

ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಉತ್ತಮ ವಾತಾವರಣವಾಗಿ ಪರಿಣಮಿಸಿದೆ. ಕಳೆದ ವರ್ಷದ ಮಳೆ ಕೊರತೆ ನಂತರ ಈ ವರ್ಷ ಹಿಂದಿನ ವರ್ಷದ ಡಿಸೆಂಬರ್ನಿಂದಲೇ ಕಾಣಿಸಿಕೊಂಡ ಮಂಗನ ಕಾಯಿಲೆ ಈಗ ಮಾರಣಾಂತಿಕವಾಗಿ ವಿಸ್ತರಿಸಿದೆ. ಇತ್ತೀಚಿನ ದಶಕಗಳಲ್ಲಿ ಮಾರ್ಚ್, ಡಿಸೆಂಬರ್ಗಳ ಉರಿ ಬಿಸಿಲಿನ ಬೇಸಿಗೆಯಲ್ಲಿ ಪ್ರಾರಂಭವಾಗುತಿದ್ದ ಮಂಗನ ಕಾಯಿಲೆ ೨೦೨೩ ರ ಡಿಸೆಂಬರ್ ಗೂ ಮೊದಲೇ ಕಾಣಿಸಿಕೊಂಡಿದ್ದು ಅಸಹಜ. ಪ್ರತಿ ಬೇಸಿಗೆಯಂತೆ ಈ ಬೇಸಿಗೆಯಲ್ಲಿ ಈ ಮಂಗನಕಾಯಿಲೆಯ ವಿಪರೀತತೆ ಆತಂಕಕ್ಕೆ ಕಾರಣವಾಗಿದೆ.
೧೯೫೭ ರಿಂದಲೇ ಪತ್ತೆಯಾದ ಈ ಮಂಗನ ಕಾಯಿಲೆ ಈ ವರ್ಷ ಈಗಾಗಲೇ ೬ ಜನರ ಸಾವಿಗೆ ಕಾರಣವಾಗಿದೆ.
ಚಿಕ್ಕಮಂಗಳೂರಿನಲ್ಲಿ ಒಂದು ಉತ್ತರ ಕನ್ನಡ ಜಿಲ್ಲೆಯಲ್ಲಿ೫ ಸಾವುಗಳು ಸೇರಿ ಈವರೆಗೆ ರಾಜ್ಯದಲ್ಲಿ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ ಆರಕ್ಕೇರಿದರೆ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ೬೦ ಕ್ಕೂ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ.
೧೯೫೭ನೇ ಇಸ್ವಿಯಲ್ಲಿ ಪ್ರಾರಂಭವಾದ ಈ ಕಾಯಿಲೆಗೆ ಈ ವರೆಗೆ ಪಕ್ಕಾ ಸೂಕ್ತ ಚಿಕಿತ್ಸೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಳ, ಸಾದಾ ರೋಗಗಳ ಚಿಕಿತ್ಸೆಯ ಔಷೋಧಾಪಚಾರದ ಮೂಲಕವೇ ಗುಣಪಡಿಸುತ್ತೇವೆ ಎನ್ನುವ ಆರೋಗ್ಯ ಇಲಾಖೆ ಈ ಆರು ದಶಕಗಳಲ್ಲಿ ಈ ರೋಗಕ್ಕೆ ಮದ್ದು ಕಂಡುಹಿಡಿಯಲು ವಿಫಲವಾದ ಬಗ್ಗೆ ಯಾವ ಮಾಹಿತಿಯನ್ನೂ ಮುಂದಿಡುತ್ತಿಲ್ಲ.
ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಕ್ಯಾಸನೂರಿನಿಂದ ಪ್ರಾರಂಭವಾದ ಕ್ಯಾಸನೂರು ಅರಣ್ಯ ಖಾಯಿಲೆ ಮಂಗನ ಕಾಯಿಲೆ ಎಂದು ಕುಖ್ಯಾತವಾಗಿದೆಯಾದರೂ ಪ್ರತಿವರ್ಷ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಈ ರೋಗಕ್ಕೆ ಉಪಚಾರ ಮಾಡುವ ಆಸ್ಫತ್ರೆಗಳೇ ಈ ಜಿಲ್ಲೆಗಳಲ್ಲಿ ಇಲ್ಲ.
ಉತ್ತರ ಕನ್ನಡದ ಶಿರಸಿ, ಸಿದ್ಧಾಪುರ ಶಿವಮೊಗ್ಗದ ಹೊಸನಗರ, ಸಾಗರ ಚಿಕ್ಕಮಂಗಳೂರಿನ ಕೆಲವೆಡೆ ಸೇರಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಗ್ರಾಮೀಣ ಜನರ ಜೀವಕ್ಕೆ ಅಪಾಯ ತರುತ್ತಿರುವ ಈ ಕಾಯಿಲೆ ಚಿಕಿತ್ಸೆಗೆ ಬಡವ ಬಲ್ಲಿದರೆನ್ನದೆ ಎಲ್ಲರೂ ಮಂಗಳೂರಿಗೆ ಓಡಬೇಕಾದ ಅನಿವಾರ್ಯತೆ ಇದೆ.

