


ನಮಗೆಲ್ಲರಿಗೂ ಗಣೇಶನ ಹಬ್ಬ ಎಂದರೆ ಖುಷಿಯ ದಿನ. ಜಾತಿ, ಧರ್ಮವನ್ನು ಮೀರಿ ನಾವು ಈ ಸಂಭ್ರಮದಲ್ಲಿ ಭಾಗಿಯಾಗುತ್ತೇವೆ. ಆದರೆ ಈ ಹಬ್ಬವನ್ನು ಆಚರಿಸದ ಒಂದು ಸಮುದಾಯ ಇದೆ ನಿಮಗೆ ಗೊತ್ತ? ದಕ್ಷಿಣ ಕನ್ನಡದ ಕುಡುಬಿಗಳ ಪಾಲಿಗೆ ಚೌತಿ ಎಂದರೆ ವಂಚಿಸಲ್ಪಟ್ಟ ದಿನ. ಆದುದರಿಂದ ಕುಡುಬಿಗಳು ಗಣೇಶ ಹಬ್ಬಕ್ಕೆ ನಿಷೇಧ ಹೇರಿದ್ದಾರೆ. ಇದಕ್ಕೊಂದು ಪುರಾಣ ಕತೆಯೂ ಇದೆ. ಈ ಕತೆಯನ್ನು ನನಗೆ ಹೇಳಿದ್ದು, ಕುಡುಬಿ ಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು.

ಪುರಾಣಗಳಲ್ಲಿ ನಾವು ತಿಳಿದುಕೊಂಡಂತೆ, ಕೋಪಗೊಂಡಿದ್ದ ಶಿವ ಬಾಲಕ ಗಣೇಶನ ರುಂಡವನ್ನು ಕತ್ತರಿಸಿರುತ್ತಾನೆ. ಇದರಿಂದ ಅಸಮಾಧಾನಗೊಂಡ ಪಾರ್ವತಿ ತನ್ನ ಮಗನನ್ನು ಬದುಕಿಸಿಕೊಡುವಂತೆ ಶಿವನಿಗೆ ಅಂಗಲಾಚುತ್ತಾಳೆ. ಈ ಸಂಧರ್ಭ ತನ್ನ ಪುತ್ರನಿಗೆ ಪ್ರಾಣಿಯೊಂದರ ತಲೆ ತರಲು ಶಿವ ಭೂಲೋಕದ ಜನರಿಗೆ ಅಪ್ಪಣೆ ನೀಡುತ್ತಾನೆ. ಕುಡುಬಿಗಳು ಹುಟ್ಟು ಬೇಟೆಗಾರರು. ಬುಡಕಟ್ಟು ಜನರು. ಕಾಡಿನ ತಪ್ಪಲಲ್ಲೇ ಇರುವ ಕುಡುಬಿಗಳು ಶಿವನ ಆಜ್ಞೆಯಂತೆ ಆನೆಯ ರುಂಡ ಕಡಿದು ತರುತ್ತಿರುತ್ತಾರೆ. ಅಷ್ಟರಲ್ಲಿ ಅದೇ ದಾರಿಯಲ್ಲಿ ಬರುವ ಮತ್ತೊಂದು ಸಮುದಾಯ (ಕೊಂಕಣಿ ಮಾತನಾಡುವ ಬ್ರಾಹ್ಮಣರು) ಮುಗ್ದ ಕುಡುಬಿಗಳನ್ನು ತಡೆದು ನಿಲ್ಲಿಸುತ್ತಾರೆ. ‘ನಿಮ್ಮ ಮೈಯೆಲ್ಲಾ ರಕ್ತಸಿಕ್ತವಾಗಿದ್ದು, ದೇವರ ಬಳಿ ಹೋಗುವಾಗ ಶುಚಿತ್ವವಿರಬೇಕು. ಅದಕ್ಕಾಗಿ ಸ್ನಾನ ಮಾಡಿಕೊಂಡು ಬನ್ನಿ.

