

ಕುಂಭಮೇಳ, ಯಾಂಬು ಮತ್ತು ಗಾಂಧೀಜಿ:
ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಗಾಂಧೀಜಿಯ ಪ್ರಸ್ತುತತೆ ಏನು? ಈ ವಿಷಯ ಕುರಿತು ನಾನು ಇಂದು ಶ್ರೀರಂಗಪಟ್ಟಣದಲ್ಲಿ ಉಪನ್ಯಾಸ ಕೊಡಲು ಹೋಗಿದ್ದೆ.
ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮದ ಒಂದು ಕರಂಡಿಕೆಯನ್ನು 12, ಫೆಬ್ರುವರಿ 1948ರಂದು ಶ್ರೀರಂಗಪಟ್ಟಣದ ಬಳಿಯ ಪಶ್ಚಿಮವಾಹಿನಿ ಯಲ್ಲಿ ವಿಸರ್ಜನೆ ಮಾಡಲಾಗಿತ್ತು. (ಅದಾಗಿ ಎರಡು ದಿನಗಳ ನಂತರ ನಾನು ಜನಿಸಿದೆ ಎಂಬುದು ಹಳೇ ಕತೆ).
ಚಿತಾಭಸ್ಮದ ಆ ನೆನಪಿಗಾಗಿ ಪ್ರತಿವರ್ಷವೂ ಅಲ್ಲಿನ ಸರ್ವೋದಯ ಸಂಘದ ಪದಾಧಿಕಾರಿಗಳು ಗಾಂಧೀಜಿಯ ಸ್ಮರಣಾ ಕಾರ್ಯಕ್ರಮ, ಉಪನ್ಯಾಸವನ್ನು ಏರ್ಪಡಿಸುತ್ತಾರೆ. ಈ ವರ್ಷ ಮೇಲ್ಕಂಡ ವಿಷಯದ ಬಗ್ಗೆ ಮಾತಾಡಲು ನನಗೆ ಡಾ. ಸುಜಯ್ ಕುಮಾರ್ ಆಹ್ವಾನಿಸಿದ್ದರು. ನನ್ನ ಮಾತಿನ ಸಂಕ್ಷಿಪ್ತ ವರದಿ ಇಲ್ಲಿದೆ .
*
ಇಂದು ಫೆಬ್ರುವರಿ 11ರಂದು ಏನೆಲ್ಲ ಮುಹೂರ್ತಗಳು ಒಟ್ಟಾಗಿ ಮೇಳೈಸಿವೆ. ಏಐ ಎಂಬ ‘ಯಾಂತ್ರಿಕ ಬುದ್ಧಿಮತ್ತೆʼ (ಯಾಂಬು) ಕುರಿತ ಪ್ರಥಮ ಜಾಗತಿಕ ಶೃಂಗಸಭೆ ಪ್ಯಾರಿಸ್ಸಿನಲ್ಲಿ ನಡೆಯುತ್ತಿದೆ. ಅದನ್ನು ಹೇಗೆ ನಿಯಂತ್ರಿಸಬಹುದು, ಹೇಗೆ ಮನುಕುಲಕ್ಕೆ ಉಪಕಾರಿ ಆಗುವಂತೆ ಮಾಡಬಹುದು ಎಂದು ನಿರ್ಧರಿಸಲು ನಮ್ಮ ಪ್ರಧಾನಿ ಮೋದಿಯವರೂ ಸೇರಿದಂತೆ ಅನೇಕ ರಾಷ್ಟ್ರಗಳ ನಾಯಕರು ಅಲ್ಲಿ ಸೇರಿದ್ದಾರೆ. ಏಐ ಕ್ರಾಂತಿಯ ಪ್ರಮುಖ ರೂವಾರಿಗಳಾದ ಸತ್ಯ (ಮೈಕ್ರೊಸಾಫ್ಟ್) ಮತ್ತು ಸುಂದರ್ (ಗೂಗಲ್) ಕೂಡ ಇದ್ದಾರೆ. ಎಐ ಸಂಶೋಧನೆಯ ಲಾಭ ಭಾರತದಂಥ ದೇಶಗಳಿಗೂ ಸಿಗಬೇಕು ಎಂದು ನಮ್ಮ ಪ್ರಧಾನಿ ವಾದಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಇತ್ತ ಬೆಂಗಳೂರಿನಲ್ಲಿ ಎಲ್ಲೆಡೆ ಹೈಟೆಕ್ ಭರಾಟೆಯೋ ಭರಾಟೆ. ಏರೋ ಶೋ ಆರಂಭವಾಗಿದೆ. 