ಪುರಾಣ ಪ್ರಮಾಣಿತ ಪಿತೃಪಕ್ಷ ವೈದಿಕ ಆಚರಣೆಯಲ್ಲವೆ?

ಪಿತೃಪಕ್ಷ, ಆಚರಣೆ ಹೇಗೆ, ಮಹತ್ವವೇನು?

ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ.

Representational image

ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಆ ಐದು ಋಣಗಳೆಂದರೆ, ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣ. ಈ ಐದು ಋಣಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಮಾಡುವ ಪಕ್ರಿಯೆಯನ್ನೇ ಶ್ರಾಧ್ಧಕರ್ಮ ಅಥವಾ ಶ್ರಾದ್ಧ ಇನ್ನುಆಡು ಭಾಷೆಯಲ್ಲಿ ತಿಥಿ ಎನ್ನಲಾಗುತ್ತದೆ.

ಈ ಭೂಮಿಯಲ್ಲಿ ನಮ್ಮ ಜನನಕ್ಕೆ ಕಾರಣೀಭೂತರಾದ ನಮ್ಮ ತಂದೆ ತಾಯಿಯರು ಮತ್ತು ನಮ್ಮ ವಂಶದವರಿಗೆ ಅವರಿಂದ ಪಡೆದ ಸಹಾಯಕ್ಕಾಗಿ ಯಥಾಶಕ್ತಿ ಕೃತಜ್ಞತೆಗಳನ್ನು ಸಲ್ಲಿಸುವ ಮಹಾಕಾರ್ಯವೇ ಶ್ರಾಧ್ಧ. ಹಾಗಾಗಿಯೇ ಇದನ್ನು ಯಜ್ಞವೆಂದೂ ಕರೆಯಲಾಗುತ್ತದೆ.

ತಂದೆ ತಾಯಿಯರು ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಲೆಂದು ಮಾಡುವ ಸಂಸ್ಕಾರಕ್ಕೇ ಶ್ರಾಧ್ಧ ಎನ್ನಲಾಗುತ್ತದೆ. ಈ ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರನ್ನು ಸಂತುಷ್ಟಗೊಳಿಸುವ ಮೂಲಕ ಅವರ ಅತೃಪ್ತವಾಗಿ ಉಳಿದಿದ್ದ ಆಸೆಗಳಿಗೆ ಮುಕ್ತಿಯನ್ನು ಕೊಡಬಹುದಾಗಿದೆ. ಪಿತೃಗಳು ಆತ್ಮಗಳು ಅತೃಪ್ತವಾಗಿಯೇ ಉಳಿದರೆ, ಆ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ಈ ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ತಮ್ಮ ಕುಟುಂಬದವರಿಗೆ ತೊಂದರೆಗಳನ್ನು ನೀಡುವ ಸಂಭವವೂ ಇರುವ ಕಾರಣ, ಶ್ರಧ್ಧೆಯಿಂದ ಶ್ರಾದ್ಧವನ್ನು ಮಾಡುವ ಮೂಲಕ ನಮ್ಮ ಪಿತೃಗಳನ್ನು ಆ ದುಷ್ಟ ಶಕ್ತಿಗಳಿಂದ ವಿಮುಕ್ತಿ ಗೊಳಿಸುವುವ ಮೂಲಕ ನಮ್ಮ ಇಡೀ ಕುಟುಂಬಕ್ಕೆ ನೆಮ್ಮದಿಯನ್ನು ತಂದು ಕೊಡಬಹುದೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.

