ಕೇಂದ್ರ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆಯಿಂದಾಗಿ ಕೆಲವು ಪ್ರಕರಣಗಳು ಹಲವು ದಶಕಗಳಿಂದ ಇತ್ಯರ್ಥವಾಗದೇ ಹಾಗೇ ಉಳಿದಿವೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿ ಒಳಗೊಂಡ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅನ್ಯಾಯವಾಗಿದೆ.
ಸಚಿವ ಈಶ್ವರ ಖಂಡ್ರೆ
ಬೆಂಗಳೂರು: ಅನುಸೂಚಿತ ಬುಡಕಟ್ಟು ಜನರಿಗೆ ಸಿಗುವ ಸವಲತ್ತುಗಳನ್ನು ಇತರೆ ಅರಣ್ಯವಾಸಿಗಳಿಗೂ ಕಲ್ಪಿಸುವ ಉದ್ದೇಶದಿಂದ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುವ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಡಿಸಿದ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲೂ ಗುರುವಾರ ಅಂಗೀಕಾರ ನೀಡಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆಯಿಂದಾಗಿ ಕೆಲವು ಪ್ರಕರಣಗಳು ಹಲವು ದಶಕಗಳಿಂದ ಇತ್ಯರ್ಥವಾಗದೇ ಹಾಗೇ ಉಳಿದಿವೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿ ಒಳಗೊಂಡ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದರು. ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಲು ರೈತರು ಸೇರಿದಂತೆ ಹಲವು ನಿವಾಸಿಗಳಿಗೆ ಸೇರಿದ 9,136.27 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಆದರೆ ಇದುವರೆಗೂ ಜಮೀನು ಅಧಿಸೂಚನೆಯನ್ನು ನೀಡಿಲ್ಲ. ಕಳೆದ 50-60 ವರ್ಷಗಳಿಂದ ಖಾಲಿ ಜಾಗವಿದೆ ಎಂದಿದ್ದಾರೆ. ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006’ಕ್ಕೆ ತಿದ್ದುಪಡಿ ತರುವ ಮೂಲಕ ಸವಲತ್ತುಗಳನ್ನು ಇತರೆ ಅರಣ್ಯವಾಸಿಗಳಿಗೂ ದೊರಕಿಸಲು ಸಹಕರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಖಂಡ್ರೆ ಹೇಳಿದರು.
2006ರಲ್ಲಿ ಜಾರಿಗೆ ತಂದ, 2008ರಲ್ಲಿ ರೂಪಿಸಿದ ನಿಯಮಗಳ ಫಲವಾಗಿ 2005 ಡಿಸೆಂಬರ್ 13ಕ್ಕೂ ಮೊದಲು ಜೀವನೋಪಾಯಕ್ಕಾಗಿ ಅರಣ್ಯದಲ್ಲಿ ವಾಸಿಸುತ್ತಿದ್ದ ಅನುಸೂಚಿತ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಲಭಿಸುತ್ತದೆ. ಆದರೆ, ಅರಣ್ಯದ ಉತ್ಪನ್ನಗಳನ್ನೇ ನಂಬಿಕೊಂಡು ಹಲವು ತಲೆಮಾರುಗಳಿಂದ ಅರಣ್ಯಗಳಲ್ಲಿ ಬದುಕು ಸಾಗಿಸುತ್ತಿರುವ ಅನುಸೂಚಿತ ಬುಡಕಟ್ಟು ಹೊರತಾದ ಸಮುದಾಯದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯ ಫಲ ದೊರೆತಿಲ್ಲ. ಅದಕ್ಕೆ ಕಾಯ್ದೆಯಲ್ಲಿನ ಕೆಲ ನಿಯಮಗಳು ಅಡ್ಡಿಯಾಗಿವೆ. ಅರಣ್ಯವಾಸಿಗಳೆಂದು ಸಾಬೀತು ಮಾಡಲು ಮೂರು ತಲೆಮಾರು ಕಾಲ ಅವರ ಪೂರ್ವಜರು ಅರಣ್ಯದಲ್ಲೇ ಇದ್ದರು ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ಸಲ್ಲಿಸಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ನಿಯಮ ಎಂದು ವಿವರಿಸಿದರು. (kp.c)