

ಕೆಲವು ದಿವಸಗಳ ಹಿಂದೆ ಶಿರಸಿಯಲ್ಲಿ ಅಭೂತಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತಲ್ಲ ಅಲ್ಲಿ ಸಾಹಿತಿಯೊಬ್ಬರು ಕವಿಗೋಷ್ಠಿಯ ಆಶಯ ಭಾಷಣ ಮಾಡಿ ಕವನಗಳು ಭೂತವನ್ನು ಬಿಂಬಿಸಬೇಕು!. ರಾಮಾಯಣ, ಮಹಾಭಾರತ ಆಧಾರಿತವಾಗಿಯೇ ಕವನ ರಚಿಸಬೇಕು ಎಂಬಿತ್ಯಾದಿ ಸನಾತನವಾದಿ ಫರ್ಮಾನು ಹೊರಡಿಸಿಬಿಟ್ಟಿದ್ದರು.

ಅದಕ್ಕೆ ಆ ಕ್ಷಣದಲ್ಲಿ ಚುಟುಕು ಪ್ರತಿಕ್ರೀಯೆ ಮೂಲಕ ನಾನಂತೂ ಪ್ರತಿಕ್ರೀಯಿಸಿದ್ದೆ. ಆಗ ನನಗೆ ನೆನಪಾದದ್ದು ಜಿಡ್ಡು ಕೃಷ್ಣ ಮೂರ್ತಿಯವರ ‘burn ramayana and mahabharata,s write your own, ಸುಟ್ಟುಬಿಡಿ ನಿಮ್ಮ ಮಹಾಕಾವ್ಯ ಧರ್ಮಗ್ರಂಥಗಳನ್ನು ನಿಮ್ಮದೇ ಬರೆದು ಸಾಧಿಸಿ ಎನ್ನುವ ನುಡಿ.
ಸಾಹಿತ್ಯ, ಕಾವ್ಯಗಳಲ್ಲಿ ಇಂಥದ್ದೊಂದು ಸನಾತನವಾದಿ ಕರ್ಮಠ ಜಾಡ್ಯ ಉಳಿಯಬೇಕು ಎಂಬುದು ಆ ಮಹಾನ್ ಸಾಹಿತಿಯ ಅಂಬೋಣ ಅದಿರಲಿ.
ನಮ್ಮ ನೀಷೆ ಸರಿಸುಮಾರು ಒಂದು ಶತಮಾನಕ್ಕೂ ಹಿಂದೆ ದೇವರು ಸತ್ತ ಎಂದು ಬರೆದ ಜರ್ಮನ್ ಕವಿ. ಆಗ ಅವನ ದೇಶ, ಅಲ್ಲಿಯ ಸುತ್ತಮುತ್ತ ಕ್ರಿ ಶ್ಚಿಯಾನಿಟಿ ಪಾರಮ್ಯದಲ್ಲಿದ್ದ ಕಾಲ ಈಗಿನ ಭಾರತೀಯ ಸನಾತನವಾದಿ ವೈದಿಕ ಕರ್ಮಠರಂತೆ ಆಗ ಕ್ಯಾಥೋಲಿಕ್ ಪ್ರೇರಿತ ಧರ್ಮಪ್ರಭುತ್ವದ ಕಾಲ, ಧರ್ಮಕ್ಕನುಗುಣವಾಗಿ ಆಡಳಿತ ನಡೆಸುತ್ತ ತಮ್ಮ ಧರ್ಮವೇ ಶ್ರೇ಼ಷ್ಠ ಎಂದು ರಾಜಕೀಯ ಮಾಡುತಿದ್ದಾಗ ನೀಷೆ ತರಹದ ಸಾಹಿತಿಗಳು ಕ್ಯಾಥೋಲಿಕ್ ಧರ್ಮ ಪ್ರಭುತ್ವದ ಅಧ್ವಾನಗಳನ್ನು ಪ್ರಶ್ನಿಸಿತ್ತಾ ನಿಮ್ಮ ದೇವರು ಸತ್ತ ಎನ್ನುವವರೆಗೆ ಪ್ರಭುತ್ವಕ್ಕೆ, ಪ್ರಭುತ್ವದ ಏಕಸ್ವಾಮ್ಯಕ್ಕೆ ಚುರುಕು ಮುಟ್ಟಿಸುತ್ತಾರೆ.
ಇದೇ ಕಾಲದ ಆಸುಪಾಸು ನಮ್ಮ ಬ್ರೆಕ್ಟ್ ಸಮಾನತೆಯ ಸಮಾಜಕ್ಕಾಗಿ ಕನಸಿದನಲ್ಲ …. ಆತ ಕೂಡಾ ತನ್ನ ಕಾವ್ಯದ ಮೂಲಕ ವ್ಯವಸ್ಥೆ, ಪ್ರಭುತ್ವವನ್ನು ಎದುರಿಸಿದ್ದ ಆತನ ಕಾವ್ಯವೊಂದು ಹೀಗೆ ಪ್ರವಹಿಸುತ್ತದೆ.
ಯಾಕೆ ಎಂದರೆ…. ಧಮನಕಾರಿಯಾದ ಮತ-ಧರ್ಮಗಳನ್ನು ನಾನು ಧ್ವೇಶಿಸಿದೆ ಯಾಕೆ ಎಂದೆ ಇನ್ನೂ ಯಾಕಾದರೂ….
ಯಾಕೆ ಎಂದರೆ… ನಾನು ಜನರ ಹಿತೈಶಿಯಾಗಿದ್ದೆ, ಅವರಿಂದ ಪಡೆದದ್ದನ್ನು ಬಳಸಿ,ಬೆಳಸಿ ಹಿಂದಕ್ಕೆ ಅವರಿಗೇ ಕೊಟ್ಟೆ
ಯಾಕೆ ಎಂದರೆ ನಾನು ಕವಿಯಾಗಿ ಜನರ ಭಾಷೆ ಬೆಳೆಸಿದೆ.
ಇಹದ ಬದುಕಿಗೆ ದಾರಿ ಹುಡುಕಿದೆ. ಯಾಕೆ ಎಂದರೆ…. ಇನ್ನೂ ಯಾಕಾದರೂ.. ಆದ್ದರಿಂದ ನಾನು ಮರೆತು ಹೋಗಲಾರೆ … ಒಂದು ಕಲ್ಲಿನ ಮೇಲೆ ನನ್ನ ಹೆಸರು ಕೆತ್ತಿರುತ್ತದೆ. ನನ್ನ ಪುಸ್ತಕಗಳು ಮರು ಮುದ್ರಣಗೊಳ್ಳುತ್ತಲೇ ಇರುತ್ತವೆ.
ಕಠೋರ ಚಿಪ್ಪಿನೊಳಗೆ ಮೃಧುತ್ವ ಅವಿತುಕೊಂಡಂತೆ
ಸರಿಸುಮಾರು ಇದೇ ಕಾಲದ ಅಂದರೆ ಒಂದು ಶತಮಾನದ ಹಿಂದೆ ಶೆಲ್ಲಿ ಎಂಬ ಆಂಗ್ಲ ಕವಿ ಹೆಸರುಮಾಡಿದ್ದನಲ್ಲ ಆತ ತೀವ್ರ ಭಾವುಕ ಕವನಗಳನ್ನು ಬರೆದು ಕಾಡಿದ ಕವಿ. ಅತಿ ಕಡಿಮೆ ಅವಧಿ ಬದುಕಿದ್ದ ಪರ್ಸಿ ಬಿಶ್ ಶೆಲ್ಲಿ ಕಾವ್ಯ ಮತ್ತು ರಾಜಕೀಯದಲ್ಲಿ ವ್ಯತ್ಯಾಸ ಕಾಣದೆ ಪರಿತಪಿಸುತ್ತಾನೆ. ಆತನದೊಂದು ನಿಷ್ಠೂರ ಕವಿತೆ ಓದಿ,
ದೀಪವನು ಕೆಡಿಸಿದಾಗ
ಬೆಳಕು ಸೇರುವುದು ಮಣ್ಣ
ಮೋಡವದು ಚದುರಿದಾಗ
ಮಳೆಬಿಲ್ಲು ಕಳೆವುದು ಬಣ್ಣ
ವೀಣೆಯದು ಒಡೆಯೆ ಸವಿನಾದ ಉಳಿಯದು ಮನದಲಿ
ಮಾತನು ತುಟಿ ನುಡಿಯೆ ಒಲವಿನ ಪದಗಳು ಮರೆವುವು ಕ್ಷಣದಲಿ (-ಪರ್ಸಿ ಬಿಶ್ ಶೆಲ್ಲಿ)
ಕವಿ ವರ್ಡ್ಸವರ್ತ ಕಾವ್ಯದ ಬಗ್ಗೆ ಬರೆಯುತ್ತಾ…. ಕವಿತೆ ಎಂದರೆ…. ಯಾವ ಅಡೆ-ತಡೆಗಳಿಲ್ಲದೆ ಧುಮ್ಮಿಕ್ಕುವ ಭಾವನೆಗಳು: ಪ್ರಶಾಂತ ಚಿತ್ತದಲಿ ಕಳೆದ ಕ್ಷಣಗಳ ನೆನಪು ಮಾಡಿಕೊಳ್ಳುವ ಭಾವ. ಎನ್ನುತ್ತಾರೆ. ಅವರದೊಂದು ಕವಿತೆಯ ದೃಷ್ಟಾಂತವೂ ಹೀಗಿದೆ. ಆಗಸದಲಿ ಕಾಮನಬಿಲ್ಲೊಂದ ನೋಡಿದಾಗ ಕುಣಿಯುತ್ತದೆ ನನ್ನದೆ. ಬಾಲ್ಯದಲ್ಲಿ ಈ ಭಾವ ಹೇಗಿತ್ತೋ ನಾನೀಗ ಬೆಳೆದ ಮೇಲೂ ಅದು ಹಾಗೆಯೇ ಇದೆ.
