Coffee ವಿತ್ ಜಿ.ಟಿ
ಪ್ರಸ್ಥಾನ ಶಿವಾನಂದ ಕಳವೆ ಓದಲ್ಲಿ….
ಸರ್… ಪ್ರಸ್ಥಾನ ಕಾದಂಬರಿ ಯ ಹೊಸಕೋಟೆ ಎಲ್ಲಿದೆ…? ಶರಾವತಿ ನದಿಯ ಹರವು ಅಲ್ಲಿ ಆಗ ಹೇಗಿತ್ತು. ಅದೆಷ್ಟು ಕಾಡು ಕೋಟೆ ಕೊತ್ತಲ ಮುಳುಗಿತು ಎನ್ನುವ ಪ್ರಶ್ನೆಯನ್ನ ನಿನ್ನೆ ನಾನು ಬರೆದ ಬರಹ ಓದಿ ಪುನಃ ನೂರಾರು ಸ್ನೇಹಿತರು ಕೇಳುತ್ತಾ ಇದ್ದಾರೆ. ಪ್ರಸ್ಥಾನ ಕಾದಂಬರಿ ಎಲ್ಲಿ ಸಿಗುತ್ತದೆ. ಓದಬೇಕು ಜಿ ಟಿ ಅಡ್ರೆಸ್ ಕೊಡಿ ಎನ್ನುವ ವಾಟ್ಸಪ್ ಸಂದೇಶಗಳು ಬಂದಿವೆ.
ಹಿರಿಯ ಮಿತ್ರರು ಜಲ ತಜ್ಞರಾದ ಶಿವಾನಂದ ಕಳವೆ ಸರ್ ಬರೆದ ಈ ಬರಹ ಓದಿಯೇ ಪ್ರಸ್ಥಾನ ತರಿಸಿಕೊಂಡೆ. ಶಿವಾನಂದ ಸರ್ ಗೆ ಋಣಿ. ಈ ವೀಡಿಯೋ ಕಳೆದ ಬೇಸಿಗೆ ಲಿಂಗನಮಕ್ಕಿ ಡ್ಯಾಂ ಪೂರ್ಣ ನೀರು ಕಡಿಮೆ ಆದಾಗ ನಾನು ಮತ್ತು Shashi Sampalli ಹೊಸಕೋಟೆ ಹುಡುಕುತ್ತಾ ಹೋಗಿದ್ದೆವು. ಹೊಸಕೋಟೆ ಸಿಕ್ಕಿತು. ಮುಳುಗಿದ ಅಪಾರ ಕಾಡಿನ ಜತೆಗೆ. ಆಗ ಈ ವೀಡಿಯೋ ಟ್ರೂತ್ ನಲ್ಲಿ ಬಿಡುಗಡೆ ಮಾಡಿದ್ದೆ. ಪ್ರಸ್ಥಾನ ಓದುತ್ತಾ ಮತ್ತೆ ಒಂದು ಹೊಸಕೋಟೆ ವೀಡಿಯೋ ನೋಡಿ ನಿಮಗೂ ಮರು ಹಂಚುತ್ತಾ ಇರುವೆ..
ಜಿ ಟಿ ತುಮರಿ
Kalave ಸರ್ ಪ್ರಸ್ಥಾನ ಕಾದಂಬರಿ ಬಗ್ಗೆ ಬರೆಯುತ್ತಾರೆ….
