ದ್ವೀಪದ ಹಕ್ಕಿಯ ಹಾಡು, ಪಾಡು

ನೆನಪು ನದಿಯಾಗಿ….
ಮುನ್ನುಡಿಯಲ್ಲಿ ಗೆಳೆಯ ಕವಿ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಬರೆಯುತ್ತಾರೆ……

ಮುನ್ನುಡಿ.

                  ದ್ವೀಪದ ಹಕ್ಕಿ ಯ ಧ್ಯಾನ

ತನ್ನ
ಕರಗಿಸಿ
ತಮ
ಗೆಲ್ಲುವ
ಮೊಂಬತ್ತಿ
ಮತ್ತು
ಜಗದ
ಮೆಚ್ಚುಗೆ
ಹಂಗಿಲ್ಲದೇ
ಹೊಳೆವ
ಮಿಣುಕುಹುಳುವಿನ
ಜೀವನಪ್ರೀತಿ
ನಮ್ಮ ಎಲ್ಲ ಕಾಲದ
ಆದರ್ಶವಾಗಿರಲಿ…

ಇಂತಹ ಅದಮ್ಯ ಜೀವನ ಪ್ರೀತಿಯ ಫಲವತ್ತತೆಯನ್ನು ತನ್ನೊಳಗೆ ಜತನದಿಂದ ಕಾಯ್ದುಕೊಂಡು ಬರುತ್ತಿರುವ ಕವಿ ಮಿತ್ರ ಜಿ.ಟಿ ಸತ್ಯನಾರಾಯಣ ತನ್ನ ಕವಿಯಾನವನ್ನು ಹೀಗೆ ಆರಂಭಿಸುತ್ತಾರೆ.

ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಕುಳಿತು ತನ್ನೂರನ್ನು, ತನ್ನವರನ್ನು, ತನ್ನ ಕಾಡು-ಮೇಡು, ಕತ್ತಲು, ಮಳೆ, ಕಾಡಿನೊಳಗಿನ ಮಿಕ, ಹೂವು, ಝರಿ, ತೊರೆ, ಒಣಗಿ ಉದುರಿದ ಎಲೆಯನ್ನೂ ಬಿಡದೆ ಎಲ್ಲವನ್ನೂ ಜಗತ್ತಿಗೆ ಕವಿಯ ಕಣ್ಣಿನಿಂದ ಕಾಣಿಸಲು ಸದಾ ಚಡಪಡಿಸುವ ಜಿ.ಟಿ ಸತ್ಯನಾರಾಯಣ ಸದಾ ತನ್ನೊಳಗೆ ತಾನು ಮಾತಿಗಿಳಿದಿರುತ್ತಾರೆ.

ಲಿಂಗನಮಕ್ಕಿಯ ಶರಾವತಿ ಜಲ ಯೋಜನೆ ಮಲೆನಾಡಿನ ಅಸಂಖ್ಯಾತ ಜನರ ಬದುಕನ್ನು ನುಂಗಿದ ದುಃಸ್ವಪ್ನ ಇಂದಿಗೆ , ನಾಳೆಗೆ ಮುಗಿಯುವುದಲ್ಲ. ತಾನು ಪರಂಪರಾಗತವಾಗಿ ಬದುಕಿದ ನೆಲವೇ ನೀರು ಪಾಲಾಗಿ , ಬದುಕು ಕಾಡುಪಾಲಾದವರ ತ್ಯಾಗಕ್ಕೆ ಈ ನಾಡು ಸದಾ ಕೃತಜ್ಞವಾಗಿರಬೇಕು. ಜಿಟಿಎಸ್ ಶರಾವತಿ ಯೋಜನೆಗಾಗಿ ತ್ಯಾಗ ಮಾಡಿದ ಜನಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಂತೆಯೂ , ಶೋಷಿತ ತಲೆಮಾರಿನ ಹೊಸಚಿಗುರಿನಂತೆಯೇ ಕಾಣುತ್ತಾರೆ. ಕವಿಯಾಗಿ, ಪತ್ರಕರ್ತನಾಗಿ, ಬರಹಗಾರನಾಗಿ, ವೈಚಾರಿಕ ಸ್ಪಷ್ಟತೆಯ ದಿಟ್ಟ ದನಿಯಾಗಿದ್ದಾರೆ ಕೂಡ. ಜಿಟಿಎಸ್ ಸಮ್ಮನಿರಲಾರದೆ ಈ ಸಮಾಜದ ನೋವು, ನಲಿವು ಯಾವುದಕ್ಕೂ ಸದಾ ಮಿಡಿಯುತ್ತಲೆ ಇರಬೇಕು, ದುಡಿಯತ್ತಲೆ ಇರಬೇಕೆಂಬ ಜಿದ್ದಿಗೆ ಬಿದ್ದಂತೆ ತಹ ತಹಿಸುತ್ತಲೆ ಇರುವ ಜೀವ.

