
ಉತ್ತರ ಕನ್ನಡ: ದೋಣಿ ಮೂಲಕ ಗಂಗವಳ್ಳಿ ನದಿ ದಾಟಿ ಮತ ಚಲಾಯಿಸಿದ ಜನ!
ಸಂಪರ್ಕ ಸೇತುವೆ ಇಲ್ಲದೆ ಪರದಾಡುತ್ತಿರುವ ಈ ಗ್ರಾಮದ ಜನರು ಸಂಕಷ್ಟಗಳನ್ನು ಬದಿಗೊತ್ತಿ, ದೋಣಿ ಮೂಲಕ ನದಿ ದಾಟಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತದಾನ ಕೇಂದ್ರಕ್ಕೆ ತೆರಳಲು ದೋಣಿ ಮೂಲಕ ಗಂಗವಳ್ಳಿ ನದಿಯನ್ನು ದಾಟುತ್ತಿರುವ ಗ್ರಾಮಸ್ಥರು.
ದಂಡೇಬಾಗ್ (ಉತ್ತರ ಕನ್ನಡ): ಸಂಪರ್ಕ ಸೇತುವೆ ಇಲ್ಲದೆ ಪರದಾಡುತ್ತಿರುವ ಈ ಗ್ರಾಮದ ಜನರು ಸಂಕಷ್ಟಗಳನ್ನು ಬದಿಗೊತ್ತಿ, ದೋಣಿ ಮೂಲಕ ನದಿ ದಾಟಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದ್ವೀಪ ಗ್ರಾಮವಾದ ಹಿಚ್ಕಡ್ ಕುರ್ವೆ ಗ್ರಾಮದ 70 ಮಂದಿ ಗ್ರಾಮಸ್ಥರು ದೋಣಿ ಹಾಗೂ ಕಾಲ್ನಡಿಗೆ ಮೂಲಕ 1 ಗಂಟೆ ಪ್ರಯಾಣಿಸಿ, ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.
ಹಿಚ್‌ಕಾಡ್ ಕುರ್ವೆ ಗ್ರಾಮ ತೆಂಗಿನ ತೋಟ ಹಾಗೂ ಕಾಡುಗಳಿಂದ ಸುತ್ತುವರೆದಿದ್ದು, ಗ್ರಾಮವನ್ನು ಉತ್ತರ ಕನ್ನಡ ಜಿಲ್ಲೆಯ ದ್ವೀಪ ಗ್ರಾಮವೆಂದು ಕರೆಯಲಾಗುತ್ತದೆ. ಇಲ್ಲಿ 30 ಮೀನುಗಾರರ ಕುಟುಂಬಗಳು ವಾಸವಿದ್ದು, ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿವೆ.
ಲೋಕಸಬಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ದೋಣಿಗಳ ಮೂಲಕ ಗಂಗವಳ್ಳಿ ನದಿ ದಾಟಿ ಮತಗಟ್ಟೆಗೆ ಆಗಮಿಸಿದ್ದಾರೆ. ದಂಡೆಬಾಗ್ ಗ್ರಾಮದಲ್ಲಿ ಮತಗಟ್ಟೆ ತಲುಪಲು ಗ್ರಾಮಸ್ಥರು ಸುಮಾರು 40 ನಿಮಿಷಗಳ ಕಾಲ ದೋಣಿಯಲ್ಲಿ ಪ್ರಯಾಣ ಮಾಡಿದ್ದಾರೆ. ಅಲ್ಲದೆ, 15-20 ನಿಮಿಷಗಳ ಕಾಲ ನಡೆದು ಮತಗಟ್ಟೆ ತಲುಪಿದೆವು ಎಂದು ಮತ ಚಲಾಯಿಸಲು ಬಂದಿದ್ದ ಬೀರ ತಿಮ್ಮಣ್ಣ ಹರಿಕಂತ್ರ ಎಂಬುವವರು ಹೇಳಿದ್ದಾರೆ.
