


ಅತಿ ಸಾಮಾನ್ಯ ಕುಟುಂಬದ ಹುಡುಗರೇ ಹೀಗೆ ಅವರಿವರನ್ನು ನೋಡಿ ʼಏನೋ ಮಾಡಬೇಕು, ಎಂದುಕೊಂಡು ಹೊರಟು ಬಿಡುತ್ತಾರೆ. ನಂತರ ಬದುಕು ಅವರನ್ನು ಎಲ್ಲೋ ಮುಟ್ಟಿಸಿ ಮಜಾ ನೋಡು ಎನ್ನುತ್ತದೆ.
ಇಂಥ ಸಹಸ್ರಾರು ಜನರಂತೆ ಓಡಿ ಹೋದವರು ನಮ್ಮೂರಿನ ಕಾನಗೋಡು ಪರಮೇಶ್ವರ ಭಾಗವತ, ಬೇಡ್ಕಣಿ ಕೃಷ್ಣಾಜಿ, ಹೆಮ್ಮನಬೈ ಲ್ ರಾಮಚಂದ್ರ,
ಇವರಲ್ಲಿ ಇಂದು ನಮ್ಮನ್ನಗಲಿದ ರಾಮಚಂದ್ರ ಭಾಗವತ ಹೆಮ್ಮನಬೈಲು ವಿಶೇಶ ವ್ಯಕ್ತಿಯಾಗಿ ಕಾಣುತ್ತಾರೆ.
ರಸ್ತೆ ಸಂಪರ್ಕ, ಮೂಲಭೂತ ಅನುಕೂಲಗಳೇ ಇಲ್ಲದ ಹೆಮ್ಮನಬೈಲ್ ಎನ್ನುವ ಕುಗ್ರಾಮದ ಹುಡುಗನಿಗೆ ಅಜ್ಜ- ಅಪ್ಪ, ಮನೆತನದಿಂದ ಬಂದ ಏಕೈಕ ಬಳವಳಿ ಎಂದರೆ ಯಕ್ಷಗಾನ ಪ್ರೀತಿ.
ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!
ಬಾಲಕ ರಾಮಚಂದ್ರ ಭಾಗವತ ಅಲೆದಾಡದ ಊರುಗಳೇ ಇಲ್ಲ, ಪದ್ಯ ಹೇಳದ ಜಾಗಗಳೇ ಇಲ್ಲ.
ವಾಮನಮೂರ್ತಿ ಕಂಠವೇ ಕೀರ್ತಿ… ಶ್ರಾವಣ ಬಂತು.. ಹಾಡನ್ನು ಬೇಂದ್ರೆ ಕೇಳಿದ್ದರೆ ಸಾರ್ಥಕವಾಯಿತು ಎನ್ನುತಿದ್ದರೇನೋ?
ಸಂಯಮ,ಬದ್ಧತೆ,ತೊಡಗಿಸಿಕೊಳ್ಳುವಿಕೆಯಿಂದ ರಾಜ್ಯದ ಅನೇಕ ಪ್ರಸಿದ್ಧ ಮೇಳಗಳಲ್ಲಿ ಪ್ರಖ್ಯಾತ ಭಾವತರಾಗಿ ಕೆಲಸಮಾಡಿ ಹೆಮ್ಮನಬೈಲು ಭಾಗವತರೆಂದೇ ಯಕ್ಷಲೋಕದಲ್ಲಿ ಛಾಪು ಮೂಡಿಸಿದ ರಾಮಚಂದ್ರ ನಾಯ್ಕ ಇಂದು ನಮ್ಮನ್ನಗಲಿದರು ಎಂದು ಕೇಳುವಾಗ ಅವರ ಹಾಡು,ಅವರ ಯಕ್ಷಪ್ರೀತಿ,ಕಲಾಸಮರ್ಪಣೆಗಳ ನೆನಪೆಲ್ಲ ಮೆರವಣಿಗೆ ಹೊರಡುತ್ತವೆ.
ಹೆಮ್ಮನಬೈಲಿನ ಅಪ್ಪಟ ಮಲೆನಾಡಿನ ಜೀವನಪ್ರೀತಿಯ ಕುಡಿ ಯಕ್ಷ ಗಿಡವಾಗಿ ಮರ ವಾಗಿ ನೆರಳು ನೀಡುತಿದ್ದಾಲೇ ಉರುಳಿ ಬಿದ್ದಿದೆ ಇದರ ನೆರಳು ಮುಂದೆ ಕೂಡಾ ಅನೇಕರನ್ನು ಪೊರೆಯಲಿದೆ.

ಹೆಮ್ಮನಬೈಲಿಂದ ಹೊರಟ ರಾಮಚಂದ್ರ ನ ಪಯಣ ಸಿಗಂದೂರು ಮೇಳದ ವರೆಗೆ ತೆವಳುತ್ತಾ ಬರುವಾಗ ಸಹಿಸಿದ ನೋವುಗಳೂ ಅನೇಕ ಆದರೆ ಕಲಾರಾಧನೆ ಪ್ರೀತಿಯಾಗಿ ಅರಳಿತ್ತಲ್ಲ ಅವರು ಹೋದೆಡೆಯಲ್ಲೆಲ್ಲ ಸಂಗೀತದ ಮಾಧುರ್ಯ ಸುವಾಸನೆಯಂತೆ ಹರಡುತಿತ್ತು. ತನ್ನ ಯಕ್ಷ ಕ್ಷೇತ್ರಕ್ಕೆ ಬದುಕು ಮುಡುಪಾಗಿಟ್ಟ ರಾಮಚಂದ್ರ ಭಾಗವತರು ಯಕ್ಷಗಾನ ಪ್ರಸಂಗಗಳನ್ನೂ ಬರೆದಿದ್ದಾರೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ, ಯಕ್ಷಗಾನ ಸಂಘಟನೆ ಮಾಡಿದ್ದಾರೆ. ರಾಜ್ಯದ ಯಕ್ಷಲೋಕದ ನೂರರಲ್ಲಿ ಒಬ್ಬರಾಗಿ ಸಾಧಕರೆನಿಸಿಕೊಂಡರೂ ಪ್ರಶಸ್ತಿ-ಪುರಸ್ಕಾರ ಗೌರವಗಳು ದಕ್ಕಿದ್ದು ಕಡಿಮೆ, ೫೭ ನೇ ವಯಸ್ಸಿಗೇ ಇಹಲೋಕ,ಯಕ್ಷಲೋಕ ತ್ಯಜಿಸಿದ ರಾಮಚಂದ್ರ ಭಾಗವತ ತಮ್ಮ ಕೃತಿ, ಕೆಲಸ, ಜನಪ್ರೀಯತೆಯಿಂದಲೇ ನೂರು ವರ್ಷ ಬದುಕಿ ಉಳಿಯುತ್ತಾರೆ. ಯಕ್ಷಪ್ರೇಮಿಗಳು ಅವರ ಕುಟುಂಬವರ್ಗದ ನೋವು-ದುರ್ಖದಲ್ಲಿ ಪಾಲುದಾರರಾಗಬೇಕಷ್ಟೆ.
