

‘ದೇವರು’ ಎಂಬ ಚಿಂತನೆ ನನ್ನಲ್ಲಿ ಆಗಾಗ ಅಲೆದಾಡುತ್ತಿರುತ್ತದೆ. ನನಗೆ ಈ ವಿಚಾರದಲ್ಲಿ ಅನೇಕ ರೀತಿಯ ಮೌನದ ಹರಿವಿದೆ!

ಎ.ಎನ್. ಮೂರ್ತಿರಾಯರ ‘ದೇವರು’ ಕೃತಿ ನಮ್ಮ ಕಾಲದ ಮಹತ್ವದ ಕೃತಿ ಎಂದು ನನ್ನ ಭಾವನೆ. ‘ದೇವರು’ ಎಂಬ ವಿಚಾರ ಬಂದಾಗ ಕುರುಡರು ಆನೆಯನ್ನು ಮುಟ್ಟಿದಂತೆ ಎಂಬಂತೆ ನಮ್ಮ ವಿಶ್ಲೇಷಣೆಗಳು ಕಾಣಬರುವುದು ತುಂಬಾ ಸಾಮಾನ್ಯವಾದ ಸಂಗತಿ. ದೇವರು ಎಂಬ ಕುರಿತು ನಾವು ಅರಿತದ್ದಕ್ಕಿಂತ ನಾವುಗಳು ಆ ಕುರಿತು ಭಯಪಟ್ಟು ಬದುಕಿದ್ದೇ ಹೆಚ್ಚೇನೊ!
ಪ್ರಾಜ್ಞ ಹಿಂದೂ ಧರ್ಮೀಯ ಮನಗಳಿಗೆ ನಿರೀಶ್ವರವಾದ ಎಂದೂ ಅಸ್ವೀಕೃತವಾಗಿರಲಿಲ್ಲ. ಭಾಗವತದಲ್ಲಿ ಅವತಾರವೆನಿಸಿದ್ದ ಕೃಷ್ಣ ಕೂಡಾ ಬಾಲ್ಯದಲ್ಲಿದ್ದಾಗಲೇ “ಈ ಗೊತ್ತಿಲ್ಲದ ದೇವರುಗಳಿಗೆ ಯಾಕೆ ಪೂಜೆ ಮಾಡುವುದು, ನಮ್ಮನ್ನು ಕಾಯುತ್ತಿರುವ ಗೋವರ್ಧನಗಿರಿಗೆ ಮತ್ತು ನಮಗೆ ಜೀವನಾಧಾರಾವಾಗಿರುವ ಗೋವುಗಳಿಗೆ ಪೂಜಿಸೋಣ” ಎಂಬ ವಿಶಿಷ್ಟ ಪರಂಪರೆಗೆ ನಾಂದಿ ಹಾಡುವುದನ್ನು ಕಾಣಬಹುದು. ಬುದ್ಧ, ಶಂಕರ, ರಾಮಾನುಜ, ಮಧ್ವ, ಬಸವಣ್ಣ, ಮುಂತಾದವರ ಚರಿತ್ರೆಗಳು ಆಯಾ ವರ್ತಮಾನದಲ್ಲಿದ್ದ ಸ್ಥಗಿತ ಧರ್ಮೀಯ ಚಿಂತನೆಗಳನ್ನು ಮೆಟ್ಟಿಯೇ ಹೆಮ್ಮರವಾಗಿ ನಿಂತದ್ದು.