ಈ ಮಾರಣಾಂತಿಕ ಕಾಯಿಲೆ ಪೀಡಿತರಿಗೆ ಇದು ಮಂಗನ ಕಾಯಿಲೆ ಎಂದು ಪತ್ತೆ ಹಚ್ಚಲು ಒಂದು ವಾರ ಕಾಯಬೇಕಾದ ಅನಿವಾರ್ಯತೆ ಇದೆ. ದೂರದ ಮಂಗಳೂರು, ರಾಜಧಾನಿ ಬೆಂಗಳೂರಿಗೆ ರವಾನಿಸಿದ ರೋಗಿಗಳ ರಕ್ತದ ಮಾದರಿ ವರದಿ ಬರಲು ವಾರದ ವರೆಗೆ ಸಮಯ ಹಿಡಿಯುವುದರಿಂದ ಈ ಬಾಗದಲ್ಲಿ ಮಂಗನಕಾಯಿಲೆ ವೈರಸ್ ಪತ್ತೆ ಕೇಂದ್ರ ಸ್ಥಾಪನೆಗೆ ಜನರು ಬಹಳ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.
ಈ ವರ್ಷ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಮಂಗನಕಾಯಿಲೆ ಪತ್ತೆ ಲ್ಯಾಬ್ ಶಿರಸಿಯಲ್ಲಿ ಪ್ರಾರಂಭಿಸುವಂತೆ ರಾಜ್ಯ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದಾರೆ. ಶಾಸಕರ ಪ್ರಯತ್ನ, ಮಂಗನ ಕಾಯಿಲೆ ಮುಂಜಾಗ್ರತೆ ಪ್ರಯತ್ನಗಳ ನಡುವೆ ಕೆ.ಎಫ್.ಡಿ. ಬಾಧಿತರ ಚಿಕಿತ್ಸೆ, ಸಾವಿನ ಪ್ರಕರಣಗಳಲ್ಲಿ ಪರಿಹಾರ ನೀಡಿಕೆಯಲ್ಲಿ ಕೂಡಾ ಸರ್ಕಾರ ತಾರತಮ್ಯ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಹಾವು ಕಡಿತ, ಆಕಸ್ಮಿಕ ಸಾವುಗಳಿಗೆ ೫ ಲಕ್ಷ ಪರಿಹಾರ ನೀಡುವ ಸರ್ಕಾರ ಮಂಗನ ಕಾಯಿಲೆ ಪೀಡಿತರ ಸಾವಿನ ಪ್ರಕರಣಗಳಲ್ಲಿ ಎರಡು ಲಕ್ಷ ಪರಿಹಾರ ನೀಡಿ ತಾರತಮ್ಯ ಮಾಡಿರುವುದು ಈಗ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರಸ್ಥಾಪಿಸಿದ ವಿ.ಕ. ವೆಬ್ ನ್ಯೂಸ್ ಪ್ರತಿನಿಧಿಗಳಿಗೆ ಪ್ರತಿಕ್ರೀಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಂಗನ ಕಾಯಿಲೆ ಸಾವುಗಳಿಗೆ ೨ ಲಕ್ಷ ರೂಪಾಯಿ ಬದಲು ಕಾಡು ಪ್ರಾಣಿಗಳಿಂದ ಮೃತರಾದವರಿಗೆ ನೀಡುವ ೧೫ ಲಕ್ಷ ಪರಿಹಾರಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಮಂಗನಕಾಯಿಲೆ ನಿಯಂತ್ರಣಕ್ಕೆ ಶೀಘ್ರ ಸೂಕ್ತ ಚಿಕಿತ್ಸೆ, ಮಂಗಗಳ ಮಂಕಿಪಾರ್ಕ್ ಮೂಲಕ ಕೆ.ಎಫ್.ಡಿ. ತಡೆಗಟ್ಟುವುದು, ಸೂಕ್ತ ಚಿಕಿತ್ಸೆ, ಪರಿಹಾರ ಸೌಲಭ್ಯ ಗಳ ಮೂಲಕ ರೋಗ ಪೀಡಿತರಿಗೆ ಸಹಕರಿಸುವುದು, ಮೃತರಿಗೆ ಹೆಚ್ಚಿನ ಪರಿಹಾರ ಒದಗಿಸಿ ಅವಲಂಬಿತರಿಗೆ ನೆರವಾಗುವ ಮೂಲಕ ಸರ್ಕಾರ ಮಲೆನಾಡಿನ ಮಾರಣಾಂತಿಕ ಮಂಗನ ಕಾಯಿಲೆ ಬಗ್ಗೆ ಸೂಕ್ತ ಸ್ಪಂದನ ಮಾಡಬಹುದು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ.