ಹಾಗಾಗಿ ತಮ್ಮ ಮಾತಾ ಪಿತೃಗಳು ಹಿಂದೂ ಪಂಚಾಗದ ಪ್ರಕಾರ ಮರಣ ಹೊಂದಿದ ತಿಥಿಯ ದಿನದಂದು ಶ್ರಾದ್ಧ ಕಾರ್ಯವನ್ನು ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಎಲ್ಲರಿಗೂ ತಮ್ಮ ಪೋಷಕರು ದೈವಾಧೀನರಾದ ತಿಥಿ ಸರಿಯಾಗಿ ಅರಿವಿಲ್ಲದಿದ್ದ ಪಕ್ಷದಲ್ಲಿ ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ಪಿತೃಪಕ್ಷ ಎಂದು ಕರೆಯಲಾಗುವ ಈ ಹದಿನೈದು ದಿನಗಳಲ್ಲಿ ತಮ್ಮ ಅನುಕೂಲದ ಪ್ರಕಾರ ತಮ್ಮ ಕುಲದ ಎಲ್ಲ ಪಿತೃಗಳೂ ಸೇರಿದಂತೆ ಅಗಲಿದ ಆವರ ಆಪ್ತರು, ಬಂಧು-ಮಿತ್ರರು ಮತ್ತು ಸಾಕುಪ್ರಾಣಿಗಳಿಗೂ ಸಹಾ ತರ್ಪಣ ಕೊಡುವ ಮೂಲಕ ಶ್ರಾದ್ಧವನ್ನು ಮಾಡಬಹುದಾಗಿದೆ. ಆ ಹದಿನೈದು ದಿನಗಳ ಕಾಲ ಪಿತೃಕಾರ್ಯವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಪಿತೃಪಕ್ಷದ ಕಡೆಯ ದಿನವಾದ ಅಮಾವಾಸ್ಯೆಯಂದು ಶ್ರಾದ್ಧ ಮಾಡಲು ಅತ್ಯಂತ ಹೆಚ್ಚು ಯೋಗ್ಯವಾದ ದಿನವಾಗಿದೆ ಈ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತ್ರೀ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.

ನಮ್ಮ ಧರ್ಮದ ನಂಬಿಕೆಯ ಪ್ರಕಾರ ಒಂದು ಕುಟುಂಬದ ಮೂರು ತಲೆಮಾರಿನ ಹಿರಿಯರು/ಪೂರ್ವಜರು/ಪಿತೃಗಳಆತ್ಮವು ಪಿತೃಲೋಕದಲ್ಲಿ ಶಾಶ್ವತ ಸ್ಥಾನವನ್ನು ಇನ್ನೂ ಪಡೆಯಲಾಗದೇ, ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಹಾಗಾಗಿ ಅಂತಹವರಿಗೆ ಸದ್ಗತಿಯನ್ನು ಕೊಡುವ ಮತ್ತು ಅವರಿಗೆ ದೈನಂದಿನ ಭೋಜನಾದಿ (ನಮ್ಮ ಒಂದು ವರ್ಷ ದೇವಲೋಕದಲ್ಲಿ ಒಂದು ದಿನ) ಪ್ರಕ್ರಿಯೆಗಳನ್ನು ನೋಡಿಕೊಳ್ಳುವ ಸಲುವಾಗಿ ಈ ಪಿತೃಪಕ್ಷದಲ್ಲಿ ಪಿಂಡ ಪ್ರಧಾನವನ್ನೋ ಇಲ್ಲವೇ ಎಡೆಯನ್ನು ಇಡುವ ಸಂಪ್ರದಾಯವಿದೆ. ಹಾಗಾಗಿ ಶ್ರಾದ್ಧ ಮಾಡುವಾಗ ಶ್ರಾದ್ಧ ತಂದೆಯದ್ದಾಗಿದ್ದರೆ ಅಪ್ಪ, ತಾತ ಮತ್ತು ಮುತ್ತಾತ, ಇನ್ನೂ ತಾಯಿಯ ಶ್ರಾದ್ಧವಾಗಿದ್ದರೆ, ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯರು ಹೀಗೆ ಮೂರು ತಲೆಮಾರಿನ ಪೂರ್ವಜರಿಗೆ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯವಿದೆ.