ಇವೆಲ್ಲಾ ಇರಲಿ, ನಮಗೆ ನಮ್ಮ ಕಾಲದಲ್ಲಿದ್ದ ಡಿ.ವಿ.ಜಿ, ಮಾಸ್ತಿ, ಪು.ತಿ.ನ ಮುಂತಾದ ದೈವಿಕ ಚಿಂತನೆಯ ಕುರಿತಾದ ಮಹನೀಯರು ಹೇಗೆ ಮುಖ್ಯವಿದ್ದರೋ ಆ ನಿಟ್ಟಿನಲ್ಲಿ ಮತ್ತೊಂದು ಅಂಚಿನ ಚಿಂತಕರಾಗಿದ್ದ ಎ.ಎನ್. ಮೂರ್ತಿರಾವ್, ಎಚ್. ನರಸಿಂಹಯ್ಯ ಕೂಡಾ ಮುಖ್ಯರಾಗಿದ್ದಾರೆ. ನಮಗೆ ದೇವರಿದ್ದಾನೆ ಎಂಬ ಸ್ಪಷ್ಟತೆ ನೀಡಬಲ್ಲವ ಹೇಗೆ ಶ್ರೇಷ್ಠನಾಗಬಲ್ಲನೋ, ಅಂತೆಯೇ ದೇವರಿಲ್ಲಾ ಎಂಬ ತಮ್ಮ ಅನಿಸಿಕೆಗೆ ಸ್ಪಷ್ಟತೆ ನೀಡಬಲ್ಲವ ಸಹಾ ಶ್ರೇಷ್ಠನಾಗಬಲ್ಲ. ರಾಮಕೃಷ್ಣ ಪರಮಹಂಸರು, ಕೇಶವಚಂದ್ರ ಸೇನನ ನಿರೀಶ್ವರವಾದವನ್ನು ಆಲಿಸಿ ‘ನಿನ್ನ ಪ್ರತಿಯೊಂದೂ ಮಾತಿನಲ್ಲೂ ನನಗೆ ದೇವರೇ ಸ್ಪಷ್ಟವಾಗಿ ಕಾಣುತ್ತಿದ್ದಾನೆ’ ಎಂದು ಹೇಳುವುದು ಸಾಧಾರಣ ಮಾತಲ್ಲ.
ದೇವರಿದ್ದಾನೆ ಮತ್ತು ದೇವರಿಲ್ಲ ಎಂಬ ಎರಡನ್ನೂ ಹೇಳಲಿಕ್ಕೆ ತಪಸ್ಸಿನಂತಹ ಸಾಧನೆ ಮತ್ತು ತಾಕತ್ತು ಬೇಕು. ಇಲ್ಲವೇ ನನಗೆ ತೋಚುವುದು ಹೀಗೆ ಎಂಬ ಸೌಜನ್ಯ ಇರಬೇಕು. ಬರೀ ಬಾಯಿಮಾತಿನ ವ್ಯರ್ಥಪ್ರಲಾಪಗಳು ಸಲ್ಲ. ಈ ವಿಷಯದಲ್ಲಿ ಎ.ಎನ್. ಮೂರ್ತಿರಾಯರಿಗೂ ಇಂದಿನ (ಇಹ ಮತ್ತು ಪರಲೋಕದಲ್ಲಿರುವ) ಹಲವು ಪ್ರಚಾರಪ್ರಿಯ ಮಹನೀಯರಿಗೂ ಬಹುದೊಡ್ಡ ವ್ಯತ್ಯಾಸವಿದೆ.
“ಇವನು ದೇವರನ್ನು ನಂಬದಿದ್ದರೆ ಬಿಡಲಿ; ತನ್ನ ಅಪನಂಬಿಕೆಯನ್ನು ಊರಿಗೆಲ್ಲ ಹಂಚಬೇಕೆ?’ ಎಂಬ ಟೀಕೆಯನ್ನು ಕೇಳಿದ್ದೇನೆ. ನನಗೆ ದೇವರಲ್ಲಿ ನಂಬಿಕೆಯಿಲ್ಲವೆಂಬ ಮಾತು ನನ್ನ ‘ಸಂಜೆಗಣ್ಣಿನ ಹಿನ್ನೋಟ’ದಲ್ಲಿ ಬಂದಿದೆ; ಸ್ನೇಹಿತರು ಪ್ರಶ್ನೆ ಹಾಕಿದಾಗ (ನಾನು ಮುಂದೊಡಗಿಯಲ್ಲ!) ನನ್ನ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದೇನೆ – ಇದೆಲ್ಲ ನಿಜ. ದೇವರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ, ಅವನ ಮಹಿಮೆಯನ್ನು ಹೊಗಳುವ, ಭಾಷಣ ಲೇಖನಗಳು ಸರ್ವಸಾಮಾನ್ಯವಾದ್ದರಿಂದ ಅವು news (ವಿಶೇಷ ಸಮಾಚಾರ) ಆಗುವುದಿಲ್ಲ; ನಂಬಿಕೆ ಇಲ್ಲ ಎನ್ನುವುದು news ಆಗಿ ಪ್ರಚಾರ ಎನ್ನಿಸಿಕೊಳ್ಳುತ್ತದೆ; ಇದು ಸ್ವಾಭಾವಿಕ. ಸಂದರ್ಭ ಬಂದಾಗ ನಾನು ದೇವರ ವಿಷಯದಲ್ಲಿ ನನ್ನ ಅಭಿಪ್ರಾಯ ಹೇಳಿದ್ದೂ ಅಷ್ಟೇ ಸ್ವಾಭಾವಿಕ. ನನಗೆ ಪ್ರಚಾರ ಮಾಡುವ ಚಪಲವೂ ಇಲ್ಲ; ನನ್ನ ನಿಲುವನ್ನು ಬಚ್ಚಿಡುವ ಹಿಂಜರಿಕೆಯೂ ಇಲ್ಲ.” ಇದು ಎ. ಎನ್. ಮೂರ್ತಿರಾಯರ ನೇರ ಮಾತು.