ಜಿ.ಟಿ ಎಸ್ ರನ್ನು ನಾನು ದ್ವೀಪದ ಹಕ್ಕಿ ಎಂದೆ ಕರೆಯುತ್ತೇನೆ. ಅದು ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ… ಹಾಡುವುದು ಅನಿವಾರ‍್ಯ ಕರ್ಮ ನನಗೆ.. ಎಂಬಂತೆ ಜಿ.ಟಿಎಸ್ ತನ್ನ ಪಾಡಿಗೆ ನಾನು ಬರೆಯುತ್ತಲೇ ಹೋಗುತ್ತಾರೆ. ಅದು ಎಲ್ಲರನ್ನೂ.., ಎಲ್ಲವನ್ನೂ ಒಳಗೊಂಡಂತೆ ನಡುಗಡ್ಡೆಯ ಜಲನಿಧಿಯಿಂದ ಬಯಲ ಆಲಯದವರೆಗೂ ಹರಿಯುತ್ತದೆ.

ಜಿ.ಟಿಎಸ್ ಕವಿತೆಗಳು ಎಲ್ಲರನ್ನೂ ಎಲ್ಲವನ್ನೂ ಮಾತಾನಾಡಿಸುವಂತೆ, ಮಾತಿಗೆಳೆಯುವಂತೆ ಕಂಡರೂ ಎಲ್ಲರ ಎದೆಯನ್ನು ಪ್ರೇಮಮಯದಿಂದ ತಟ್ಟುವ ಸದ್ದು ನಿಶ್ಯಬ್ಧ ದ್ವೀಪದಿಂದ ಕೇಳಿಸುತ್ತಲೆ ಇರುತ್ತದೆ ಎಂಬುದನ್ನು ಈ ಕವನ ಸಂಕಲನ ಓದುವಾಗ ಅರಿವಿಗೆ ಬರಬಹುದು.

ನೀವು ಬಯಸಿದಂತೆ ಕವಿತೆ
ಬರೆಯಲಾರೆ ಎಂದೂ ಬರೆಯಲಾಗದು
ನಿಮ್ಮ ಇಷ್ಟದ ಚಿತ್ರಕೆ
ನೀವು ಹೇಳಿದ ಬಣ್ಣ ತುಂಬಲಾರೆ
ಉನ್ಮತ ಉದ್ಗೋಷಕ್ಕೆ ದ್ವನಿ
ಸೇರಿಸಲಾರೆ ದೇವರ ಹೆಸರಲಿ..
ಎಂದು ಹೇಳುವ ಮೂಲಕ ಇಲ್ಲಿ ಕವಿ ಜಿಟಿಎಸ್ ತನ್ನ ಧೋರಣೆಯನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ತಾನು ಅನುಭವಿಸಿದ, ಕಂಡುಂಡ ಬದುಕನ್ನು, ಭಾವಕ್ಕೆ ದಕ್ಕಿದನ್ನು ಅಭಿವ್ಯಕ್ತಿಸುವಲ್ಲಿ ತನ್ನದೇ ಆದ ಮಾದರಿಯಲ್ಲಿ ಪ್ರತಿಪಾದಿಸಿದ್ದಾರೆ. ಎಲ್ಲರೊಳಗಿಂತ ಭಿನ್ನವಾಗಿ ನಿಲ್ಲುವ ಪ್ರಯತ್ನ ಮಾಡಿದ್ದಾರೆ.

ಜಿಟಿಎಸ್ ಏಕತಾನತೆಗೆ ಕಟ್ಟುಬಿದ್ದ ಕವಿಯಲ್ಲ. ಅವರೋರ‍್ವ ಪ್ರೇಮಿಯಾಗಿಯೂ, ಬಂಡಾಯಗಾರನಂತೆಯೂ, ಒಮ್ಮೊಮ್ಮೆ ದಾರ್ಶನಿಕನಾಗಿಯೂ ಕಾಣಿಸಿಕೊಳ್ಳುತ್ತಾರೆ. ತನ್ನ ಸಾಮಾಜಿಕ ಬದುಕಿನ ತಲ್ಲಣಗಳಿಗೆ ದೊಡ್ಡ ದನಿಯಂತೆ ಮಾರ್ದನಿಸುತ್ತಿದೆ.

