ಮಲೆನಾಡು ಮತ್ತು ಶೀಗೆ ಹುಣ್ಣಿಮೆ
ಹಚ್ಚ ಹಸಿರಿನ ಕಾನನದ ನಡುವೆ ಒಂಟಿ ಮನೆಗಳು, ಮುಂದೆ ತುಳಸಿ ಕಟ್ಟೆ ನಾಲ್ಕಾರು ತೆಂಗಿನ ಮರಗಳ ತಗ್ಗಿನಲ್ಲಿ ಅಡಿಕೆ ಭತ್ತದ ಗದ್ದೆಗಳು, ಮನೆಯ ಹಿಂಬಾಗದಲ್ಲೇ ನಾಕು ಮಾರು ದೂರದಲ್ಲಿ ಮನೆಯ ಗೋಡೆಯನ್ನೇ ಚುಂಬಿಸುವ ಹೋಲುವ ದನದ ಕೊಟ್ಟಿಗೆ. ಕೂಗಳತೆ ದೂರದಲ್ಲಿ ಮತ್ತೊಂದು ಮನೆ ಇದು ವಿಶಿಷ್ಟವಾದ ಉತ್ತರ ಕನ್ನಡದ ಗ್ರಾಮೀಣ ವಾತಾವರಣ.
ರೈತ ಕುಟುಂಬದಲ್ಲಿ ಜನಿಸಿದ ಹೆಮ್ಮೆಯನ್ನು ಬಾಲ್ಯದ ಮೂಲಕ ನೆನೆಸಿಕೊಂಡು ದೂರದ ಕಾಂಕ್ರೀಟ್ ಕಾಡಲ್ಲಿ ವೃತ್ತಿ ಬದುಕಿನ ಜಾಡನ್ನು ಬಿಡಿಸುತ್ತಿರುವ ಅದೆಷ್ಟೋ ಜನರಿಗೆ ಬಾಲ್ಯದ ಮತ್ತು ಗ್ರಾಮ್ಯದ ಸೊಗಸಾದ ಕನವರಿಕೆ.
ಇನ್ನು ಇಲ್ಲಿಯ ದೈನಂದಿನ ಜೀವನದ ಜೊತೆ ಬಂದು ಹೋಗುವ ಬಂದುಗಳಂತೆ ಅನೇಕ ಹಬ್ಬಗಳ ಯಾದಿಯೇ ಇದೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ಆಚರಣೆ,ಸಂಪ್ರದಾಯ, ಆಹಾರ ಶೈಲಿ ನಿಯಮ ನೀತಿಗಳಿವೆ. ಅಂತೆಯೆ ಇದರಲ್ಲಿ ಭೂಮೀ ಹುಣ್ಣಿಮೆ ಹಬ್ಬವೂ ಒಂದು….
ರೈತಾಪಿ ವರ್ಗದ ಮಮತೆಯ ಭೂಮಿ ತಾಯಿಯ ಸೀಮಂತ ಎಂದು ಆಚರಿಸುವ ಪದ್ಧತಿ ಇನ್ನೂ ಅನೇಕ ಕಡೆ ಚಾಲ್ತಿಯಲ್ಲಿದೆ. ಇಲ್ಲಿ ವಿಶೇಷವಾಗಿ ನಮ್ಮ ಮಲೆನಾಡು ಭಾಗವಾದ ಶಿರಸಿ ಸಿದ್ದಾಪುರ ಯಲ್ಲಾಪುರ ಸೊರಬ ಸಾಗರದ ಹಳ್ಳಿ ಗಾಡಿನಲ್ಲಿ ಈ ಹಬ್ಬ ಆಚರಿಸುವ ಪದ್ಧತಿಯೇ ಒಂದು ಸೋಜುಗ!
ಭೂಮಿ ಹುಣ್ಣಿಮೆ ಹದಿನೈದು ದಿನ ಸಮೀಪಿಸುವಂತೆ ಭೂಮಿ ಬುಟ್ಟಿಗೆ ಚಿತ್ತಾರ ಬರೆದು, ಅದರಲ್ಲಿ ಭೂ ತಾಯಿಯ ಸೇವಕರಾದ ಮನೆಯ ಯಜಮಾನ ಮತ್ತು ಒಡತಿಯ ವಿವಿಧ ಭಂಗಿಯ ಕೈ ಕುಂಚದ ಕಲಾಕೃತಿ ಬುಟ್ಟಿಯಲ್ಲಿ ಮೂಡಿ ಬರುತ್ತದೆ. ಇದೇ ಬುಟ್ಟಿ ಶೃಂಗಾರಗೊಂಡು ಶೀಗೆ ಹುಣ್ಣಿಮೆ ದಿನದಂದು ತಾಯ್ನೆಲದ ಕಡೆ ಪ್ರವೇಶ ವಾಗುತ್ತದೆ.
