


ರಾಜ್ಯದ ಲಕ್ಷಾಂತರ ಗೇಣಿದಾರರನ್ನು ಭೂ ಒಡೆಯರನ್ನಾಗಿಸಿದ ಕಾನೂನು ಜಾರಿ ಮಾಡಿದವರು ಕಾಂಗ್ರೆಸ್ ನ ಇಂದಿರಾಗಾಂಧಿ ಮತ್ತು ದೇವರಾಜ್ ಅರಸು ಎನ್ನುವ ಸತ್ಯ ಸಾಕಷ್ಟು ಪ್ರಚಾರ ಪಡೆದಿದೆ. ಆದರೆ ರಾಜ್ಯದಲ್ಲಿ ಊಳುವವನೇ ಒಡೆಯ ಕಾಯಿದೆ ಜಾರಿಯಾಗಲು ಕಾರಣವಾದದ್ದು ಶಿವಮೊಗ್ಗ ಜಿಲ್ಲೆಯ ಸಾಗರದ ಕಾಗೋಡು ಹೋರಾಟ, ಈ ಹೋರಾಟದ ಫಲವಾಗಿ ಕಾಂಗ್ರೆಸ್ ಊಳುವವನೇ ಒಡೆಯ ಕಾನೂನು ಜಾರಿ ಮಾಡಿ ಈಗಲೂ ಪ್ರಬಲ ವರ್ಗಗಳ ವಿರೋಧ ಎದುರಿಸುತ್ತಿರುವುದು ವಾಸ್ತವ.

ಈ ವರ್ಷ ವ್ಯಾಪಕ ಚರ್ಚೆ,ಪ್ರಚಾರಕ್ಕೆ ಕಾರಣವಾದ ಕಾಟೇರ ಸಿನೆಮಾ ಕಾಲ್ಪನಿಕ ಕಥಾ ಹಂದರದ ಚಿತ್ರವಾದರೂ ವಾಸ್ತವದಲ್ಲಿ ಆ ಚಿತ್ರದ ಕಾಟೇರ ಉತ್ತರ ಕನ್ನಡ ಜಿಲ್ಲೆಯ ಹೊಸೂರು ಗಣಪತಿಯಪ್ಪ.
ಗ್ರಾಮ ಪಂಚಾಯತ್ ಆಡಳಿತವಿದ್ದ ಸಿದ್ಧಾಪುರ ತಾಲೂಕಿನ ಹೊಸೂರು ಗಾಡಿ ಗಣಪತಿಯಪ್ಪ ಸಿದ್ಧಾಪುರದ ಪ್ರಾಥಮಿಕ ಶಾಲೆಯಲ್ಲಿ ಜಮೀನ್ಧಾರರ ಮಗ ರಾಮಕೃಷ್ಣ ಹೆಗಡೆಯವರ ಸಹಪಾಠಿಯಾಗಿ ಬೆಳೆಯುತ್ತಾರೆ. ಶ್ರೀಮಂತ ರಾಮಕೃಷ್ಣ ಹೆಗಡೆ ಶಿಕ್ಷಣಕ್ಕಾಗಿ ಊರೂರು ಅಲೆದು ವಕೀಲನಾದರೆ ಬಡ ಗಣಪತಿ ಏಳನೇ ತರಗತಿ ಅಂದರೆ ಅಂದಿನ ಮುಲ್ಕಿ ನಂತರ ಸಿದ್ಧಾಪುರ ಗ್ರಾ.ಪಂ ಕಾರ್ಯದರ್ಶಿಯಾಗಿ ಬ್ರಿಟೀಷರಿಗೆ ವಿಧೇಯರಾಗದೆ ಸರ್ಕಾರಿ ನೌಕರಿ ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಕರಪತ್ರಗಳ ಸಾಹಿತ್ಯ ಸಾಗಿಸುವ ಗಣಪತಿ ಶಿರಸಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕು ಬೆಳಗಾವಿ ಜೈಲು ಪಾಲಾಗುತ್ತಾರೆ.