ಅವ್ವ
ಎಂದಿಗೂ ಖಾಲಿಯಾಗದ
ಮರೆಯದ-ಮಾಸದ
ಬಿತ್ತಿ-ಬುತ್ತಿ
ಅನುಭೂತಿ.
ಎನ್ನುವ ಕವಿ ಸದಾ ಅವ್ವನ ಅಸ್ಮಿತೆಯ ಹೊಸಚಿಗುರಿನಂತೆ ಪುಳಕಗೊಳ್ಳುತ್ತಾನೆ. ಭಾಷೆಯನ್ನು ದುಡಿಸಿಕೊಳ್ಳುವ ಕಸುಬು ಜಿಟಿಎಸ್ ಗೆ ಗೊತ್ತಿದೆ. ಭಾವತೀವ್ರತೆಗೆ ಪಕ್ಕಾದಂತೆ ಪದಗಳ ಹಾರ ಕಟ್ಟಿ ಅವ್ವನಿಗೂ , ತಾನು ಬದುಕುತ್ತಿರುವ ದ್ವೀಪಕ್ಕೂ ತೊಡಿಸಿ ಖುಷಿಗೊಳ್ಳುವುದು ಒಂದು ಕೌತುಕವೇ ಸರಿ.

ಅಖಂಡತೆ
ಬಗ್ಗೆ
ದೊಡ್ಡ
ಮಾತಾಡುವ
ನೇತಾರನೇ
ದ್ವೇಷದ
ವಿಷಕುಡಿದು
ಅಮಲೇರಿ
ಛಿದ್ರವಾಗಿಹ
ಎದೆಗೆ
ಮೊದಲು
ನಿಜ
ಪ್ರೀತಿ ಉಣಿಸಿ
ಒಂದಾಗಿಸು

ನಮ್ಮನ್ನಾಳುವ ನಾಯಕರ ಮರಾಮೋಸವನ್ನು ಬಯಲು ಮಾಡುವ ಹೊಣೆಗಾರಿಕೆಯಿಂದ ಜಿಟಿಎಸ್ ಹಿಂದೆ ಸರಿಯುವುದಿಲ್ಲ. ಜನಸಮುದಾಯದ ಅಖಂಡತೆಯನ್ನು ಪೊಳ್ಳು ಭಾಷಣಗಳಿಂದ ಬಿಡಿಸಿ ಪ್ರೀತಿಯನ್ನು ಬಿತ್ತು ಎಂದು ಫರ್ಮಾನು ಹೊರಡಿಸುತ್ತಾರೆ. ಪ್ರೀತಿಯೊಂದೆ ಅಂತಿಮ ಎಂಬ ಸತ್ಯವನ್ನು ಮತ್ತೆ ಮತ್ತೆ ಸಾರುತ್ತಾರೆ. ಭಾರತ ಮಾತೆಯನ್ನು ನೆನಪಿಸುತ್ತಾರೆ. ಕವಿಗೆ ತನ್ನ ದ್ವೀಪದ ಸಿದ್ದವ್ವನೂ, ನಾಣಜ್ಜನೂ , ಭೂತಪ್ಪನೂ, ಜಾತ್ರೆಯೂ , ದ್ವೀಪಕ್ಕೆ ಷೋ ಕಾಲ್ಡ್ ನಾಗರೀಕ ಪರಪಂಚವನ್ನು ಕಾಣಿಸುವ ಲಾಂಚ್ ಎಲ್ಲವೂ ವಿಸ್ಮಯವಾಗಿ ಕಾಣುತ್ತವೆ. ಅವುಗಳಿಗೆ ಜೀವ ತುಂಬಿ ಕವಿತೆಯೊಂದಿಗೆ ಸ್ವಗತಗೊಳ್ಳುತ್ತಾರೆ ಹೀಗೆ….. .

