ಅಂವ ಕಾರ್ ಗ್ಲಾಸ್ ಇಳಸಲ್ಲ, ಅವರಿಗೆ ಜನ ಅಂದ್ರೆ ಅಲರ್ಜಿ, ಅವರ ಮನುಷ್ಯನ ಮುಖ ನೋಡಲ್ಲ, ಮನುಷ್ಯ ಒಳ್ಳೆಯವ ಆದ್ರೆ ಜನರ ಮುಖ ನೋಡಲ್ಲ….. ಅಂವ ಬುದ್ದಿವಂತ ಇರ್ಬೌದು ಬಟ್ ಜನರನ್ನ ಸೇರಲ್ಲ, ಹೀಗೆ ಪ್ರದೇಶವಾರು ಥರಾವರಿ ಆರೋಪಗಳಿಗೆ ತುತ್ತಾಗುವವರು ಸಾರ್ವಜನಿಕ ವ್ಯಕ್ತಿಗಳು, ಅವರೆಂದರೆ ವಿಶೇಶವಾಗಿ ರಾಜಕಾರಣಿಗಳು!
ನಮ್ಮೂರಲ್ಲಿ ಕೆಲವರ ಬಗ್ಗೆ ಜನಸಾಮಾನ್ಯರು ಆಡುವ ಮಾತುಗಳನ್ನು ಕೇಳಿಸಿಕೊಂಡ ಮೇಲೆ ನನಗೂ ಇಂಥ ಅನುಭವಗಳಾಗಿವೆ. ನಾವು ಜನಸಾಮಾನ್ಯರಾಗಿ ಮಾತನಾಡಿ, ಕಾರು ಏರಿ ಟೀಕೆ ಕೇಳಿ ಉಗುಳು ನುಂಗಿಕೊಂಡಿದ್ದಿದೆ. ಈ ವಿಚಾರದ ಬಗ್ಗೆ ಪ್ರತಿಯೊಬ್ಬರ ಅನುಭವ, ಅಭಿಪ್ರಾಯ ಬೇರೆಬೇರೆಯೆ ನನಗಂತೂ ಈ ಬಗ್ಗೆ ಯೋಚಿಸದಾಗಲೆಲ್ಲಾ ನೆನಪುಗಳು ನುಗ್ಗಿ ಬರುವುದಿದೆ.
ಒಂದಿಪ್ಪತೈದು ಮೂವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಬೈಕ್ ಹಾಗಿರಲಿ ಸೈಕಲ್ ಕೂಡಾ ಇರದ ಕಾಲ.
ಸ್ನೇಹಿತ ವಿಜಯ ಆಗಲೇ ಸೈಕಲ್ ಇಟ್ಟುಕೊಂಡು ಊರಿಗೆ ಹೋದಾಗ ಅವರ ಜೀಪಿನಲ್ಲಿ ಓಡಾಡುತಿದ್ದ ಮಧುರಕಾಲ.
ವಿಜಯನ ಬಿ.ಎಸ್.ಎ. ಸೈಕಲ್ ಬಗ್ಗೆ ನನಗೊಂದು ವಿಚಿತ್ರ ಮೋಹವಿತ್ತು. ಸಣ್ಣನೆಯ ಕೆಂಪನೆಯ ಬಿ.ಎಸ್.ಎ. ಎಸ್.ಎಲ್.ಆರ್. ಸೈಕಲ್ ಏರಿ ಏರಿಮೇಲಿಂದ್ ಸುಯ್ಯನೆ ಶ್ರಮವಿಲ್ಲದೆ ಇಳಿಯುವುದೆಂದರೆ… ಯಮಹಾ ಆರೆಕ್ಸ್ ೧೦೦ ಕೊಟ್ಟ ಖುಷಿ ಕೊಡುತಿದ್ದ ಕಾಲ! ಅದು.
ಮಿತಭಾಶಿ ವಿಜಯನಿಗೆ ಕೇಳಿದಾಗಲೆಲ್ಲಾ ಸೈಕಲ್ ಕೊಡಲು ಬೇಸರ. ಕೆಲವು ಸಾರಿ ಅನುಮತಿ ಪಡೆದು ಕೆಲವೊಮ್ಮೆ ಅನುಮತಿ ಇಲ್ಲದೆ ಅವನ ಸೈಕಲ್ ಹತ್ತಿದ ನಮ್ಮ ಸವಾರಿ ಹೊರಟರೆ ಕಾರವಾರದ ಎಲ್ಲಾ ರಸ್ತೆಗಳೂ ಬಂದು ಸೇರುವ ಟಾಗೂರ್ ಕಡಲ ತೀರದ ವರೆಗೂ ನಮ್ಮ ಸಾವಾರಿ ಸಾಗಿರುತಿತ್ತು. ಸೈಕಲ್ ಇಟ್ಟುಕೊಂಡ ಕೆಲವೇ ತ್ರಾಣಸ್ಥರಲ್ಲಿ ನಮ್ಮ ವಿಜಯ್ ಒಬ್ಬನಾಗಿದ್ದರಿಂದ ಅವನಿಗೂ ಅವನ ಸೈಕಲ್ ಗೂ ಸ್ಟಾರ್ ವ್ಯಾಲ್ಯು ಬಂದಿತ್ತು. ಇಂಥ ವಿಜಯ ಸೈಕಲ್ ಬಗ್ಗೆ ಇಟ್ಟುಕೊಂಡ ಕಾಳಜಿಯನ್ನೇ ಈಗಲೂ ವಾಹನಗಳ ಮೇಲೆ ಇರಿಸಿಕೊಂಡಿರುವ ಪಾಪದ ಮನುಷ್ಯ.
