

ಕೊರೋನಾಮಾರಿ ಹೀಗೇಕೆ?


ಅಮೆರಿಕದ ಅಂಥ ಸುಧಾರಿತ ನ್ಯೂಯಾರ್ಕ್ ನಗರದಲ್ಲಿ 12,500 ಜನರು ಸತ್ತಿದ್ದಾರೆ. ನಮ್ಮ ನ್ಯೂದಿಲ್ಲಿಯಲ್ಲಿ ಬರೀ 54 ಜನ, ಧಾರಾವಿಯ ಕೊಳಕು ಕೊಂಪೆಯಲ್ಲಿ ಕೇವಲ 18 ಜನ ಕೊರೊನಾ ಮಾರಿಗೆ ಬಲಿಯಾಗಿದ್ದಾರೆ. ಯಾಕೆ? ಬಿಳಿಯರನ್ನು ಕಂಡರೆ ಅದಕ್ಕೆ ಅಷ್ಟು ಇಷ್ಟಾನಾ? ಶ್ರೀಮಂತಿಕೆಯ, ಐಷಾರಾಮಿಯ ಬದುಕು ಹೆಚ್ಚು ಇಷ್ಟಾನಾ? ಭಾರತದ ಕಂದು ಜನರನ್ನು ಕಂಡರೆ ಕೊರೊನಾಕ್ಕೆ ತಾತ್ಸಾರಾನಾ? ಅಥವಾ ಕೊಳೆ ಕಚಡಾಗಳ ಇಕ್ಕಟ್ಟಿನ ಜಾಗಕ್ಕೆ ಬರಲು ಭಯಾನಾ?
ಇಲ್ಲಿವೆ ಮೂರು ಮುಖ್ಯ ಕಾರಣಗಳು: ಮೂರನೆಯದು ತುಂಬ ಚಮತ್ಕಾರಿಕವಾಗಿದೆ.
1. ಅಮೆರಿಕದಲ್ಲಿ ಕೋವಿಡ್-19ರಿಂದಾಗಿ ಅಷ್ಟೊಂದು ಜನರು ವಿಧಿವಶರಾಗಲು ಕಾರಣ ಏನೆಂದರೆ ಬಹುಪಾಲು ಜನರ ಆಯಸ್ಸು 80ಕ್ಕೂ ಹೆಚ್ಚಿಗೆ ಇತ್ತು. ಸುಮಾರು 27% ಜನರು 85ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರು. ಇನ್ನುಳಿದವರಲ್ಲೂ ಬಹುಪಾಲು ಜನರ ವಯಸ್ಸು 65-70-80ರಷ್ಟಿತ್ತು. ನಡುಹರಯದವರ ಸಾವಿನ ಸಂಖ್ಯೆ 1% ಇತ್ತು. ನಮ್ಮ ದೇಶದಲ್ಲಿ 70-85 ವಯಸ್ಸಿನ ಬಹುಪಾಲು ಜನರು ಕೊರೊನಾ ಬರುವ ಮೊದಲೇ ಹೋಗಿದ್ದಾರೆ. ಬದುಕಿರುವ 75+ ಹಿರಿಯರೂ ಅಲ್ಲಿಇಲ್ಲಿ ಸುತ್ತಾಡುವುದೂ ಕಡಿಮೆ.