ಹಿಚ್‌ಕಾಡ್ ಕುರ್ವೆಯಿಂದ ದಂಡೇಬಾಗ್‌ಗೆ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದು ನಮ್ಮ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದೆ. ಆದರೆ, ಸರ್ಕಾರ ಮತ್ತೊಂದು ದೂರದ ಸ್ಥಳವಾದ ಮುತ್ನಕುರ್ವೆಯಿಂದ ಸೇತುವೆಯನ್ನು ನಿರ್ಮಿಸಿದೆ. ಇದು ನಮಗೆ ಅತೃಪ್ತಿ ತಂದಿದೆ. ಆದರೆ, ಚುನಾವಣೆಯಲ್ಲಿ ಇದನ್ನೇ ವಿಷಯ ಮಾಡಲು ನಾವು ಬಯಸುವುದಿಲ್ಲ. ಪ್ರತೀ ಚುನಾವಣೆಯಲ್ಲೂ ನಾವೆಲ್ಲರೂ ಒಟ್ಟಿಗೆ ಬಂದು ಮತಹಕ್ಕು ಚಲಾಯಿಸುತ್ತೇವೆ. ಈ ಬಾರಿಯೂ ಮತದಾನ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಚುನಾವಣೆಯೇ ಹಬ್ಬ: 180 ಜನರಿರುವ ಈ ಕುಟುಂಬದಲ್ಲಿ 96 ಮತದಾರರು!
ನನ್ನ ಮುತ್ತಜ್ಜನ ಕಾಲದಿಂದಲೂ ನಾವು ಹೀಗೆಯೇ ಪ್ರಯಾಣಿಸುತ್ತಿದ್ದೇವೆ. ನಮಗೆ ಯಾವುದೇ ಅಗತ್ಯ ವಸ್ತುಗಳ ಅವಶ್ಯಕತೆ ಬಂದಾಗ ನದಿಯನ್ನು ದಾಟಲೇಬೇಕಾಗುತ್ತದೆ. ಸಂಜೆ 5 ಗಂಟೆಯೊಳಗೆ ಹಿಂತಿರುಗಬೇಕು ಇಲ್ಲದಿದ್ದರೆ ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ದಂಡೇಬಾಗ್‌ನಲ್ಲಿ ಉಳಿಯಬೇಕು ಎಂದು ದೀಕ್ಷಿತ್ ಪ್ರಕಾಶ್ ಹರಿಕಂತ್ರ ಎಂಬುವವರು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ, ಕೋವಿಡ್‌ಗಿಂತ ಮುಂಚೆಯೇ ಗ್ರಾಮಕ್ಕೆ ವಿದ್ಯುತ್, ಅನಿಲ ಸಂಪರ್ಕ ಮತ್ತು ಇತರ ಸೌಕರ್ಯಗಳು ದೊರೆತಿದ್ದವು. ಮಳೆಗಾಲ ನಮಗೆ ಅತ್ಯಂತ ಕೆಟ್ಟ ಸಮಯವಾಗಿರುತ್ತದೆ. ಮಳೆ ಸುರಿದಾಗ, ನೀರಿನ ಮಟ್ಟ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ನಾವೆಲ್ಲರೂ ಗ್ರಾಮ ತೊರೆಯುತ್ತೇವೆ. ಪ್ರವಾಹ ಕಡಿಮೆಯಾಗುವವರೆಗೂ ಹಿಚ್ಕಡ ಸರಕಾರಿ ಶಾಲೆ ನಮ್ಮ ವಾಸಸ್ಥಾನವಾಗಿರುತ್ತದೆ ಎಂದು ಮತ್ತೋರ್ವ ಯುವಕ ಸಂದೇಶ ಧನ್ವಂತ ಹರಿಕಂತ್ರ ಹೇಳಿದ್ದಾರೆ.
ಗ್ರಾಮಸ್ಥರು ಸುಮಾರು 100 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಬಹುಪಾಲು ನಾಡವ ಸಮುದಾಯದ ಒಡೆತನದಲ್ಲಿದೆ. ಹರಿಕಾಂತರು ಮುಖ್ಯವಾಗಿ ಮೀನುಗಾರರಾಗಿದ್ದು, ಸಣ್ಣ ಪ್ರಮಾಣದ ಭೂಮಿ ಹೊಂದಿದ್ದಾರೆ. ಕೆಲವೊಮ್ಮೆ ಮೀನುಗಾರಿಕೆ ಮಾಡಿ, ಕೆಲವೊಮ್ಮೆ ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. (kpc)