ಭಾಶಿ ದಯಾ ಎನ್ನುವ ನಮ್ಮ ಹಿರಿಯ ಮಿತ್ರನೊಬ್ಬನ ಸಹವಾಸ ಸಾಂಗತ್ಯದಿಂದ ಸ್ನೇಹಿತನಾಗಿದ್ದ ವಿಜಯ ಜೊತೆಗೆ ನಮ್ಮ ಸ್ನೇಹ ಮರೆಯದ ಅನುಬಂಧ!
ಕಡಿಮೆ ಮಾತನಾಡುವ ಕೆಲವೊಮ್ಮೆ ನಿಷ್ಠೂರವಾಗೇ ಮಾತನಾಡುವ ವಿಜಯ್ ನನ್ನೊಂದಿಗೆ ಕರ್ನಾಟಕ ಗೋವಾ ಓಡಾಡಿ ಸುಸ್ತಾಗದ ನಿರುಪದ್ರವಿ ಮನುಷ್ಯ. ಅಗತ್ಯವಿರುವುದಕ್ಕಿಂತ ಸ್ಫಲ್ಪ ಜುಗ್ಗನಂತಾಡುವ ಇವನ ಗುಣಸ್ವಭಾವ ಅವನ ನಡವಳಿಕೆಯಂತಲ್ಲ!
ಇಂಥನಿಡುಗಾಲದ ಸ್ನೇಹಿತನ ಮನೆಯಲ್ಲೊಂದು ಹಳೆಯ ಕಮಾಂಡರ್ ಜೀಪಿತ್ತು. ಆಜೀಪಿನಲ್ಲಿ ಓಡಾಡುವುದೆಂದರೆ ನಮಗೆ ಜಗತ್ತಿನ ಅತೀ ದುಬಾರಿ ಕಾರಿನಲ್ಲಿ ಓಡಾಡಿದಷ್ಟೇ ಖುಷಿ, ಸಂಬ್ರಮ,ಹೆಮ್ಮೆ.
ಚಾಲಕನಾಗಿರುತಿದ್ದ ವಿಜಯ್ ಪಕ್ಕದ ಸೀಟಿನಲ್ಲಿ ನನ್ನನ್ನು ಕೂರಿಸಿಕೊಂಡು ಎಲ್ಲೆಲ್ಲೋ ಓಡಾಡಿಸುತಿದ್ದ. ಹೀಗೆಲ್ಲಾ ಮಜಾ, ಪ್ರವಾಸ, ಕೆಲಸ ಎಂದೆಲ್ಲಾ ಹಳೆ ಜೀಪಿನಲ್ಲಿ ಪ್ರಯಾಣಿಸುತ್ತಿರುವ ನಮ್ಮ ಜೀಪ್ ಎದುರು ಅನೇಕರು ಕೈ ಮಾಡಿ ಲಿಪ್ಟ್ ಕೇಳುತಿದ್ದರು. ವಿಜಯ್ ಗಮನಿಸುವ ಮೊದಲು ಏ ದೊಸ್ತಾ ಗಾಡಿ ನಿಲ್ಸೋ ಎಂದು ಅನಾಮಿಕರಿಗೆ ಉಪಕರಿಸಿ ಸಮಾಜಸೇವೆ ಮಾಡುತಿದ್ದೆ!
ಈ ಸಮಾಜಸೇವೆ, ಲೋಕಪ್ರೀತಿಯೆಡೆಗೆ ತುಸು ತಿರಸ್ಕಾರ ಹೊಂದಿದ್ದ ವಿಜಯ್ ಅನಾಮಿಕ ಪ್ರಯಾಣಿಕ ತನ್ನ ಊರು, ನಿಲುಗಡೆ ಪ್ರದೇಶ ಬಂದಾಗ ಇಳಿದು ಹೊಡುತ್ತಲೇ ನನಗೆ ಬೈಯಲು ಪ್ರಾರಂಭಿಸುತಿದ್ದ. ಯಾರ್ಯಾರನೆಲ್ಲಾ ಹತ್ಸಕೋಬಾರದಲೆ… ಯಾರು ಹ್ಯಾಂಗಿರತಾರೋ? ಅವರಿಗೆ ಜೀಪ್ ಡೋರ್ ತೆಗಿಯಾಕ್ ಬರಲ್ಲ, ಪುಕ್ಕಟ್ಟೆ ಕೂತವರು ಬಾಗಿಲನೂ ಸರಿಯಾಗಿ ಹಾಕಲ್ಲ. ಡೋರ್ ಹಾಳಾದ್ರೆ ನಿಮ್ಮಪ್ಪ ಸರಿಮಾಡ್ಸಕೊಡತಾನಲೆ? ನಮ್ಮಪ್ಪ ಎರಡು ಬಿಡತಾನಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸುತಿದ್ದ.
