


ಮಲೆನಾಡಿನ ಜನಜೀವನವೆಂದರೆ ಅದೊಂದು ಸಂಸ್ಕೃತಿ. ಕೃಷಿ,ವ್ಯವಸಾಯ ಮಾಡುವುದು ಬೇರೆ ಆದರೆ ವ್ಯವಸಾಯ ಸಂಸ್ಕೃತಿ ಅನುಸರಿಸುವುದಿದೆಯಲ್ಲ ಅದು ಒಂದು ಜೀವನ ಕ್ರಮ. ಇಂಡಿಯಾ ಬಹುತ್ವದ, ಬಹುಸಂಸ್ಕೃತಿಯ ತವರೂರು ಇಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬಂದ, ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದ ಜನ ಹೆಣ್ಣು ಮಾವನ ಮನೆಗೆ ಹೋಗುವಷ್ಟು ಸಹಜ ಆದರೆ ನಮ್ಮ ವಲಸೆಯಿಂದ ನಮ್ಮ ಭಾಷೆ,ಸಂಸ್ಕೃತಿ ಶಿಥಿಲಗೊಳ್ಳುವುದನ್ನು ಅಲ್ಲಗಳೆಯಲಾಗದು.

ಉತ್ತರ ಭಾರತದಿಂದ ವಲಸೆ ಬಂದವರು ನಮ್ಮ ಜನಜೀವನ, ಆಚರಣೆ,ರೂಢಿ-ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದ್ದಾರೆ. ಆದರೂ ನಮ್ಮ ಜನ ಸೈನಿಕರ ಹಬ್ಬವನ್ನು ಹನಿ ಹಬ್ಬ ಹುತ್ತರಿ ಹಬ್ಬವಾಗಿ ಆಚರಿಸುತ್ತಾರೆ. ದ್ರಾವಿಡ ಮೂಲದ ಎಲ್ಲರೂ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಗಣೇಶ ಚತುರ್ಥಿಯಲ್ಲಿ ಗೌರಿ ಪೂಜೆ ಮಾಡುವ ಜನ ಅಂತರರ್ಜಾತಿ ವಿವಾಹವಾಗಿ ಆದಿವಾಸಿಯೊಂದಿಗೆ ಬದುಕುತ್ತಿರುವ ಗೌರಿಯನ್ನು ಕರೆತಂದು ಪೂಜಿಸುತ್ತಾರೆ.!
ಬೌದ್ಧ ಧರ್ಮದ ಮೂಲ ನೆನಪಿಸಿಕೊಳ್ಳಲು ಸೀಗೆ ಹುಣ್ಣಿಮೆಯಲ್ಲಿ ಭೂಮಿ ಪೂಜೆ ಮಾಡುತ್ತಾರೆ. ನಮ್ಮ ಮಾರಿ-ಚೌಡಿ, ಬೀರಲು, ಭೂತ, ನಮ್ಮದೇ ಕುಟುಂಬದ ಮಹಾಸತಿ ಮಾಸ್ತಿಯಾಗಿ, ವೀರ ತ್ಯಾಗಿ ಕುಮಾರ ರಾಮ, ಬಾಹುಬಲಿ ನಮ್ಮಿಂದ ಪೂಜಿಸಲ್ಪಡುತ್ತಾರೆ. ಯಾಕೆಂದರೆ ಇದೊಂದು ಸಂಸ್ಕೃತಿ ಇಲ್ಲಿ ಕೃಷಿ ಕಾಯಕವೇ ಪ್ರಧಾನ ಉಳಿದಿದ್ದೆಲ್ಲಾ ನಗಣ್ಯ.
ಮಾಂಸಹಾರಿ ಶೂದ್ರರು ದೀಪಾವಳಿಯಲ್ಲಿ ಗೋ ಪೂಜೆ ಮಾಡುತ್ತಾರೆ. ಈ ಪೂಜೆ, ಆಚರಣೆ ರಾಜಕೀಯ ಸೋಂಕಿನಿಂದ ದೂರ. ನಾವೆಲ್ಲಾ ಚಿಕ್ಕವರಿರುವಾಗ ಬಲೀಂದ್ರನ ಬೂರೆ ನೀರು ಚುಮುಕಿಸಿ ಗೋವುಗಳನ್ನು ಊರು, ಕೇರಿ ಕೊಟ್ಟಿಗೆಯೊಳಕ್ಕೆ ಸ್ವಾಗತಿಸುತಿದ್ದೆವು. ಗೋವು ನಮ್ಮ ಸಹಚರ. ಗೋವು ಮಾನವರ ಮಾಂಸಕ್ಕೆ ಬಳಕೆಯಾಗಬಾರದೆಂದು ಆರ್ಯರು ಗೋವಿನಲ್ಲಿ ದೇವರುಗಳಿವೆ ಎಂದು ಸುಳ್ಳು ಹೇಳಿದರು. ಅದು ಚಪ್ಪಲಿ ಹಾಕಿ ನಾಗಬನದಲ್ಲಿ ತಿರುಗಬಾರದೆನ್ನುವಷ್ಟೇ ಶುದ್ಧ ಸುಳ್ಳು. ಅದರ ಹಿಂದೆ ಹಾವು ಪಾದದಡಿ ಸಿಗದಂತೆ ಮುನ್ನೆಚ್ಚರಿಕೆಯ ಜಾಗೃತಿಯೂ ಇರಬಹುದು.
ಇವೆಲ್ಲಾ ಆಚರಣೆಗಳನ್ನು ಜನಜೀವನದ ಭಾಗವಾಗಿ ಸಹಜವಾಗಿ ಸ್ವೀಕರಿಸಿದರೆ ಅದರಿಂದ ಅಪಾಯವಿಲ್ಲ ಆದರೆ ಎಲ್ಲದರಲ್ಲೂ ದೇವರು ಧರ್ಮ ಹುಡುಕಿ ರಾಜಕೀಯ ಮಾಡತೊಡಗಿದೆ ಅದು ನಮ್ಮ ಸಂಸ್ಕೃತಿಗಿಂತ ವಿಕೃತಿಯಾಗುವುದೇ ಹೆಚ್ಚು. ದೀಪಾವಳಿಯಲ್ಲಿ ಹೂವು, ಹೂವಿನಂಥ ಹೆಣ್ಣು ದೀಪಾವಳಿ ವಿಶೇಷಾಂಕದ ಮುಖಪುಟ ಅಲಂಕರಿಸುವುದು ರೂಢಿ, ಸಂಪ್ರದಾಯ, ಸಂಸ್ಕೃತಿ ಅಲ್ಲಿ ಕೇಸರಿಸ್ವಾಮಿ ಪ್ರತ್ಯಕ್ಷವಾಗುವುದು ವ್ಯಾಪಾರದ ವಿಕೃತಿ. ದೀಪಾವಳಿಯ ಸಡಗರದಲ್ಲಿ ಇವೆಲ್ಲಾ ನೆನಪಾದವು.