‘ಪ್ರಸ್ಥಾನ ‘ಕಾದಂಬರಿ
ದೋಣಿ ದುಗ್ಗಣ್ಣನ ಗಾತಗಳೆ ಹಾಗೂ ಮುಳುಗಡೆ ಸರ್ವೇ ಯ ನೀರಕಲ್ಲು
**💦
ಅಣೆಕಟ್ಟೆಯಲ್ಲಿ ಊರು ಮುಳುಗುವುದು,ಮುಳುಗಿದವರು ಎಲ್ಲಿಗೋ ದಿಕ್ಕೂಪಾಲದಂತೆ ವಲಸೆ ಹೋಗುವುದು. ಯೋಜನೆಗೆ ಮುಳುಗಿಸಿದ ಹಳ್ಳಿಗಳನ್ನು ತ್ಯಾಗಿಗಳು ಅನ್ನೋದನ್ನು ಕೇಳುತ್ತಾ ಬಂದಿದ್ದೇವೆ. ಬದುಕು ಉಳಿಸಲು ನಡೆಯುತ್ತಿದ್ದ ಯೋಜನಾ ವಿರೋಧಿ ಹೋರಾಟ ಯೋಜನೆಗಳ ನಂತರದ ನೆಲೆ ಕಳಕೊಂಡವರ ಪುನರ್ವಸತಿ ಹೋರಾಟವಾಗಿ ನಿಲ್ಲುತ್ತವೆ.
ಬೃಹತ್ ಯೋಜನೆಗಳ ಆರ್ಭಟಕ್ಕೆ ಮರ ಕಡಿತ, ದೊಳೆಬ್ಬಿಸುವ ವಾಹನ ಸಂಚಾರ,ಕಾರ್ಮಿಕರ ಕಾಲೋನಿಗಳ ಮಧ್ಯೆ ಕಾಡಿನೂರು ಕಂಗಾಲಾಗುತ್ತದೆ. ಅಬ್ಬಿ ನೀರಿನಲ್ಲಿ ಬದುಕಿದವರು ಆಳದಿಂದ ನೀರೆತ್ತಿ ಬದುಕುವ ಸ್ಥಿತಿಗೆ ನೂಕಲ್ಪಡುತ್ತಾರೆ. ಹಿರಿಯರು ಬೆಳೆಸಿದ ಕೃಷಿ, ನಂಬಿದ ದೇವರು, ನೆಟ್ಟ ಗಿಡ,ದನಕರುಗಳು, ಕಟ್ಟಿಸಿದ ಮನೆ ಬಿಟ್ಟು ಹೋಗುವ ಸಂಕಟ ದೊಡ್ಡದು. ಹೊಸ ತಲೆಮಾರಿನ ಜನಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾಡಿನ ಮಧ್ಯೆ ಬದುಕುವ ಬದಲು ನಗರ ಸೇರುವ ಅವಕಾಶವಾಗಿ ಯೋಜನೆ ಕಾಣಿಸುತ್ತದೆ. ತಲೆಮಾರಿನ ಸಂಘರ್ಷ ಮನೆ ಮನವನ್ನು ಅವರಿಸುತ್ತಾ ಬೆಳೆಯುತ್ತದೆ.
ಊರಿನ ಬೆಟ್ಟ, ಗುಡ್ಡ, ರಸ್ತೆ, ತೋಟ, ದೇಗುಲ ಮುಳುಗುವ ದೃಶ್ಯ ನೋಡುವುದು ಅಲ್ಲಿಯೇ ಒಡನಾಡಿ ಬೆಳೆದವರಿಗೆ ಸುಲಭವಲ್ಲ. ಒಬ್ಬರಿಗೊಬ್ಬರು ಸೇರಿ ಕಟ್ಟಿದ ಊರು ನೂರಾರು ವರ್ಷಗಳ ಚರಿತ್ರೆ, ಬೇರು ಹರಿದ ಮರದಂತೆ ಎಲ್ಲಿಗೋ ಸಾಗುವುದು ಊಹಿಸುವುದು ಕಷ್ಟ. ಮಲೆನಾಡಿನ ನಮ್ಮ ನಡುವಿನ ಶರಾವತಿ ಮಕ್ಕಳು ವಿದ್ಯುತ್ ಯೋಜನೆಗೆ ಕಳಕೊಂಡಿದ್ದು ಭೂಮಿ ಮಾತ್ರವಲ್ಲ, ಅರಣ್ಯ ಜೀವನದ ಬಹುದೊಡ್ಡ ಸಂಸ್ಕೃತಿ…. ಎಂದೂ ಮರೆಯದ ಕೃಷಿ ಪರಂಪರೆ.