ನಾನು ವಯಸ್ಸಾಗಿ ಮಾಗುವಾಗಲೂ ಅದು ಹಾಗೆಯೇ ಇರಲಿ,
ಹಾಗಿಲ್ಲವಾದಲ್ಲಿ ನನ್ನ ಪ್ರಾಣ ಈಗಲೇ ಹೋಗಲಿ! ಮಗುವೆ ಮಾನವನ ತಂದೆ ಸಹಜ ಶೃದ್ಧೆಯೊಂದು ಪ್ರತಿ ದಿನವನ್ನು ಒಂದರೊಳಗಿನ್ನೊಂದ ಬೆಸೆಯಲಿ.
ಹೀಗೆ ಬ್ರೆಕ್ಟ್, ನೀಷೆ, ಶೆಲ್ಲಿ ಫೈಜ್ ಅಹಮ್ಮದ್ ಫೈಸ್, ಬೋದಿಲೇರ್, ವರ್ಡ್ಸವರ್ತ ಸೇರಿದಂತೆ ಅನೇಕ ಹಿಂದಿನ ಶತಮಾನದ ಕವಿಗಳು ಅಂದಿನ ಧರ್ಮಪ್ರಭುತ್ವ, ರಾಜಪ್ರಭುತ್ವ, ಸರ್ವಾಧಿಕಾರ, ಮೊನಾರ್ಕಿ, ಅನಾರ್ಕಿಗಳನ್ನೆಲ್ಲಾ ವಿರೋಧಿಸುತ್ತಾ ಸಮ ಸಮಾಜವನ್ನು, ಸಮಾನತೆಯನ್ನು, ಸಮಾಜವಾದವನ್ನು ಕನಸಿ ಹೀಗಿದೆ ನೋಡಿ ನಮ್ಮ ಕನಸಿನ ಮುನ್ನೋಟ ಎಂದು ಭವಿಷ್ಯದ ಬಗ್ಗೆ ಭರವಸೆ, ಆಶಾವಾದ ವ್ಯಕ್ತಮಾಡಿದ್ದರು. ಒಂದು ಶತಮಾನದ ನಂತರ ಭಾರತ ಸೇರಿದಂತೆ ಕೆಲವೆಡೆ ಬಂಡವಾಳಶಾಹಿತನ, ಮತೀಯವಾದ ವಿಜೃಂಬಿಸುತ್ತಾ… ಸಾಹಿತ್ಯದ ಪ್ರಭುತ್ವ ವಿರೋಧಿ ಪ್ರಚ್ಛನ್ನ ಪರಂಪರೆಗೆ ಅಪವಾದವಾಗುವಂಥ ವರ್ತಮಾನ ಸಂಭವಿಸುತ್ತದೆ. ಇದಕ್ಕೆಲ್ಲಾ ಈ ಕವಿಗಳ ಸಾಹಿತ್ಯದಲ್ಲಿ ಪರಿಹಾರ,ಪ್ರಜಾತಂತ್ರದ ಉಳಿವಿನ ಮುಲಾಮು ಸಿಗುತ್ತದೆ. ವರ್ತಮಾನದ ತಲ್ಲಣಗಳನ್ನು, ಭವಿಷ್ಯದ ಆತಂಕವನ್ನು ಹೋಗಲಾಡಿಸುವ ಕಾವ್ಯದ ಹುಟ್ಟು ಈ ಕಾಲದ ಜರೂರತ್ತಾಗಿದೆ.