ಇನ್ನು ಒಂದು ಪೌರಾಣಿಕ ಕಥೆಯ ಪ್ರಕಾರ, ಪಿತೃಪಕ್ಷದ ಆರಂಭವಾಗುವಾಗ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿ ನಂತರದ ಮುಂದಿನ ರಾಶಿಗೆ ಹೋಗುವ ಮಧ್ಯದ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ ಎಂಬ ನಂಬಿಕೆ ಇದೆ. ಮಹಾಭಾರತದಲ್ಲಿ ದಾನ, ವೀರ, ಶೂರ ಎಂಬ ಪ್ರಖ್ಯಾತಿಯಾಗಿರುವ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದೊಯ್ಯುವಾಗ ಮಾರ್ಗದ ಮಧ್ಯೆ ಆತನಿಗೆ ಹಸಿವಾದಾಗ ಸುತ್ತ ಮುತ್ತಲೂ ಕೇವಲ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳು ಮಾತ್ರವೇ ಇರುತ್ತದೆಯೇ ಹೊರತು ಆವರಿಗೆ ತಿನ್ನಲು ಏನೂ ಸಿಗುವುದಿಲ್ಲ. ತಿನ್ನಲು ಈ ರೀತಿಯಾಗಿ ಏನೂ ಸಿಗದಿರಲು ಕಾರಣವೇನು ಎಂದು ವಿಚಾರಿಸಿದಾಗ, ಕರ್ಣ ತನ್ನ ಜೀವಿತಾವಧಿಯಲ್ಲಿ ಯಥೇಚ್ಛವಾಗಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳನ್ನು ದಾನ ಮಾಡಿದ್ದರೂ ತಮ್ಮ ಪೂರ್ವಜರಿಗೆ ಶ್ರಾದ್ಧ ಮಾಡದೇ ಇದ್ದ ಕಾರಣ ಅವರಿಗೆ ಯಾವುದೇ ಆಹಾರ ಸಿಗದೇ ಇದ್ದ ಕಾರಣಕ್ಕೆ ಈ ರೀತಿಯ ಪರಿಸ್ಥಿತಿ ಉಂಟಾಯಿತು ಎಂಬುದರ ಅರಿವಾಯಿತು. ಹಾಗಾಗಿ ಈ ಲೋಪವನ್ನು ಸರಿಪಡಿಸುವ ಸಲುವಾಗಿ ಈ ಮೊದಲೇ ಹೇಳಿದಂತೆ ತಮ್ಮ ಮೂರು ತಲೆಮಾರಿನ ಪೂರ್ವಜರನ್ನು ಆರಾಧಿಸಿ ಅವರಿಗೆ ಶ್ರದ್ಧೆಯಿಂದ ಶ್ರಾದ್ಧ ಮಾಡುವ ಮೂಲಕ ಅವರಿಗಿಷ್ಟವಾದ ಭೋಜನವನ್ನು ಹಾಕಿಸುವ ಮೂಲಕ ಪಿತೃ ಋಣವನ್ನುಈ ಪಿತೃಪಕ್ಷದಲ್ಲಿ ತೀರಿಸುವ ಸಂಪ್ರದಾಯ ರೂಢಿಗೆ ಬಂದಿದೆ ಎಂದು ನಂಬಿಕೆಯಾಗಿದೆ.

ಇನ್ನು ನಮ್ಮ ಶಾಸ್ತ್ರಗಳ ಪ್ರಕಾರ, ಈ ಪಿತೃ ಪಕ್ಷದ ಸಮಯವನ್ನು ಅಪರಕರ್ಮಗಳಿಗಾಗಿ ಮೀಸಲಾಗಿರಿಸಿರುವ ಕಾರಣ, ಈ ಹದಿನೈದು ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಮತ್ತು ಈ ಅವಧಿಯಲ್ಲಿ ಹೊಸ ವಸ್ತುಗಳನ್ನಾಗಲೀ ಹೊಸ ಕೆಲಸವನ್ನು ಮಾಡುವುದಿಲ್ಲ. ಅದೇ ರೀತಿ ಪಿತಋಣವನ್ನು ತೀರಿಸುವವರು ಮಾಂಸಾಹಾರ ಸೇವಿಸುವರಾಗಿದ್ದಲ್ಲೀ ಈ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸದಿರುವ ಸಂಪ್ರದಾಯವೂ ರೂಢಿಯಲ್ಲಿದೆ. ಇದಕ್ಕೂ ಒಂದು ಹೆಜ್ಜೆ ಮುಂದುವರೆದು, ಶ್ರಾಧ್ಧ ಮಾಡುವ ಕತೃ ಈ ಹದಿನೈದು ದಿನಗಳ ಕಾಲ ಕಾಲಿಗೆ ಚಪ್ಪಲಿಯನ್ನು ಧರಿಸದೇ, ವಪನ ಕ್ರಿಯೆ (ಮುಖ ಕ್ಷೌರ ಮತ್ತು ಕೂದಲು ಕತ್ತರಿಸುವುದು) ಯನ್ನಾಗಲೀ ಅಥವಾ ಉಗುರುಗಳನ್ನೂ ಸಹಾ ಕತ್ತರಿಸಬಾರದು ಎನ್ನುವ ನಿಯಮವಿದೆ.