ಬರಹಗಾರ ಮಿತ್ರ ಡಾ.ಶ್ರೀಧರ ಎಚ್. ಜಿಯವರು ಬರೆದ ಪ್ರಸ್ಥಾನ ಕಾದಂಬರಿ ಶರಾವತಿ ಮುಳುಗಡೆ ಮನಕಲಕುವ ಕಥನ. ಈ ಹಿಂದೆ ಹಿರಿಯರಾದ ನಾ.ಡಿಸೋಜರ ಮುಳುಗಡೆ ಕಾದಂಬರಿ 1984, ಇದಾದ ಬಳಿಕ 2019ರಲ್ಲಿ ಡಾ. ಗಜಾನನ ಶರ್ಮ ಅವರ ಪುನರ್ವಸು ಕಾದಂಬರಿಗಳು ಇದೇ ನದಿಯ ಮುಳುಗಡೆ ಪರಿಣಾಮದ ನೋಟಗಳನ್ನು ಮನೋಜ್ಞವಾಗಿ ಸೆರೆ ಹಿಡಿದು ಯಶಸ್ವಿಯಾಗಿವೆ. ಮುಳುಗಡೆ ಮುಗಿದ ಕಥೆ ಯಾವತ್ತೂ ಅಲ್ಲ, ಸದಾ ಮತ್ತೆ ಮತ್ತೇ ಕಾಡುವ ಕಥನ. ಇಲ್ಲಿ ಇನ್ನಷ್ಟು ಮತ್ತಷ್ಟು ಕಥನಗಳನ್ನು ಶ್ರೀಧರ ಪ್ರಸ್ಥಾನ ಮೂಲಕ ಕಾಣಿಸಿದ್ದಾರೆ.
ಖ್ಯಾತ ವಿದ್ವಾಂಸ ಡಾ. ಟಿ.ವಿ.ವೆಂಕಾಚಲ ಶಾಸ್ತ್ರಿ ಶಿಷ್ಯರಾಗಿ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧ ಕಲೆ ‘ ವಿಷಯದ ಕುರಿತ ಅಧ್ಯಯನಕ್ಕೆ ಡಾಕ್ಟರೇಟ್ ಗಳಿಸಿರುವ ಶ್ರೀಧರ ಈ ಕಾದಂಬರಿಯಲ್ಲಿ ಕರೆಂಟು ದೀಪದ ಕತ್ತಲೆ ತೋರಿಸಿದ್ದಾರೆ. ‘ ನಾವು ಯಾರೂ ತ್ಯಾಗ ಮಾಡಿಲ್ಲ,ನಮ್ಮನ್ನು ಬಲಾತ್ಕಾರವಾಗಿ ಕಣಿವೆಯಿಂದ ಹೊರ ಹಾಕಲಾಗಿದೆ ‘ ಜೋಗದಲ್ಲಿ ವಿದ್ಯುತ್ ಉತ್ಪಾದನೆ ದಿನ ಹಳ್ಳಿಗರು ಮುಖ್ಯಮಂತ್ರಿಗಳಿಗೆ 21-02-1 948ರಂದು ಹೇಳಿದ ಮಾತು ಇಡೀ ಕಾದಂಬರಿಯ ಕಥನದ ದಾರಿಯನ್ನು ಸಾರುತ್ತದೆ.