ಮನೆಯೊಡತಿ ತಯಾರು ಮಾಡಿದ ಚರು ಎಂದು ಕರೆಸಿಕೊಳ್ಳುವ ಗೆಡ್ಡೆ ಗೆಣಸು, ಅಕ್ಕಿ, ಅಮಟೆಗಳ ಪರಿಮಳದ ಮಿಶ್ರಣ ರೈತನ ಭೂ ಗರ್ಭ ಸೇರುವಾಗ ‘ಹೋಯ್ ‘ಹೋಯ್’ಎಂಬ ಕೂಗು ನಸುಕಿನ ಕತ್ತಲನ್ನು ಸರಿಸಿ ಬೆಳಗಿಗೆ ಮುನ್ನುಡಿ ಬರೆಯುತ್ತದೆ. ಆ ರಾತ್ರಿಇಡೀ ನಿದ್ರೆ ಬಿಟ್ಟು ಹಬ್ಬದ ತಯಾರಿ ಮಾಡುವ ಮಾತೆಯರ ನಂಬಿಕೆ, ಭಕ್ತಿಭಾವಪರವಶತೆಯಾದ ರೀತಿ ಆ ಕಾಣದ ಮುಗ್ಧತೆಯ ಸೌಂದರ್ಯ ಹೆಚ್ಚಿಸುತ್ತದೆ.
ಮನೆಯ ದೇವರ ಇಡುಕಲಿಗೆ ನಮಸ್ಕರಿಸಿ ರೈತ ಕುಟುಂಬದ ಭಾಗವಾದ ಕೊಟ್ಟಿಗೆ, ಗೊಬ್ಬರ ಗುಂಡಿ ಆದಿಯಾಗಿ ಹೊಲ ಗದ್ದೆ ತೋಟ ಸೇರುವ ‘ಚರಗ’.ನಂತರ ಮನೆಯೊಡತಿ ತಯಾರು ಮಾಡಿದ ಸಿಹಿ ತಿಂಡಿ ಖಾದ್ಯಗಳನ್ನು ಹೊಲದಲ್ಲಿ ಭೂ ತಾಯಿಗೆ ಸಮರ್ಪಿಸಿ ಪೂಜಿಸುವಾಗ ಹೂ, ಬಳೆ, ಅರಿಶಿಣ -ಕುಂಕುಮದ ಜೊತೆ ಪೂಜಿಸುವ ಸಂಪ್ರದಾಯ ಮಲೆನಾಡ ಸೊಬಗ ಹೆಚ್ಚಿಸಲು ಪೂರಕವಾಗುತ್ತದೆ. ಬಳಿಕ ಗಂಟೆ, ಜಾಗಟಿಗಳ ಜೊತೆ ಪೂಜೆ ನಡೆದು ಗೂಳಿ (ಕಾಗೆ) ಗೆ ಎಡೆ ಇಟ್ಟು ಬಳಿಕ ಭತ್ತದ ಗದ್ದೆಯ ಸಸ್ಯದ ಬೇರು ಕಿತ್ತು ಅಡಿಯಲ್ಲಿ ಎಡೆಯನ್ನು ಹುಗಿದು ಉತ್ತಮ ಫಸಲಿಗಾಗಿ ದೇವರನ್ನು ಮೊರೆಹೋಗುವ ದಂಡು ಭತ್ತದ ಗದ್ದೆಯಲ್ಲಿ, ಅಡಿಕೆ ತೋಟದಲ್ಲಿ ರಾರಾಜಿಸುತ್ತದೆ.
ಕೀಟ ಬಾದೆಗಳು, ಇಲಿ ಹೆಗ್ಗಣಗಳ ನಷ್ಠ ಬಾರದಿರಲಿ ಬೆಳೆದ ಬೆಳೆ ಸಂಪೂರ್ಣ ಕೈ ಸೇರಲಿ ಎಂಬ ಆಶಾದಾಯಕ ಭಾವನೆಯಿಂದ ಪಂಚ ಪಾಂಡವರ ಸ್ಥಿತಿ ಬಾರದಿರಲಿ ಎಂಬ ಅರ್ಥದಲ್ಲಿ ಐದು ಸಸಿಗಳಿಗೆ ಪೂಜೆ, ಐದು ಕಲ್ಲುಗಳ ಪೂಜೆ, ಐದು ಜಾತಿ ಖಾದ್ಯಗಳ ಬೋಜನ, ಈ ಹಬ್ಬದ ವಿಶೇಷತೆ ಎನ್ನುತ್ತಾರೆ ನಮ್ಮ ಹಿರಿಯರು .
ನೈವೈದ್ಯದ ನಂತರ ಮನೆಯಿಂದ ಹೊಲಕ್ಕೆ ಪೂಜೆಗೆ ತೆರಳಿದ ಅಜ್ಜ ಅಜ್ಜಿ,ತಾಯಿ,ತಂದೆಮಕ್ಕಳು ಮೊಮ್ಮಕ್ಕಳೆಲ್ಲ ಸೇರಿ ಸುಖ ಬೋಜನ ಮಾಡುವ ಭೂಮಿ ಹುಣ್ಣಿಮೆ ಹಬ್ಬ ನಮ್ಮ ಸಂಪ್ರದಾಯ ಮಾತ್ರವಲ್ಲ ನಮ್ಮ ಸಂಸ್ಕೃತಿ, ಹಿರಿಮೆ ಗರಿಮೆ ಎಲ್ಲ ಈ ಹಬ್ಬ ರೈತರ ಹಬ್ಬ ಮಾತ್ರವಲ್ಲ ಅನ್ನ ತಿನ್ನುವ ಪ್ರತಿ ಜೀವಿಯ ಹಬ್ಬ.
_ಅರುಣ್ ಕೊಪ್ಪ ಶಿರಸಿ.