ಇತ್ತೀಚೆಗೆ ನಿಧನರಾದ ಡಾ. ಮನಮೋಹನ ಸಿಂಗ್ ತಮ್ಮ ವಿಚಾರದಲ್ಲಿ ಈಗಿನ ಮಾಧ್ಯಮ, ವಿರೋಧ ಪಕ್ಷಗಳಿಗಿಂತ ನನ್ನ ಮುಂದಿನ ಭವಿಷ್ಯ ಕರುಣಾಮಯಿ ಆಗಲಿದೆ ಎಂದು ಬಹುಹಿಂದೆ ಆಶಿಸಿದ್ದರು. ಕಾವ್ಯಕೂಡಾ, ಕರುಣಾಮಯಿ-ಜೀವವಾಹಿನಿ, ಮಾನವೀಯ ಆಗುತ್ತಾ ಈಗಿನ ತಲ್ಲಣಗಳಿಗೆ ಪರಿಹಾರವಾಗಬೇಕಿದೆ. (ಇದು ಸಿದ್ಧಾಪುರ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಲಶಿರ್ಸಿ ಕನ್ನೇಶ್ ಮಾಡಿದ ಕವಿಗೋಷ್ಠಿಯ ಆಶಯ ಭಾಷಣದ ಸಾರ)
(ಅಲ್ಲಿ ಓದದ ಒಂದು ಕವನ ಹೀಗಿದೆ…)
ಯಾವನಿಗೊತ್ತು…
ಅಜಾನುಬಾಹು ದೇವರು ಹೊಸ್ತಿಲವರೆಗೆ ಬಂದ
ಮನೆಯ ಬಾಗಿಲು ಸಾಕಾಗದೆಂದು ಹೊರಗೇ ನಿಂತ!
ಹೌ, ಆರ್.ಯು? ಎನ್ನಲಿಲ್ಲ
ಕಾಯಿ ಕೊಡುವುದು ನೆನಪಾಯಿತು…! ನೆನಪಾಯಿತಲ್ಲಾ ಸಾಕು… ಎಂದು ಮರಳಿದ.
ಮತ್ತೆ ನಮ್ಮಜ್ಜಿ ಹೇಳಿದ ಚೌಡಿಯೋ? ಮಾರಿಯೋ? ಢಣ-ಢಣ ಘಂಟೆ- ಜಾಗಟೆ ಶಬ್ಧ ಮಾಡುತ್ತಾ… ಊರಿನ ಹೆಬ್ಬಾಗಿಲಿಗೇ ಬಂದಿತು!
ನನಗೂ ಬಾಯಿ ವರೆಗೆ ಬಂತು…. ಆ ಅಜಾನುಬಾಹು ದೇವತೆ ನನಗೂ ಕ್ಯಾರೆ ಎನ್ನಲಿಲ್ಲ….
ನಾನೂ… ಅದಕ್ಕೂ….
ಮತ್ತೆ ನಿದ್ರೆ ತಪ್ಪಿತು.
ನಮ್ಮ ಭೂತ, ಹೆಗ್ಗದ್ದೆ ಭೂತ, ಕಾನಳ್ಳಿ ಚೌಡಿ, ಸಿಗಂಧೂರು ಚೌಡೇಶ್ವರಿ…
ಎಲ್ಲಾ ನಮ್ಮ ಹಳೆ ಸಂಬಂಧಿಗಳಂತೆ… ಕರೆದರೆ ಬರುತ್ತಾರೆ….. ಇಲ್ಲದಿದ್ದರೆ ಇಲ್ಲ.
ಹನ್ನೆರಡು ಸುತ್ತು ನಿದ್ರೆಗಾಗಿ ಮಗ್ಗಲು ಬದಲಾಯಿಸಿದೆ…. ಕೊನೆಗೂ ನಿದ್ರೆ ಬಂತು, ದೇವರು ಬರಲಿಲ್ಲ!
ನೀನು ನಮ್ಮ ಸುದ್ದಿಗೆ ಬರಬೇಡ… ನಾವೂ ನಿನ್ನ ಸುದ್ದಿಗೆ, ಎಂದಂತಾಯಿತು.
ಕಂಡದ್ದು ಕನಸಾ? ದೇವರಿಗೇ ಗೊತ್ತು? (-ಕೋಲಶಿರ್ಸಿ ಕನ್ನೇಶ್)

ದೇವರು ಬದುಕಿದ್ದರೆ ತಾನೆ ಸಾಯುವ ದು, ದೇವರು ಒಂದು ಶಕ್ತಿ, ಅದು ಗಾಳಿ, ಬೆಳಕು, ಬೆಂಕಿ, ಭೂಮಿ, ನೀರು,
ಸರ್ವಜ್ಞ ಹೇಳುವಂತೆ
ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?
ಕುವೆಂಪು ಹೇಳುವಂತೆ
ನೂರು ದೇವರನ್ನೆಲ್ಲ ನೂಕಾಚೆ ದೂರ
ಬಸವಣ್ಣ ಹೇಳುವಂತೆ
ಎನ್ನ ಕಾಲೇ ಕಂಭಾ, ದೇಹವೆ ದೇಗುಲ
ಗಾಂಧೀಜಿ ಹೇಳುವಂತೆ
Work is worship