‘ಆಳುವ ವರ್ಗಕ್ಕೆ ಅಧಿಕಾರ ಇದ್ದರೆ ಸಾಲದು, ಬುದ್ಧಿ ಹಾಗೂ ಹೃದಯ ಎರಡೂ ಇರಬೇಕು'(ಪುಟ .297) ನೋವಿನ ಮಾತು ಕೇಳುತ್ತದೆ. ಮರದೊಳಡಗಿದ ಅಗ್ನಿಯಂತೆ ಮೌನ ದಹಿಸತೊಡಗಿತು, ಸಮಾಧಾನ ಮಾಡುವುದಕ್ಕೆ ಅಲ್ಲಿ ದುಃಖವಿಲ್ಲದ ವ್ಯಕ್ತಿಗಳು ಯಾರೂ ಇರಲಿಲ್ಲ. ದೇಶದ ಉನ್ನತಿಯನ್ನು ಸಾಧಿಸಲು ಜನ ಸಾಮಾನ್ಯರೇ ತ್ಯಾಗ ಮಾಡ ಬೇಕೇ? ಶತ್ರುಗಳ ದಾಳಿಗೆ ಒಳಗಾದ ನಗರದಂತೆ ಹಳ್ಳಿಗಳು ನಿರ್ಜನವಾಗಿ ವಿಕಾರ ರೂಪ ಪಡೆದಿತ್ತು…. ಇವನ್ನು ಓದುವಾಗ ಶರಾವತಿ ನದಿ ಕಣಿವೆಯ ಬದುಕಿನ ಸಂಕಟಗಳು ಕಣ್ಣೆದುರು ಸಾಕಾರವಾಗುತ್ತವೆ.
ಕಾದಂಬರಿಯನ್ನು ಮೈಸೂರಿನ ಶ್ರೀ ರಾಜೇಂದ್ರ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್ 2021ರಲ್ಲಿ ಪ್ರಕಟಿಸಿದೆ. 592ಪುಟಗಳ ಕಾದಂಬರಿಯಿದು. ಬರುವೆ ಸೂರಯ್ಯನ ಮಗಳು ರುಕ್ಮಿಣಿ ಮಗಳ ಮದುವೆಗೆ ಹಳೇ ತೋಟದ ದೇವಪ್ಪಯ್ಯ, ಅತ್ತಿಗಾರು ಗೋಪಣ್ಣ ಹೋಗುವ ಪ್ರಸಂಗದಿಂದ ಕಥೆ ಆರಂಭವಾಗುತ್ತದೆ. ಮದುವೆ ಸಂಪ್ರದಾಯ, ಕೃಷಿ ಚಟುವಟಿಕೆ, ಮಲೆನಾಡಿನ ಅಡುಗೆ ವಿಶೇಷ ಹೇಳುತ್ತಾ ಸಾಗುವ ಕಥನ ಈ ಪ್ರದೇಶ ಹೊಸ ಹೊಸ ವಸ್ತುಗಳನ್ನು ಸ್ವೀಕರಿಸಿದ ದಿನಗಳನ್ನು ಸೊಗಸಾಗಿ ಹೇಳುತ್ತದೆ. ಗುಬುರು ಬಂಡಿ, ಇಗ್ಗಾಲಿ,ಗಡಿಯಾರ, ನಂಜನ ಗೂಡಿನ ರಸಬಾಳೆ, ಕಾಫೀ, ರೈಲು, ಬಸ್ಸು ಹೀಗೆ ಹಳ್ಳಿಗೆ ಹೊಸತರ ಆಗಮನ ಮೂಲಕ ಕಾಲದ ಚರಿತ್ರೆ ತೆರೆದು ಕೊಳ್ಳುತ್ತದೆ.ಮಂಗಳೂರು ಹಂಚಿನ ಮನೆ, ಸರ್ವೇ ಸರಪಳಿ,ಮುಳುಗಡೆ. ಹೊತ್ತು ಹೊಳೆಯಲ್ಲಿ ತೇಲಿ ಬಿಟ್ಟ ತಾಳೆಗರಿ ಗ್ರಂಥ, ಮುಳುಗುವ ಶಾಸನ ಹಳ್ಳಿಯ ಕಾಡುವ ಪ್ರಸಂಗಗಳನ್ನು ಎದುರು ಹಿಡಿಯುತ್ತದೆ.
ಒಂದು ಹಳ್ಳಿ ಮುಳುಗುತ್ತದೆಂದು ಜಾಹಿರಾದ ಬಳಿಕ ಊರಿನ ಜನರ ಮನಸ್ಸು ಬದಲಾಗುವ ಸೂಕ್ಷ್ಮತೆಯನ್ನು ಗುರುತಿಸುವ ಕೃತಿಕಾರರು ಶಾಲೆಯ ಮೇಷ್ಟ್ರು, ಕಿರಾಣಿ ಅಂಗಡಿ ಮಾಲಿಕ, ಕೃಷಿ ಕೆಲಸ ನಿಲ್ಲಿಸಿದ ಕೃಷಿಕರ ನೋಟಗಳನ್ನು ನೀಡುತ್ತಾರೆ. ಅಡಿಕೆ ಮರ ಕಡಿದು, ಮನೆ ಮುರಿದು, ಗೋಡೆ ಕೆಡವಿದ ಚಿತ್ರಗಳು ಯುದ್ಧ ನೆಲೆಯಾಗಿ ಕಾಣಿಸುತ್ತವೆ.
ಇದ್ದಕ್ಕಿದಂತೆ ಮಡೇನೂರು ಅಣೆಕಟ್ಟು ಕಟ್ಟಲು ಬಂದ ಒಂಭತ್ತು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು,ಕಣ್ಮರೆಯಾಗುವ ದನಕರು, ಮಾಲಿನ್ಯ ಕ್ಕೆ ಒಳಗಾಗುವ ಊರು ಬದಲಾಗಿ ಬಯಲಾಗುತ್ತದೆ. ‘ ಊರು ಮುಳುಗುವದಕ್ಕಿಂತ ಮುಂಚೆಯೇ ಮನುಷ್ಯತ್ವ ಮರೆತವರಂತೆ ಜನರ ಬದುಕನ್ನು ಮುಗಿಸಲು ಎಲ್ಲರೂ ಹೊರಟಂತೆ ಇತ್ತು ! ಸರ್ವೆಯವರ ಮೋಸ, ಲಂಚ, ಅಧಿಕಾರಿಗಳ ದಬ್ಬಾಳಿಕೆಯಲ್ಲಿ ನೊಂದ ಜೀವಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಕೂಡಾ ಎದುರಾಗುವುದು ಪರಿಸ್ಥಿತಿಯ ಕೈಗನ್ನಡಿ. ಬರುವೆ ಸುಬ್ಬಯ್ಯರ ಒಡನಾಡಿಗಳ ಕಥೆಯ ಜೊತೆಗೆ ಶಿಕ್ಷಣ, ಗಾಂಧಿ ಜೀವನ ಮೌಲ್ಯಗಳ ದರ್ಶನ,ಕರಣಿರಾಕರಣೆ ಹೋರಾಟದ ಚಿತ್ರಣಗಳು ಸಿಗುತ್ತವೆ. ನಾಡಿನ ಸಾಹಿತ್ಯ ದಿಗ್ಗಜರು ಗೋಪಣ್ಣನ ಕಾಲೇಜು ದಿನಗಳಲ್ಲಿ ಭೇಟಿಯ ಪ್ರಸಂಗಗಳು ಕಾಲದ ಸಾಹಿತ್ಯ ಸಾಧನೆಗಳ ಮೇರು ವ್ಯಕ್ತಿತ್ವಗಳ ದರ್ಶನ ಮೂಲಕ ಹೊಸ ಸಾಧ್ಯತೆ ಕಾಣಿಸುತ್ತದೆ.
