

ಹೆಸರು-ಶಿವಕುಮಾರ ಗೋವಿಂದ
ವಯಸ್ಸು-25
ವೃತ್ತಿ-ಅಗರಬತ್ತಿ ತಯಾರಿಕೆ.
ಹೀಗೆ ಪರಿಚಯಿಸಬಹುದಾದ ಯುವಕ ಶಿವಕುಮಾರ ಗೋವಿಂದ ನಾಯ್ಕ ಕಡಕೇರಿಯವರು.
ಈಗಿನ ಟ್ರೆಂಡ್‍ನಂತೆ ಮೂರು ವರ್ಷ ಡಿಪ್ಲೊಮಾ ಓದಿದ ಶಿವಕುಮಾರ ಮಹಾನಗರಕ್ಕೆ ಓಡಲು ಮುಂದಾಗಲಿಲ್ಲ. ಕೆಲವು ವರ್ಷ ಆಯ್.ಟಿ.ಆಯ್. ವಿದ್ಯಾರ್ಥಿಗಳಿಗೆ ಪಾಠ ಮಾಡಿದ. ನಂತರ ಸ್ವಂತ ಉದ್ದಿಮೆ ಶ್ರೇಷ್ಠ ಎಂದು ಬಗೆದು, ಅಗರಬತ್ತಿ ತಯಾರಿಸಲು ಪ್ರಾರಂಭಿಸಿದ. ಈಗ ತಿಂಗಳೊಂದಕ್ಕೆ ಕನಿಷ್ಠ ಮೂರು ಟನ್ ಊದುಬತ್ತಿ ತಯಾರಿಸುವ ಶಿವಕುಮಾರ ಮೂರ್ನಾಲ್ಕು ಜನ ಕೆಲಸಗಾರರಿಗೆ ವೇತನ ಕೊಟ್ಟು ದಿನಕ್ಕೆ ಸಾವಿರ ಮಿಕ್ಕಿ ಉಳಿಸುತ್ತಾರೆ.
ಇದು ಶಿವಕುಮಾರ ನಾಯ್ಕ ಗೃಹ ಉದ್ದಿಮೆ ಮೂಲಕ ಕಂಡುಕೊಂಡ ಉದ್ಯೋಗ ಮತ್ತು ಆತ್ಮವಿಶ್ವಾಸ.
ಅಗರಬತ್ತಿಗೆ ಬೇಕಾಗುವ ಎಲ್ಲಾ ಕಚ್ಚಾ ವಸ್ತುಗಳನ್ನು ಖರೀದಿಸಿ ತರುವ ಇವರಿಗೆ ಹೊರಗಿನಿಂದ ಪ್ರೀಮಿಕ್ಸ್ ಖರೀದಿಸಿ, ದೊಡ್ಡ ಕಂಪನಿಗಳಿಗೆ ಅಗರಬತ್ತಿ ಪೂರೈಸುವುದರಿಂದ ತೊಂದರೆ, ರಗಳೆ ಕಡಿಮೆ ಎನ್ನುವ ಸತ್ಯ ಕಂಡುಕೊಂಡಿದ್ದಾರೆ.
