

ಏನೂ ಹುಡುಕುತ್ತ ಓದುತ್ತಾ ಹೋಗುತ್ತಿದ್ದೆ . ಆಗ ಕಣ್ಣಿಗೆ ಬಿದ್ದದ್ದು ಡಾ. ಎಲ್ ಆರ್ ಹೆಗಡೆ ಆವರು ಬರೆದ ದೀರ್ಘ ಪತ್ರ. ಅವರು ನನಗೆ ಪತ್ರ ಬರೆದಿದ್ದಾರೆ ಎನ್ನುವುದೇ ಮರೆತು ಹೋಗಿತ್ತು. ಅದು ೧೦.೪.೧೯೯೦ ರಂದು ಬರೆದ ಪತ್ರ. ನನ್ನ “ಜಾನಪದ ಶೋಧ” ಕೃತಿ ಪ್ರಕಟವಾದ ವರ್ಷ ಆ ಕೃತಿಯನ್ನು ಅವರಿಗೆ ಕಳುಹಿಸಿಕೊಟ್ಟಿದ್ದೆ. ಅದಕ್ಕೆ ಪ್ರತಿಯಾಗಿ ಬರೆದ ಪತ್ರವಿದು.

ಸ್ವಾರಸ್ಯವೆಂದರೆ ಈ ಪತ್ರದಲ್ಲಿ ಅವರು ನಾನು ಕಳುಹಿಸಿದ “ಜಾನಪದ ಶೋಧ” ಪುಸ್ತಕದ ಬಗ್ಗೆ ಬರೆದದ್ದಕ್ಕಿಂತ ಅಧಿಕವಾಗಿ ಇದಕ್ಕಿಂತಲೂ ಮೊದಲು ಪ್ರಕಟವಾದ “ಜಾನಪದ ವ್ಯಾಸಂಗ” ಎನ್ನುವ ಕೃತಿ ಗೆ ಸಂಬಂಧಿಸಿ ಹೆಚ್ಚು ಬರೆದಿದ್ದಾರೆ ! ಆ ಪುಸ್ತಕ ನಾನು ಕಳಿಸಿದ್ದಲ್ಲ!!
ಅವರ ಪುಸ್ತಕಗಳ ರಾಶಿಯಲ್ಲಿ ಸಿಕ್ಕಿಬಿದ್ದ ಈ ಪುಸ್ತಕವನ್ನು ಪ್ರಯಾಸದಿಂದ ಹುಡುಕಿ ತೆಗೆದು ಸಂಪೂರ್ಣವಾಗಿ ಮತ್ತೆ ಆ ಪುಸ್ತಕ ಓದಿ ಬರೆದದ್ದು ನೋಡಿ ನನಗೆ ಆಶ್ಚರ್ಯವೆನಿಸಿತು. ಪುಸ್ತಕ ಹುಡುಕಲು ಪಟ್ಟ ಪ್ರಯಾಸದ ಬಗ್ಗೆಯೂ, ಮತ್ತು ಆ ಜಾನಪದ ವ್ಯಾಸಂಗ ಕೃತಿ ನನ್ನಲ್ಲಿ ಹೇಗೆ ಬಂತು? ಎಲ್ಲಿಂದ ಬಂತು?ಯಾಕೆ ಬಂತು? ಯಾವಾಗ ಬಂತು?ಎನ್ನುವುದರ ಬಗ್ಗೆ ಸಹಜ ತರ್ಕದಿಂದ ಬರೆದಿದ್ದಾರೆ.
ಪತ್ರಿಕೆಗಳಿಗೆ ಪುಸ್ತಕದ ಬಗ್ಗೆ ವಿಮರ್ಶೆ ಬರೆಯುವಾಗ ಹತ್ತು ರೂ ಕೊಡುತ್ತಿದ್ದುದನ್ನು ಸ್ಮರಿಸಿಕೊಂಡಿದ್ದಾರೆ. ಬಹುಶಃ ವಿಮರ್ಶೆಗಾಗಿ ಬಂದ ಪುಸ್ತಕ ಇರಬಹುದು ಎಂದುಕೊಂಡೆ, ಅದೂ ಅಲ್ಲ. ಸಂಕ್ರಮಣ ಪತ್ರಿಕೆ ಯಿಂದ ಬಂದಿರಬೇಕು ಎಂದರೆ ಅದೂ ಅಲ್ಲ. ಅಕಾಡೆಮಿಯಿಂದ ಗ್ರಂಥ ಬಹುಮಾನದ ಪರಿಶೀಲನೆಗಾಗಿ ಬಂದ ಪುಸ್ತಕವೇನೂ ಎಂದುಕೊಂಡರೆ ಅದೂ ಅಲ್ಲ. ಇಷ್ಟೆಲ್ಲಾ ಆ ಪುಸ್ತಕದ ಬಗ್ಗೆ ಚಿಂತಿಸಲು ಕಾರಣ, ಆ ಪುಸ್ತಕದಲ್ಲಿ ವಿಮರ್ಶೆಗಾಗಿ ಎಂಬ ಕೈ ಬರಹವಾಗಲಿ, ಬಹುಮಾನಕ್ಕೆ ಎನ್ನುವ ಬರಹವಾಗಲಿ ಇಲ್ಲದೇ ಹೋದದ್ದು. ಕೊನೆಯಲ್ಲಿ ಬಹುಶಃ ಈ ಪುಸ್ತಕ ನಾನು ಕೊಂಡಿರಬೇಕು ಎನ್ನುವ ವಿಚಾರಕ್ಕೆ ಬರುತ್ತಾರೆ. ಆ ಪುಸ್ತಕ ನಾನವರಿಗೆ ಕಳಿಸಿದ್ದಲ್ಲ ಎನ್ನುವುದು ನಿಜ.