ಆಗ ತುಸು ಶರಣಾಗುತಿದ್ದ ನನ್ನ ಸಮಾಜಸೇವಾ ಪ್ರವೃತ್ತಿ ಅನಾಮಿಕ, ಅಮಾಯಕರನ್ನು ನೋಡುತ್ತಲೇ ಮತ್ತೆ ಹೆಡೆ ಎತ್ತುತ್ತಿತ್ತು. ಯಥಾ ಪ್ರಕಾರ ಮತ್ತೆ ವಿಜಯನ ಪ್ರವಚನ, ನನ್ನ ಶರಣಾಗತಿ! ನನ್ನ ಸಮಾಜ ಸೇವಾ ಕೈಂಕರ್ಯದಿಂದಾಗಿ ವಿಜಯನಿಗೆ ಕಿರಿಕಿರಿಯಾಗುತಿತ್ತಾದರೂ ನಮ್ಮ ಸ್ನೇಹಕ್ಕೇನೂ ಕುಂದುಂಟಾಗುತ್ತಿರಲಿಲ್ಲ.
ಆಗಿನ ವಿಜಯನ ಅಸಮಾಧಾನ, ಬೇಸರಕ್ಕೆ ಈಗ ಉತ್ತರ ಸಿಗುತ್ತಿದೆ. ಬಹುತೇಕ ಹಳ್ಳಿಯವರಾಗಿರುವ ಅನಾಮಿಕ, ಅಮಾಯಕ ಪ್ರಯಾಣಿಕರಿಗೆ ವಾಹನದ ವಿಚಾರ ತಿಳಿದಿರುವುದಿಲ್ಲ. ಅವರ ಚಪ್ಪಲಿಯಿಂದ ಬರುವ ಕೆಸರು, ಹೊಲಸು ನಾವು ಗಾಡಿ ತೊಳೆಯುವಾಗ ನಮ್ಮ ಸಮಾಜಸೇವಾ ಪ್ರವೃತ್ತಿಯನ್ನು ಅಣಕಿಸುವಾಗ ಸಾಂತ್ವನಕ್ಕೆ ಅವರಿರುವುದಿಲ್ಲ. ಒಂದಾನುವೇಳೆ ಅಮಾಯಕ,ಅನಾಮಿಕರು ಹ್ಯಾಗ್ಹ್ಯಾಗೋ ಡೋರ್ ಎಳೆದು ಮಾಡುವ ತಪ್ಪಿನಿಂದಾಗುವ ಹಾನಿ ರಿಪೇರಿ ಮಾಡುವ ಮೆಕ್ಯಾನಿಕ್ ನಮ್ಮಂಥ ಸಮಾಸೇವಾನಿರತನಿರುವುದಿಲ್ಲ.!
ಅಷ್ಟಕ್ಕೂ ನಮ್ಮದೇ ರಗಳೆ, ಕೆಲಸ, ಜವಾಬ್ಧಾರಿ, ಸಮಯಗಳ ಪಿರಿಪಿರಿಯಲ್ಲಿರುವ ನಾವು ಅಮಾಯಕ ಅನಾಮಿಕರಿಗೆ ಕಿವಿಕೊಡಲು ಸಮಯವೂ ಇರುವುದಿಲ್ಲ, ಈ ನಮ್ಮ ಅನಿವಾರ್ಯತೆ,ಅಸಹಾಯಕತೆಗಳ ಅರಿವಿಲ್ಲದ ಅಮಾಯಕ ನಾವೂ ಅವನಂತಿರದ ಬಗ್ಗೆ ಇಂವ ಗ್ಲಾಸ್ ಇಳಿಸುವುದಿಲ್ಲ, ಜನ ಸೇರುವುದಿಲ್ಲ, ಮನುಷ್ಯರ ಮುಖ ನೋಡುವುದಿಲ್ಲ ಎಂದೆಲ್ಲಾ ಹೇಳಿಕೊಂಡು ತಿರುಗಾಡುತ್ತಿರುತ್ತಾನೆ. ಇಂಥ ಅನಾಮಿಕರಿಗೆ ಒಳ್ಳೆಯವನೆನೆಸಿಕೊಳ್ಳಬೇಕಾದ ಅನಿವಾರ್ಯತೆಗೆ ನಾವು ಸಮಾಜಸೇವಾ ನಿರತ ಸಾರ್ವಜನಿಕ ಕಾಳಜಿಯ ವ್ಯಕ್ತಯಾಗುವುದಿದೆಯಲ್ಲ ಅದು ಜಗತ್ತಿನ ಪ್ರಮುಖ ಖಯ್ಯಾಲಿ ಮತ್ತು ಹವ್ಯಾಸ ಆಗಿರದಿದ್ದರೆ ನೀವು, ನಿಮ್ಮ ಸ್ನೇಹಿತರೂ ಸೇಫ್!