ಅಲ್ಲಿಯವರೆಗೆ ಆನೆ ರುಂಡವನ್ನು ನಾವು ಕಾಯುತ್ತೇವೆ’’ ಎಂದು ಕುಡುಬಿಗಳನ್ನು ನಂಬಿಸುತ್ತಾರೆ. ಮುಗ್ದ ಕುಡುಬಿಗಳು ಆ ತಂಡದ ಮಾತನ್ನು ನಂಬಿ ಕೆರೆಗೆ ಇಳಿಯುತ್ತಿದ್ದಂತೆ ಆ ತಂಡ ಆನೆ ರುಂಡವನ್ನು ಕದ್ದೊಯ್ದು ಶಿವನಿಗೊಪ್ಪಿಸಿ ಗಣೇಶನನ್ನು ಗಜಮುಖಜ ಎಂದು ಸ್ತುತಿಸುತ್ತಾರೆ. ಇದರಿಂದಾಗಿ ಕುಡುಬಿಗಳು ಬೇಸರಗೊಳ್ಳುತ್ತಾರೆ. ಕಷ್ಟ ಪಟ್ಟದ್ದು ನಾವು, ಆದರೆ ಅದನ್ನು ಬಳಸಿಕೊಂಡದ್ದು ಅವರು. ಈ ಕಾರಣದಿಂದಾಗಿಯೇ ಕುಡುಬಿಗಳು ಗಣೇಶ ಚತುರ್ಥಿಯನ್ನು ಆಚರಿಸುವುದೇ ಇಲ್ಲ ಎನ್ನುತ್ತಾರೆ ಕುಡುಬಿಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು. ಗೋವಾ ಮೂಲದವರಾದ ಕುಡುಬಿಗಳ ಆಡು ಭಾಷೆ ಕೊಂಕಣಿ. ಕೃಷಿಯಲ್ಲಿ ಪರಿಣಿತರಾಗಿರುವ ಕುಡುಬಿಗಳು ಈಗಲೂ ಬೇಟೆಗಾರರು. ಹೋಲಿ ಆಚರಣೆ ಇವರ ಪ್ರಮುಖ ಹಬ್ಬ. ಹೋಲಿ ಹಬ್ಬಕ್ಕೆ ಮೊದಲ ತಿಂಗಳು ಈಗಲೂ ಬೇಟೆಗೆ ಹೋಗಿ ಸಾಮೂಹಿಕ ಮಾಂಸದ ಅಡುಗೆ ಮಾಡಿ ಉಣ್ಣುವ ರೂಢಿ ಇಂದಿಗೂ ತಮ್ಮಲ್ಲಿ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕುಡುಬಿ ಸಮುದಾಯದ ಯುವಕ ಸದಾನಂದ.

ಕೃಷಿಯನ್ನೇ ತಮ್ಮ ಜೀವಾಳವಾಗಿಸಿಕೊಂಡ ಕುಡುಬಿಗಳು ಕೃಷಿ ಹೊರತುಪಡಿಸಿ ಬೇರಾವುದೇ ಕಾಯಕಕ್ಕೆ ಮುಂದಾಗುವುದಿಲ್ಲ ಎಂಬುದು ವಿಶೇಷ. ಆದರೆ ಕೃಷಿ- ಪ್ರಕೃತಿಯ ಜೊತೆ ನಿಕಟ ಸಂಬಂಧವಿರಿಸಿಕೊಂಡ ಗಣೇಶ ಚತುರ್ಥಿ ಮಾತ್ರ ಈ ಸಮುದಾಯಕ್ಕೆ ನಿಷಿದ್ಧ. ತಮ್ಮ ಊರು ಕೇರಿಗಳಲ್ಲಿ ಗಣೇಶೋತ್ಸವದ ಎಷ್ಟೇ ಗೌಜಿ ಗಮ್ಮತ್ತು ನಡೆದರೂ ಕುಡುಬಿಗಳು ಮಾತ್ರ ಗಣೇಶ ಚತುರ್ಥಿ ದಿನ ಆ ಕಡೆ ತಲೆ ಹಾಕಲ್ಲ ಎಂಬುದು ಮಾತ್ರ ವಿಶೇಷವೇ ಸರಿ.
-baseer b.m.


