ಮಲೆನಾಡಿನಲ್ಲಿ ಇದೇ ಮೊದಲ ಬಾರಿ ಬರದ ಛಾಯೆ ಕಂಡಿದೆ. ಎರಡ್ಮೂರು ತಿಂಗಳು ಸುರಿಯುತಿದ್ದ ಮಳೆ ಈ ವರ್ಷ ಎರಡ್ಮೂರು ವಾರ ಕೂಡಾ ಬೀಳಲಿಲ್ಲ. ಮಳೆಯ ತೌರೂರು ಮಲೆನಾಡಿನಲ್ಲಿ ಮಳೆ ಕೊರತೆ ಅನೇಕ ಆತಂಕಗಳಿಗೆ ಕಾರಣವಾಗಿದೆ. ಈ ಮುಂದಾಲೋಚನೆ ಮಲೆನಾಡಿನ ಜನರಿಗೆ ಜೀವಜಲದ ಮಹತ್ವ ತಿಳಿಸುತ್ತಿದೆ. ಮಳೆಗಾಲದ ಕೊನೆಯ ಅವಧಿಯ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ತುಂಬಿ- ತುಳುಕುತಿದ್ದ ಮಲೆನಾಡಿನ ಕೆರೆ ಕಟ್ಟೆಗಳು ಈ ವರ್ಷ ಮೊದಲಿನ ವೈಭವ ನೆನಪಿಸುವಂತಿಲ್ಲ. ಈ ಜಲಕ್ಷಾಮದ ಪರಿಣಾಮ ಅರಿತ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹುಸೂರಿನ ರೈತರು ಬರುವ ಬೇಸಿಗೆ ಕಾಲದ ನೀರಿನ ಬವಣೆ ಬಗ್ಗೆ ಯೋಚಿಸಿ ಈಗಾಗಲೇ ಕಾರ್ಯಪ್ರವೃತ್ತರಾಗಿ ಬರಲಿರುವ ಬರಕ್ಕೆ ಸೆಡ್ಡು ಹೊಡೆಯುವ ಪೂರ್ವತಯಾರಿ ನಡೆಸಿದ್ದಾರೆ.
ತಮ್ಮೂರಿನ ಪುರಾತನ ಹೆಗ್ಗೆರೆಯನ್ನು ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರದಿಂದ ಹೂಳು ತೆಗೆದು ದಂಡೆಕಟ್ಟಿ ಮೂವತ್ತು ಅಡಿ ಆಳದ ನೀರು ನಿಲ್ಲಿಸಿದ್ದಾರೆ. ಈ ಜಲಸಂರಕ್ಷಣೆ ಕೆಲಸಕ್ಕಾಗಿ ನಿರಂತರವಾಗಿ ದುಡಿದ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಏಳುವರೆ ಲಕ್ಷ ರೂಪಾಯಿಗೆ ಸ್ಥಳಿಯ ವಂತಿಗೆ ಸೇರಿಸಿ ಒಟ್ಟೂ ೧೫ ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ಸುಂದರ ಕೆರೆ ನಿರ್ಮಿಸಿದ್ದಾರೆ.
ಈ ಕೆರೆ ಪುನಶ್ಚೇತನ ಕೆಲಸಕ್ಕೆ ಸ್ವಯಂಸೇವಕರಾಗಿ ದುಡಿದ ಸ್ಥಳೀಯರು ಇಂದು ಈ ಕೆರೆಯನ್ನು ಸ್ಥಳೀಯ ಆಡಳಿತಕ್ಕೆ ಶಾಸಕ ಭೀಮಣ್ಣ ನಾಯ್ಕರ ಮೂಲಕ ಹಸ್ತಾಂತರಿಸಿದರು.
ಈ ಕೆರೆ ಪುನಶ್ಚೇತನದಿಂದ ಹುಸೂರಿನ ೪೦೦ ಎಕರೆ ಜಮೀನಿಗೆ ನೀರು ಪೂರೈಸುವ ಮಾದರಿ ಕೆಲಸ ಈಗ ಪುರ್ಣಗೊಂಡಿದೆ. ಈ ಸಾಹಸದ ಕೆಲಸವನ್ನು ಮೆಚ್ಚಿರುವ ಜನಪ್ರತಿನಿಧಿಗಳು, ಅಧಿಕಾರಿವರ್ಗ ಇಂದು ವಿಶೇಶ ಕಾರ್ಯಕ್ರಮ ರೂಪಿಸಿ ನಮ್ಮೂರು ನಮ್ಮ ಕೆರೆ ಯೋಜನೆಯ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮಸ್ಥರನ್ನು ಅಭಿನಂದಿಸಿದರು. ಈ ಮಾದರಿ ಕೆಲಸದ ಕಾರಣಕ್ಕೆ ಹುಸೂರಿನ ಜನತೆ ಈಗ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದೆ.