ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದವರು ರವೀಂದ್ರನಾಥ ಠಾಗೂರ್. ರವೀಂದ್ರರ ಕುಟುಂಬಸ್ಥರೊಬ್ಬರು ಕಾರವಾರದಲ್ಲಿ ಅಂದರೆ ಅಂದಿನ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿದ್ದರು ಎಂದು ಎಲ್ಲೋ ಓದಿದ ನೆನಪು.
ಈ ಸಾಹಿತಿ ರವೀಂದ್ರರ ಹೆಸರನ್ನು ಕಾರವಾರದ ಕಡಲ ತೀರಕ್ಕೆ ನಾಮಕರಣ ಮಾಡಲಾಗಿದೆ. ಇದೇ ಕಾರವಾರದ ಕುರಿತು ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ ಎಲ್ಲಾ ರಸ್ತೆಗಳು ಸಮುದ್ರ ಸೇರುತ್ತವೆ ಎಂದು ಸೇರಿಸಿದ್ದಾರೆ.
ಕಾರವಾರ ಅನೇಕರಿಗೆ ಪ್ರವಾಸಿ ತಾಣ ಆದರೆ ನಮ್ಮಂಥವರಿಗೆ ಆ ಊರು ಒಂದು ಇಮೋಶನ್.
ನಮ್ಮ ಬಾಲ್ಯಕಾಲದ ಅಧ್ಭುತ ಚಿತ್ರಗಳಲ್ಲಿ ವಿಷ್ಣುವರ್ಧನ್ ನಟನೆಯ ಮತ್ತೆ ಹಾಡಿತು ಕೋಗಿಲೆ, ಬಂಧನ, ಮುತ್ತಿನ ಹಾರ ಗಳೊಂದಿಗೆ ಹೃದಯಗೀತೆಯೂ ಒಂದು. ಹೃದಯ ಗೀತೆ ನಮ್ಮ ಎದೆಗಿಳಿಯಲು ಪ್ರಮುಖ ಕಾರಣ ಆ ಚಿತ್ರ ಕಾರವಾರದಲ್ಲೇ ಚಿತ್ರೀಕರಣಗೊಂಡದ್ದು. ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ…. ಎಂದು ವಿಷ್ಣುವರ್ಧನ್, ಭವ್ಯ ಹಾಡಿ ನಲಿಯುತಿದ್ದರೆ ನಮ್ಮಂಥ ಕಾರವಾರಿಗರಿಗೆ ಭುವಿಯೇ ಸ್ವರ್ಗ.
ಇಂಥ ಅದ್ಭುತ ಅನುಭವಗಳ ಕಾರವಾರದ ಸೊಬಗನ್ನು ವೃದ್ಧಿಸಿದ್ದು ಅಲ್ಲಿಯ ಕಾಳಿ ಸೇತುವೆ. ಜೊಯಡಾದ ಗುಂದದಲ್ಲಿ ಜನ್ಮ ತಳೆಯುವ ಕಾಳಿ ಕಾಡಿನಲ್ಲಿ ಕಾಳಿಂಗ ಸರ್ಪದಂತೆ ಹರಿದುಕಾರವಾರದ ಅರಬ್ಬೀ ಸಮುದ್ರ ಸೇರುವ ಮೊದಲು ನಾಲ್ಕೈದು ಕಡೆ ನಿಂತು ಕೆಲವು ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿದೆ. ಈ ಕಪ್ಪು ಸುಂದರಿ ಸಮುದ್ರ ಸೇರುವ ಮೊದಲು ಧುಮ್ಮಿಕ್ಕಿ ದ್ದಲ್ಲೆಲ್ಲಾ ತನ್ನ ಕಪ್ಪು ಕಳೆದು ಬಿಳಿ ಜಲಪಾತ ಸೃಷ್ಟಿಸಿದೆ. ಈ ಕಾಳಿಯನ್ನು ಸಮುದ್ರ ಸೇರುವ ಮೊದಲು ನಿಲ್ಲಿಸಿದ್ದು ಕಾಳಿ ಸೇತುವೆ. ಕಾಳಿ ಸೇತುವೆ ಕೆಳಗೆ ನಿಂತ ಪ್ರೇಮಿಗಳೆಷ್ಟೋ? ಜೀವ ಬಿಟ್ಟ ಭಗ್ನ ಪ್ರೇಮಿಗಳೆಷ್ಟೋ ಲೆಕ್ಕಕ್ಕೂ ಸಿಕ್ಕಿಲ್ಲ.
ಕಾಳಿ ಸೇತುವೆ ದಾಟಿ ಕರ್ನಾಟಕ ಬಿಟ್ಟು ಗೋವಾ ಸೇರುವ ಜನರು ಕಾಳಿಯನ್ನು ಮರೆಯಲುಂಟೆ! ಅಲ್ಲೇ ಎತ್ತರದ ಗುಡ್ಡದಲ್ಲಿ ಸೋದೆ ಅರಸರು ಕೋಟೆ ಕಟ್ಟಿದ್ದರು. ಹಿಂದೂ ಸಾಂಮ್ರಾಟ! ಆ ಕೋಟೆ ಒಡೆದು ಜಯಿಸಿದ್ದ ಎನ್ನುವುದನ್ನು ಸಾರುವ ಕೋಟೆ ಈಗಲೂ ಅಲ್ಲಿದೆ. ಅದೇ ಕೋಟೆಯ ಹೊರಗೆ ರಮ್ಯಾ ಜೂಲಿಯಾಗಿ ಕುಣಿದ ಕುರುಹೂ ಅಲ್ಲಿದೆ!
ಕಾರವಾರ, ಕಾಳಿ ಸೇತುವೆ ಅಂದರೆ ಇಷ್ಟೇ ಅಲ್ಲ ಮ್ಯಾಂಗ್ರೋ ಕಾಡಿನ ಸಿಗಡಿ ಮೀನಿನ ಜನ್ಮ ಸ್ಥಳ, ಮದ್ಯ ಪ್ರೀಯರಿಗೆ ಗೋವಾದ ಸಾರಾಯಿ ದೋಣಿ ಏರಿ ಒಳಬರುವ ಜಾಗ, ಅಲ್ಲೇ ಪಕ್ಕದಲ್ಲಿ ಡಾಲ್ಫಿನ್ ಗಳು ಕುಣಿಯುವ ತಾಣ. ಅಲ್ಲಿಂದ ದೋಣಿ ಏರಿದರೆ ಸದಾಶಿವಗಡ ಸೋದೆಯ ಸದಾಶಿವರಾಯ ಕಟ್ಟಿದ ಕೋಟೆಯ ಊರದು ಸದಾಶಿವಗಢ. ದೇವಭಾಗ, ತಿಳುಮಾತಿಗಳಿಗೆ ಅಲ್ಲಿಂದಲೇ ತೆರಳಬೇಕು. ಹೀಗೆ ನಾ ನೋಡಿ ನಲಿಯುವ ಕಾರವಾರ ಬರೆದು, ನೋಡಿ, ಹೇಳಿ, ಕೇಳಿ ಮುಗಿಯದ ಸೋಜಿಗವದು! ಅಲ್ಲಿಯ ಕಾಳಿ ಸೇತುವೆ ಮುರಿದು ಬಿತ್ತು ಎಂದರೆ ಸುಂದರ ಸ್ವಪ್ನವೊಂದು ಅರ್ಧದಲ್ಲೆ ನಿಂತುಹೋದಂತೆ. ಮರೆಯದ ನೆನಪೊಂದು ತಣ್ಣನೆ ಜಾರಿ ಹೋದಂತೆ.
kaali bridge collaps- ಮತ್ತೆ ಗೋವಾ ಕರ್ನಾಟಕ ಸಂಪರ್ಕ ತುಂಡರಿಸಿದ ಸೇತುವೆ ದುರಂತ