ಡಾ. ಎಲ್ ಆರ್ ಹೆಗಡೆ ಅವರು ನಾಡಿನ ಮಹತ್ವದ ಜಾನಪದ ವಿದ್ವಾಂಸರಲ್ಲಿ ಅವರೂ ಒಬ್ಬರು. ಅವರ ಕೃತಿಗಳನ್ನು ನಾನು ಒಬ್ಬ ಕಟ್ಟಾ ವಿದ್ಯಾರ್ಥಿಯಾಗಿ ಓದಿದ್ದೇನೆ. ನನ್ನ ಜಾನಪದದ ಸಂಶೋಧನೆ ವಿಮರ್ಶೆಯ ಸಂದರ್ಭದಲ್ಲಿ ಇವರ ಕೃತಿಗಳನ್ನು ಬಳಸಿಕೊಂಡಿದ್ದೇನೆ. ಬಹಳ ಅಪರೂಪದ ಉತ್ತರ ಕನ್ನಡ ಜಿಲ್ಲೆಯ ಜಾನಪದವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಬಹುಶಃ ಆ ಜಿಲ್ಲೆಯಲ್ಲಿ ಆದಿವಾಸಿಗಳ ಸಾಹಿತ್ಯಕ್ಕೆ ಬೃಹದಾಕಾರದಲ್ಲಿ ಕೈಹಾಕಿದ ಮೊದಲಿಗರು ಇವರೇ ಎನಿಸುತ್ತದೆ. ಅನಂತರ ಡಾ. ಎನ್ ಆರ್ ನಾಯಕ್ ಅವರು ತೊಡಗಿಸಿಕೊಂಡಿದ್ದಾರೆ .
ಆ ಜಾನಪದ ವ್ಯಾಸಂಗ ಕೃತಿಯ ಬಗ್ಗೆ ಅಷ್ಟೆಲ್ಲಾ ಶೋಧಿಸಲು ಮುಖ್ಯ ಕಾರಣ ನನಗನಿಸಿದ್ದು,ಅವರು ಪುಸ್ತಕಗಳನ್ನು ಪುಕ್ಕಟೆಯಾಗಿ ಪಡೆಯುವದು ಸರಿಯಲ್ಲ ಎಂದು ವಾದಿಸುವವರು. ಅದನ್ನು ಪತ್ರದಲ್ಲೂ ಕಾಣಿಸಿದ್ದಾರೆ. ಪುಸ್ತಕ ಕಾಣಿಕೆಯಾಗಿ ನೀಡುವ ಪರಂಪರೆಯೂ ಸರಿ ಅಲ್ಲ ಎಂದವರು. ಪತ್ರದಲ್ಲಿ ಅವರು ತಮ್ಮ ಶಿಷ್ಯರಾದ ಡಾ. ಎನ್ ಆರ್ ನಾಯಕ್ ಅವರು ಪುಸ್ತಕಗಳನ್ನು ಕೊಡಲು ಬಂದಾಗ, ರಿಯಾಯಿತಿ ಬೆಲೆಯಲ್ಲಿ ಖರೀದಿಸಿದ್ದರ ಬಗ್ಗೆ ದಾಖಲಿಸುತ್ತಾರೆ. ನನ್ನ “ಜಾನಪದ ಶೋಧ” ಪುಸ್ತಕ ಅವರಿಗೆ ಕಳುಹಿಸಿಕೊಟ್ಟದ್ದು ಇಷ್ಟೆಲ್ಲ ವಿಚಾರ ಮಾಡಿ ಶೋಧಿಸಲು ಒತ್ತಾಯಿಸಿದೆ ಮತ್ತು ಒಳಗೊಳಗೇ ಕಸಿವಿಸಿಗೊಂಡಿದ್ದರ ಅಭಿವ್ಯಕ್ತಿ ಎನಿಸಿತು. ಹಾಗೆಯೇ ಜಾನಪದದ ಪುಸ್ತಕಗಳ ಮಾರಾಟದ ವ್ಯವಸ್ಥೆಯ ಬಗ್ಗೆ, ಬೆಲೆ ಬಗ್ಗೆ, ಓದುಗರ ಮನಸ್ಥಿತಿಯ ಬಗ್ಗೆಯೂ ಬರೆದಿದ್ದಾರೆ.
ಈ ಸ್ವರೂಪದ ಲೇಖಕರು ವಿದ್ವಾಂಸರು ಸಿಕ್ಕುವುದು ತುಂಬಾ ಅಪರೂಪ. ನಾನಂತೂ ದೊಡ್ಡ ಲೇಖಕ ಅಲ್ಲದೇ ಹೋದರೂ ಈ ಸಣ್ಣ ಬರಹಗಾರನಿಗೆ ಅವರು ಕೊಟ್ಟ ಮಹತ್ವ ಮತ್ತು ವ್ಯಯಿಸಿದ ಸಮಯ ನೋಡಿ ನನಗೆ ಅಚ್ಚರಿ ಎನಿಸುತ್ತದೆ. ಇಂಥವರೊಂದಿಗೆ ನಾನೂ ಒಡನಾಡಿದ್ದೇನೆ ಎನ್ನುವುದೇ ಹೆಮ್ಮೆಯ ಸಂಗತಿ. -ಅರವಿಂದ ಮಾಲಗತ್ತಿ (kpc)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