19 ರಾಷ್ಟ್ರಗಳ ಉನ್ನತ ತಂತ್ರಜ್ಞಾನದ ಉದ್ಯಮಿಗಳ ಮೇಳವೂ ಇಲ್ಲಿ ಆರಂಭಾಗಿದೆ. ಇದೇ ವೇಳೆಯಲ್ಲಿ ಅತ್ತ ವಿಶ್ವದ ಅತಿದೊಡ್ಡ ಕುಂಭ ಮೇಳದಲ್ಲಿ 300 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ ಆಗಿದೆ. ಶ್ರೀರಂಗಪಟ್ಟಣಕ್ಕೆ ಸಮೀಪದ ತ್ರಿವೇಣೀ ಸಂಗಮದಲ್ಲೂ ಕುಂಭ ಮೇಳದ ಮಾದರಿಯ ಉತ್ಸವ ಆರಂಭವಾಗಿದ್ದು ಇಲ್ಲೂ ಸಮೀಪದ ಟಿ. ನರಸೀಪುರದ ಆಸುಪಾಸು ಟ್ರಾಫಿಕ್ ಜಾಮ್ ಆಗಿರುವ ವರದಿಗಳು ಬರುತ್ತಿವೆ.
ಏರೋಶೋ, ಟೆಕ್ನೋಮೇಳಕ್ಕೂ ಟ್ರಾಫಿಕ್ ಜಾಮ್. ಸನಾತನ ಪರಂಪರೆಯ ಮೇಳಕ್ಕೂ ಟ್ರಾಫಿಕ್ ಜಾಮ್. ಅತ್ತ ಪ್ಯಾರಿಸ್ಸಿನ ಏಐ ಮೇಳವನ್ನೂ ಸೇರಿಸಿದರೆ ನಿನ್ನೆ, ಇಂದು, ನಾಳೆಗಳ ತ್ರಿವೇಣೀ ಸಂಗಮ ಇಂದೇ ಆಗುತ್ತಿದೆ.
ಕುಂಭಮೇಳದ ಸಂದಣಿ ಮತ್ತು ಜಲಮಾಲಿನ್ಯದ ಬಗ್ಗೆ ನಾನು ಮಾತಾಡಿದರೆ ಭಕ್ತಾದಿಗಳಿಗೆ ಕೋಪ ಬರುತ್ತದೆ. ಗಾಂಧೀಜಿ 1915ರಲ್ಲಿ ಹರದ್ವಾರಕ್ಕೆ ಹೋಗಿದ್ದರು. ‘ಆಸೆ ಇಟ್ಕೊಂಡು ಹೋಗಿದ್ದೆ. ತುಂಬ ದುಃಖ ಆಯ್ತು. ಅಲ್ಲಿ ಎಲ್ಲೆಲ್ಲೂ ಕೊಳಕು ತುಂಬಿತ್ತು; ಭೌತಿಕವಾಗಿ, ನೈತಿಕವಾಗಿ, ಧರ್ಮದ ಹೆಸರಲ್ಲಿ ಏನೆಲ್ಲ ಗಲೀಜು. ಅಲ್ಲೇ ಶೌಚ ಮಾಡ್ತಾರೆ, ಕೊಳೆ ತೊಳ್ಕೋತಾರೆ, ಮುಳುಗು ಹಾಕ್ತಾರೆ. ಆಮೇಲೆ ಅದನ್ನೇ ಪವಿತ್ರ ನೀರು ಅಂತ ಮನೆಗೂ ಒಯ್ಯುತ್ತಾರೆ. ದೇವರ ಸೃಷ್ಟಿಯ ಅದ್ಭುತವನ್ನು ಆಸ್ವಾದಿಸುವ ಬದಲು, ಧರ್ಮಕ್ಕೆ, ಸೃಷ್ಟಿಗೆ, ಶುಚಿತ್ವಕ್ಕೆ ಅಪಚಾರ ಮಾಡ್ತಾರೆʼ ಎಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದಿದ್ದರು ಅವರು.