‘‘ದೇವರೊಬ್ಬನಿದ್ದಾನೆಯೇ?’ ಎನ್ನುವ ಮೂಲಭೂತವಾದ ಪ್ರಶ್ನೆಗೆ ಕೈ ಹಾಕಿದ ಮೂರ್ತಿರಾಯರು ಈ ವಿಷಯದಲ್ಲಿ ಪ್ರಾಮಾಣಿಕವಾದ ಅನಿಸಿಕೆ ಮತ್ತು ವಿಶ್ಲೇಷಣೆಯನ್ನು ‘ದೇವರು’ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಮೂರ್ತಿರಾಯರಿಗೆ ಸಂತೋಷ ಮುಖ್ಯ. ಅದೇ ಅವರಿಗೆ ದೇವರು. ಬೇರೆ ಪ್ರತಿರೂಪ ಬೇಕಿಲ್ಲ. ಅವರು ದೇವರ ಮಂತ್ರಗಳನ್ನು ಪಠಿಸುವುದರಲ್ಲಿ ಮತ್ತು ಬೇರೆಯವರ ಸುಶ್ರಾವ್ಯವಾದ ಮಂತ್ರಗಳ ಪಠನೆಯನ್ನು ಆಲಿಸುವುದರಲ್ಲಿ ಅಪಾರ ಸಂತೋಷವನ್ನು ಪಡೆದವರು. ಇಂಥಹ ಸೂಕ್ಷ್ಮವಾದ ವಿಷಯದಲ್ಲಿ ಬಹುಜನರ ಅಭಿಪ್ರಾಯಕ್ಕೆ ವಿರೋಧವಾದ ನಿಲುವನ್ನು ತಳೆದ ‘ದೇವರು’ ಪುಸ್ತಕ ಅಂದು ಹೊರಬಂದ ಅಲ್ಪ ಸಮಯದಲ್ಲೇ ಬಹುಜನಪ್ರಿಯವಾಗಿ ಬಹಳಷ್ಟು ಮರುಮುದ್ರಣಗಳನ್ನು ಕಂಡಿತು. ಈ ಪುಸ್ತಕದ ಬಗ್ಗೆ ಅವರಿಗೆ ಬಂದಿರುವ ಪರವಾದ ಮತ್ತು ಭಿನ್ನಾಭಿಪ್ರಾಯಗಳ ಪತ್ರಗಳನ್ನೆಲ್ಲಾ ಸೇರಿಸಿ ಅಚ್ಚು ಹಾಕಿದರೆ ಒಂದೆರಡು ದೊಡ್ಡ ಸಂಪುಟಗಳೇ ಆದೀತು. ಇಷ್ಟರಮಟ್ಟಿಗೆ ಜನರ ಗಮನವನ್ನು ಸೆಳೆದಿರುವ ಪುಸ್ತಕ ಸಾರಾಂಶ ಅವರ ಮಾತಿನಲ್ಲೇ ಹೇಳುವುದಾದರೆ, “ಮನುಕುಲಕ್ಕೆ, ನನ್ನಂಥ ನಿರೀಶ್ವರವಾದಿಗಳಿಗೂ ಸೇರಿದಂತೆ, ಕರುಣಾರ್ದ್ರ ಹೃದಯನೂ ಪ್ರೆಮಸ್ವರೂಪಿಯೂ ಆದ ದೇವರು ಬೇಕು. ನಾನು ‘ದೇವರು ಇಲ್ಲ’ ಎಂದುಕೊಳ್ಳುವಾಗ ನನ್ನ ಮನಸ್ಸಿನಲ್ಲಿರುವುದು ಸಂತೋಷವಲ್ಲ… ಅದನ್ನು ‘ವಿಷಾದ’ ಎಂದೇ ಕರೆಯಬಹುದೇನೋ!… ಜೀವಕೋಟಿಯ ಎಲ್ಲಾ ಸಂಕಟವನ್ನೂ ಪರಿಹರಿಸಬಲ್ಲ ದೇವರು – ಅಂಥ ದೇವರಿದ್ದರೆ ಯಾರು ‘ಬೇಡ’ ಎನ್ನುತ್ತಾರೆ”
