

ಕುವೆಂಪು ವಿ. ವಿ ಯಲ್ಲಿ ಇಪ್ಪತ್ತು ವರ್ಷದ ಹಿಂದೆ ಎಂ ಎ ಓದಲು ಹೋದಾಗ ನಮ್ಮ ಒಳಗೆ ಇದ್ದ ಪರಕೀಯ ಒಂಟಿತನ ಭಾವ ವನ್ನ ಮೀರಲು ಕಾರಣ ಆಗಿದ್ದು ತೀರ್ಥಹಳ್ಳಿಯ ಹಳ್ಳಿ ಬಿದರಗೊಡಿನ ನಾಗೇಶ್ ರವರು. ನಮಗಿಂತ ಸೀನಿಯರ್ ಆಗಿದ್ದ ಅವರು ಎಂ ಎ ಮುಗಿಸಿ ಅಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡು ಪುಟ್ಟ ರೂಮಿನಿಂದ ಭದ್ರಾವತಿ ಗೆ ಕನ್ನಡ ಅಥಿತಿ ಉಪನ್ಯಾಸಕ ಕೆಲಸಕ್ಕೆ ಹೋಗುತ್ತಿದ್ದರು.

ಅವರು ರಾಜೇಂದ್ರ ಜತೆಯಾಗಿ ಹಾಡುತ್ತಾ ಇದ್ದ ಭಾವಗೀತೆ ಆಗ ಯುನಿವರ್ಸಿಟಿಯಲ್ಲಿ ಗುಂಗು ಹಚ್ಚುತ್ತಿತ್ತು. ಯಬಡ ತಬಡ ಇದ್ದ ನನಗೆ ಪರಮೇಶಿ ಗೆ ಬೈದು ಬುದ್ದಿ ಹೇಳುತ್ತಾ ಅಪಾರ ಪ್ರೀತಿ ಮತ್ತು ಕಾಳಜಿ ತೋರುತ್ತಾ ಹಲವು ಸಾಮಾಜಿಕ ರಾಜಕೀಯ ವಿಚಾರವನ್ನ ಅರಿವಿಗೆ ತರುತ್ತಾ ಇದ್ದರು. ನಮ್ಮ ಪ್ರತಿಭೆ ಬಗ್ಗೆ ಬಹಳ ಮೆಚ್ಚುಗೆ ಕೊಟ್ಟವರು ಅವರು. ನೀವು ಏನೋ ಮಾಡ್ತೀರಿ ಕಣ್ರೋ ಅನ್ನುವ ಮಾತು ಆಗಾಗ ನೆನಪಿಗೆ ಬರುತ್ತದೆ ಈಗಲೂ.
ಇದೇ ಕಾರಣ ಅವರ ಹಳ್ಳಿ ಬಿದರಗೋಡು ಮನೆಗೆ ಹೋಗಿದ್ದೆ. ಅಲ್ಲಿನ ಆರ್ಥಿಕ ಸಾಮಾಜಿಕ ಚಿತ್ರಣಗಳನ್ನ ನಾಗೇಶ್ ಮತ್ತೆ ಕಟ್ಟಿ ಕೊಟ್ಟಿದ್ದರು. ಓದು ಅರಿವು ಆಗುವ ಬಗ್ಗೆ ಮಾತಾಡಿದ್ದರು. ಆ ಮನೆಯಲ್ಲಿ ಅವರ ಅಪ್ಪಯ್ಯ ನನ್ನ ಅಪ್ಪಯ್ಯ ನ ಪಾತ್ರವೇ ಆಗಿದ್ದರು. ಖಚಿತ ಮಾತು ನಿಲುವು ದೃಷ್ಟಿ ಎಲ್ಲವೂ. ಅಪ್ಪನೊಬ್ಬ ಮಗನ ಮೇಲೆ ಬೀರುವ ಪ್ರಭಾವ ನಾಗೇಶ್ ಮೊದಲು ನೋಡಿ ಆಮೇಲೆ ಅವರ ತಂದೆ ಭೇಟಿ ಮಾಡಿದಾಗ ಆಗಿತ್ತು.
ಕಾಲ ಮುಂದಕ್ಕೆ ಸಾಗಿ ಬಂತು
ನಾಗೇಶ್ ಲಂಕೇಶ್ ರ ಸಣ್ಣ ಕತೆ ಕಾದಂಬರಿ ಮೇಲೆ ಡಾಕ್ಟರೇಟ್ ಪಡೆದರು. ಪಿಯು ಕಾಲೇಜ್ ಉಪನ್ಯಾಸಕರಾದರು. ಈಗ ಶೆಟ್ಟಿ ಹಳ್ಳಿಯಲ್ಲಿ ವಿದ್ಯಾರ್ಥಿ ನೆಚ್ಚಿನ ಮೇಸ್ಟ್ರು ಆಗಿದ್ದಾರೆ. ಅವರ ಹೆಂಡತಿ ಪೋಲಿಸ್ ಹುದ್ದೆಯಲ್ಲಿದ್ದಾರೆ.
ಬಿದರಗೋಡಿನ ಅವರ ಮನೆಯಿಂದ ಈಗಷ್ಟೇ ಈ ಚಿತ್ರಗಳು ಬಂದವು. ಕುವೆಂಪು ನೆಲದ ಹಳ್ಳಿಯ ಮನೆಯಲ್ಲಿ ಗಣಪ ಗಾಂಧಿ ಜತೆ ಬಂದಿದ್ದಾನೆ. ವಿಶೇಷ ಎಂದರೆ ಗಣಪನನ್ನು ಅವರ ಮನೆಯ ಮಕ್ಕಳೆ ಮಾಡಿದ ಮೇಲೆ ಓರೆ ಕೋರೆ ಅವರ ಅಣ್ಣ ತಿದ್ದಿದ್ದಾರೆ. ಮನೆಯ ಗಣಪನನ್ನ ಗಾಂಧಿ ಜತೆಗೆ ಕರೆ ತಂದಿದ್ದಾರೆ. ಗಾಂಧಿಯ ಬದುಕಿನ ಹಲವು ಹಂತದ ಚಿತ್ರಗಳು ಹಿಂಭಾಗದಲ್ಲಿ ದರ್ಶನಕೆ ಸಿಕ್ಕಲಿವೆ.

ಗಾಂಧಿ ಆದರ್ಶಗಳು ಮೌಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಇನ್ನಷ್ಟು ಬಲಗೊಳ್ಳಲೀ ಎನ್ನುವ ಆಶಯದೊಂದಿಗೆ dr ನಾಗೇಶ್ ಜೀ ಮೇಸ್ಟ್ರು ಮನೆಯ ಈ ಹೆಜ್ಜೆ ಮಾದರಿ ಅನ್ನಿಸಿತು.
ಮನೆ ಮನಕೆ ಗಾಂಧಿ
ಗಾಂಧಿ ಇನ್ನಷ್ಟು ಹತ್ತಿರವಾಗಲಿ…..
ಜಿ. ಟಿ ತುಮರಿ.
31-08-2022