2. ಭಾರತೀಯರ (ಮತ್ತು ಸಾರ್ಕ್ ದೇಶದವರ) ದೇಹದಲ್ಲಿ ಸಾಕಷ್ಟು ಬಗೆಯ ರೋಗನಿರೋಧಕ ಪ್ರತಿಕಾಯಗಳ ಖಜಾನೆಯೇ ಇದೆ. ಏಕೆಂದರೆ ನಾನಾ ಬಗೆಯ ರೋಗಾಣುಭರಿತ ಪರಿಸರದಲ್ಲಿ ಅವರು ಬೆಳೆದವರು. ಜೊತೆಗೆ ಇಲ್ಲಿ ಜನಾಂಗೀಯ ವೈವಿಧ್ಯ ಜಾಸ್ತಿ ಇದೆ. ಇಲ್ಲಿನವರ ಆಹಾರದಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ವೈವಿಧ್ಯಮಯ ವ್ಯಂಜನಗಳಿರುತ್ತವೆ. ದೇಹದಲ್ಲಿ ಕೊರೊನಾ ನುಗ್ಗಿದರೂ ಅದರ ಲಕ್ಷಣಗಳು ಪ್ರಕಟವಾಗುವ ಮೊದಲೇ ದಫನವಾಗಿರುತ್ತದೆ. ಇಷ್ಟಕ್ಕೂ ಕೊರೊನಾಕ್ಕೆ ಇಲ್ಲಿನ ಬೆಚ್ಚಗಿನ ಹವೆಯಲ್ಲಿ ಬದುಕು ತುಸು ದುಸ್ತರವೇ ಇದ್ದೀತು. ಅಮರಿಕ-ಯುರೋಪ್ ಮತ್ತು ವುಹಾನ್ನಲ್ಲೂ ಸಾಕಷ್ಟು ಚಳಿಯಿದ್ದು ಉಷ್ಣಾಂಶ 10-12 ಡಿಗ್ರಿ ಸೆ.ನಷ್ಟು ಇತ್ತು. ಗರಿಷ್ಠ 20 ಡಿಗ್ರಿ. ಇಲ್ಲಿ ಸೆಕೆ ಜಾಸ್ತಿ ಇದೆ.
3. ಕೋವಿಡ್ ಕಾಯಿಲೆಯಿಂದ ಸಾಯುವವರಲ್ಲಿ ಎರಡು ವಿಧ: ವೈರಾಣುವಿನ ದಾಳಿಯಿಂದ ಬರುವ ಸಾವು ಒಂದು ವಿಧವಾದರೆ ದೇಹದ ರಕ್ಷಣಾದಳದ ಅತಿರೇಕದಿಂದ ಬರುವ ಸಾವು ಇನ್ನೊಂದು ಬಗೆಯದು. ಈ ಎರಡನೆ ಬಗೆಯ ಸಾವು ಹೀಗಿರುತ್ತದೆ: ದೇಹದೊಳಗಿನ ರಕ್ಷಣಾ ಯೋಧರು ಅತ್ಯುತ್ಸಾಹದಿಂದ ಮುನುಗ್ಗುವುದನ್ನು ವೈದ್ಯಕೀಯ ಭಾಷೆಯಲ್ಲಿ ‘ಸೈಟೊಕೈನ್ ಸುಂಟರಗಾಳಿ’ ಎನ್ನುತ್ತಾರೆ. ಭಾರೀ ಪ್ರಮಾಣದಲ್ಲಿ ಉತ್ಪಾದನೆಯಾಗುವ ಯೋಧ (ಶ್ವೇತ) ರಕ್ತ ಕಣಗಳು ಶರೀರದ ಎಲ್ಲ ಅಂಗಾಂಗಳಿಗೂ ನುಗ್ಗುತ್ತ, ಅಲ್ಲಿನ ವೈರಾಣುಗಳನ್ನೂ ಜರ್ಝರಿತ ಜೀವಕಣಗಳನ್ನೂ ಜೊತೆಗೆ ಆರೋಗ್ಯವಂತ ಜೀವಕಣಗಳನ್ನೂ ಹೊಡೆದು ಬೀಳಿಸುತ್ತ ಸಾಗುತ್ತವೆ. ಶ್ವಾಸಕೋಶದ ತಳದಲ್ಲಿ ಮೃತಕಣಗಳ ಮಡುವೇ ಸೃಷ್ಟಿಯಾಗುತ್ತದೆ. ಉಸಿರಾಟದ ಸಹಜ ಕ್ರಿಯೆಗೂ ಸ್ಥಳವಿಲ್ಲದಂತಾಗುತ್ತದೆ. ಕೃತಕ ಉಸಿರಾಟದ ವೆಂಟಿಲೇಟರ್ ಹಾಕಿದರೂ ಕೆಲವರಲ್ಲಿ ದೇಹದ ಇತರೆಲ್ಲ ವ್ಯವಸ್ಥೆಗಳೂ ಕುಸಿದು ಬೀಳುತ್ತವೆ. ಸಾವು ಬರುತ್ತದೆ.