ಮೀನು ನಾಣಜ್ಜನ ದಣಪೆ
ಹಾಡಿ ಕುಣಿದ ನದಿಬಯಲು
ಕಾಕನ ಪೆಪ್ಪರಮೆಂಟ್ ಅಂಗಡಿ
ಉಳಿದಿದೆ ಬಾಗಿಲು ಮುಚ್ಚಿಕೊಂಡು

ಇದಿಷ್ಟೆ ಅಲ್ಲ , ಕವಿ ಪ್ರೇಮಿ ಕೂಡ. ಪ್ರೇಮದಲ್ಲಿ ಸದಾ ಜಿಜ್ಞಾಸೆ ಹುಡುಕುವ ಜಿಟಿಎಸ್ ಅಂತಿಮವಾಗಿ ಪ್ರೀತಿಗೆ ಶರಣಾಗುತ್ತಾರೆ. ಹೊತ್ತಲ್ಲದ ಹೊತ್ತಲ್ಲಿ ಪ್ರೇಮ ಕವಿತೆ ಕಳಿಸಬೇಡ . ಇಲ್ಲಿ ಧೋ ಎಂದು ಮಳೆ ಸುರಿಯುತ್ತಿದೆ .. ಎಂದು ಭಿನ್ನವಿಸಿಕೊಳ್ಳುವ ಕವಿಯನ್ನು ಕಾಣಬಹುದು.
ಮಾಗಿಯ ಚಳಿಯಲ್ಲಿ ಹೆಂಡತಿ ಜೊತೆಗಿರಬೇಕು.. ಎಂದು ಮುದುಕನೊಬ್ಬನ ಬಯಕೆಯಲ್ಲಿ ಜಿಜ್ಞಾಸೆ ಕಾಣಲು ಹೊರಡುವ ಜಿಟಿಎಸ್ ತನಗರಿವಿಲ್ಲದೆ ತನ್ನ ರಸಿಕತೆಯನ್ನೂ ಹೊರಚೆಲ್ಲಿಕೊಂಡಿರುವುದು ಜಾಣತನದಂತೆ ಕಾಣುತ್ತಿದೆ.

ಜಿಟಿಎಸ್ ಒಳಗೊಬ್ಬ ಕಾಮ್ರೇಡ್ ಕುದಿಯುತ್ತಿರುತ್ತಾನೆ…..ಹೀಗೆ

ರಕ್ತ ಮೆತ್ತಿದ
ನಿಮ್ಮ ಪಾದಗಳು
ಆಳುವವರ ಅಹಂಕಾರದ
ನೆತ್ತಿಯ ಮೇಲೆ
ಇಡುವ ಕಾಲ ಬರಲಿ…

ಕೇವಲ ಇದೊಂದು ಕಾಲದ ಕರೆಯಷ್ಟೆಯಾಗಿ ಉಳಿದಿಲ್ಲ. ಆಳುವವರ ಅಹಂಕಾರದ ವಿರುದ್ದ ಜಿಟಿಎಸ್ ತನ್ನ ಕಾವ್ಯಕತ್ತಿಯಿಂದಲೂ, ಕಾಯಕ ಬದ್ದತೆಯಿಂದಲೂ ಹೋರಾಡುತ್ತಾ ಬಂದಿದ್ದಾರೆ.

ಬುದ್ಧ , ಬಸವ , ಅಂಬೇಡ್ಕರ್ ಅವರ ಅರಿವಿನದಾರಿಯೊಂದ ಸದಾ ಆಶ್ರಯಿಸುವ ಜಿಟಿಎಸ್ ಕಾವ್ಯದ ಕಸೂತಿಯನ್ನು ತನ್ಮಯದಿಂದ ಹೆಣೆದಿದ್ದಾರೆ. ಅಲ್ಲಲ್ಲಿ ಖಂಡ ಕಾವ್ಯ, ತುಂಡು ಕಾವ್ಯಗಳಿಗೆ ಜೀವ ಬಂದು ಚಲಿಸುವುದನ್ನು ಕಾಣಬಹುದು.
ವರ್ತಮಾನದಲ್ಲಿ ಸುಳ್ಳು ಮತ್ತು ಹಿಂಸೆಯ ಅಬ್ಬರದಲ್ಲಿ ಸತ್ಯ, ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಅದುವೇ ನಿಜವಾದ ದೇಶಭಕ್ತಿ ಎಂಬುದನ್ನು ಜಿಟಿಎಸ್ ತನ್ನ ಕವಿತೆಗಳಲ್ಲಿ ಪ್ರತಿಪಾದಿಸಿದ್ದಾರೆ. ಇಂತಹ ಹೊತ್ತಿನಲ್ಲಿ ಎಲ್ಲಾ ಕಾಲಕ್ಕೂ ತನ್ನದೊಂದು ನಿರ್ಣಯವನ್ನು ಘೋಷಿಸಿಕೊಂಡಿದ್ದಾರೆ ಅದುವೇ

……ಇತಿಹಾಸ ಬರೆಯುತ್ತೇವೆ
ಸುಳ್ಳಿನ ಎದೆ ಒಡೆದು ಸತ್ಯದ ಜತೆ ನಡೆದು.