‘ಭವಿಷ್ಯದಲ್ಲಿ ನಮ್ಮ ಬುದ್ಧಿಯೇ ನಮಗೆ ಮಾರ್ಗದರ್ಶಕವಾಗುವ ಕಾಲ ಬರಬಹುದು’ಮುಳುಗಡೆ ತರುವಾಯ ವಲಸೆ ಅನಿವಾರ್ಯವಾದಾಗ ಬೆಳ್ಳಣ್ಣೆ ಭೀಮಣ್ಣ ಹೊಸ ಸಾಧ್ಯತೆ ತೋರಿಸುತ್ತಾರೆ. ಜಾತಿ ಮಿತಿಗಳನ್ನು ಮೀರಿ ಅನ್ಯೋನ್ಯವಾಗಿ ಬದುಕಿದ ವ್ಯಕ್ತಿ ಜೀವನ ದರ್ಶನ ಮಾಡಿಸುತ್ತಾ ಕಟ್ಟಕಡೆಗೆ ಮುಳುಗುವ ಊರು ತೊರೆಯುವ ಕಥಾ ನಾಯಕ ಬರುವೆ ಸೂರಯ್ಯ ತೋಟ ಮನೆಯ ಮುಳುಗದ ಭಾಗವನ್ನು ತಮ್ಮನೆಯ ಕೆಲಸಗಾರನಿಗೆ ಅರ್ಪಿಸಿ ಮನೆಯ ನಂದಾದೀಪ ಉಳಿಸಿ ಹೊರಡುತ್ತಾರೆ. ಹುಲಿ ಕೊಂದ ನಾಯಿ ಕಾಳಿಯ ನೆನಪು, ಮಂದಾರ ಹೂವಿನ ಗಿಡದ ಹಕ್ಕಿ ಗೂಡು, ಶರಾವತಿ ಹಸುವನ್ನು ಮೂಲದಲ್ಲಿಯೇ ಬಿಟ್ಟು ಹೋಗುವ ಪ್ರಸಂಗಗಳು ಹೃದಯ ತಟ್ಟುವ ಕಾಡು ಕಾವ್ಯಗಳು.
ಶರಾವತಿ ಕಣಿವೆ, ಹೊಸಬಾಳೆ, ಸದಾಶಿವ ಸಾಗರ,ಸಿಮೋಗೆ,ಮೈಸೂರು ಸುತ್ತಾಡಿಸುತ್ತಾ ಕಾದಂಬರಿಕಾರ ಶ್ರೀಧರ ಆಗಾಗ ನೆಲದ ಮಿಡಿ ಉಪ್ಪಿನಕಾಯಿ,ಮಂದನಗೊಜ್ಜು, ಕೇಸರಿ ಬಾತ್, ಉಗೆ ಬೆಲ್ಲ ತಿನ್ನಿಸುತ್ತಾ ಸಂಕಟದ ಊರಿನ ಸುಲಭ ದರ್ಶನ ಮಾಡಿಸುವಾಗ ಒಂದು ಸಿನಿಮಾದಂತೆ ಘಟನೆಗಳು ಎದುರು ಬರುತ್ತವೆ.
ನನಗಂತೂ ಮನಸ್ಸಿಗೆ ಮತ್ತೆ ಮತ್ತೇ ಕಾಡುವ ಸಾಲುಗಳು ಹಲವಿವೆ. ‘ ಪಗಡೆಯನ್ನು ಬೊಗಸೆಯಲ್ಲಿ ಹಿಡಿದು ಸಳ ಸಳ ಎಂದು ಹಾಕುವ ಸಪ್ಪಳ ಅಲೆಅಲೆಯಾಗಿ ಬರುವೆ ಮನೆಯನ್ನು ತುಂಬಿತು. ಪಗಡೆ ಮಣೆಗೆ ಬಂದ ಜೀವಂತಿಕೆ ಭಾಗೀರಥಮ್ಮನ ಮುಖದಲ್ಲಿ ಕಿರು ನಗು ಮೂಡಿಸಿತು'(ಪುಟ 451)
ಶರಾವತಿ ಮಕ್ಕಳು ಮುಳುಗಿದ ಕಥೆ ನಾವೆಲ್ಲ ಹುಟ್ಟಿದಾಗಿನಿಂದ ಕೇಳುತ್ತಾ ಬಂದಿದ್ದೇವೆ. ಇಡೀ ರಾಜ್ಯ ಯೋಜನೆಯಿಂದ ಬೆಳಕಾಯಿತು, ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಅರಮನೆ ವಿಶ್ವವಿಖ್ಯಾತವಾಯಿತು.. ಆದರೆ ಇಂದಿಗೂ ಆ ಯೋಜನೆಯಲ್ಲಿ ನೆಲೆ ಕಳಕೊಂಡ ಹಲವು ಕುಟುಂಬಗಳಲ್ಲಿ ಬೆಳಕಿನ ಗಾಢ ಕತ್ತಲು ಹಾಗೇ ಇದೆ.