‘ದೇವರು’ ಕೃತಿಗೆ ‘ಪಂಪಪ್ರಶಸ್ತಿ’ ಬಂದಾಗ ದೇವರ ಅಸ್ತಿತ್ವದಲ್ಲಿ ಮತ್ತೆ ಅವರನ್ನು ಪ್ರಶ್ನಿಸಿದಾಗ ಅವರ ವಿಶಾಲಹೃದಯದಿಂದ ಬಂದ ಉತ್ತರ ‘ಈ ಮೂರ್ತಿರಾಯ ಈಗಲಾದರೂ ನನ್ನನ್ನು ನಂಬಲಿ ಎಂದು ದೇವರೇ ಅದನ್ನು ಕೊಡಿಸಿರಬೇಕು’, ಅವರ ದೀರ್ಘವಯಸ್ಸಿಗೆ ಕಾರಣವೇನೆಂದು ಕೇಳಿದರೆ ‘ಬಹುಶಃ ನಾನು ನಂಬದಿರುವ ದೇವರೇ ಕಾರಣ’ ಎಂದು ಅವರ ಅಭಿಪ್ರಾಯ.
‘ದೇವರು’ ಕೃತಿಗೆ ಪ್ರಶಸ್ತಿ ಬಂದದ್ದರ ಬಗ್ಗೆ ಮತ್ತೊಂದು ಸಮಯದಲ್ಲಿ ಅವರು ಹೇಳಿದ್ದ ಮಾತು ನೆನಪಾಗುತ್ತಿದೆ. ನಾನು ದೇವರಿಲ್ಲ ಎಂದು ಬರೆದ ‘ದೇವರು’ ಕೃತಿಗೆ ಪಂಪ ಪ್ರಶಸ್ತಿ ಬಂತು. ಪು.ತಿ.ನ ಅವರು ದೇವರ ಅಸ್ತಿತ್ವವನ್ನು ನಿರೂಪಿಸುವ ‘ಶ್ರೀಹರಿಚರಿತೆ’ಗೆ ಕೂಡಾ ಪಂಪ ಪ್ರಶಸ್ತಿ ಬಂತು. ಒಟ್ಟಿನಲ್ಲಿ ದೇವರಂತೂ ನಿಷ್ಪಕ್ಷಪಾತಿ.

ದೇವರು ಕೃತಿ ಕೆಲವೊಮ್ಮ ಹಾಸ್ಯಪೂರ್ಣವಾಗಿ ಮತ್ತು ಕೆಲವೊಮ್ಮೆ ಗಂಭೀರವಾಗಿ ದೇವರೆಂಬ ವಿಚಾರದ ನಮ್ಮ ನಡವಳಿಕೆಗಳನ್ನು ಅವಲೋಕಿಸಿಕೊಳ್ಳುವಂತೆ ಮಾಡಿ, ಇವರು ಹೇಳುವುದರಲ್ಲೂ ಎಷ್ಟೊಂದು ಸತ್ಯವಿದೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಬಹುಮೌಲ್ಯಯುತ ಕೃತಿ. ನಾವು ನಮ್ಮ ಆವರಣದೊಳಗೆ ಮತ್ತು ಆವರಣದ ಹೊರಕ್ಕೆ ದೇವರನ್ನು ಯಾವ ರೀತಿಯಲ್ಲಿ ಕಂಡುಕೊಳ್ಳಬಹುದೆಂಬುದಕ್ಕೂ ಇದೊಂದು ಅಮೂಲ್ಯ ದಿಕ್ಸೂಚಿ.
(ನಮ್ಮ ಕನ್ನಡ ಸಂಪದ Kannada Sampada ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