ಓದುಗರಿಗೆ ತನ್ನದೆನಿಸುವ , ಓದುಗರನ್ನು ತನ್ನದಾಗಿಸಿಕೊಳ್ಳುವುದು ಮಾತ್ರ ಕವಿತೆ ಯಾಗುತ್ತದೆ. ಕವಿತೆ ಓದುಗನನ್ನು ಮತ್ತೆ ಮತ್ತೆ ಕಾಡಬೇಕು. ಈ ಕವನ ಸಂಕಲನದಲ್ಲಿ ಜಿಟಿಎಸ್ ಎಂಬ ದ್ವೀಪದ ಹಕ್ಕಿಯ ಅದೆಷ್ಟೋ ಕವಿತೆಗಳು ಓದುಗರನ್ನು ಕಾಡದೆ ಬಿಡುವುದಿಲ್ಲ. ಸುಖವಾಗಿರುವ ಕಾಲದಲ್ಲಿ ಬರೆಯುವುದು ಇದ್ದೇ ಇರುತ್ತದೆ. ಕಷ್ಟದ ಕಾಲದಲ್ಲಿ ಬರೆಯುವುದಿದೆಯಲ್ಲಾ ಅದೊಂದು ಸವಾಲೇ ಸರಿ. ಇಂತಹ ಸವಾಲುಗಳನ್ನು ಜಿಟಿಎಸ್ ಎದುರುಗೊಳ್ಳುತ್ತಲೆ ಕವಿತೆ ಹಡೆದು ಹಗುರಾಗುತ್ತಿದ್ದಾರೆ.

ನಾವು ಬದುಕುವ ಕಾಲಘಟ್ಟದಲ್ಲಿ ಸಮಾಜದ ಕುರುಡುತನಕ್ಕೆ ಕಾವ್ಯ , ಕತೆ, ಬರಹ, ನಾಟಕ, ಕಲೆ ಯಾವುದೇ ರೂಪದಲ್ಲಾದರೂ ಸರಿಯೇ ಕಣ್ಣಾಗುವುದು ಬಹುಮುಖ್ಯವಾಗುತ್ತದೆ. ಗೆಳೆಯ ಜಿ.ಟಿ ಸತ್ಯನಾರಾಯಣ ತನ್ನೊಳಗಿನ ಕಾವ್ಯಗುಣದಿಂದ ಕುರುಡು ಸಮಾಜಕ್ಕೆ ಕಣ್ಣಾಗಲು ಸದಾ ಚಡಪಡಿಸುತ್ತಲೆ ಇರುತ್ತಾರೆ. ಸುಡುಗಣ್ಣಿನೊಳಗೂ ಪ್ರೀತಿಯನ್ನು ಹುಡುಕುವ ಜಿಟಿಎಸ್ ತಮವನ್ನು ಗೆಲ್ಲುವ ಮೂಂಬತ್ತಿಯಂತೆ ಕರಗಬೇಕು, ಮಿಣುಕು ಹುಳುವಿನ ಪ್ರೀತಿಯ ಆದರ್ಶ ಆಶಿಸುತ್ತಾರೆ. ಇಂತಹ ಕಾರುಣ್ಯ ಭರಿತ ಗೆಳೆಯ ಜಿ.ಟಿ ಸತ್ಯನಾರಾಯಣ ಅವರ ಕಾವ್ಯಪಯಣ ಜಿಜ್ಞಾಸೆಗಳ ಆಚೆ ಜಿಗಿದು ಇನ್ನಷ್ಟು ಎದೆಗಳಿಗೆ ಹರಿಯಲಿ, ಪ್ರೀತಿಯನ್ನು ಉಣಿಸಿಲಿ.

-ಎನ್.ರವಿಕುಮಾರ್ (ಟೆಲೆಕ್ಸ್)
ಕವಿ-ಪತ್ರಕರ್ತ
೨೬/೮/೨೦೨೧

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Pak ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!

ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ. ನವದೆಹಲಿ:...

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ. ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್‌ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *