
- ಉ.ಕ. ಕಾಂಗ್ರೆಸ್ ಅಭ್ಯರ್ಥಿಯ ವೇಗ ತಡೆಯಲು ರೆಸಾರ್ಟ್ ರಾಜಕಾರಣದ ಮೊರೆ ಹೋದ ಸುನಿಲ್ ಹೆಗಡೆ ಮತ್ತು ಸಚಿವ ಹೆಬ್ಬಾರ್
- ಗಣಪತಿ ಉಳ್ವೇಕರ್ ಪರವಾಗಿ ಹಣ-ಜನ ಬಲ ಕ್ರೋಢೀಕರಿಸುತ್ತಿರುವ ಆಡಳಿತಾರೂಢ ಪಕ್ಷದ ಪ್ರಮುಖರು.
- ಬಂಡಾಯ, ನಾಯಕರ ಪ್ರತಿಷ್ಠೆ ಬಿ.ಜೆ.ಪಿ.ಗೆ ಮಾರಕವಾಗುವ ಸಾಧ್ಯತೆ.
- ಪುಡಿ ನಾಯಕರ ಕಡೆಗಣನೆ, ತಳಮಟ್ಟದ ಪರಿಣಾಮಕಾರಿ ಕೆಲಸವಿಲ್ಲದೆ ಭೀಮಣ್ಣರಿಗೆ ಹಿನ್ನಡೆಯಾಗುವ ಡೌಟ್!
- ಎರಡೂ ಕಡೆ ಕೈಒಡ್ಡಿ ಹಣ ಮಾಡಿದ ಮತದಾರರು, ಹೆಚ್ಚಿನ ಹಣಕೊಟ್ಟವರಿಗೆ ಮೊದಲಪ್ರಾಸಸ್ಯದ ಮತ ನೀಡುವ ಬಗ್ಗೆ ಅನುಮಾನ!
ರಾಜ್ಯದ ೨೫ ಕ್ಷೇತ್ರಗಳಿಂದ ವಿಧಾನಪರಿಷತ್ ಗೆ ಡಿ ೧೦ ರಂದು ನಡೆಯಲಿರುವ ಚುನಾವಣೆಗೆ ಮತದಾನ ಮಾಡಲು ಸಜ್ಜಾಗಿರುವ ಸ್ಥಳೀಯ ಸಂಸ್ಥೆಗಳ ಮತದಾರರು ಇಂದೇ ಗರಿಗರಿ ನೋಟು ಎಣಿಸಿದ್ದಾರೆ ಎನ್ನುವ ಮಾಹಿತಿಗಳಿವೆ.
ಮೇಲ್ಮನೆ ಎನ್ನಲಾಗುವ ಚಿಂತಕರ ಚಾವಡಿ ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳಿಗೆ ಪ್ರತಿಷ್ಠೆಯಾಗಲು ಹಲವು ಕಾರಣಗಳಿವೆ.
ಆಡಳಿತಾರೂಢ ಬಿ.ಜೆ.ಪಿ. ಗೆ ರಾಜ್ಯದ ಮೇಲ್ಮನೆಯಲ್ಲಿ ಈಗಲೂ ಬಹುಮತವಿಲ್ಲ. ಈ ವರೆಗೆ ಬಹುಮತ ಹೊಂದಿದ್ದ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಒಂದಂಕಿ ದಾಟಿ ಗೆಲುವು ಸಾಧಿಸದಿದ್ದರೆ ವಿ.ಪ. ನಲ್ಲಿ ಕಾಂಗ್ರೆಸ್ ಬಹುಮತ ಕುಸಿಯಲಿದೆ.
ಕಾಂಗ್ರೆಸ್ ಬಹುಮತ ಉಳಿಸಿಕೊಂಡು ಮತ್ತೆ ಆರು ವರ್ಷ ಮುಂದುವರಿಯಲು ಕಾಂಗ್ರೆಸ್ ಗೆ ಹೆಚ್ಚಿನ ಸಂಖ್ಯೆಯ ಗೆಲುವು ಅನಿವಾರ್ಯ, ಹಾಗೆಯೇ ಬಿ.ಜೆ.ಪಿ.ಗೆ ತನ್ನ ಅಧಿಕಾರಾವಧಿಯಲ್ಲಿ ಬಹುಮತ ಪಡೆಯದಿದ್ದರೆ ಅವಮಾನ ಇಂಥ ಸಂದಿಗ್ಧ ಸ್ಥಿತಿಯಲ್ಲಿ ಜೆ.ಡಿ.ಎಸ್. ಮತ್ತು ಪಕ್ಷೇತರರು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲದ ಸ್ಥಿತಿ.
ಈ ವಾಸ್ತವದ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ವಿ.ಪ. ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.
