







ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಸೋಲು ಕಂಡು ಹೊಸಬರೇ ಆರಿಸಿ ಬಂದ ಹಿಂದಿನ ಕೆನರಾ ಅಂದರೆ ಈಗಿನ ಉತ್ತರ ಕನ್ನಡ ಕ್ಷೇತ್ರದಲ್ಲಿ ಲೋಕಸಭೆಯ ಚುನಾವಣೆ ತಯಾರಿ ತುರುಸು ಪಡೆದುಕೊಂಡಿದೆ.
ಈ ಹಿಂದೆ ಸತತ ೫ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿ.ಜೆ.ಪಿ.ಯ ಅನಂತಕುಮಾರ ಹೆಗಡೆ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವ ವಿದ್ಯಮಾನದ ನಂತರ ಉತ್ತರ ಕನ್ನಡ ಲೋಕಸಭೆ ಚುನಾವಣೆಯ ಕಣದ ರಂಗೇ ಬದಲಾಗುತ್ತಿದೆ.
ಹಾಲಿ ಸಂಸದ ಕೇಂದ್ರದ ಮಾಜಿ ಸಂಸದ ಈ ಬಾರಿ ಲೋಕಸಭೆಯ ಅಭ್ಯರ್ಥಿಯಾದರೆ ಅವರದೇ ಸಮೂದಾಯದ ಶಾಸಕ ಶಿವರಾಮ ಹೆಬ್ಬಾರ್ ರನ್ನು ಕಾಂಗ್ರೆಸ್ ಗೆ ತಂದು ಅವರಿಗೆ ಅಥವಾ ಅವರ ಮಗ ವಿವೇಕ್ ಹೆಬ್ಬಾರ್ ರಿಗೆ ಕಾಂಗ್ರೆಸ್ ಟಿಕೇಟ್ ನೀಡುವ ಸಾಧ್ಯತೆ ಇತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಅನಂತಕುಮಾರ ಹೆಗಡೆ ಈ ಬಾರಿ ಕಣದಲ್ಲಿರಲ್ಲ ಎನ್ನುತ್ತಿರುವಂತೆ ಅವರದೇ ಊರಿನ ಅನಂತಮೂರ್ತಿ ಹೆಗಡೆ ತನಗೆ ಟಿಕೇಟ್ ಕೊಡಿ ಎಂದು ಪ್ರಧಾನಿ ಮೋದಿಯವರನ್ನು ಸಂಪರ್ಕಿಸಿರುವ ವಿದ್ಯಮಾನ ಹೊರಬಿದ್ದಿದೆ.
ಅನಂತಕುಮಾರ್ ಹೆಗಡೆಯವರಂತೆ ನಿರಂತರವಾಗಿ ಜನಪ್ರತಿನಿಧಿಯಾಗುತಿದ್ದ ರಾಜ್ಯ ವಿಧಾನಸಭೆಯ ಮಾಜಿ ಸ್ಫೀಕರ್ ಈಗ ಆರುತಿಂಗಳಿಂದ ಖಾಲಿ ಇದ್ದಾರೆ. ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರ, ಹುದ್ದೆ ಇಲ್ಲದೆ ಪರಿತಪಿಸುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ತಾನು ಲೋಕಸಭೆ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಲೇ ತೆರೆಮರೆಗೆ ಸರಿದಿದ್ದ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲೇ ಬೇಕು ಎಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಹಿಸಂಗ್ರಹಣೆಯ ನೆಪದಲ್ಲಿ ಓಡಾಡುತ್ತಿರುವುದು ಅವರು ಲೋಕಸಭೆಯ ಅಭ್ಯರ್ಥಿಯಾಗಲು ಹವಣಿಸುತ್ತಿರುವ ಮುನ್ಸೂಚನೆ ಎನ್ನುವುದು ಅವರು ಮತ್ತು ಅವರ ಸಂಘದ ಬಗ್ಗೆ ಅರಿತಿರುವ ಎಲ್ಲರ ನಿರೀಕ್ಷೆ.
ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆಯ ಅಭ್ಯರ್ಥಿಯಾದರೆ ಅವರ ವಿರುದ್ಧ ಕಾಂಗ್ರೆಸ್ ಬಿ.ಜೆ.ಪಿ.ಯ ಶಿವರಾಮ ಹೆಬ್ಬಾರ್ ಅಥವಾ ಅವರ ಮಗ ವಿವೇಕ್ ಹೆಬ್ಬಾರ್ ರನ್ನು ಅಭ್ಯರ್ಥಿಮಾಡಬಹುದು.