‘ಗಾತಗಳೆ ‘ಕೈಗೆತ್ತಿಕೊಂಡು ಊರ ಜನರನ್ನು ನಡು ರಾತ್ರಿಯಲ್ಲಿಯೂ ನದಿ ದಾಟಿಸಿದ ದೋಣಿಯ ದುಗ್ಗಣ್ಣ ಮಡೆನೂರು ಅಣೆಕಟ್ಟೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟ ದಿನ ನಾಪತ್ತೆ ಆಗಿದ್ದರು. ಕೊನೆಗೆ ಸಾಗರ ಬಸ್ ನಿಲ್ದಾಣದಲ್ಲಿ ಶೇಂಗಾ ಮಾರುತ್ತ ಸಿಗುತ್ತಾರೆ. ಬದುಕು ಯಾರನ್ನ ಎಲ್ಲಿಗೆ ಒಯ್ದಿದೆಯೋ, ಊಹಿಸುವುದು ಕಷ್ಟ. ಅದು ಅಣೆಕಟ್ಟೆಯ ಎತ್ತರ,ಮುಳುಗಡೆ ಭೂಮಿಯ ಲೆಕ್ಕದಲ್ಲಿ ಸಿಗುವ ಸರಕಲ್ಲ.
‘ಬದುಕಿನಲ್ಲಿ ಎದುರಾಗುವ ಒಂದು ಸೋಲಿಗೆ ಜೀವನ ಮುಗಿತಿಲ್ಲೆ….ಇನ್ನೊಂದು ಅವಕಾಶ ಹೊಸತರೊಂದಿಗೆ ಬದುಕು ಆರಂಭ ಆಗ್ತು ‘ ಸೂರಯ್ಯನ ಎದೆಯ ಮಾತು ನೋವು ನುಂಗಿ ನಡೆಯುವ ಧ್ಯೇಯ ವಾಕ್ಯ.ನಾಲ್ಕು ದಿನದಲ್ಲಿ ಕಾದಂಬರಿ ಓದಿ ರಾತ್ರಿ ದೀಪ ಹಚ್ಚಿದಾಗೆಲ್ಲ ಕಾಡಿನೂರಿನ ಮುಳುಗಿದ ಪಾತ್ರಗಳು ಕಾಡುತ್ತವೆ. ನಮಗೆಲ್ಲಾ ಖುಷಿಯ ಸಂಗತಿ ಎಂದರೆ ಈ ಕೃತಿಗೆ ಚಡಗ ಕಾದಂಬರಿ ಪ್ರಶಸ್ತಿ ದೊರಕಿದೆ 👌
💦💦💦💦💦💦💦💦💦💦💦💦💦
ಕಾದಂಬರಿ ಓದುವ ಆಸಕ್ತರು ಲೇಖಕರ 9449268442. ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಬಹುದು. ಇಲ್ಲವೇ 7411538442 ಗೇ ಕಾಲ್ ಮಾಡಬಹುದು.
💦💦💦💦💦💦💦💦