ಬೆಳಗಾವಿ ಸೇರಿದಂತೆ ಕಲ್ಯಾಣಕರ್ನಾಟಕದ ಹಲವೆಡೆ ಕಾಂಗ್ರೆಸ್, ಬಿ.ಜೆ.ಪಿ. ನಡುವೆ ತುರುಸಿನ ಸ್ಪರ್ಧೆಯಾದರೂ ನಾಯಕರ ಪ್ರತಿಷ್ಠೆಯ ಕಾದಾಟದಲ್ಲಿ ಕೆಲವೆಡೆ ಪಕ್ಷೇತರರು ಜಯ ಗಳಿಸಿದರೂ ಆಶ್ಚರ್ಯವಿಲ್ಲ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ.ಗಳು ಸ್ಫರ್ಧೆ ನೀಡಿವೆ. ಈ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳು, ಜೆ.ಡಿ.ಎಸ್. ಮತ್ತು ಬಿ.ಜೆ.ಪಿ.ಗೆ ಸರಿಸಮಾನ ಸ್ಥಾನಗಳು ದೊರೆಯಬಹುದು. ಕರಾವಳಿಯಲ್ಲಿ ಬಿ.ಜೆ.ಪಿ.ಗೆ ಅವಕಾಶವಿದ್ದರೂ ಕಾಂಗ್ರೆಸ್ ಸ್ಫರ್ಧೆ ಒಡ್ಡಲಿದೆ.
ಉತ್ತರ ಕನ್ನಡ- ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳಿಲ್ಲದೆ ಎರಡ್ಮೂರು ನಾಮಕಾವಸ್ಥೆಯ ಪಕ್ಷೇತರರ ನಡುವೆ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಗೆ ನೇರ ಹಣಾಹಣಿ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿದ್ದು ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್. ಮುಖಂಡರು, ಮತದಾರರ ಸಂಪರ್ಕದಲ್ಲಿದ್ದವರು. ಭೀಮಣ್ಣ ನಾಯ್ಕರ ಪರವಾಗಿ ಮತ ಯಾಚಿಸಿರುವ ಮಧು ಬಂಗಾರಪ್ಪ, ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ ಬಿ.ಜೆ.ಪಿ. ಸೋಲಿಸುವ ಹೋರಾಟ ಮಾಡಿದ್ದಾರೆ.
ಜನತಾದಳ, ಕಾಂಗ್ರೆಸ್, ಬಿ.ಜೆ.ಪಿ. ಕಾರ್ಯಕರ್ತರ ಸಂಪರ್ಕ ಇಟ್ಟುಕೊಂಡ ಮಧುಬಂಗಾರಪ್ಪ ಭೀಮಣ್ಣ ಪರವಾಗಿ ಅವಿರತ ಹೋರಾಟ ಮಾಡಿದ್ದಾರೆ.
ಭೀಮಣ್ಣ ನಾಯ್ಕರಿಗೆ ಕಾಂಗ್ರೆಸ್ ಪಕ್ಷ, ನಾಯಕರ ಬೆಂಬಲ, ಬಂಗಾರಪ್ಪ ನಾಮಬಲ ಅವರ ದೀವರ ಜಾತಿ ಹಿನ್ನೆಲೆಗಳ ಪೂರಕ ಅಂಶಗಳಿವೆ. ಹಣಕಾಸಿನಲ್ಲೂ ಪ್ರಬಲರಾಗಿರುವ ಭೀಮಣ್ಣ ಮತದಾರರ ವೈಯಕ್ತಿಕ ಸಂಪರ್ಕದ ವಿಚಾರದಲ್ಲಿ ಹಿಂದಿದ್ದಾರೆ ಎನ್ನುವ ವಾಸ್ತವ ಒಂದನ್ನು ಹೊರತು ಪಡಿಸಿ ಭೀಮಣ್ಣ ತಮ್ಮ ಗೆಲುವಿಗೆ ಬೇಕಾದ ಹೋರಾಟದಲ್ಲಿ ರಾಜಿಯಾಗಿಲ್ಲ ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.

ಉತ್ತರ ಕನ್ನಡ ವಿ.ಪ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ಎದುರಾಳಿಯಾಗಿರುವ ಬಿ.ಜೆ.ಪಿ.ಯ ಗಣಪತಿ ಉಳ್ವೇಕರ್ ಸೌಮ್ಯ ಸಜ್ಜನ, ಕಳೆದ ಬಾರಿ ೧೦೦೫ ಮತಗಳಿಂದ ಪರಾಜಿತರಾಗಿದ್ದ ಗಣಪತಿ ಸಂಸದ ಅನಂತಕುಮಾರ್ ಹೆಗಡೆ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೆಚ್ಚಿನ ಅಭ್ಯರ್ಥಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ನಾಲ್ಕು ಶಾಸಕರು ಹಾಗೂ ಪಕ್ಷನಿಷ್ಠೆಯ ಮತದಾರರನ್ನು ಬಿಟ್ಟರೆ ಗಣಪತಿ ಉಳ್ವೇಕರ್ ರಿಗೆ ಇತರ ಪೂರಕ ಅಂಶಗಳಿಲ್ಲ.
ಬಿ.ಜೆ.ಪಿ. ಮತ್ತು ಸಂಘದ ಕಾರ್ಯಕರ್ತರ ಶ್ರಮದ ನಡುವೆ ಬಿ.ಜೆ.ಪಿ.ಯ ಬಣಗಳ ರಾಜಕಾರಣ ಅಮಾಯಕ ಗಣಪತಿ ಉಳ್ವೇಕರ್ ರಿಗೆ ಮಾರಕವಾಗುವ ಅಂಶ ಹೊರತು ಪಡಿಸಿದರೆ ಹಳಿಯಾಳದ ಸುನೀಲ್ ಹೆಗಡೆಯವರ ರೆಸಾರ್ಟ್ ರಾಜಕಾರಣ, ರೆಸಾರ್ಟ್ ರಾಜಕಾರಣದ ಜಟ್ಟಿ ಶಿವರಾಮ ಹೆಬ್ಬಾರ್ ಪ್ರಯತ್ನ ಗಣಪತಿ ಉಳ್ವೇಕರ್ ರಿಗೆ ನೆರವಾಗಬಲ್ಲವು. ಬಿ.ಜೆ.ಪಿ ಪಕ್ಷದ ಧನಬಲ, ಸಂಘಟನೆ, ಶಿಸ್ತಿನ ಫಾಲೋ ಅಪ್ ಗಳಿಗೆ ಸೆಡ್ಡು ಹೊಡೆದಿರುವ ಭೀ ಮಣ್ಣ ಗೆಲ್ಲುವ ಕುದುರೆ ಎನ್ನಲಾಗುತ್ತಿದೆಯಾದರೂ ಕಾಂಗ್ರೆಸ್ ಪುಡಿ ಲೀಡರ್ ಗಳ ಮುನಿಸು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಭೀಮಣ್ಣರಿಗೆ ಮಾರಕವಾದಂತೆ ಈ ಬಾರಿ ಕೂಡಾ ಕೆಲಸ ಮಾಡಿದೆಯಾ ಎನ್ನುವ ಅನುಮಾನ ಹಲವರಲ್ಲಿದೆಯಂತೆ!
ಗಣಪತಿ ಉಳ್ವೇಕರ್ ಆಡಳಿತ ಪಕ್ಷದ ಸಾಮರ್ಥ್ಯ ನಂಬಿ ಗೆಲುವಿನ ನಿರೀಕ್ಷೆ ಮಾಡುತಿದ್ದಾರೆ. ಭೀಮಣ್ಣ ನಾಯ್ಕ ತನ್ನ ಮಿತಿಗಳ ನಡುವೆ ನಾಯಕರು,ಮತದಾರರ ಹೆಗಲ ಮೇಲೆ ಕೋವಿ ಇಟ್ಟು ಆಡಳಿತಾರೂಢ ಬಿ.ಜೆ.ಪಿ.ಯ ಸೊಕ್ಕು ಮುರಿಯಲು ಟೊಂಕ ಕಟ್ಟಿದ್ದಾರೆ. ೨೦೦ ರಿಂದ ನಾಲ್ಕು ನೂರು ಮತಗಳ ಸಾಮಾನ್ಯ ಅಂತರದಿಂದ ಭೀಮಣ್ಣ ಗೆಲ್ಲಬಲ್ಲರು. ಈ ಲೆಕ್ಕಾಚಾರ ತಪ್ಪಿದರೆ ನೂರಾರು ಮತಗಳ ಅಲ್ಪ ಅಂತರದಿಂದ ಬಿ.ಜೆ.ಪಿ. ಗೆದ್ದರೂ ಆಶ್ಚರ್ಯವಿಲ್ಲ ಎನ್ನುವುದು ಜಿಲ್ಲೆಯ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸಲಿದೆ ಎನ್ನುವುದು ಭವಿಷ್ಯದ ಸಾಧ್ಯತೆ. ಬಿ.ಜೆ.ಪಿ. ಕಾಂಗ್ರೆಸ್ ಯಾರೇ ಗೆದ್ದರೂ ಉತ್ತರ ಕನ್ನಡಕ್ಕೆ ಒಬ್ಬ ಸಜ್ಜನ,ಸರಳ, ಸಂಪನ್ನ ಅಣ್ಣ ದೊರೆಯಲಿರುವುದು ಉತ್ತರ ಕನ್ನಡ ಜಿಲ್ಲೆಯ ಭಾಗ್ಯ.