ಕಾಂಗ್ರೆಸ್ ನಲ್ಲಿ ಈಗ ಜಿಲ್ಲಾ ಅರಣ್ಯಭೂಮಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ವಕೀಲ ರವೀಂದ್ರ ನಾಥ್ ನಾಯ್ಕ, ವಕೀಲ ಜಿ.ಟಿ. ನಾಯ್ಕ.ಪ್ರಶಾಂತ್ ದೇಶಪಾಂಡೆ, ಸತೀಶ್ ಶೈಲ್ ಸೇರಿದಂತೆ ಅರ್ಧ ಡಜನ್ ಕ್ಕೂ ಹೆಚ್ಚು ಜನರು ಹುರಿಯಾಳುಗಳಾಗಲು ಸಿದ್ಧರಿದ್ದಾರೆ. ಬಿ.ಜೆ.ಪಿ.ಯಲ್ಲಿ ಅನಂತಕುಮಾರ್ ಹೆಗಡೆ ಅಭ್ಯರ್ಥಿಯಾಗದಿದ್ದರೆ ನಾನ್ ರೆಡಿ ಎಂದು ತಯಾರಾಗುತ್ತಿರುವ ಅನೇಕರಿದ್ದಾರೆ. ಅವರಲ್ಲಿ ಕೆ.ಜಿ. ನಾಯ್ಕ ಹಣಜಿಬೈಲ್, ನಾಗರಾಜ್ ನಾಯಕ ಸೇರಿದ ಉದ್ದನೆಯ ಲೀಸ್ಟ್ ಇದೆ.
ಪಕ್ಷಗಳ ಬಲಾಬಲದಲ್ಲಿ ಕಾಂಗ್ರೆಸ್ ಗೆ ಒಟ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದರಿಂದ ಕಾಂಗ್ರೆಸ್ ಶಕ್ತಿ ನಿರ್ಲಕ್ಷಿಸುವಂತಿಲ್ಲ. ಬಿ.ಜೆ.ಪಿ.ಗೆ ಮೂರು ಕ್ಷೇತ್ರಗಳ ಶಾಸಕರ ಬಲವಿದ್ದರೂ ಅದು ನಂಬಿಕೊಂಡಿರುವುದು ಮೋದಿ ಮತ್ತು ಹಿಂದುತ್ವದ ಶಕ್ತಿಯನ್ನು. ಹಿಂದುತ್ವದ ಆಧಾರದಲ್ಲೇ ೫ ಬಾರಿ ಈ ಲೋಕಸಭಾ ಕ್ಷೇತ್ರ ಗೆದ್ದಿದ್ದ ಅನಂತಕುಮಾರ ಹೆಗಡೆ ಒಮ್ಮೆ ಕೇಂದ್ರ ಸಚಿವರಾಗಿದ್ದರೂ ಅವರ ಸಾಧನೆ ಸಮಾಧಾನಕರವಾಗಿಲ್ಲ. ಈಗ ಬಿ.ಜೆ.ಪಿ.ಯಲ್ಲಿರುವ ಶಿವರಾಮ ಹೆಬ್ಬಾರ್ ಬಿ.ಜೆ.ಪಿ. ತ್ಯಜಿಸಿ ಕಾಂಗ್ರೆಸ್ ನಿಂದ ಲೋಕಸಭೆಯ ಅಭ್ಯರ್ಥಿಯಾದರೆ ಅವರ ಅನುಭವ, ಶಕ್ತಿಗಳ ಆಧಾರದಲ್ಲಿ ಕಾಂಗ್ರೆಸ್ ಗೆಲುವಿನತ್ತ ನಡೆಯಬಹುದು.
ಆದರೆ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ. ಅಭ್ಯರ್ಥಿಯಾದರೆ ಅವರ ಜನಪ್ರೀಯತೆ ಸಾಕಾಗದೆ ಅವರು ಮತ್ತದೇ ಹಿಂದುತ್ವ, ಮೋದಿ ನಾಮಬಲ ಜಪಿಸಬಹುದು ಆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಶಿವರಾಮ ಹೆಬ್ಬಾರ್ ರ ಧನಬಲ ಅಥವಾ ಎ. ರವೀಂದ್ರರಂಥ ಹೋರಾಟಗಾರರ ಜನ ಬಲ ನೆರವಿಗೆ ಬರಬಹುದು. ಜಾತಿ ಆಧಾರಿತವಾಗಿ ನೋಡುವುದಾದರೆ ಉತ್ತರ ಕನ್ನಡ ಲೋಕಸಭೆಯ ನಂ೧ ಮತದಾರರು ಮರಾಠಿ ಭಾಷಿಗರು, ಅವರ ನಂತರ ಈಡಿಗರೆಂದುಕೊಳ್ಳುವ ದೀವರು, ನಾಮಧಾರಿಗಳು ಇವರ ನಂತರ ಅಲ್ಪಸಂಖ್ಯಾತರು ನಾಲ್ಕನೆಯ ಸ್ಥಾನ ದಲ್ಲಿ ಬ್ರಾಹ್ಮಣರು.
ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ಬ್ರಾಹಣರನ್ನು ಆಯ್ಕೆ ಮಾಡಿದರೆ ಆಗ ಹಿಂದುತ್ವ, ಅಹಿಂದ ಅಷ್ಟಾಗಿ ಕೆಲಸಕ್ಕೆ ಬರುವುದಿಲ್ಲ. ಬ್ರಾಹ್ಮ ಣೇತರರಲ್ಲಿ ಈಡಿಗರಿಗೆ ಅವಕಾಶ ಕೊಟ್ಟರೆ ಹಿಂದುತ್ವ ಕೆಲಸಮಾಡಬಹುದು, ಮರಾಠಿ ಭಾಷಿಕರು, ಈಡಿಗರಲ್ಲಿ ಮತಬಾಹುಳ್ಯದ ಜೊತೆ ಪಕ್ಷಗಳ ವರ್ಚಸ್ಸು ಕೆಲಸ ಮಾಡುವುದರಿಂದ ಕಾಂಗ್ರೆಸ್ ಅಥವಾ ಬಿ.ಜೆ.ಪಿ. ಈ ಇಬ್ಬರು ಬಹುಸಂಖ್ಯಾತ ಮತದಾರರಿಗೆ ಟಿಕೇಟ್ ಕೊಟ್ಟರೆ ಆಗ ನೇರ ಹಣಾಹಣಿಯಲ್ಲಿ ಅವಕಾಶ ೫೦-೫೦,
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಈಡಿಗರು, ಮರಾಠರಿಗೆ ಉಭಯ ಪಕ್ಷಗಳೂ ಅವಕಾಶ ಕೊಡದಿದ್ದರೆ ಆಗ ಕಾಂಗ್ರೆಸ್ ಗ್ಯಾರಂಟಿ ಕಾರಣಕ್ಕೆ ಉತ್ತರ ಕನ್ನಡ ಲೋಕಸಭೆಗೆ ಮತ್ತೆ ೫ ಅವಧಿಗಳ ನಂತರ ಕಾಂಗ್ರೆಸ್ ಮರಳಿ ಗೆಲ್ಲಬಹುದು. ಅನಂತ ಬದಲು ಬಿ.ಜೆ.ಪಿ. ಈಡಿಗರು ಅಥವಾ ಮರಾಠಿ ಭಾಷಿಕರಿಗೆ ಅವಕಾಶ ಮಾಡಿಕೊಟ್ಟರೆ ಆಗ ಬಿ.ಜೆ.ಪಿ. ಮತ್ತೆ ಗೆದ್ದರೂ ಆಶ್ಚರ್ಯವಿಲ್ಲ. ಈ ಬಹುಸಂಖ್ಯಾತ ಮತದಾರರ ಜಟಾಪಟಿಯಲ್ಲಿ ಬಿ.ಜೆ.ಪಿ. ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ಕೂಡಾ ಬ್ರಾಹ್ಮಣ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅಥವಾ ಮತ್ಯಾರಾದರು ಎಂದುಕೊಳ್ಳುತ್ತಿರುವ ಸಂದರ್ಭಕ್ಕೆ ಅವರ್ನಬಿಟ್ ಇವರ್ನಬಿಟ್ಟ್ ಮತ್ತೊಬ್ಬರು ಎನ್ನಲು ಪಕ್ಷಗಳೇ ಇಲ್ಲ. ಇರುವ ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿ ಗಳೇ ಇಲ್ಲ ಎನ್ನುವ ವಾಸ್ತವದಲ್ಲಿ ಹಳೆ ಹುಲಿಗಳಾದ ದೇಶಪಾಂಡೆ ಮತ್ತು ಹೆಬ್ಬಾರ್ ಕುಟುಂಬಗಳ ನಡುವೆ ದೃಷ್ಟಿ ಹರಿದಿರುವುದು ಮಾಜಿಗಳ ಹಣಾಹಣಿ ಪಕ್ಕಾ ಎನ್ನುವಂತಿದೆ!