ಜಲಮಾಲಿನ್ಯದ ಬಗ್ಗೆ ನಮ್ಮ ದೇಶದಲ್ಲಿ ದಾಖಲಾದ ಮೊದಲ ಹೇಳಿಕೆ ಅದಾಗಿತ್ತು.
ಇಂದು ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಸೇರಿದ್ದಕ್ಕಿಂತ ಕಡಿಮೆ ಜನರು ಅಂದು ಇಡೀ ಭಾರತದಲ್ಲಿದ್ದರು. ಆಗಲೇ ಮಾಲಿನ್ಯದ ಎಚ್ಚರಿಕೆಯನ್ನು ಗಾಂಧೀಜಿ ನೀಡಿದ್ದರು. ಆ ವಿಷಯ ಹಾಗಿರಲಿ. ಈಗ ಮೂರು ಮಹಾ ಅಲೆಗಳ ತ್ರಿವೇಣೀ ಸಂಗಮ ಆಗುವುದನ್ನು ಇಡೀ ಜಗತ್ತು ನೋಡುತ್ತಿದೆ. ಒಂದು ಅಭಿವೃದ್ಧಿಯ ಅಲೆ, ಇನ್ನೊಂದು ತಾಪಮಾನ ಏರಿಕೆಯ ಅಲೆ ಮತ್ತು ಮೂರನೆಯದು ಏಐ (ಯಾಂಬು) ಎಂಬ ಅಲೆ.
ಈ ಅಲೆಗಳ ಮಧ್ಯೆ ಗಾಂಧೀಜಿ ಹೇಗೆ ಪ್ರಸ್ತುತ?
2012ರಲ್ಲಿ ಗುಜರಾತಿನ ಪೋರ್‌ಬಂದರಿನಲ್ಲಿ 143ನೇ ಗಾಂಧೀಜಯಂತಿಯ ದಿನ ಅಂದಿನ ಮುಖ್ಯಮಂತ್ರಿ ಮೋದಿಯವರು ಹಾಜರಿದ್ದರು. ಗಾಂಧೀಜಿಯ ಗುಣಗಾನ ಮಾಡುತ್ತ ಅವರು, ʻಇಂದಿನ ಎಲ್ಲ ಜಾಗತಿಕ ಸಮಸ್ಯೆಗಳಿಗೆ, ತಾಪಮಾನ ಏರಿಕೆಯ ಸಮಸ್ಯೆಗೂ ಗಾಂಧೀಜಿಯವರ ತತ್ವಾದರ್ಶಗಳಲ್ಲಿ ಉತ್ತರ ಇದೆʼ ಎಂದು ಘೋಷಿಸಿದ್ದರು.
ಆಮೇಲೆ ಅವರು ಪ್ರಧಾನಿ ಆದ ನಂತರ ಸೂರತ್‌ನಿಂದ ಮುಂಬೈಗೆ ದೇಶದ ಮೊದಲ ಬುಲೆಟ್ ಟ್ರೇನ್ ಓಡಿಸುವ ಕನಸಿಗೆ ಚಾಲನೆ ಕೊಟ್ಟರು.
ಗಾಂಧೀಜಿಯನ್ನು ಟ್ರೇನ್‌ನಿಂದ ಕೆಳಕ್ಕೆ ನೂಕಿದ ಮೊದಲ ಉದಾಹರಣೆ ನಮಗೆ ಗೊತ್ತೇ ಇದೆ.
ಇಂದು ಗಾಂಧೀಜಿಯ ಬಗ್ಗೆ ಇಂಟರ್ನೆಟ್‌ನಲ್ಲಿ, ಯೂಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಅದೆಷ್ಟೊಂದು ಕ್ರೂರ ಮಾತುಗಳು, ಸೆನ್ಸಾರ್ ಆಗಬೇಕಿದ್ದ ಸುಳ್ಳಿನ, ದ್ವೇಷದ ಸರಮಾಲೆಗಳು ಕಾಣಸಿಗುತ್ತವೆ. ಗಾಂಧೀಜಿಗೆ ಕೋಡು ಮೂಡಿಸಿ, ಕೋರೆದಾಡಿಗಳನ್ನು ಹಚ್ಚಿ ಲೇವಡಿ ಮಾಡಲಾಗುತ್ತಿದೆ. ಗೋಡ್ಸೆ, ಸಾವರ್ಕರ್ ಅವರನ್ನು ದೈವತ್ವಕ್ಕೇರಿಸಿದ ಸುಳ್ಳುಸಂಗತಿಗಳಿಗೆ ಎಷ್ಟೆಲ್ಲ ಲೈಕ್ಸ್‌ಗಳು, ಮೂಢಮಾನ್ಯತೆಗಳು ಸಿಗುತ್ತಿವೆ. ಅವೆಲ್ಲ ಏಐ ಸಹಾಯದಿಂದ ಹೆಣೆದ ಬಿಂಬಗಳು.
ಬದುಕಿನುದ್ದಕ್ಕೂ ಧಾರ್ಮಿಕತೆ, ಅಧ್ಯಾತ್ಮ, ನೈತಿಕ ಬದುಕಿನ ಅಗತ್ಯವನ್ನು ಪ್ರತಿಪಾದಿಸಿ, ಸಾಯುವ ಕ್ಷಣದಲ್ಲೂ ಹೇರಾಮ್ ಎನ್ನುತ್ತಲೇ ಉಸಿರು ಚೆಲ್ಲಿದ ಮಹಾತ್ಮನಿಗೆ ಈಗ ರಾಮಭಕ್ತರಿಂದಲೇ ನಾನಾ ಬಗೆಯ ಛೀಮಾರಿ ಸಿಗುತ್ತಿದೆ. ಗಾಂಧೀಜಿಯನ್ನು ಕೊಂದವನೇ ಮಹಾತ್ಮ ಎಂಬಷ್ಟರ ಮಟ್ಟಿಗೆ ಯುವಜನರ ಮನಸ್ಸನ್ನು ಕೆಡಿಸುವ ಯತ್ನ ನಡೆಯುತ್ತಿದೆ.
ಏಐ ಬಳಸಿಕೊಂಡು ನಮ್ಮಲ್ಲಿನ ಕಾಮ, ಕ್ರೋಧ, ಲೋಭ, ಮದ, ಮತ್ಸರ ಎಲ್ಲವನ್ನೂ ಕೆಣಕಿ ವಿಕೃತ ಸಮಾಜವೊಂದನ್ನು ರೂಪಿಸುವ ಯತ್ನ ನಡೆಯುತ್ತಿದೆ. ಕೆಟ್ಟದ್ದನ್ನೇ ನೋಡುವ ಅಭಿರುಚಿ ನಿಮ್ಮದಾಗಿದ್ದರೆ ಮತ್ತೆ ಮತ್ತೆ ಅದನ್ನೇ ತೋರಿಸುವಂಥ ಅಲ್ಗೊರಿದಂ ರೂಪುಗೊಂಡಿದೆ. ಅದರ ಹಿಂದೆ ಕರಾಳ ವ್ಯಾಪಾರೀ ಮನಸ್ಸು ಅಡಗಿದೆ. ಅಲ್ಲಿ ಸತ್ಯಕ್ಕೆ ಬೆಲೆಯಿಲ್ಲ. ವೈಯಕ್ತಿಕ ಖಾಸಗಿ ಬದುಕಿಗೆ ಬೆಲೆಯಿಲ್ಲ. ಸ್ವಾಭಿಮಾನಕ್ಕೆ ಬೆಲೆಯಿಲ್ಲ; ಸಮಾನತೆಗೆ ಬೆಲೆಯಿಲ್ಲ. ಮಾನವ ಕೌಶಲಕ್ಕೆ ಬೆಲೆಯಿಲ್ಲ; ನೈತಿಕತೆಗೂ ಬೆಲೆಯಿಲ್ಲ, ಅಹಿಂಸೆಗೂ ಬೆಲೆಯಿಲ್ಲ.