ಮನೆಮಂದಿಯೆಲ್ಲಾ ನಿರಂತರ ಮಾಡಬಹುದಾದ ಈ ಕೆಲಸ ಹೆಚ್ಚಿನ ಬಂಡವಾಳ ಬಯಸದ ಸ್ವತಂತ್ರ ವೃತ್ತಿ. ಸರ್ಕಾರ, ಕೈಗಾರಿಕಾ ಕೇಂದ್ರಗಳ ನೆರವು ದೊರೆತರೆ ಈ ಉದ್ಯಮವನ್ನು ವಿಸ್ತರಿಸಬಹುದು ಎನ್ನುವ ಶಿವಕುಮಾರ ಈಗಾಗಲೇ ಕೆಲವು ಪ್ರಯೋಗದಿಂದಲೂ ಯಶಸ್ಸು ಕಂಡಿದ್ದಾರೆ. ಜಾನುವಾರುಗಳ ಸೆಗಣಿಯಿಂದ ತಯಾರಿಸುವ ಅಗರಬತ್ತಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಠ ಒಂದರ ಬೇಡಿಕೆ ಪೂರೈಸಿ ಆತ್ಮವಿಶ್ವಾಸ ಗಳಿಸಿಕೊಂಡಿರುವ ಶಿವಕುಮಾರ ಸ್ಥಳಿಯ ಲಭ್ಯತೆ, ಬೇಡಿಕೆ ಹಿನ್ನೆಲೆಯಲ್ಲಿ ಸ್ಥಳಿಯ ಬ್ರಾಂಡ್ ಕೂಡಾ ತಯಾರಿಸಬಹುದು ಎನ್ನುತ್ತಾರೆ. ಹೊರ ಊರು, ದೊಡ್ಡ ಕಂಪನಿಗಳಲ್ಲಿ ಬೇರೆಯವರಿಗೆ ದುಡಿಯುವ ಬದಲು ನಮ್ಮೂರಲ್ಲಿ ನಮಗೆ ಸುಲಭದ ಉದ್ಯೋಗ, ಆದಾಯ ಸಿಕ್ಕರೆ ಒಳ್ಳೆಯದು ಎನ್ನುವ ಯೋಚನೆಯಿಂದ ಪ್ರಾರಂಭಿಸಿರುವ ಈ ಗೃಹ ಉದ್ಯಮ ಅವರ ಕನಸಿಗೆ ರೆಕ್ಕೆ ಹಚ್ಚಿದೆ.
ನಾಟಿವೈದ್ಯ ತಂದೆ ಗೋವಿಂದ ನಾಯ್ಕ, ಪ್ರೋತ್ಸಾಹಿಸುವ ತಾಯಿ, ಸಹೋದರಿಯರ ಹಾರೈಕೆ,ಪ್ರಯತ್ನದಿಂದ ನವ ಉದ್ಯಮಿಯಾಗಿ ಬೆಳೆಯುತ್ತಿರುವ ಕಡಕೇರಿಯ ಈ ಯುವಕ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಫೂರ್ತಿ ಮತ್ತು ಮಾದರಿ. ದಾಖಲೆ,ಬರೀ ವರದಿ, ಯೋಜನಾವರದಿಗಳಿಂದ ಸರ್ಕಾರದ ನೆರವು ಪಡೆಯುವ ಬುದ್ಧಿವಂತರ ನಡುವೆ.ಕೆಲಸ ಮಾಡುತ್ತಾ ದಾಖಲೆ ಇಡದೆ ದಾಖಲೆ ಮಾಡಬಹುದಾದ ಈ ಯುವಕನನ್ನು ಸರ್ಕಾರ, ಸ್ಥಳಿಯ ನಾಯಕತ್ವಗಳು ಗುರುತಿಸಿದರೆ ಇವರ ಉದ್ದಿಮೆಗೆ ಉತ್ತೇಜಿಸಿದಂತಾಗಬಹುದು.
ಮಹಿಳಾ ಶಿಕ್ಷಣದ ಮನ್ವಂತರೆ ಸಾವಿತ್ರಿಭಾಯಿ ಫುಲೆ
ನೈಗಾಂವ್ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಶಿಕ್ಷಕಿಯೊಬ್ಬರು ಕೈಚೀಲವೊಂದನ್ನು ಹೆಗಲಿಗೇರಿಸಿ ಮುನ್ನಡೆಯುತ್ತಿದ್ದರು. ‘ಇವಳೊಬ್ಬಳು ಗುರುವಂತೆ ಗುರು! ರೊಟ್ಟಿ ತಟ್ಟಕೊಂಡು ಮನೇಲಿ ಬಿದ್ದಿರೋದು ಬಿಟ್ಟು ಊರವರಿಗೆಲ್ಲಾ ಶಾಲೆ ಕಲಿಸ್ತಾಳಂತೆ’ ಎಂದು ಚುಚ್ಚು ನುಡಿಯುತ್ತಿದ್ದರು.