ಅದರರ್ಥ, ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿ (ರೋ.ಶ.) ಅತಿ ಪ್ರಬಲವಾಗಿರುವುದೂ ಕೊರೊನಾಪೀಡಿತರಿಗೆ ಅಪಾಯಕಾರಿ ಎನ್ನುತ್ತಾರೆ, ನೊಯಿಡಾದ ಫೋರ್ಟಿಸ್ ಆಸ್ಪತ್ರೆಯ ಡಾ. ರಾಜೇಶ್ ಗುಪ್ತಾ. [ಅಮೆರಿಕದ ಅಲಬಾಮಾ ವಿವಿಯ ವಿಜ್ಞಾನಿ ರಾಂಡಿ ಕ್ರೋನ್ ಕೂಡ ಈ ಸೈಟೊಕೈನ್ ಸುಂಟರಗಾಳಿ ಎಂಬ ಆತ್ಮಘಾತುಕ ರಕ್ಷಾವ್ಯವಸ್ಥೆಯ ಬಗ್ಗೆ ವಿಸ್ತೃತ ಸಂಶೋಧನೆ ಮಾಡಿದ್ದು ಕೊರೊನಾ ವೈಚಿತ್ರ್ಯದ ಕುರಿತು Forbes ಪತ್ರಿಕೆಯಲ್ಲಿ ವಿವರಿಸಿದ್ದಾರೆ.]
ಅಮೆರಿಕ, ಯುರೋಪ್‌ನಲ್ಲಿನ ಸುಧಾರಿತ ದೇಶಗಳಲ್ಲಿ ರೋ.ಶ. ಸದಾ ಹೆಚ್ಚಿಗೆ ಇರುವಂತೆ ನಾನಾ ಬಗೆಯ ವಿಟಮಿನ್ ಮಾತ್ರೆ, ಲಸಿಕೆ, ಚುಚ್ಚುಮದ್ದುಗಳ ಬಳಕೆ ಜಾಸ್ತಿ ಇದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಅಲ್ಲಿನ ಸುಭದ್ರ ಆರೋಗ್ಯ ವ್ಯವಸ್ಥೆಯಲ್ಲಿ ಇವೆಲ್ಲ ಉಚಿತವಾಗಿಯೂ ಸಿಗುತ್ತಿರುತ್ತವೆ. ಭಾರತದಲ್ಲಿ ರೋ.ಶ. ಕುರಿತ ಕಾಳಜಿ ಅಷ್ಟಕ್ಕಷ್ಟೆ ತಾನೆ? ಮಾಮೂಲು ಆಹಾರಗಳಲ್ಲಿ ಎಷ್ಟು ಸಿಗುತ್ತೊ ಅಷ್ಟೇ ಬಿಟ್ಟರೆ ವಿಟಮಿನ್ ಮಾತ್ರೆ, ಲಸಿಕೆಗಳ ಬಳಕೆ ತೀರ ಕಡಿಮೆ.
ಹಾಗಾಗಿ ನಮ್ಮಲ್ಲಿ ರೋ.ಶ. ಆರಕ್ಕೇರದೆ, ಮೂರಕ್ಕಿಳಿಯದೆ ಹದಮಟ್ಟದಲ್ಲೇ ಇದ್ದೀತು. ಅದೇ ನಮಗೆ ಸುರಕ್ಷಾ ಕವಚ ಆಗಿರಬಹುದು.
ಈ ವಾದ ನಿಜವೇ ಆಗಿದ್ದರೆ ಈ ಲಾಕ್‌ಡೌನ್, ಕಂಟೇನ್ಮೆಂಟ್, ರೆಡ್‌ಝೋನ್ ಮುಂತಾದ ಎಗ್ಗಿಲ್ಲದ ಪ್ರತಿಬಂಧಗಳೇ ನಮ್ಮ ದೇಶದ ಅರ್ಥವ್ಯವಸ್ಥೆಗೆ ಆತ್ಮಘಾತುಕ ‘ಸುಂಟರಗಾಳಿ’ ಆಗಿ ಪರಿಣಮಿಸುತ್ತದೆಯೆ? ರೋಗನಿರೋಧಕ ವ್ಯವಸ್ಥೆಯೇ ದೇಶದ ಆರೋಗ್ಯಕ್ಕೆ ಕಂಟಕಕಾರಿ ಆಗುವಂಥ ವಿಲಕ್ಷಣ ವಿದ್ಯಮಾನ ಇಲ್ಲಿದೆಯೆ?
ಯಾರಿಗ್ಗೊತ್ತು? -ನಾಗೇಶ್ ಹೆಗಡೆ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