ಈ ಹಿನ್ನೆಲೆಯಲ್ಲಿ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಇವಕ್ಕೆಲ್ಲ ಸ್ಥಾನ ಎಲ್ಲುಳಿದಿದೆ? .
ʼಕೆಟ್ಟದ್ದನ್ನು ನೋಡಲಾರೆ, ಕೇಳಲಾರೆ, ಮಾತಾಡಲಾರೆʼ ಎಂಬ ಗಾಂಧೀಜಿಯ ಮೂರು ಮಂಗಗಳ ಸಾಲಿಗೆ ನಾಲ್ಕನೆಯ ಒಂದು ಮಂಗವನ್ನೂ ಸೇರಿಸಬೇಕಾಗಿದೆ. ಅದು ತಲೆತಗ್ಗಿಸಿ ಮೊಬೈಲನ್ನು ಸ್ವೈಪ್ ಮಾಡುತ್ತಿರುವ ಮಂಗ.
ಶುಚಿತ್ವಕ್ಕೆ ಅಷ್ಟೊಂದು ಮಹತ್ವ ಕೊಟ್ಟ ಗಾಂಧೀಜಿಯವರ ನಾಡಿನಲ್ಲಿ ಬಹುತೇಕ ಎಲ್ಲ ನದಿಗಳೂ ಕೆರೆಗಳೂ ಕೊಳಕಿನ ಮಡುಗಳಾಗಿವೆ. ಅಂತಾರಾಷ್ಟ್ರಿಯ ಪರಿಸರ ಪ್ರಜ್ಞೆಯ ಶ್ರೇಯಾಂಕ ಪಡೆದ 180 ದೇಶಗಳಲ್ಲಿ ನಮ್ಮದು ಅತ್ಯಂತ ಕೆಳಸ್ತರದ 176ನೇ ರಾಷ್ಟ್ರ ಎನಿಸಿದೆ.
ಸರಳ ಬದುಕಿನ ಬಗ್ಗೆ ಗಾಂಧೀಜಿ ಹೇಳಿದ್ದರು. ಇಂದು ಸರಳತೆ ಎಂಬುದೇ ಹಳೇ ಫ್ಯಾಶನ್ ಆಗಿದೆ. ʻಇಎಮ್ ಐ ಕಟ್ಟಿ, ಮಜಾ ಮಾಡಿʼ ಎಂಬುದೇ ಕಾರ್ಪೊರೇಟ್ ತಜ್ಞರ ಮಂತ್ರವಾಗಿದೆ.
ಯಂತ್ರಗಳ ದಾಸ್ಯತ್ವ ಸಲ್ಲದೆಂದು ಗಾಂಧೀಜಿ ಹೇಳಿದ್ದರು. ಸಾವಿರ ಜನರ ಕೆಲಸಗಳನ್ನು ತಾನೊಬ್ಬನೇ ಮಾಡುವ ಯಂತ್ರದ ಬದಲು ಸಾವಿರ ಕೈಗಳಿಗೆ ಉದ್ಯೋಗ ಕೊಡುವ ವ್ಯವಸ್ಥೆ ಬರಬೇಕಿದೆ ಎಂದಿದ್ದರು. ಆದರೆ ನಾವಿಂದು ಚಾಲಕರಿಲ್ಲದೆ ಓಡುವ ಮೆಟ್ರೋ ರೇಲ್ವೆ ಎಂಜಿನ್ನುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನೆಲ ಒರೆಸುವ ಯಂತ್ರಗಳ ಮಾರಾಟದ ಭರಾಟೆ ಜೋರಾಗಿದೆ.
ಸ್ವಾವಲಂಬನೆಯ ಪಾಠ ಹೇಳಿದ್ದರು ಗಾಂಧೀಜಿ. ಆದರೆ ನಮ್ಮ ಮಕ್ಕಳು ಸಣ್ಣಪುಟ್ಟ ನಿಬಂಧ ಬರೆಯಲಿಕ್ಕೂ ಗಣಿತದ ಹೋಮ್ ವರ್ಕ್ ಮಾಡಲಿಕ್ಕೂ ಚಾಟ್‌ಜಿಪಿಟಿ ನೆರವು ಪಡೆಯುತ್ತಿದ್ದಾರೆ. ಅಡುಗೆ ಮಾಡುವಂತ ಮನೆಕೆಲಸಗಳಿಗೂ ಅಸ್ಸಾಂ, ಝಾರ್ಖಂಡ್, ಬಿಹಾರ್‌ಗಳಿಂದ ಬರುವವರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ.
ಗ್ರಾಮಗಳಲ್ಲೇ ಭಾರತದ ಭವಿಷ್ಯ ಅಡಗಿದೆ ಎಂದು ಗಾಂಧೀಜಿ ಹೇಳಿದ್ದರು. ಆದರೆ ನಗರಗಳೇ ಅಭಿವೃದ್ಧಿಯ ಎಂಜಿನ್‌ಗಳೆನಿಸಿವೆ. ಇಂದು ದೇಶದ ಎಲ್ಲ ಕಡೆ ಹಳ್ಳಿಗಳನ್ನು ಖಾಲಿ ಮಾಡಿಸುವ ತಂತ್ರಗಳೇ ಕಾಣುತ್ತಿವೆ. ಮೈಸೂರು-ಬೆಂಗಳೂರಿನ ಮಧ್ಯೆ ನಿರ್ಮಾಣವಾದ ಎಕ್ಸ್‌ಪ್ರೆಸ್ ಹೆದ್ದಾರಿಯ ಕಾರಣದಿಂದಾಗಿ ನಡುವೆ ಸಿಗುತ್ತಿದ್ದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ಪಟ್ಟಣಗಳಲ್ಲಿ ನೂರಿನ್ನೂರು ಕುಟುಂಬಗಳು, ಚಿಕ್ಕಪುಟ್ಟ ವಹಿವಾಟು ನಡೆಸುತ್ತಿದ್ದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ.
ಮಹಾ ತೆರೆಯೊಂದು ಸಮುದ್ರದಲ್ಲಿ ಎದ್ದಾಗ ಒಂದೋ ಆ ತೆರೆಯ ಮೇಲೆ ಸವಾರಿ ಮಾಡಿ ದೂರದವರೆಗೆ ಪಯಣಿಸಿ ಬಚಾವಾಗಬಹುದು. ಅಥವಾ ತೆರೆಯ ಅಡಿಗೆ ಸಿಲುಕಿ ಅಪ್ಪಚ್ಚಿ ಆಗಬೇಕು. ಈಗ ಒಂದಲ್ಲ, ಎರಡಲ್ಲ, ಮೂರು ತೆರೆಗಳು ಬರುತ್ತಿವೆ.