ಪಿತೃ ಪಕ್ಷದ ಹದಿನೈದು ದಿನಗಳಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಯಾವುದೇ ರೂಪದಲ್ಲಿ ಬರಬಹುದು ಎಂಬ ನಂಬಿಕೆ ಇರುವ ಕಾರಣ, ಈ ಹದಿನೈದು ದಿನಗಳಲ್ಲಿ, ಯಾವುದೇ ಮನುಷ್ಯರು, ಪ್ರಾಣಿಗಳು, ಪಶು ಮತ್ತು ಪಕ್ಷಿಗಳನ್ನು ಅಗೌರವಿಸದೇ, ಅವರುಗಳಿಗೆ ಯಥಾಶಕ್ತಿ ಆಹಾರವನ್ನು ನೀಡಬೇಕು ಎಂದೂ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನೂ ಈ ಪಿತೃ ಪಕ್ಷದಲ್ಲಿ ಪಿತೃಗಳನ್ನು ಸಂತೃಪ್ತ ಪಡಿಸುವ ಸಲುವಾಗಿ ಆಹಾರವನ್ನು ತಯಾರಿಸುವ ಸಲುವಾಗಿ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆಯನ್ನು ಮಾಡದೇ, ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸುವುದು ಉತ್ತಮವಾಗಿರುವುದಲ್ಲದೇ, ಆಹಾರ ತಯಾರಿಸುವಾಗ, ಜೀರಿಗೆ, ಕರೀ ಉಪ್ಪು, ಸೋರೆಕಾಯಿ ಮತ್ತು ಸೌತೆಕಾಯಿಗಳು ನಿಷಿದ್ಧವಾಗಿದೆ.

ಈ ಪಿತೃಪಕ್ಷದಲ್ಲಿ ಶ್ರಾದ್ಧ ಕರ್ಮಗಳನ್ನು ಮನೆಯಲ್ಲಿ ಮಾಡುವುದಕ್ಕಿಂತಲೂ, ಅಪರ ಕರ್ಮಕ್ಕೆಂದೇ ಪ್ರಸಿದ್ಧವಾಗಿರುವ ತೀರ್ಥಕ್ಷೇತ್ರಗಳಾದ ಗಯ, ಪ್ರಯಾಗ, ಬದರಿನಾಥದಲ್ಲಿ ಶ್ರಾದ್ಧ ಮಾಡಿದಲ್ಲಿ ಪೂರ್ವಜರಿಗೆ ಹೆಚ್ಚಿನ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

ಪಕ್ಷಮಾಸದಲ್ಲಿ ವಿಧಿವತ್ತಾಗಿ ಆಚಾರ್ಯ ಮುಖೇನ ಬ್ರಾಹ್ಮಣರು ಮತ್ತು ಬಂಧುಗಳ ಸಮ್ಮುಖದಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ, ಒಬ್ಬ ಬ್ರಾಹ್ಮಣರಿಗೆ ಅವರ ಒಂದು ದಿನಕ್ಕೆ ಅಗತ್ಯವಿರುವ ಅಕ್ಕಿ, ಬೇಳೆ, ಬೆಲ್ಲ, ಹಾಲು, ಮೊಸರು, ತುಪ್ಪಾ ಮತ್ತು ತರಕಾರಿಗಳ ಜೊತೆ ಯಥಾ ಶಕ್ತಿ ದಕ್ಷಿಣೆಯ ಸ್ವಯಂಪಾಕ ನೀಡುವ ಮೂಲಕವೂ ಶ್ರಾದ್ಧವನ್ನು ಮಾಡಬಹುದಾಗಿದೆ.

ಈ ರೀತಿಯಲ್ಲಿ ಸ್ವಯಂ ಪಾಕವನ್ನೂ ನೀಡಲು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ಒಂದು ಹಸುವಿಗೆ ಅಕ್ಕಿ, ಬೆಲ್ಲ ಮತ್ತು ಹಣ್ಣುಗಳನ್ನು ನೀಡುವ ಮೂಲಕವೂ ಪಿತೃಗಳ ಋಣ ಸಂದಾಯ ಮಾಡಬಹುದಾಗಿದೆ.

ಇನ್ನು ಗೋವುಗಳಿಗೆ ಕೊಡುವಷ್ಟೂ ಆರ್ಥಿಕವಾಗಿ ಸಧೃಡರಾಗಿಲ್ಲದಿದ್ದ ಪಕ್ಷದಲ್ಲಿ ಹತ್ತಿರದ ಅರಳೀ ಮರಕ್ಕೆ ಶ್ರದ್ಧೆಯಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ಅರಳೀ ಮರವನ್ನು ತಬ್ಬಿಕೊಂಡು ಭಗವಂತ ಆರ್ಥಿಕವಾಗಿ ಸಧೃಡನಾಗಿಲ್ಲದ ಕಾರಣ ನಮ್ಮ ಪಿತೃಗಳನ್ನು ಸಂಪ್ರೀತಗೊಳಿಸಲು ಸಾಧ್ಯವಾಗದ ಕಾರಣ ನಿನ್ನಲ್ಲಿ ಶರಣಾಗತಿ ಬಯಸುತ್ತಿದ್ದೇನೆ. ದಯವಿಟ್ಟು ಇದನ್ನು ಮನ್ನಿಸಿ ನಮ್ಮ ಪಿತೃಗಳನ್ನು ಸಂಪನ್ನಗೊಳಿಸು ಎಂದು ಬೇಡಿ ಕೊಳ್ಳುವ ಮೂಲಕವೂ ಶ್ರಾಧ್ಧವನ್ನುಆಚರಿಸಬಹುದಾಗಿದೆ.

ಹೀಗೆ ಮಾಡಲು ಆಗದೇ ಹೋದಲ್ಲಿ ಹತ್ತಿರದ ನದಿ, ಹಳ್ಳ ಕೊಳ್ಳಗಳು ಅದೂ ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಶುದ್ಧವಾಗಿ ಸ್ನಾನ ಮಾಡಿ ಆತ್ಮಶುದ್ಧಿಯಿಂದ ಪೂರ್ವಜರನ್ನು ನೆನಸಿಕೊಂಡು ಪೂರ್ವಾಭಿಕವಾಗಿ ಮೂರು ಬಾರಿ ಅರ್ಘ್ಯ ನೀಡುವ ಮೂಲಕವೂ ಶ್ರಾಧ್ಧವನ್ನು ಮಾಡಬಹುದಾಗಿದೆ.

ಮೇಲೆ ತಿಳಿಸಿದ ಯಾವುದೇ ರೀತಿಯಲ್ಲೂ ಶ್ರಾದ್ಧವನ್ನು ಮಾಡಲು ಸಾಧ್ಯವಾಗದೇ ಹೋದಲ್ಲಿ, ಸ್ನಾನ ಮಾಡಿ ಶುಚಿರ್ಭೂತರಾಗಿ, ಶ್ರದ್ಧಾ ಭಕ್ತಿಯಿಂದ ತಮ್ಮ ತಂದೆ ತಾಯಿಯರು ಮತ್ತು ಪೂರ್ವಜರನ್ನು ನೆನೆಸಿಕೊಂಡು ಆತ್ಮಶುದ್ಧಿಯಿಂದ ಒಂದು ತೊಟ್ಟು ಕಣ್ಣಿರು ಹಾಕುವ ಮೂಲಕ ಅಶ್ರುತರ್ಪಣವನ್ನು ನೀಡುವ ಮೂಲಕವೂ ಕನಿಷ್ಟ ಪಕ್ಷದಲ್ಲಿ ಪಿತೃಗಳ ಋಣವನ್ನು ತೀರಿಸಬಹುದಾಗಿದೆ. ಆದರೆ ಯಾರಿಗೂ ಇಂತಹ ದೈನೇಸಿ ಸ್ಥಿತಿ ಬಾರದಿರಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

ಬರಹ-ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *