

ಸುಳಿಕೊಳೆ ರೋಗಕ್ಕೆ ತೆಂಗುನಾಶ,
ಮರಕಡಿಯುವುದೆ ಪರಿಹಾರ
ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆಗೆ ಕೊಳೆರೋಗ ಬರುವ ಸಮಯ, ಆದರೆ ಇದೇ ಸಮಯದಲ್ಲಿ ತೆಂಗಿನ ಕೊಳೆರೋಗ ತೆಂಗುಬೆಳೆಯನ್ನು ನಾಶ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಸುಳಿಕೊಳೆರೋಗ ಎನ್ನಲಾಗುವ ತೆಂಗಿನ ಕೊಳೆರೋಗ ತೆಂಗಿಗೆ ಮಾರಕವಾಗಿ ಪರಿಣಮಿಸಿದೆ.
ತೆಂಗಿನ ಮರಕ್ಕೆ ದುಂಬಿಯ ಕಾಟ ಸಾಮಾನ್ಯ, ದುಂಬಿ ತೆಂಗಿನ ಸುಳಿಯೊಳಗೆ ಸೇರಿ ಮರಿಮಾಡಲು ಸುಳಿಯೊಳಗೆ ಹೊಂಡ ಮಾಡುತ್ತದೆ. ಹೀಗೆ ದುಂಬಿ ತನ್ನ ಪರಿವಾರಕ್ಕಾಗಿ ತಯಾರಾದ ರಂಧ್ರದಂಥ ಹೊಂಡದಲ್ಲಿ ನೀರು ಸೇರಿ ಮೊದಲು ತೆಂಗಿನ ಮರ,ಗಿಡದ ಸುಳಿ ಕಳಚಿ ಬೀಳುತ್ತದೆ.
ನಂತರ ಗಿಡ ಅಥವಾ ಮರ ನಿಧಾನವಾಗಿ ಸಾಯತೊಡಗುತ್ತದೆ.
ಹೀಗೆ ಸತ್ತ ತೆಂಗಿನ ಗಿಡ ಅಥವಾ ಮರವನ್ನು ಕಡಿದು ತೆಗೆಯದಿದ್ದರೆ ಅದು ಮುಂದೆ ಬೇರೆ ಮರಕ್ಕೆ ರೋಗವಾಹಕವಾಗಿ ಕೆಲಸಮಾಡುತ್ತದೆ.
ತೆಂಗಿಗೆ ಬರುವ ಈ ಕೊಳೆರೋಗ ಪಂಗಸ್ ರೋಗವಾಗಿದ್ದು ಅದರ ನಿಯಂತ್ರಣಕ್ಕೆ ಉಪ್ಪಿನ ಚಿಕಿತ್ಸೆ ಅಥವಾ ಬೋಡೋದ್ರಾವಣ ಅಥವಾ ಪೇಸ್ಟ್ ಸಿಂಪಡಣೆ ಪರಿಹಾರ ಎನ್ನಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ತೆಂಗಿನ ಮರ ಸೋಸುವ ವಿಧಾನದಲ್ಲಿ ತೆಂಗಿನ ಮರದ ತ್ಯಾಜ್ಯವನ್ನು ತೆಗೆದು, ದುಂಬಿ ಗೂಡಿದ್ದರೆ ಅದನ್ನು ತೆಗೆದು ಮರಕ್ಕೆ ಉಪ್ಪು ಕಟ್ಟುವ ಸಾಂಪ್ರದಾಯಿಕ ವಿಧಾನ ಒಂದಿದೆ. ಈಗ ಈ ಪದ್ಧತಿ ನಶಿಸುತ್ತಿರುವುದರಿಂದ ತೆಂಗಿನ ಸುಳಿಗೆ ಬೋಡೋ (ತುತ್ತ-ಸುಣ್ಣ)ಪೇಸ್ಟ್ ಅಥವಾ ದ್ರಾವಣ ಸಿಂಪಡಿಸುವ ನೂತನ ವಿಧಾನ ಅನುಸರಿಸಲಾಗುತ್ತಿದೆ.
ಸಿದ್ಧಾಪುರದಲ್ಲಿ 254 ಹೆಕ್ಟೇರ್ ಅಂದರೆ 635 ಎಕರೆ ತೆಂಗು ಬೆಳೆಯುವ ಪ್ರದೇಶವಿದ್ದು, ಕೆಲವೆಡೆ ನುಶಿರೋಗ,ಸುಳಿಕೊಳೆರೋಗಗಳಿಂದ ತೆಂಗು ನಾಶವಾಗಿದೆ. ನುಶಿರೋಗಬಾಧಿತ ಮರದ ಇಳುವರಿ ಕಡಿಮೆಯಾದರೆ, ಸುಳಿಕೊಳೆರೋಗ ಮರವನ್ನೇ ಸಾಯಿಸುತ್ತದೆ.ಸುಳಿಕೊಳೆಯುವ ಪಂಗಸ್ ರೋಗಪೀಡಿತ ಮರವನ್ನು ಕಡಿಯದಿದ್ದರೆ ಅದು ಬೇರೆ ಮರಗಳಿಗೂ ವ್ಯಾಪಿಸುತ್ತದೆ. ಹಾಗಾಗಿ ಸುಳಿಕೊಳೆರೋಗ ಪೀಡಿತ ಮರಗಳಿಗೆ ಬೋಡೊ ಮಿಶ್ರಣದ ಚಿಕಿತ್ಸೆ ಮಾಡಬೇಕು. ಸುಳಿಕೊಳೆರೋಗದಿಂದ ಸತ್ತ ಮರಗಳನ್ನು ಕಡಿಯಬೇಕು ಎನ್ನುತ್ತಾರೆ ತೋಟಗಾರಿಕಾ ಉಪನಿರ್ಧೇಶಕ ಮಹಾಬಲೆಶ್ವರ ಹೆಗಡೆ.

