ಮಲೆನಾಡು ವೈಸಿಷ್ಟ್ಯಗಳ ತವರೂರು, ಮಲೆನಾಡಿಗೆ ಮಳೆಗಾಲವೆಂದರೆ.. ಹಬ್ಬ. ಮಳೆಪ್ರಾರಂಭವಾಗಿ ಇಳೆ ತೊಳೆದು ಸಂಬ್ರಮಿಸುವ ಕಾಲದಲ್ಲಿ ಭೂಮಿಯ ಆಳದಿಂದಲೂ ನೀರು ಸ್ರವಿಸತೊಡಗುತ್ತದೆ. ತನ್ನ ಒಡಲು ಸೇರಿದ ನೀರನ್ನು ಹೊರಹಾಕಲು ಶ್ರಮಿಸುವ ಭೂಮಿ ಕೊನೆಗೆ ಶರಣಾಗುವಾಗ ಶಿರೂರು, ವಯನಾಡ್ ನಂಥ ದುರಂತಗಳಾಗುತ್ತವೆ.
ಈ ದುರಂತ ತಪ್ಪಿಸಲೆಂದೇ ಸೃಷ್ಟಿಯಾಗಿರು ತೊರೆ,ಹೊಳೆಗಳು ಹರಿದು ಭೂಮಿಯನ್ನು ಬಚಾವು ಮಾಡುತ್ತವೆ.
ನೀವೀಗ ನೋಡುತ್ತಿರುವ ಧರೆ ನೈಸರ್ಗಿಕವಾಗಿ ಕುಸಿದದ್ದು. ಈ ಧರೆ ಜರಿದಾಗ ಏನೂ ಮಾಡದೆ ಸುಮ್ಮನಿದ್ದುಬಿಟ್ಟರೆ ಪಕ್ಕದ ತೋಟ ಪಟ್ಟಿ ತೊಳೆದುಹೋಗಿ ಬಿಡುತ್ತದೆ. ಹಾಗಾಗಿ ಮಲೆನಾಡ ಜನ ಧರೆಯ ಕುಸಿತವನ್ನು ತೊಳೆದುಕೊಡಲು ಶ್ರಮಿಸುತ್ತಾರೆ. ಇದನ್ನೇ ಮಣ್ಣ ಕರಡಿ ಎನ್ನುವುದು. ಮಳೆಗಾಲದ ಜರಿಯುವ ಧರೆಯನ್ನು ತೆರವು ಮಾಡಿ ನೀರು ಹರಿಯಲು ಅನುವು ಮಾಡಿಕೊಡುವುದನ್ನೇ ಮಣ್ಣು ಕರಡಿ ಎನ್ನುತ್ತಾರೆ.
ಹೀಗೆ ಕರಡಿದ ಮಣ್ಣು ದೂರದ ನದಿ ಸಮುದ್ರ ಸೇರಿ ಅಲ್ಲಿ ಹೂಳು ಸೃಷ್ಟಿಸುತ್ತದೆ. ಆದರೆ ಇಲ್ಲಿ ತೊರೆಗೆ ದಾರಿ ಮಾಡಿಕೊಡದಿದ್ದರೆ ನೀರು ಮಣ್ಣು ಸೇರಿ ತೋಟವನ್ನುತೊಳೆದುಬಿಡುತ್ತವೆ. ಹಾಗಾಗಿ ಮಲೆನಾಡಿನ ಜನ ಭೀಕರ ಮಳೆಯಲ್ಲಿ ಧರೆ ತೊಳೆಯುವ ಈ ಕೆಲಸ ಮಾಡಿ ತೋಟ ಉಳಿಸಿಕೊಳ್ಳುತ್ತಾರೆ.
ಹೀಗೆತೋಟದ ಧರೆ ಕರಡಲು ಹೋಗಿ ಶವವಾದವರ ನೆನಪುಗಳು ಮಲೆನಾಡಿನ ಸಾಹಿತ್ಯದಲ್ಲೂ ಕಂಡು ಬರುತ್ತವೆ.
ಮಳೆಗಾಲದ ಮಣ್ಣು ಕರಡಿ ನೋಡಲು ಸೊಗಸು, ಅದೆಷ್ಟೋ ದೂರದಿಂದ ಹರಿದು ಬರುವ ನೀರು ಬೋರ್ಗರೆಯುತ್ತಾ ಯಾರನ್ನೂ ಕೇಳದೆ ತನ್ನ ಪಾಡಿಗೆ ತಾನು ಗುಡ್ಡ-ಬೆಟ್ಟಗಳನ್ನು ತರಿದು ಮುಂದೆ ಹೋಗಿ ಬಿಡುತ್ತದೆ. ಹೀಗೆ ಓಡುವ ಮಳೆಯ ನೀರಿನ ರಭಸಕ್ಕೆ ತೋಟವೂ ತೊಳೆದುಹೋಗುವುದುಂಟು. ತೋಟ ತೊಳೆದು ಹಾನಿ ತಡೆಯಲು ಮನುಷ್ಯ ಮಾಡುವ ಪ್ರತಿರೋಧದ ಹೋರಾಟವೇ ಮಣ್ಣುಕರಡಿ. ಮಣ್ಣುಕರಡಿ ಜಾಗ ಮಾಡಿ ತೋಟ ಮಾಡುವ ಮಲೆನಾಡಿನ ಮಣ್ಣು ಕರಡಿ ಇಲ್ಲಿಯ ನೈಸರ್ಗಿಕ ಬದುಕಿನ ಸಾಸ್ಕೃತಿಕ ವೈಶಿಷ್ಟ್ಯವೂ ಹೌದು. ಮಳೆ, ಮಳೆ ನೀರಿನೊಂದಿಗೆ ತೇಲಿ ಬರುವ ಮರ, ಮರದ ದಿಮ್ಮಿ ಅಡ್ಡಹಾಕಿ ನೀರು ತಡೆಯುವುದೂ ಮಲೆನಾಡಿನ ಮಣ್ಣುಕರಡಿಯ ಒಂದು ಭಾಗ.