ಹೀರೋ ಗಣಪತಿ ಸ್ವಾತಂತ್ರ್ಯದ ಜೈಲು ಪೂರೈಸಿ ಗ್ರಾಮಕ್ಕೆ ಬಂದಾಗ ನೌಕರಿ ಬಿಟ್ಟು ಜೈಲು ಸೇರಿದನೆಂದು ಮನೆ, ಗ್ರಾಮ, ಸಂಬಂಧಿಗಳ ತಿರಸ್ಕಾರಕ್ಕೆ ಒಳಗಾಗಿ ಮುಂಬೈ ಪ್ರೆಸಿಡೆನ್ಸಿಯ ಬ್ರಿಟೀಸ್ ಸರ್ಕಾರದಿಂದ ತಪ್ಪಿಸಿಕೊಳ್ಳಲು ಮೈಸೂರು ಸಂಸ್ಥಾನದ ಸಾಗರ ತಾಲೂಕು ಸೇರುತ್ತಾರೆ.
ಸಾಗರದ ಹಿರೇನೆಲ್ಲೂರಿನಲ್ಲಿ ಗಾಂವಟಿ ಶಾಲೆ ಮಾಸ್ತರ್ ಆಗಿ ಗ್ರಾಮೀಣ ಜನರಿಗೆ ಅಕ್ಷರ ಬರೆಸಿದ ಗಣಪತಿಯವರಿಗೆ ಶಾಲೆ ನಡೆಸಲು ಜಾಗ ಕೊಡದ ಊರಿನ ಸಾಹುಕಾರರ ವಿರುದ್ಧ ಜನಸಂಘಟನೆ ಮಾಡುವ ಗಣಪತಿ ಗೇಣಿದಾರರ ನೋವಿಗೆ ಕಿವಿಯಾಗಿ ಗೇಣಿ ಪದ್ಧತಿ ವಿರುದ್ಧ ಹೋರಾಟ ಪ್ರಾರಂಭಿಸುತ್ತಾರೆ. ಹಿರೆನೆಲ್ಲೂರಿನಿಂದಲೇ ಅಂದಿನ ಪ್ರಜಾಪ್ರತಿನಿಧಿ ಕಾಗೋಡು ಒಡೆಯರ್ ಮನೆತನದ ಜಮೀನ್ಧಾರಿಕೆ ವಿರುದ್ಧ ಹೋರಾಟ ಪ್ರಾರಂಭಿಸಿ ರೈತ ಸಂಘದ ನೆರವಿನೊಂದಿಗೆ ಸಮಾಜವಾದಿಗಳ ಸಂಘ ಸೇರಿ ಶಾಂತವೇರಿ ಗೋಪಾಲಗೌಡರ ಮೂಲಕ ಲೋಹಿಯಾರನ್ನು ಕಾಗೋಡಿಗೆ ಕರೆತರುತ್ತಾರೆ.
ರಾಷ್ಟ್ರ ನಾಯಕ ಲೋಹಿಯಾ ಪ್ರವೇಶದಿಂದ ಅಂತರಾಷ್ಟ್ರೀಯ ಸುದ್ದಿಯಾದ ಗೇಣಿದಾರರ ಕಾಗೋಡು ಹೋರಾಟ ಊಳುವವನೇ ಒಡೆಯ ಕಾನೂನು ಜಾರಿಗೆ ಕಾರಣವಾಗುತ್ತದೆ. ಕಾಂಗ್ರೆಸ್ ಬದ್ಧತೆ, ದೇವರಾಜ್ ಅರಸು ಗಟ್ಟಿತನಗಳಿಂದ ಊಳುವವನೇ ಒಡೆಯ ಕಾನೂನೇನೋ ಜಾರಿಯಾಯಿತು. ಆದರೆ ಮೇಲ್ವರ್ಗ, ಜಮೀನ್ಧಾರರ ಕಿರುಕುಳ ಅಂತ್ಯವಾಯಿತೆ?
