿನದಂದು ದೇವಿಗೆ ಹಾಗಿದ್ದ ವಜ್ರಖಚಿತ ಮೂಗುತಿಯನ್ನು ತೆಗೆಯುತ್ತಾರೆ. ಹಾಗೆ ಮೂಗುತಿಯನ್ನು ತೆಗೆಯುವಾಗ ದೇವಿಯ ಕಣ್ಗಂಳಿಂದ ಧಾರಾಕಾರವಾಗಿ ಕಣ್ಣಿರು ಹರಿಯುತ್ತದೆ ಎನ್ನುವ ನಂಬಿಕೆ ಸ್ಥಳೀಯರಿಗೆ.
ಈ ರೀತಿಯಲ್ಲಿ ದೇವಿಯು ಕಣ್ಣಿರು ಹರಿಸುವುದರ ಹಿಂದೆಯೂ ರೋಚಕವಾದ ಕತೆಯಿದ್ದು ಹಬ್ಬಕ್ಕೆ ಗಂಡನ ಮನೆಯಿಂದ ತವರು ಮನೆಗೆ ಬಂದ ಹೆಣ್ಣುಮಗಳು ಸಂಭ್ರದ ಹಬ್ಬವನ್ನು ಮುಗಿಸಿಕೊಂಡು ಪುನಃ ಗಂಡನ ಮನೆಗೆ ಹೋಗುವಾಗ ಹೇಗೆ ದುಃಖಿಸುತ್ತಾಳೋ ಅದೇ ರೀತಿಯ ದುಃಖ ಗೌರಮ್ಮನಿಗೂ ಆಗುವ ಕಾರಣ ಆಕೆಯು ಕಣ್ಣೀರು ಸುರಿಸುತ್ತಾಳೆ ಎಂಬ ಐತಿಹ್ಯವಿದೆ.
ಸಂಜೆ ಕತ್ತಲಾಗುವ ಮಂಚೆ ಗ್ರಾಮದಲ್ಲಿರುವ ಕಲ್ಯಾಣಿಯಲ್ಲಿ ಕೋಡಿಮಠದ ಸ್ವಾಮೀಜಿಗಳ ಸಮ್ಮುಖದಲ್ಲಿಯೇ ವಿದ್ಯುಕ್ತವಾಗಿ ಗೌರಮ್ಮ ದೇವಿಯನ್ನ ವಿಸರ್ಜಿಸುವ ಮುಖಾಂತರ ಹತ್ತು ದಿನಗಳ ಸಂಭ್ರಮಕ್ಕೆ ತೆರೆಬಿದ್ದು ಅಂದಿನಿಂದಲೇ ಮತ್ತೆ ಮುಂದಿನ ವರ್ಷಕ್ಕೆ ಗೌರಮ್ಮನನ್ನು ಸ್ವಾಗತಿಸುವ ಸಿದ್ಧತೆ ಆರಂಭವಾಗುವ ಮೂಲಕ ಮಾಡಾಳು ಜಾತ್ರೆಯ ಅಂತ್ಯ ಎನ್ನುವುದಕ್ಕಿಂತ ಆರಂಭವಾಗುತ್ತದೆ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
(ಬರಹ-ಶ್ರೀಕಂಠ ಬಾಳಗಂಚಿ
ಏನಂತೀರಿ.ಕಾಂ)