ಏಐ ತೆರೆಯ ಅಬ್ಬರದಿಂದಾಗಿ ಡಾಕ್ಟರು, ವಕೀಲರು, ಎಂಜಿನಿಯರುಗಳು, ತೆರಿಗೆತಜ್ಞರು, ರೇಡಿಯಾಲಜಿಸ್ಟ್‌ಗಳು, ಆಹಾರ ತಜ್ಞರು, ಔಷಧ ತಯಾರಕರು, ಶಿಕ್ಷಕರು, ಕಲಾವಿದರು, ಕತೆ-ಕಾದಂಬರಿ ಸಾಹಿತಿಗಳು, ಚಲನಚಿತ್ರ ತಯಾರಕರು ಕೆಲಸ ಕಳೆದುಕೊಳ್ಳುತ್ತಾರೆ. ನಿರುಪಯೋಗಿ ಸಮಾಜವೊಂದು ಸೃಷ್ಟಿಯಾಗುತ್ತದೆ.
ಪ್ರಾಯಶಃ ಆಗ ನಾವೆಲ್ಲ ಕೊನೆಯ ಆಸರೆಯಾಗಿ, ಹಳ್ಳಿಗೆ ಹಿಂದಿರುಗಬಹುದು. ತಾಪಮಾನ ಏರಿಕೆ ಮತ್ತು ಅಭಿವೃದ್ಧಿಯ ಝಳವೆಂಬ ಇನ್ನೆರಡು ಅಲೆಗಳಿಂದ ತಪ್ಪಿಸಿಕೊಳ್ಳುವ ತಾಣ ಅದೊಂದೇ ಆಗಬಹುದು. ಆ
ಗಾಂಧೀಜಿ ಹೇಳಿದ ಸರಳ, ಸ್ವಾವಲಂಬನೆಯ ಗ್ರಾಮಸ್ವರಾಜ್ಯ, (ಮರುಬಳಕೆಯ) ವರ್ತುಲ ಆರ್ಥಿಕತೆ, ಸುಸ್ಥಿರ ಅಭಿವೃದ್ಧಿ, ಸಕಲ ಧರ್ಮಗಳನ್ನು ಆದರಿಸುವ ಸಮಸಮಾಜದ ನಿರ್ಮಾಣಕ್ಕೆ ಅದು ದಾರಿ ಮಾಡಿಕೊಡಬಹದು.
ಗಾಂಧಿಯನ್ನು ಯಾರೆಷ್ಟೇ ಬಾರಿ ಕೊಂದರೂ ಅವರು ಮತ್ತೆ ಮತ್ತೆ ನಮ್ಮೆದುರು ಬರುತ್ತಿರುತ್ತಾರೆ. ಪುಕ್ಕಟೆ ಅಲ್ಲ, ಐನ್‌ಸ್ಟೀನ್ ಹೇಳಿದ್ದು: ʻಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ಜೀವಂತ ಓಡಾಡಿದ್ದ ಎಂಬುದನ್ನು ನಂಬಲು ಮುಂದಿನ ಪೀಳಿಗೆಗೆ ಕಷ್ಟವಾಗಬಹದುʼ ಎಂದು.
ಕಷ್ಟ ಹೌದು. ಆದರೆ ಕಷ್ಟ ಬಂದಾಗ ಅವರು ಅನಿವಾರ್ಯವೂ ಹೌದು.
*
[ಚಿತ್ರದಲ್ಲಿ ಎಡಗಡೆ ನಿಂತವರು ʻಹತ್ತು ರೂಪಾಯಿ ಡಾಕ್ಟರ್ʼ ಎಂದೇ ಶ್ರೀರಂಗಪಟ್ಟಣದಲ್ಲಿ ಹೆಸರುಮಾತಾಗಿರುವ ಗಾಂಧೀವಾದಿ ಡಾ. ಸುಜಯ್ ಕುಮಾರ್, ಎಂಬಿಬಿಎಸ್.] .
ವಿ.ಸೂ. ಅವಾಚ್ಯ ಪದಗಳಿಂದ ಟ್ರೋಲ್ ಮಾಡುವವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
ನಾಗೇಶ್ ಹೆಗಡೆ