ಅದು ಮತ್ತೊಂದು ಕತೆ. ತೆಲುಗು ಚಿತ್ರಗಳ ಮಾದರಿಯಲ್ಲಿ ಹಿರೋಜಿಸಂ. ಹಿಂಸೆ ವಿಜೃಂಬಿಸಿದ ಕಾಟೇರ ಕತೆ,ನಿರೂಪಣೆ ಯಾವ ದೃಷ್ಟಿಯಿಂದಲೂ ಕಾಗೋಡಿನ ರಕ್ತರಹಿತ ಕ್ರಾಂತಿಯನ್ನು ನೆನಪಿಸುವುದೇ ಇಲ್ಲ. ಆದರೆ ಜಮೀನ್ಧಾರರ ಕ್ರೌರ್ಯ, ಜಾತೀಯತೆ ಅದರೊಂದಿಗೆ ಮರ್ಯಾದೆ ಹತ್ಯೆಯನ್ನೂ ಸೇರಿಸಿ ಪರಿಶಿಷ್ಟರು,ಮೇಲ್ವರ್ಗದ ಸಂಘರ್ಷವನ್ನು ತೆರೆಯ ಮೇಲೆ ರಾರಾಜಿಸಿದ ನಿರ್ಧೇಶಕರು ವ್ಯಾಪಾರಿ ದೃಷ್ಟಿಯಿಂದ ಗೆಲುವುಸಾಧಿಸಿದ್ದಾರೆ. ಗೇಣಿಪದ್ಧತಿ ತೆರವಾಗಿ ಊಳುವವನೇ ಒಡೆಯನನ್ನಾಗಿ ಮಾಡಿದ ನಿಜ ಹೀರೋ ಹೊಸೂರಿನ ಗಣಪತಿಯಪ್ಪ ಶಾಂತಿಯಿಂದ ರಾಜ್ಯದ ರೈತರಿಗೆ ಭೂಮಿ ಒಡೆಯರನ್ನಾಗಿಸಿದ ಧೀರ. ಕಾಟೇರದ ಹೀರೋಗೂ,ವಾಸ್ತವದ ನಿಜ ನಾಯಕ ಗಣಪತಿಗೂ ಎಲ್ಲಿಯೂ ಸಂಬಂಧವಿಲ್ಲ!
ಕಾಟೇರ ಚಿತ್ರ ನೋಡಿ ಇದು ಕಾಗೋಡು ಹೋರಾಟದ ಕಥನವೆಂದರೆ ಅದು ಕಾಗೋಡು ಹೋರಾಟವಲ್ಲ ಅದರ ನೆರಳಾಗಿಯೂ ದಕ್ಕುವುದಿಲ್ಲ. ಆದರೆ ನಿಜಹೀರೋ ನಂತೆ ತೆರೆಯ ಹೀರೋ ಗಾಂಧಿತತ್ವ, ಶಾಂತಿ ಮಂತ್ರ ಜಪಿಸಿದರೆ ಅದನ್ನ್ಯಾರು ನೋಡುತ್ತಾರೆ?
ಕೆಲವು ನ್ಯೂನ್ಯತೆಗಳ ನಡುವೆ ನಮ್ಮದೇ ಚರಿತ್ರೆಯನ್ನು ಹೊಲೆಮಾರಿ ವೈಭವವನ್ನು ರಂಗುತುಂಬಿ ವಿಜೃಂಬಿಸುವ ಮೂಲಕ ಮತಾಂಧ ಕೋಣಗಳಾಗಿರುವಕೆಲವು ಶೂದ್ರ ಅನಕ್ಷರಸ್ಥ ಅವಿವೇಕಿಗಳ ತಲೆ ಕಡಿದಿರುವ ಚಿತ್ರತಂಡ ಹೊಸ ಅಲೆಯನ್ನಂತೂ ಎಬ್ಬಿಸಿದೆ. ರಾಕಲೈನ್ ತರುಣ್ ಸುಧೀರ, ದರ್ಶನ್ ಸೇರಿದ ಕನ್ನಡ ಚಿತ್ರತಂಡ ೨೦೨೪ ರ ವೇಳೆಗಾದರೂ ಹೀಗೆ ಎದ್ದು ನಿಂತಿದ್ದು ಶುಭ ಸೂಚನೆಯೇ. ಬಹುಸಂಖ್ಯಾತರ ವಿಸ್ಮೃತಿಯ ಕಣ್ಣು ತೆರೆಸುವ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡವನ್ನು ಮನತುಂಬಿ ಅಭಿನಂದಿಸಲೇ ಬೇಕು.
(- ಕನ್ನೇಶ್ ಕೋಲಶಿರ್ಸಿ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
